ಅಪ್ಪನ ದಿನ ಆಚರಣೆ ಹಿಂಗ ಆದರೆ ಹ್ಯಾಂಗ?!


ಒಂದು ದಿನ ನಮ್ಮ ಮನೆಯಲ್ಲಿ ಹೀಗೂ ಆಯಿತು.. ಆದದ್ದು ಒಳ್ಳೆಯದೇ ಆಯಿತು..

Umm... Mysore Pakಇಂದು ಬೆಳಗ್ಗೆ ಏಳುತ್ತಿರುವಾಗಲೇ, ಕೋಣೆಯ ಬಾಗಿಲ ಬಳಿ ಮಗಳು ಕಾಯುತ್ತಿದ್ದುದು ಕಂಡು ಆಶ್ಚರ್ಯವಾಯಿತು - ಅರೇ! ಇದೇನಿದು ರಾತ್ರಿಯೆಲ್ಲಾ ಓದಿ, ಇಷ್ಟು ಬೇಗ ಎದ್ದಿದ್ದಾಳಲ್ಲಾ! ಎಂದುಕೊಳ್ಳುತ್ತಿದ್ದಂತೆಯೇ, ಅಪ್ಪಾ ಹ್ಯಾಪಿ ಬಿಡೇ ಅನ್ನೋದಾ?

ನಾನೆಲ್ಲಮ್ಮಾ ಹಿಡ್ಕೊಂಡಿದ್ದೀನೀ, ಬಿಡೋಕ್ಕೆ ಅಂದ್ರೆ,ಅಯ್ಯೋ ನೀನೊಂದು ಶುದ್ಧ ತಲೆಹರಟೆ, ನಿನಗೆ ಏನೂ ಅರ್ಥ ಆಗೋಲ್ಲ, ಯಾವುದೋ ಹಳೆ ಮರದ ಗೊಡ್ಡು ಅನ್ನೋದೇ?

ಸರಿ ಅದು ಹೋಗ್ಲಮ್ಮ, ಅದೇನೋ ಬಿಡೇನೋ, ಭಿಡೇನೋ, ಬೇಡೆನುನೋ ಅದೇನೋ ಅಂದ್ಯಲ್ಲ, ಏನದು? ನೀನು ಏನು ಬಿಡಲ್ಲ, ನಿನಗ್ಯಾವುದರ ಭಿಡೆ ಇಲ್ಲ, ಯಾವತ್ತಿಗೂ ನಾನು ಯಾರನ್ನೂ ಏನು ಬೇಡೋಲ್ಲ. ಹಾಗಿದ್ದ ಮೇಲೆ ಅದೇನೋ ಹೇಳಿದ್ಯೋ ಅದನ್ನು ಮತ್ತೊಮ್ಮೆ ಸರಿಯಾಗಿ ಹೇಳು. ಅದೂ ಅಲ್ದೇ ನೀ ಬೇಡಿದ್ರೂ ಕೊಡೋಕ್ಕೆ ನನ್ನ ಹತ್ತಿರ ಇರೋದಾದ್ರೂ ಏನು?

ಆಗ ನನ್ನವಳು, ನಾನು ಹೇಳ್ಲಿಲ್ವೇನೇ? ಹೋಗಿ ಹೋಗಿ ಇವರ ಹತ್ರ ಬೆಳಗಾಗೆದ್ದು ಹರಟೆ ಹೊಡೆಯೋದಾ? ಮಾತು ಮರೆಸಿ ಏನೇನೋ ಮಾತನಾಡಿ, ಕಡೆಗೆ ಪುಸಕ್ ಅಂತ ಆಫೀಸಿಗೆ ಹೋಗ್ಬಿಡ್ತಾರೆ. ಇವರಿಗ್ಯಾಕೆ ವಿಶ್ ಮಾಡ್ತಿಯಾ ಅಂದ್ರೆ, ನೀನೆಲ್ಲಿ ಕೇಳ್ಬೇಕು, ನನ್ನಪ್ಪ, ನನ್ಮಾತು ಕೇಳೇ ಕೇಳ್ತಾರೆ ಅಂದೆ. ನೋಡು ಈಗ, ನಿನಗೆ ಬೇಕಾಗಿರೋ, ಕಿವಿಗೆ ಹಾಕಿಕೊಳ್ಳೋ ಲೋಲಾಕು ಕೊಡಿಸೋದಿಲ್ಲ. ಹೋಗಿ ಹೋಗಿ ಇಂತಹವರಿಗೆ ನಮ್ಮಪ್ಪ ಗಂಟು ಹಾಕಿದ್ರಲ್ಲಾ, ಅಯ್ಯೋ ದೇವ್ರೇ’ ಅಂದ್‌ಬಿಟ್ಲು!

