• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತಿ ಬೇಡ ಎಲ್ಲಿಯೂ!

By Staff
|

ತುಂಬಾ ಸೋಮಾರಿಗಳಿಗೆ ಅಮೃತವೂ ನಂಜೇ. ಹಾಲು ಒಂದು ಬಗೆಯ ಔಷಧ ಹೌದು, ಅಮೃತ ಸಮಾನ, ಭೋಗಿಗಳು ಹಿತಮಿತವಾಗಿ ಅದನ್ನು ಸೇವಿಸಿದಾಗ ಮಾತ್ರ; ಹೆಚ್ಚಾಯಿತೆ೦ದರೆ, ಕೆಲವು ಬಗೆಯ ರೋಗಿಗಳಿಗೆ ಅದು ವಿಷವೇ! ಅತಿಯಾದಾಗ ಅಮೃತವೂ ಕೂಡ ವಿಷವಾಗುತ್ತದೆ.


Nagalakshmi Harihareshwaraಅತಿ ಯಾವುದು ಎಂದು ಯೋಚಿಸಿದಾಗ, ಮೊದಲು ನನ್ನ ತಲೆಗೆ ಹೊಳೆಯುವುದು ಜೀವಿಸುವುದಕ್ಕೆ ನಮಗೆ ಅತಿ ಅವಶ್ಯಕವಾಗಿ ಬೇಕಾದ ಗಾಳಿ, ನೀರು, ಶಾಖ ಮತ್ತು ಆಹಾರಗಳ ವಿಚಾರ. ಅವು ನಮಗೆ ಬಹಳ ಅವಶ್ಯಕವಷ್ಟೇ ಅಲ್ಲ, ಅನಿವಾರ್ಯ ಕೂಡ. ಆದರೆ ಅವೇ ಮಿತಿ ಮೀರಿದರೆ?

ನಮ್ಮ ಉಸಿರಾಟಕ್ಕೆ ಗಾಳಿ ಅತಿ ಅವಶ್ಯಕ. ಪ್ರಾಣವಾಯು ಎಂದಾಗ ಎಲ್ಲಾ ಹೇಳಿದಂತೆ ಆಯಿತಲ್ಲವೆ? ಅದೇ ಗಾಳಿ ಉಸಿರು ಕಟ್ಟಿಸುವಂತೆ ಆಗಬಾರದು. ಮೈಕೊರೆಯುವ ಕುಳಿರ್ಗಾಳಿಯೂ ಅಷ್ಟೇ, ಎಂಥವರನ್ನೂ ನಡುಗಾಡಿಸಿ ಬಿಡುತ್ತದೆ. ಗಾಳಿಯು ತಂಗಾಳಿ, ಮಂದಮಾರುತ, ಮಲಯಾನಿಲ ಆಗಿರಬೇಕೇ ವಿನಾ ಜಂಝಾವಾತ, ಸುಂಟರಗಾಳಿ, ಬಿರುಗಾಳಿ, ಚಂಡಮಾರುತ, ರುದ್ರಸಮೀರ, ಟಾರ್ನೆಡೋ ಆಗುವುದು ಬೇಡ. ಹಾಗೆ ಆದಾಗ ಅದೇ ಗಾಳಿಯಿಂದ ಮನೆ ಮಠ ಗಿಡ ಮರ ಪ್ರಕೃತಿಯೇ ಬುಡಮೇಲು ಆಗಿ ಬಿಡುತ್ತದೆ; ಊರಿಗೆ ಊರೇ ಧೂಳಿಪಟ ಆಗುತ್ತದೆಯೆಂಬುದನ್ನೂ ನಾವು ಕಂಡಿದ್ದೇವೆ.

