ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಿ ಪ್ರಾಣವ ಬಿಟ್ಟ ಹುಲಿಯ ನೆನೆಯುತ್ತಾ...

By Staff
|
Google Oneindia Kannada News


(ಹಿಂದಿನ ಪುಟದಿಂದ)

ಮೂಲ ಕವಿತೆಯನ್ನೊಮ್ಮೆ ಪೂರ್ತಿಯಾಗಿ ಓದಿ. ಈ ಸಾಲುಗಳನ್ನು ಧ್ಯಾನಿಸಿ :
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವನುಂಡು ಸಂತಸದಿಂದಿರು.

ಪುಣ್ಯಕೋಟಿ ತನ್ನನ್ನು ತಾನು ಅರ್ಪಿಸಿಕೊಳ್ಳಲೆಂದೇ ಬಂದಿದೆ. ಅದಕ್ಕೆ ತನ್ನ ಹತ್ತಿರ ಏನೇನಿದೆ ಅನ್ನುವುದೂ ಗೊತ್ತಿದೆ. ಅದನ್ನು ಒಪ್ಪಿಸುವ ಹೊತ್ತಿಗೂ ಹಸು ತನ್ನ ವ್ಯಂಗ್ಯ ಮತ್ತು ಚುಚ್ಚುವ ಶೈಲಿಯನ್ನು ಮರೆಯುವುದಿಲ್ಲ. ನೀನು ಚಂಡವ್ಯಾಘ್ರ- ಕ್ರೂರಿ ಕಣಯ್ಯಾ ಎನ್ನುವುದನ್ನು ಹಸು ನೆನಪಿಸುತ್ತದೆ. ಇದನ್ನೆಲ್ಲ ತಿಂದು ನೀನು ಸುಖವಾಗಿರು ಎಂದು ವ್ಯಂಗ್ಯವಾಗಿ ಹೇಳುತ್ತದೆ.

ಆದರೆ ಪುಣ್ಯಕೋಟಿಗೆ ತಾನು ಹುಲಿಯನ್ನು ಕೊಲ್ಲುತ್ತೇನೆ ಎನ್ನುವುದು ಮೊದಲೇ ಗೊತ್ತಿತ್ತೇ ? ಅಂಥ ಸುಳಿವು ಮೊದಲೇ ಸಿಕ್ಕುವುದಿಲ್ಲ. ಯಾಕೆಂದರೆ ಪುಣ್ಯಕೋಟಿ ತನ್ನ ಕಂದನಿಗೊಂದು ಸೂಚನೆ ಕೊಡುತ್ತದೆ. ‘ಎಲ್ಲಿಗೆ ಹೋದರೂ ಆ ಬೆಟ್ಟದ ಕಿಬ್ಬಿಯ ಹತ್ತಿರ ಹೋಗಬೇಡ. ಅಲ್ಲಿ ಹುಲಿರಾಯನಿದ್ದಾನೆ ಹುಷಾರ್‌’. ಒಂದು ವೇಳೆ ಹಸು ಹೋಗದೆ ಇದ್ದರೆ ಏನಾಗುತ್ತಿತ್ತು ? ಕತೆಯೇ ನಡೆಯುತ್ತಿರಲಿಲ್ಲ ಅಥವಾ ಕತೆ ಜನಪ್ರಿಯವಾಗುತ್ತಿರಲಿಲ್ಲ. ಮುಂದೆ ಯಾವ ಹುಲಿಯೂ ಯಾವ ಹಸುವನ್ನೂ ನಂಬುತ್ತಿರಲಿಲ್ಲ. ಹಸುವನ್ನು ಗೋಮುಖ ವ್ಯಾಘ್ರವೆಂದು ಹುಲಿಗಳು ಭಾವಿಸುತ್ತಿದ್ದವೇ?