ಅಲ್ಲ ನನ್ನಿಂದ ಇವರುಗಳಿಗಾಗಿರೋ ಪ್ರಮಾದವಾದರೂ ಏನು? ಕೈಗೆ ಒಂದು ನಾಲ್ಕು ಕಾಸು ಬರೋಹಾಗಿಲ್ಲ, ಇವರುಗಳು, ಹತ್ತು ರೂಪಾಯಿ ಖರ್ಚಿಗೆ ಲೆಕ್ಕ ಹಾಕಿರ್ತಾರೆ. ಹೇಗೋ ರಾಮಾ, ಕೃಷ್ಣ ಅಂತ ಸಂಸಾರ ತೂಗಿಸ್ಕೊಂಡು ಹೋಗ್ತಿದ್ರೆ, ಬೆಳಗಾಗೆದ್ದು ಕಾಫಿ ಕೊಡೋ ಬದಲು, ಇಂತಹ ಮೂದಲಿಕೆ ಮಾತಾ? ಹರನೇ ಶಂಕರನೇ ಅಂತ ಹಾಡೋ ಮನಸ್ಸಾಯ್ತು, ಆದರೆ ನನ್ನವಳ ಬಾಯಿಗೆ ಹೆದರಿ ಸುಮ್ಮನೆ ಬಾಯೊಳಗೆ ಟೂತ್‌ಬ್ರಷ್ ತೂರಿಸಿದೆ.

ಇನ್ನೊಂದು ಮರಿ ಶಿವ (ಧ್ವಂಸಕಾರಿ) ಇನ್ನೂ ಎದ್ದಿಲ್ಲ, ಇಲ್ದೇ ಇದ್ರೆ ಈ ತ್ರಿಮೂರ್ತಿಗಳು ಒಂದೇ ಕ್ಷಣದಲ್ಲಿ ನನ್ನ ಮಾನ ಮರ್ಯಾದೆಯನ್ನೆಲ್ಲಾ ಮೂರಾಬಟ್ಟೆ ಮಾಡಿಬಿಡ್ತಾರೆ.

ಏನಪ್ಪಾ ನಾಟಕ ಆಡ್ತೀಯೇ! ಇವತ್ತು ನಿನ್ನ ಹುಟ್ಟಿದ ಹಬ್ಬ ಅಲ್ವಾ? 47 ವರ್ಷಗಳ ಹಿಂದೆ ನೀನು ಹುಟ್ಟಿದ್ದು ಅಲ್ವಾ? ಮರೆತೇ ಹೋಯ್ತಾ? ನಿನ್ನ ಬರ್ತ್ ಸರ್ಟಿಫಿಕೇಟ್ ಅಲ್ಲೇ ಇದ್ಯಲ್ಲ (ಈಗಿನ ಕಾಲದಲ್ಲಿ ಹಣ ತೋರಿಸಿದ್ರೆ ಸಾಕು, ಬರ್ತ್ ಸರ್ಟಿಫಿಕೇಟ್ ಏನು, ಹುಟ್ಟದೇ ಇರುವವನಿಗೂ ಡೆತ್ ಸರ್ಟಿಫಿಕೇಟ್ ತಯಾರಾಗಿ ಮನೆ ಬಾಗಿಲಿಗೆ ಬಂದುಬಿಡುತ್ತದೆ).