ಇನ್ನು ನೀರು. ನೀರೇ ಇಲ್ಲದಿದ್ದಾಗ ಪ್ರಾಣಕ್ಕೇ ಅಪಾಯ. ಜೀವಸೆಲೆ, ಅದು ಬತ್ತಿತೆಂದರೆ ಸರ್ವನಾಶ. ನಿರ್ಜಲೀಕರಣ, ತೇವಗಳೆತ (ಡಿ-ಹೈಡ್ರೇಷನ್) ಆಯಿತೆಂದರೆ ರೋಗಿ ಕೆಂಪುಗಂಟೆ ಬಾರಿಸ ತೊಡಗಿದಂತೆ. ನೀರಿಲ್ಲದೆ ಗಿಡಮರಗಳೂ ಪ್ರಾಣಿಗಳೂ ಸೊರಗಿ, ಕೊರಗಿ, ನಲುಗಾಡುತ್ತವೆ. ಅನಾವೃಷ್ಟಿ ತರುವ ಇನ್ನಿತರ ಅನಾಹುತಗಳನ್ನು ನಾವು ಬಲ್ಲೆವು.

ಆದರೆ ಅದೇ ನೀರು ಅತಿಯಾದಾಗ? ಮಳೆ ಧಾರಾಕಾರವಾಗಿ ಸುರಿ ಸುರಿದು ಅತಿವೃಷ್ಟಿ ಆದಾಗ ಜನಜೀವನ ಅಸ್ತವ್ಯಸ್ತವಾಗುತ್ತದೆ, ಅಲ್ಲೋಲ ಕಲ್ಲೋಲವಾಗುತ್ತದೆ. ಹೊಳೆ ಉಕ್ಕಿ ಹರಿದು, ಕೆರೆ ಕುಂಟೆಗಳು ಕೋಡಿ ಒಡೆದು, ಅಣೆಕಟ್ಟುಗಳು ಬಿರುಕು ಕಂಡು, ಹೊಲ ಗದ್ದೆ ಜನವಸತಿಗಳನ್ನೇ ನುಂಗಿ ಹಾಕುತ್ತವೆ. ಮೇಲೇರಿದ ಅತಿ ನೀರ ಪ್ರವಾಹ ಸೇತುವೆಗಳನ್ನೇ, ಏಕೆ ಊರನ್ನೇ, ಕೊಚ್ಚಿಕೊ೦ಡು ಹೋಗುತ್ತದೆ. ಇತ್ತೀಚೆಗಷ್ಟೇ ನಾವು ಕಂಡ ಸುನಾಮಿಯ ಪ್ರಕೋಪವನ್ನ ಮರೆಯುವುದಕ್ಕೆ ಸಾಧ್ಯವೇ?

ಆಮೇಲೆ, ಬಿಸಿಲು, ಶಾಖ. ಎಲ್ಲರಿಗೂ ಎಲ್ಲದಕ್ಕೂ ಹಿತಮಿತ ಉಷ್ಣ, ಶಾಖ ಅತಿ ಅವಶ್ಯಕವೇ. ಮೈ ಬಿಸಿ ಕಳೆದುಕೊಂಡಾಗ ಕತೆ ಮುಗಿದಂತೆ. ಸೇವಿಸುವಾಗ ಸಾಮಾನ್ಯವಾಗಿ ಆರಿದ್ದು ರುಚಿಕರವಲ್ಲ, ಆರೋಗ್ಯಕರವೂ ಅಲ್ಲ. ಮೈಕೊರೆಯುವ ಚಳಿಗಾಳಿ ಹೆಚ್ಚಾಯಿತೆಂದರೆ ಕಂಬಳಿಯೋ ಉಣ್ಣೆಬಟ್ಟೆಯ ಸ್ವೆಟರೋ ದೇಹದ ಸುಖೋಷ್ಣವನ್ನ ಕಾಪಾಡೀತು. ಮುಂಜಾವಿನ ವೇಳೆಯ ಎಳೆಬಿಸಿಲಲ್ಲಿ, ಬಚ್ಚಲುರಿಯ ಬಳಿಯ ಬೆಚ್ಚಗಿನ ಪರಿಸರದಲ್ಲಿ ಮೈಕಾಯಿಸಿಕೊಳ್ಳುವುದು ಎಲ್ಲರಿಗೂ ಮೆಚ್ಚುಗೆಯೇ. ಅದೇ ಅತಿ ಆದಾಗ, ಉರಿ ಬಿಸಿಲಿನ ಧಗೆಯಿಂದ ಬೇಗೆಯಿಂದ ಜನರು ಬವಣೆಗೊಂಡು ಬಸವಳಿದು ಬಿಡುತ್ತಾರೆ; ಬೆಂದು ಹೋಗುತ್ತಾರೆ, ಸಾಯುತ್ತಾರೆ, ಪ್ರಾಣಿಗಳೂ ಸಾಯುತ್ತವೆ. ದಳ್ಳುರಿ, ಕಾಳ್ಗಿಚ್ಚು ಕಾಡು ಮೇಡನ್ನೇ ತೋಟ ಹೊಲ ಗದ್ದೆಗಳನ್ನೇ ಸುಟ್ಟು ಬೂದಿಮಾಡಿ ಬಿಡುತ್ತದೆ.ವೈಜ್ಞಾನಿಕವಾಗಿ ನಾವು ಎಷ್ಟೇ ಪ್ರಗತಿಹೊಂದಿರಬಹುದು, ಕೆರಳಿದ ಪ್ರಕೃತಿಯ ಈ ಅತಿ ವಿಕೋಪದ -ಬೆಂಕಿ ಗಾಳಿ ಮತ್ತು ನೀರಿನ- ಉರಿಗಣ್ಣಿನ ಹೊಡೆತ ತಡೆದುಕೊಳ್ಳಲಾರೆವು. ಒಂದೇ ಸಾಲದೆಂದು ಎರಡೆರಡು ಜೊತೆಗೂಡಿ ದಾವಾನಲ, ಉಲ್ಕಾಪಾತ, ಜ್ವಾಲಾಮುಖಿಗಳ ರೂಪ ತಾಳಿದಾಗಲಂತೂ ಆ ರಭಸಕ್ಕೆ ಮಣಿಯದ್ದೇ ಇಲ್ಲ; ಎದುರಾದುದೆಲ್ಲ ಪಡ್ಚ, ನಿರ್ನಾಮ.

ಅದು ನೀರಾಗಿರಬಹುದು, ಬೀರಾಗಿರಬಹುದು-ಅತಿ ಕುಡಿಯುವುದರಿಂದ ತೊಂದರೆ ತಪ್ಪಿದಲ್ಲ. ಸಿಹಿ ಇಷ್ಟ, ಖಾರ ಇಷ್ಟ ಅಂತ ಫ್ರೆಂಚ್, ರಷ್ಯನ್, ಮೆಕ್ಸಿಕನ್, ಚೈನೀಸ್ ಮುಂತಾದ ಏನೇನೋ ಖಾರ ಖಾರದ ಊಟಗಳು ಇಷ್ಟ ಅಂತ ಅತಿಯಾಗಿ ತಿಂದರೆ, ಅರೆಬರೆ ಬೆಂದ ಗಿಣ್ಣಿನ ಗುಡ್ಡೆಗುಡ್ಡೆಯಾಗಿರುವ ಪೀಜಾಗಳನ್ನ ಅತಿಯಾಗಿ ಕಬಳಿಸಿದರೆ, ಪರಿಣಾಮ ಏನಾದೀತು? ಅಜೀರ್ಣದ ಕಾರಣ ಎದೆಯುರಿ, ಹೊಟ್ಟೆನೋವು, ವಾಂತಿ ಬೇಧಿ ಮೊದಲಾದ ತೊಂದರೆಗಳನ್ನ ನಾವೇ ಕೈಯಾರೆ ತಂದುಕೊಳ್ಳುತ್ತೇವೆ. ಅನುಭವಿಸಿದವರ ಮಾತು ಕೇಳಿ: ಅತಿ ತಿಂದು, ಬೊಜ್ಜು ತಂದುಕೊಳ್ಳುವುದು ಸುಲಭ, ಕರಗಿಸಿಕೊಳ್ಳಲು ಪಡಬೇಕಾದ ಕಷ್ಟ ಅಪಾರ. ಯಾವುದೇ ವಿಷಯ ಅತಿಯಾದಾಗ ಅಮೃತವೂ ಕೂಡ ವಿಷವಾಗುತ್ತದೆ. ತುಂಬಾ ಸೋಮಾರಿಗಳಿಗೆ ಅಮೃತವೂ ನಂಜೇ. ಹಾಲು ಒಂದು ಬಗೆಯ ಔಷಧ ಹೌದು, ಅಮೃತ ಸಮಾನ, ಭೋಗಿಗಳು ಹಿತಮಿತವಾಗಿ ಅದನ್ನು ಸೇವಿಸಿದಾಗ ಮಾತ್ರ; ಹೆಚ್ಚಾಯಿತೆ೦ದರೆ, ಕೆಲವು ಬಗೆಯ ರೋಗಿಗಳಿಗೆ ಅದು ವಿಷವೇ.

ಅತಿ ಪ್ರೀತಿ ಸಹ ಒಳ್ಳೆಯದಲ್ಲ. ಅತಿ ಮುದ್ದು ಮಾಡಿ ಬೆಳೆಸಿದ ಮಕ್ಕಳು ಅತಿಯಾಗಿಯೇ ಹಾಳಾಗಿ ಹೋದುದ್ದನ್ನ ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಕೇಳಿದ್ದೆಲ್ಲಾ ಸಿಗುತ್ತಿರುವಾಗ, ಸೋಲೆಂಬುದನ್ನೇ ಅರಿಯದೆ, ಭ್ರಮೆಯ ಪ್ರಪಂಚದಲ್ಲಿ ಬೆಳೆದ ಮಕ್ಕಳು ಮುಂದೆ ವಾಸ್ತವಿಕ ಜಗತ್ತಿನಲ್ಲಿ ಮುಗ್ಗರಿಸುತ್ತಾರೆ, ಎಡುವಿದಾಗ ತಡೆದುಕೊಳ್ಳಲು ಸಮರ್ಥರಿರುವುದಿಲ್ಲ. ಹಾಗೆಯೇ, ಅತಿ ಶಿಕ್ಷೆ ಮಾಡಿ ಬೆಳೆಸಿದ ಮಕ್ಕಳೂ ಸಹ ಕೈ ತಪ್ಪಿ ಹೋದ ಘಟನೆಗಳು ಸಾಕಷ್ಟಿವೆ.

ಅತಿ ಪರಿಚಯದಿಂದ ಅವಜ್ಞೆ, ಅತಿಯಾಗಿ ಹೋಗಿ ಬರುವದರಿಂದ ಅಸಡ್ಡೆ, ಅನಾದರ, ತಾತ್ಸಾರ ಖಂಡಿತ. ಉಪೇಕ್ಷೆ, ನಿರ್ಲಕ್ಷ್ಯ ಕಟ್ಟಿಟ್ಟ ಬುತ್ತಿ. ಯಾವಾಗಲೂ ಹೋಗುತ್ತಿದ್ದರೆ, ಪರಿಚಿತರ ಆ ಮನೆಯಲ್ಲಿ ಮೊದ ಮೊದಲಿದ್ದ ಆದರ ಕೊನೆಯವರೆಗೂ ಇರುತ್ತೇನು? ಮಲಯಗಿರಿಯಲ್ಲಿ ಬೇಡರ ಹೆಂಗಸು ಶ್ರೀಗಂಧದ ಮರವನ್ನ ಒಲೆಗೆ ಸೌದೆಯಾಗಿ ಬಳಸುತ್ತಾಳಂತೆ; ಏಕೆಂದರೆ ಬೇರೆ ಕಡೆಗಳಲ್ಲಿ ಅದು ದುರ್ಲಭವಿರಬಹುದು; ಅ ವಸ್ತು ಅಲ್ಲಿ ಹೇರಳ; ಆದಕ್ಕೇ ತಾತ್ಸಾರ.

ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸಬೇಡಿ- ಎನ್ನುತ್ತಾರೆ ಬಸವಣ್ಣ. ಅತ್ಯಂತ ಅಪೂರ್ವ ಸುಂದರಿಯೆಂದು ಜನ ಹೊಗಳಿ ಹೊಗಳಿ, ರೂಪಾತಿಶಯದ ಸುದ್ದಿ ಹರಡಿ ಸೀತೆ ಅಪಹೃತಳಾದಳು; ಅತಿ ಅಭಿಮಾನದಿಂದ, ಗರ್ವದಿಂದ, ದರ್ಪದಿಂದ ದುರ್ಯೋಧನ, ರಾವಣ ಮುಂತಾದವರು ತಮ್ಮ ನಾಶವನ್ನು ತಾವೇ ತಂದುಕೊಂಡರು. ಅತಿ ದಾನಬುದ್ಧಿಯಿಂದ ಮಾತುಕೊಟ್ಟು, ಬಲಿ ಚಕ್ರವರ್ತಿ, ಕರ್ಣ ಮುಂತಾದವರು ಸಿಕ್ಕಿಬಿದ್ದು ಬಂಧನಕ್ಕೆ ಒಳಗಾದರು- ಆದ್ದರಿಂದ ಎಲ್ಲಾ ವಿಷಯಗಳಲ್ಲಿ ಅತಿ ಮಾಡಬಾರದು- ಎನ್ನುವ ಸುಭಾಷಿತವೊಂದಿದೆ. ಅತಿಸ್ನೇಹ ಗತಿಗೇಡು. ಅತಿಯಾದ ಶುಚಿತ್ವ, ಅತಿಯಾದ ಅಶುಚಿತ್ವ, ಅತಿ ನಿಂದೆ, ಅತಿಯಾದ ಸ್ತೋತ್ರ, ಅತಿಯಾದ ಆಚಾರ ಮತ್ತು ಅತಿಯಾದ ಅಚಾರಹೀನತೆ- ಈ ಆರು ಮೂರ್ಖನ ಲಕ್ಷಣ ಎಂದು ಇನ್ನೊಂದು ಚೆನ್ನುಡಿ ಹೇಳುತ್ತದೆ. ಕಾಸಿನಷ್ಟು ಜಾಣ, ರೂಪಾಯಿನಷ್ಟು ಶತದಡ್ದರ ಮಾತು ಬಿಡಿ; ಅತಿ ಜಾಣತನವೇ ಬುದ್ಧಿಯನ್ನ ಮಂಕಾಗಿಸಿದುದನ್ನೂ ಬಲ್ಲೆವಲ್ಲ: ವಿನಾಶಕಾಲ ಬಂದೊದಗಿತೆಂದೇ, ವಿಪರೀತಬುದ್ಧಿಯ ಶ್ರೀರಾಮನೂ ಚಿನ್ನದ ಜಿಂಕೆ ಎಲ್ಲಾದರೂ ಇರಬಹುದೇ ಎಂಬುದನ್ನ ಅರಿಯದೇ ಹೋದ, ಹೆಂಡತಿಯನ್ನ ಒಲಿಸಲು ಮಾಯಾಮೃಗವನ್ನ ಅಟ್ಟಿಸಿಕೊಂಡು ಹೋದ- ರಾಮಾಯಣದ ಧಾರಾವಾಹಿಯನ್ನ ಮುಂದುವರಿಸಿದ.

ಯಾವುದರ ಬಗ್ಗೆಯಾದರೂ ಅಭಿರುಚಿ, ಆಸ್ಥೆ, ಆಶಯ, ಅಕ್ಕರೆ ಹೀಗೆ ಅಲ್ಪಪ್ರಮಾಣದಲ್ಲಿ ಔಚಿತ್ಯವರಿತು ಇದ್ದರೆ ತೊ೦ದರೆ ಏನೂ ಇಲ್ಲ. ಆದರೆ, ಅದು ಮಿತಿ ಮೀರಿ, ಮಹದಾಸೆ ಅಕಾಂಕ್ಷೆ ಮಹತ್ವಾಕಾಂಕ್ಷೆಯ ಮಜಲಿಗೆ ಮುಟ್ಟಿತೋ ಆಗ ಬಂತು ಸಮಸ್ಯೆ. ಇಂಥವರಿಗೇ ಹೇಳಿದ್ದು ಬುದ್ಧ- ಆಸೆಯೇ ದು:ಖಕ್ಕೆ ಮೂಲ, ಅಂತ. ಹಣವೂ ಅಷ್ಟೆ; ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟೇ ಗಳಿಸುವುದಾದರೆ ತೊಂದರೆ ಇಲ್ಲ; ಬೇಕು, ಮತ್ತಷ್ಟು ಬೇಕೆಂಬಾಸೆ ಆದಾಗ, ಅದನ್ನು ಗಳಿಸುವುದು ಹೇಗೆ? ಬೇಗ ಬೇಗ ಸಂಪಾದಿಸಬಲ್ಲವೇ? ನವಿಲುಗರಿ ಮರಿ ಹಾಕೀತೆ? ಕೂಡಿಟ್ಟ ಕೊಪ್ಪರಿಗೆಯ ಅಥವಾ ಕುಡಿಕೆಯ ಹಣವನ್ನ ಕಾಪಾಡಿಕೊಳ್ಳುವುದು ಹೇಗೆ?- ಎಂಬೆಲ್ಲ ಸಮಸ್ಯೆ ಉದ್ಭವವಾಗುವುದೇ ಹೀಗೆ.

ಪ್ರಾಮಾಣಿಕತೆ, ಸತ್ಯ ನುಡಿಯುವುದು- ಎಲ್ಲವೂ ಸಹ ಹಿತಮಿತವಾಗಿರುವಾಗ ಸರಿಯಾಗಿರುತ್ತದೆ; ಗೆಲ್ಲುತ್ತದೆ ಕೂಡ. ವ್ಯವಹಾರ-ಶೂನ್ಯರಲ್ಲಿ ಅದು ಔಚಿತ್ಯ ಮೀರಿ, ಅತಿಯಾದಾಗ ಅಪಾರ್ಥಕ್ಕೆ ಎಡೆಗೊಡುತ್ತದೆ. ಗಾಳಿಯಲ್ಲಿ ಮನೆಕಟ್ಟುವ, ದಂತಗೋಪುರದಲ್ಲಿ ವಾಸಿಸ ಬಯಸುವ ಜನರ ಅತಿ ಫ್ಯಾಂಟಸಿ ಬೇಗ ಕುಸಿಯುತ್ತದೆ, ಬುಡ ಭದ್ರವಿಲ್ಲದೆ ಬಹಳ ಮೇಲೇರುವ ಬಯಕೆಯವರಿಗೆ ಒಂದು ಕಿವಿ ಮಾತು: ಆಯತಪ್ಪಿ ದಿಢೀರನೆ ಕೆಳಗೆ ಬಿದ್ದೀರಿ, ಜೋಕೆ. ಸುಸಂಸ್ಕೃತರಾಗಿರಲು ವಿನಯ ಬೇಕು, ನಿಜ. ಅತಿಭಾರ ಯಾರನ್ನಾದರೂ ಕುಗ್ಗಿಸೀತು. ತಗ್ಗದೆ ಬಗ್ಗದೆ ಅತ್ಯಂತ ಎತ್ತರಕ್ಕೆ ಬೆಳೆಯುವ ಹಂಬಲವೇ? ದಯವಿಟ್ಟು ಹೊರಗೆ ಕಾಡಿಗೆ ಹೋಗಿ ನೋಡಿ, ದಿಮ್ಮಿ ಬೇಕಾದಾಗ ಬಡಗಿಗಳು ಕಡಿಯುವುದು ಎಂಥ ಮರಗಳನ್ನ ಅಂತ- ಎನ್ನುವ ಚೆನ್ನುಡಿಯೂ ಇದೆ. ಜಂಭ ಬೇರೆ, ಸಂಕೋಚ ಬೇರೆ, ವಿನಯ ಬೇರೆ. ಯಾವುದೂ ಅತಿಯಾದಾಗ ಒಳ್ಳೆಯದಲ್ಲ. ಆದರೆ, ಅತಿ ವಿನಯವಂತೂ ಧೂರ್ತನ ಲಕ್ಷಣ. ಅತಿ ದಾಕ್ಷಿಣ್ಯ, ಅತಿ ಸಂಕೋಚ ಸಿಗಬೇಕಾದಕ್ಕೂ ಸಂಚಕಾರ ತಂದೀತು. ಅತಿ ಸೌಜನ್ಯ (ಆಪ್ ಪೆಹಲೇ) ದವರನ್ನ ಬಿಟ್ಟು ರೈಲು ಹೊರಟೇ ಹೋದೀತು, ಜೋಪಾನ.