ಹೀಗೆ ಏಕ ಕಾಲಕ್ಕೆ ಅನೇಕ ಯೋಚನೆಗಳನ್ನು ಕವಿತೆ ಹುಟ್ಟುಹಾಕುತ್ತದೆ. ಅದು ಬೀರುವ ಸಾಮಾಜಿಕ ಪರಿಣಾಮವನ್ನು ಹೊರತುಪಡಿಸಿ ಈ ಕವಿತೆಯನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅದು ಒಳಿತು ಮತ್ತು ಕೆಡುಕುಗಳ ನಡುವಿನ ಯುದ್ಧದ ಕತೆ. ಆದರೆ ಯಾವುದು ಒಳಿತು, ಯಾವುದು ಕೆಟ್ಟದ್ದು ಅನ್ನುವುದು ವಿವಾದಾಸ್ಪದ. ಯುವ ಕತೆಗಾರರು ಈ ಕವನವನ್ನು ಇಡಿಯಾಗಿ ಧ್ಯಾನಿಸದೇ ಹೋದರೆ ಅವರು ಮಹತ್ವದ್ದೇನನ್ನೂ ಬರೆಯುವುದಕ್ಕೆ ಸಾಧ್ಯವಾಗದು. ಇದರ ಕಥನ ಶಕ್ತಿಆಆಅದ್ಭುತವಾದದ್ದು. ಕವಿತೆ ತೀರ ನಿರುಮ್ಮಳವಾದ ಒಂದು ವಾತಾವರಣದ ಚಿತ್ರಣದೊಂದಿಗೆ ನೆಮ್ಮದಿಯ ಭಾವದಲ್ಲಿ ಶುರುವಾಗುತ್ತದೆ.

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಕತೆಯಿದು

ಎಂದೇ ಕತೆ ಆರಂಭವಾದರೂ ಇದು ಗೊಲ್ಲನ ಕತೆಯಲ್ಲ. ಗೊಲ್ಲ ಯಾಕೆ ಮುಖ್ಯವಾಗುತ್ತಾನೆ ಎಂದರೆ ಆತ ಸತ್ಯಸಂಧ ಹಸುಗಳನ್ನು ಸಾಕಿದ್ದಾನೆ ಎನ್ನುವ ಕಾರಣಕ್ಕೆ. ಆ ಹಸುಗಳೋ ಮಾಡುವುದಿಷ್ಟನ್ನೇ.

ಗೊಲ್ಲ ದೊಡ್ಡಿಯಾಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ....

ಇಂಥ ಸುಂದರ ಚಿತ್ರ ಮುಂದಿನ ಕ್ಷಣದಲ್ಲೇ ಬದಲಾಗುತ್ತದೆ. ಅದು ಕತೆಗೊಂದು ಅನಿರೀಕ್ಷಿತ ತಿರುವು. ಅದೇ ಬೆಟ್ಟದಲ್ಲಿ ಹಸಿಹಸಿದು ಅಬ್ಬರಿಸುವ ಹುಲಿಯಾಂದಿದೆ. ಮೇವು ಮುಗಿಸಿ ಹಸುಗಳು ಸಿರಿಸಂಜೆಯ ಸೊಬಗಲ್ಲಿ ಮರಳುವಾಗ ಅದು ಸಿಡಿದು ರೋಷದಿ ಮೆರೆಯುತ್ತ ಘುಡುಘುಡಿಸಿ ಭೋರಿಡುತ ಛಂಗನೆ ಪುಣ್ಯಕೋಟಿಯ ಮುಂದೆ ನೆಗೆಯುತ್ತದೆ.