ಅರೇ, ನಾನು ಹುಟ್ಟಿದ್ದು ಇವಳಿಗೆ ಹ್ಯಾಗೆ ಗೊತ್ತಾಯ್ತು. ಇರಬಹುದು, ಇವಳು ಈಗ ಭುವಿಯ ಮೇಲಿರದ ನನ್ನ ಅಮ್ಮನ ಅಂಶ ಅಂತ ಆಗಾಗ ಅಂದುಕೊಳ್ತಿರ್ತೀನಿ. ಆದರೆ ನನಗೆ ಹೇಗೆ ನೆನಪಿರತ್ತೆ. ಹುಟ್ಟಿದ ತಕ್ಷಣ ಮಗುವಿಗೆ ನೆನಪು ಇರತ್ತಾ? ಅದೊಂದು ಫಾರ್ಮ್ಯಾಟ್ ಮಾಡಿರದ ಹಾರ್ಡ್‌ಡಿಸ್ಕ್ ಅಲ್ವಾ? ಹ ಹ ಹ - ನನಗಂತೂ ಈಗಲೂ ನಾನು ಹುಟ್ಟಿದ್ದೀನಿ ಅಂತಾನೇ ಅನ್ನಿಸೋಲ್ಲ!

ಮನೆಯಾಕೆ ಕೈಗೆ ಬಿಸಿ ಬಿಸಿ ಕಾಫಿ ಕೊಟ್ಟು, ತಲೆ ಮೇಲೆ ಗಟ್ಟಿಯಾದ ಹರಳೆಣ್ಣೆ ಸುರುವಿದಳು. ಇದೇನಾಗ್ತಿದೆ, ದೀಪಾವಳಿ ಹಬ್ಬ ಅಲ್ಲ, ಮತ್ತಿನ್ಯಾವ ಹಬ್ಬವೂ ಇಲ್ಲ. ಏನೋ ರಜೆಯ ದಿನ, ಸ್ವಲ್ಪ ಹಾಯಾಗಿ ಕಾಲಾಡಿಸ್ಕೊಂಡು ಇರೋಣ ಅಂದ್ರೆ, ಇವರುಗಳಿಗ್ಯಾಕೆ ನನ್ಮೇಲೆ ಹಗೆ ತೀರಿಸ್ಕೊಳ್ಳೋ ಛಲ.

ಹರಳೆಣ್ಣೆಯನ್ನು ತಲೆಗೆ ಸುರಿದು ಕುಟ್ಟಿ ಕಾಂಕ್ರೀಟ್ ದಮ್ಮಸ್ಸು ಮಾಡಿದ ಹಾಗೆ ಮಾಡುವಾಗ, ನನಗೆ ಸುಸ್ತೋ ಸುಸ್ತು. ಆ ದಣಿವನ್ನು ಆರಿಸಿಕೊಳ್ಳುವ ಮೊದಲೇ, ಬಚ್ಚಲು ಮನೆಗೆ ತಳ್ಳಿ ಬಿಸಿ ಬಿಸಿ ನೀರನ್ನು ತಲೆ ಮೇಲೆ ಸುರಿದಳು. ಮೊದಲೇ ಮುಂಬಯಿಯ ಸೆಕೆಗೆ ಮೈಯೆಲ್ಲಾ ಬೆವರು - ಇನ್ನು ಅದರ ಮೇಲೆ ಬಿಸಿನೀರು ಸೇರಿ, ನನಗೆ ಬವಳಿ ಬಂದಂತಾಗಿತ್ತು.

ಸ್ನಾನ ಮುಗಿಸಿ, ಹೊರಗೆ ಬರುತ್ತಿದ್ದಂತೆಯೇ ಮಗಳು, ಯಪ್ಪಾ ಎಂದಳು. ಇವಳು ನನ್ನನ್ನು ಕರೆದರೇ ನನ್ನ ಮೈಯೆಲ್ಲಾ ಉರಿಯುವುದು. ಏನೇ ಮಾಡಿದರೂ, ಮಾತನಾಡಿದರೂ ಏನೋ ಫಿಟ್ಟಿಂಗ್ ಇಟ್ಟಿರುತ್ತಾಳೆ. ಈ ಪಟಾಪಟಿ ಚಡ್ಡೀನ, ದೊಡ್ಡಪ್ಪನಿಗೆ ಅಂತ ತಂದಿದ್ದೆ. ಅವರು ಹಾಕ್ಕೋಳ್ಲಿಲ್ಲ, ನೀನೇ ಹಾಕ್ಕೋ, ಮನೆಯಲ್ಲಿರೋವಾಗ ಹಾಕ್ಕೊಳ್ಳೋಕ್ಕೇ ಚೆನ್ನಾಗಿದೆ ಅಂದಳು.

ಹೌದಮ್ಮಾ, ಈ ಕೋಡಂಗಿ ಈರಬದ್ರನಿಗೆ ಇದೇ ಸರಿಯಾದ ದಿರಿಸು, ಎಂದು ಮನದಲ್ಲೇ ಅಂದುಕೊಂಡೆ (ಜೋರಾಗಿ ಹೇಳಿದರೆ, ಅದಕ್ಕಿನ್ನೊಂದು ಕೊಂಕು ಮಾತು ಬಂದೀತು ಎಂಬ ಹೆದರಿಕೆ).

ಅದರ ಹಿಂದೆಯೇ ಅವಳೇ ತಯಾರಿಸಿದ ಸುಂದರವಾದ ಶುಭಾಶಯ ಪತ್ರ ರೆಡಿಯಿತ್ತು. ಅದನ್ನು ನೋಡುತ್ತಿದ್ದಂತೆಯೇ, ಮನದಲ್ಲಿದ್ದ ದಣಿವೆಲ್ಲಾ ಮಾಯವಾಗಿ ಹೋಯಿತು. ಅದರ ಹಿಂದೆಯೇ ಅವಳು ಮತ್ತು ಮಗ ಸೇರಿ, ಮನೆಯಲ್ಲೇ ತಯಾರಿಸಿದ ಕೇಕು, ಮೈಸೂರು ಪಾಕು, ನನಗಿಷ್ಟವೆಂದು ಮಾಡಿದ್ದ ಕೊಬ್ಬರಿ ಮಿಠಾಯಿ, ಕೋಡುಬಳೆಗಳನ್ನು ಬಾಯೊಳಗೆ ತುರುಕಿದ್ದರು.

ಅಷ್ಟೇ ಅಲ್ಲದೇ, ನನಗೇ ತಿಳಿಯದ ಹಾಗೆ, ಅದೆಲ್ಲಿಂದಲೋ ಒಂದು ಟೀ-ಶರ್ಟು ಕೂಡಾ ತಂದಿದ್ದರು. ಇಷ್ಟೆಲ್ಲಾ ತರಲೆ ಮಾಡಿದರೂ, ಆ ಒಂದು ಕ್ಷಣದಲ್ಲಿ ನನಗೆ ಅವರುಗಳ ಮೇಲೆ ವಿಪರೀತ ಪ್ರೀತಿ ಉಕ್ಕಿತ್ತು. ಅಂದು ಬುದ್ಧ ಪೂರ್ಣಿಮೆಗಾಗಿ ರಜೆ ಇದ್ದುದರಿಂದ ಮನೆಯಲ್ಲೇ ಪೂರ್ತಿ ದಿನ ನಿದ್ರೆ ಮಾಡಿ ಕಳೆದೆ.

ಒಮ್ಮೆ ನೀವೆಲ್ಲಾ ನಮ್ಮ ಮುಂಬೈ ಮನೀಗ್ ಬನ್ನಿ! ಹೆದರ್ಬೇಡ್ರೀ ಸರ, ನಮ್ಮ ಮನಿ ತ್ರಿಮೂರ್ತಿಗಳು ನನ್ಮುಂದೆ ಅಷ್ಟೇ ಹೀಗಾಡೋದು. ನಿಮ್ಗೆಲ್ಲಾ ಒಳ್ಳೀ ಆತಿಥ್ಯ ನೀಡ್ತಾರ್ರೀ! ಮತ್ತ ನಿಮ್ಮ ಜನ್ಮದಾಗ ಮರಿಯೂ ಹಂಗಿಲ್ಲ, ಹಾಂಗ ನೋಡ್ಕೋತಾರ. ಮತ್‌ ಬರ್ರಲಾ ತಾಬಡ್‌ತೋಡ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+