ಕಿವಿಗೆ ಆಪ್ಯಾಯಮಾನವಾಗಿದ್ದಾಗ, ಮಗುವಿನ ತೊದಲ್ನುಡಿಯೋ, ಜೋಗುಳದ ಲಲ್ಲೆಯೋ, ಕಲಿತವರ ಹಾಡುಗಾರಿಕೆಯೋ, ಪರಿಣತರ ಶಾಸ್ತ್ರೀಯಸಂಗೀತವೋ, ಸುಶ್ರಾವ್ಯ ವಾದ್ಯನಿನಾದವೋ- ಎಲ್ಲವೂ ಕೇಳಲು ಆನಂದವಾಗಿರುತ್ತೆ. ಅದೇ ಕಿವಿಗಚ್ಚುವ ಭೈರಿಗೆಯಾಗಿ ಬಿಟ್ಟರೆ, ಆ ಶಬ್ದಮಾಲಿನ್ಯವನ್ನು ಸಹಿಸುವುದು ಹೇಗೆ?

ನಂಬಿ ಕೆಟ್ಟವರಿಲ್ಲವೋ- ಎಂದರು ದಾಸರು. ಅತಿ ಸಂದೇಹದ ವ್ಯಕ್ತಿ (ಡೌಟಿಂಗ್ ಥಾಮಸ್)ಗಳಿಗೆ, ಸಂಶಯಾತ್ಮರಿಗೆ ಉಳಿವಿಲ್ಲ; ಮಿಣುಕುಹುಳ ಅತಿಯಾಗಿ ಮಿ೦ಚಿದರೂ, ನಕ್ಷತ್ರ ಅನುಗಾಲ ಮಿನುಗಿದರೂ ಬೆಳಗುವ ಬೆಳಕಾಗಲಾರದು. ಅಲ್ಪನಿಗೆ, ಅನರ್ಹನಿಗೆ ಅತಿಯಾದ ಐಶ್ವರ್ಯ ದಢಬಡನೇ ಒಡನೇ ಬಂದಾಗ ತಾನೇ, ಅವನು ಅರ್ಧರಾತ್ರಿಯಲ್ಲಿ ಕೊಡೆ ಹಿಡಿ(ಸಿ)ದದ್ದು? ಅತಿಮಾನ, ಅತಿವಾದ, ಅತಿತ್ಯಾಗ, ಅತಿಕ್ರೋಧ-ಗಳೇ ಮನುಷ್ಯನಿಗೆ ಮುಳಿವಾಗುವ ಉರುಳುಗಳು. ತೂತು ಅತಿಯಾದಾಗ ಒಲೆಯನ್ನ ಕೆಡಿಸೀತು, ಅತಿಯಾದ ಮಾತು ಮನೆ ಒಡೆಸೀತು, ಕೊನೆಗೆ ತಲೆನೋವನ್ನಾದರೂ ತಂದೀತು. (ಅದಕ್ಕೇ ಈ ಹರಟೆಯನ್ನ ಇಲ್ಲಿಗೇ ನಿಲ್ಲಿಸುವುದು ಕ್ಷೇಮಕರ!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more