ಅನಂತಮೂರ್ತಿ ಟೀಕೆ-ವ್ಯಂಗ್ಯಗಳ ‘ಆವರಣ’ದಲ್ಲಿ ಭೈರಪ್ಪ!
ಬೆಂಗಳೂರು : ಬರಹ ಎಂದರೆ ಏನು? ಅದು ಹೇಗಿರಬೇಕು? ಲೇಖಕ ಏನನ್ನು ಬರೆಯಬೇಕು? ಏನನ್ನು ಬರೆಯಬಾರದು? ಅವನ ಜವಾಬ್ದಾರಿಗಳೇನು? -ಹೀಗೆ ನಾನಾ ವಿಷಯಗಳನ್ನು ಸಾಹಿತಿ ಯು.ಆರ್.ಅನಂತಮೂರ್ತಿ ಚರ್ಚಿಸಿದರು. ಆ ಮೂಲಕ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರಿಗೆ ಪಾಠ ಹೇಳಿದರು! ಗೇಲಿ ಮಾಡಿದರು!
ಅಷ್ಟು ಮಾತ್ರವಲ್ಲದೇ, ‘ಎಸ್.ಎಲ್.ಭೈರಪ್ಪ ಚರ್ಚಾಪಟುವೇ ಹೊರತು, ಕಾದಂಬರಿಕಾರರಲ್ಲ’ ಎನ್ನುವ ಮೂಲಕ ಸಾಹಿತ್ಯವಲಯದಲ್ಲಿ ಮತ್ತೊಂದು ಜಗಳಕ್ಕೆ ಅನಂತಮೂರ್ತಿ ದಾರಿಮಾಡಿಕೊಟ್ಟಿದ್ದಾರೆ.
ನಗರದಲ್ಲಿ ಆದಿಮ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಂದರ್ಭ : ಎನ್.ಎಸ್.ಶಂಕರ್ ಅವರ ‘ಆವರಣ ಅನಾವರಣ’ ಕೃತಿಯ ಬಿಡುಗಡೆ ಸಮಾರಂಭ. ಸ್ಥಳ : ಸೆಂಟ್ರಲ್ ಕಾಲೇಜು, ಬೆಂಗಳೂರು.
ಅನಂತಮೂರ್ತಿ ಮಾತಿನ ಸಾರ :

- ಭೈರಪ್ಪನವರ ‘ಆವರಣ’ ಒಳ್ಳೆ ಪುಸ್ತಕವಲ್ಲ. ಹೀಗಾಗಿ ಇದರ ಬಗ್ಗೆ ಮಾತು-ಚರ್ಚೆ ಅನಗತ್ಯ.
- ‘ಆವರಣ’ ಕಾದಂಬರಿ ಮಾರಾಟದ ವೇಗ ನೋಡಿದರೆ, ದಿಗಿಲಾಗುತ್ತದೆ. ಪತ್ರಿಕೆಗಳ ಅತಿ ಪ್ರಚಾರ ಮತ್ತು ಆರೆಸ್ಸೆಸ್‌ನವರಿಂದಾಗಿ ಪ್ರತಿಗಳು ಖಾಲಿಯಾಗುತ್ತಿವೆ.
- ತಮ್ಮ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರಲು ಭೈರಪ್ಪ ಮುಂದಾಗಿದ್ದಾರೆ. ವೈಯಕ್ತಿಕ ಅಭಿಪ್ರಾಯಗಳನ್ನು ಮೀರಿ ಬರೆವವನು ಮಾತ್ರ ಉತ್ತಮ ಲೇಖಕ.
- ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆವರಣದಲ್ಲಿ ಚರ್ಚೆಗೆ ನಿಂತ ಎಸ್.ಎಲ್.ಭೈರಪ್ಪ ಕಾದಂಬರಿಕಾರರೇ ಅಲ್ಲ. ಅವರಿಗೆ ಕಾದಂಬರಿ ಬರೆಯಲು ಬರುವುದಿಲ್ಲ. ಅವರನ್ನು ಒಬ್ಬ ಚರ್ಚಾಪಟು ಅನ್ನಬಹುದು.
- ಕಾವ್ಯ ಗೊತ್ತಿಲ್ಲದ ಭೈರಪ್ಪನವರಿಗೆ ಒಳನೋಟಗಳಿಲ್ಲ. ಜನಮೆಚ್ಚುಗೆಗಾಗಿ ಬರೆಯುವ ಭೈರಪ್ಪ ಕಾದಂಬರಿಕಾರರಲ್ಲ.
ಸಮಾರಂಭದಲ್ಲಿ ದೇವನೂರು ಮಹದೇವ, ಪ್ರೊ.ಹೆಚ್.ಗೋವಿಂದಯ್ಯ, ಡಾ.ಕೆ.ವೈ. ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಭೈರಪ್ಪನವರ ‘ಆವರಣ’ ಕಾದಂಬರಿಯ ಬಗ್ಗೆ ಎನ್.ಎಸ್.ಶಂಕರ್ ತಮ್ಮ ಅನಿಸಿಕೆಗಳನ್ನು ‘ಆವರಣ ಅನಾವರಣ’ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಆದಿಮ ಸಂಸ್ಥೆ ಈ ಪುಸ್ತಕ ಪ್ರಕಟಿಸಿದ್ದು, ಪುಸ್ತಕದ ಬೆಲೆ 15 ರೂಪಾಯಿ. ಆಸಕ್ತರು ಪ್ರತಿಗಳನ್ನು ಐಬಿಹೆಚ್ ಬುಕ್ ಸ್ಟಾಲ್‌ಗಳಲ್ಲಿ ಖರೀದಿಸಬಹುದು.
ಅನಂತಮೂರ್ತಿ ಹೇಳಿಕೆ ಮತ್ತು ಭೈರಪ್ಪನವರ ಬದುಕು-ಬರಹದ ಬಗ್ಗೆ ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications