ಆವರಣ : ಸಾರಸ್ವತ ಲೋಕದ ಪ್ರತಿಧ್ವನಿಭೈರಪ್ಪ ಗಿಂತಲೂ ಅನಂತಮೂರ್ತಿಯೇ ಹೆಚ್ಚು ಅಪಾಯಕಾರಿ!
ನಿರೀಕ್ಷೆಯಂತೆಯೇ, ಸಾಹಿತ್ಯವಲಯ ಯು.ಆರ್.ಅನಂತಮೂರ್ತಿ ಹೇಳಿಕೆಯನ್ನು ಗಂಭೀರವಾಗಿ ಸ್ವೀಕರಿಸಿದೆ. ಭೈರಪ್ಪ ಅವರ ಬೆಂಬಲಕ್ಕೆ ಬಹುತೇಕರು ನಿಂತಿದ್ದು, ಅನಂತಮೂರ್ತಿ ಹೇಳಿಕೆಯನ್ನು ಸಮರ್ಥಿಸಿ ಕೆಲವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಗಲಾಟೆ-ಗದ್ದಲದ ಮಧ್ಯೆಯೂ ಭೈರಪ್ಪ ಮಾತ್ರ ಮೌನಿ. ಅವರು ಬಾಯಿಬಿಟ್ಟರೇ, ಮತ್ತೊಂದು ‘ಆವರಣ’!
ಅಭಿಪ್ರಾಯಗಳ ಸಾರ ಸಂಗ್ರಹ :
ಚಂಪಾ : ಅನಂತಮೂರ್ತಿ ಅಹಂಕಾರದಿಂದ ಮಾತಾಡಿದ್ದಾರೆ. ಕೆಲವು ವಿಚಾರಗಳನ್ನು ಅನಂತಮೂರ್ತಿ ತಣ್ಣಗೆ ಪ್ರತಿಪಾದಿಸುತ್ತಾರೆ. ಭೈರಪ್ಪ ಒರಟಾಗಿ ಪ್ರತಿಪಾದಿಸುತ್ತಾರೆ. ಹೀಗಾಗಿ ಅನಂತಮೂರ್ತಿಯೇ ಹೆಚ್ಚು ಗಂಡಾಂತರಕಾರಿ!
ಜಿ.ಎಸ್.ಶಿವರುದ್ರಪ್ಪ : ನಾನು ‘ಆವರಣ’ ಓದಲು ಈಗ ಆರಂಭಿಸಿದ್ದೇನೆ. ನಂತರ ಪ್ರತಿಕ್ರಿಯಿಸುತ್ತೇನೆ.
ಕುಂ.ವೀರಭದ್ರಪ್ಪ : ಕಾದಂಬರಿಯಿಂದ ಕ್ರಾಂತಿಯಾಗುವುದಿಲ್ಲ. ಪ್ರಚೋದನೆ ಸಿಕ್ಕಿ ಪ್ರಳಯವಾಗುವುದಿಲ್ಲ. ‘ಧರ್ಮಶ್ರೀ’ ಓದಿರುವ ನಾವು ಉಗ್ರಗಾಮಿಗಳಾಗಿದ್ದೇವೆಯೇ? ಓದುಗನಿಗೆ ಆಯ್ಕೆ ಪ್ರಜ್ಞೆ ಇದೆ.
ಸುಮತೀಂದ್ರ ನಾಡಿಗ್ : ಅನಂತಮೂರ್ತಿ ಮತ್ತು ಭೈರಪ್ಪ ಏನಾದರೂ ಮಾಡಿಕೊಳ್ಳಲಿ. ಇದೊಂದು ಅರ್ಥಹೀನ ಚರ್ಚೆ.
ಕಿ.ರಂ.ನಾಗರಾಜ್ : ಅನಂತಮೂರ್ತಿ ಮಾತು ನಿಜ. ‘ಆವರಣ’ದಲ್ಲಿ ಕಾದಂಬರಿ ಗುಣವಿಲ್ಲ. ತಮ್ಮ ವಿಚಾರವನ್ನು ಭೈರಪ್ಪ ಚರ್ಚೆ ರೀತಿ ಮಂಡಿಸಿದ್ದಾರೆ.
ಡಾ.ಎಚ್ಚೆಸ್ಕೆ : ಭೈರಪ್ಪ ಅವರನ್ನು ಎಂದೂ ನವ್ಯದವರು ಸೃಜನಾತ್ಮಕ ಲೇಖಕ ಎಂದು ಪರಿಗಣಿಸಿಲ್ಲ. ಅನಂತಮೂರ್ತಿ ಪ್ರಶ್ನೆ ಹೊಸತೇನಲ್ಲ. ನಾನು ಪ್ರತಿಕ್ರಿಯೆ ನೀಡಲಾರೆ.
ಮತ್ತೂರು ಕೃಷ್ಣಮೂರ್ತಿ : ‘ಆವರಣ’ ಹಿಂದು-ಮುಸ್ಲಿಮರು ಸಾಮರಸ್ಯದಿಂದ ಬಾಳುವ ಸೂತ್ರವನ್ನು ಕೊಟ್ಟಿದೆ.
ಭಾನು ಮುಷ್ತಾಕ್ : ಭೈರಪ್ಪ ಅವರಂತೆಯೇ, ತಮ್ಮ ವಿಚಾರ ಹೇಳುವ ಹಕ್ಕು ಅನಂತಮೂರ್ತಿ ಅವರಿಗೂ ಇದೆ.
ಎಲ್.ಎಸ್.ಶೇಷಗಿರಿ ರಾವ್ : ‘ಆವರಣ’ದ ಬಗ್ಗೆ ಟೀಕೆ-ವಿಮರ್ಶೆ ಬರಲಿ. ಭೈರಪ್ಪನವರನ್ನು ಲೇಖಕ ಅಲ್ಲ ಅನ್ನುವುದನ್ನು ಒಪ್ಪಲಾಗದು.
ಚಿದಾನಂದಮೂರ್ತಿ : ಅನಂತಮೂರ್ತಿ ಕೇವಲ ಮಾತುಗಳನ್ನು ಜೋಡಿಸಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಅರ್ಥವಿಲ್ಲ. ‘ಆವರಣ’ ಪ್ರಶಸ್ತಿಗೆ ಯೋಗ್ಯವಾದ ಉತ್ತಮ ಕೃತಿ. ಈ ಕೃತಿಯದು ಜೊಳ್ಳು ಜನಪ್ರಿಯತೆಯಲ್ಲ. ನಮ್ಮ ಲೇಖಕರು ಕಟು ವಾಸ್ತವವನ್ನು ಜೀರ್ಣಿಸಿಕೊಳ್ಳಲಾರರು.
ಸಾರಸ್ವತ ಲೋಕದ ಗಣ್ಯರ ಹೇಳಿಕೆಗಳಿಗೆ ಓದುಗರ ಪ್ರತಿಸ್ಪಂದನವನ್ನು ದಟ್ಸ್ ಕನ್ನಡ ಸ್ವಾಗತಿಸುತ್ತದೆ. ಅರ್ಥಪೂರ್ಣ ಚರ್ಚೆಗೆ ದಾರಿಯಾಗಲಿ ಎಂಬುದು ನಮ್ಮ ಉದ್ದೇಶ.