ಆ ಕ್ಷಣ ನಮ್ಮ ಮನಸ್ಸು ಪುಣ್ಯಕೋಟಿಯ ಬಗ್ಗೆ ಮರು ಮರುಗುತ್ತದೆ. ಎಂಥಾ ಹಸುವಿಗೆ ಎಂಥಾ ಕಷ್ಟ ಎಂದುಕೊಳ್ಳುತ್ತೇವೆ. ಆದರೆ ಪುಣ್ಯಕೋಟಿ ಸಾಮಾನ್ಯದ ಹಸುವಲ್ಲ. ಅದರ ಕನ್‌ವಿನ್ಸಿಂಗ್‌ ಕೆಪಾಸಿಟಿಯ ಬಗ್ಗೆ ಅನುಮಾನ ಇಟ್ಟುಕೊಂಡರೆ ಕೆಟ್ಟೀರಿ. ಹಸಿದ ಹುಲಿಗೇ ಅದು ಸಮಜಾಯಿಷಿ ನೀಡಬಲ್ಲುದು. ‘ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹೇಳಿ ಅದು ತಪ್ಪಿಸಿಕೊಂಡು ಬರುತ್ತದೆ. ಪರಮಾತ್ಮನ ಹೆಸರು ಹೇಳಬೇಕಾದರೂ ಆ ಹುಲಿಗೂ ಪರಮಾತ್ಮನ ಮೇಲೆ ನಂಬಿಕೆ ಇರಬೇಕು ತಾನೇ ?

ಅಲ್ಲಿಂದ ಹುಲಿ ತಪ್ಪಿಸಿಕೊಂಡು ಬರುವುದು ಮೂರನೆಯ ಘಟ್ಟ. ಆದರೆ ಆ ತಪ್ಪಿಸಿಕೊಂಡು ಬಂದದ್ದು ಕೇವಲ ಕ್ಷಣಿಕ. ಮತ್ತೆ ಅದು ಮರಳಬೇಕು. ‘ಕಟ್ಟ ಕಡೆಯಲಿ ಮೇಯಬೇಡ, ಬೆಟ್ಟದೊತ್ತಿಗೆ ಹೋಗಬೇಡ, ದುಷ್ಟವ್ಯಾಘ್ರನು ಹೊಂಚುತಿರುವನು’ ಎಂದು ಅದು ಎಚ್ಚರಿಕೆ ನೀಡಿ ಹೊರಡುವುದು ಮುಂದಿನ ಘಟ್ಟ. ಅತ್ಯಂತ ಸಮೃದ್ಧವಾದ ಭಾವಾತಿರೇಕ ಸಿಗುವುದು ಇಲ್ಲಿಯೇ.

ಈ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಒಂದು ಅರ್ಥದಲ್ಲಿ ಅಲ್ಲಿಗೆ ಕತೆ ಮುಗಿಯಬೇಕು. ಯಾಕೆಂದರೆ ಹಸು ತನ್ನ ಸತ್ಯವಾಕ್ಯಕೆ ತಪ್ಪಿ ನಡೆಯದೇ ಹುಲಿಗೆ ಒಂದು ಆಹಾರವಾಗಲು ಹೋಯಿತು. ಹಸುವಿನ ಸತ್ಯಸಂಧತೆ ಚಿರಾಯುವಾಯಿತು. ಆದರೆ ಕವಿಗೆ ಗೊತ್ತು. ಎಲ್ಲರ ಕರುಣೆಗೂ ಪ್ರೀತಿಗೂ ಹಸು ಪಾತ್ರವಾಗಿದೆ. ಅದನ್ನು ಹುಲಿ ಕೊಂದು ತಿಂದರೆ ಕತೆ ಸತ್ವಹೀನವಾಗುತ್ತದೆ. ಕವಿ ತಕ್ಷಣವೇ ಹುಲಿಯನ್ನು ಮತ್ತೊಬ್ಬ ನಾಯಕನನ್ನಾಗಿ ಚಿತ್ರಿಸುತ್ತಾನೆ.

ಹಸುವಿನ ಸತ್ಯಸಂಧತೆಗೆ ಬೆರಗಾಗಿ ಹುಲಿಯೇ ತನ್ನನ್ನು ತಾನು ಕೊಂದುಕೊಳ್ಳುತ್ತದೆ. ಅಕ್ಕ ಇವಳು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹಾರಿ ಪ್ರಾಣವ ಬಿಡುತ್ತದೆ. ಅಲ್ಲಿಗೆ ಕೊನೆಯಲ್ಲಿ ಮನಸ್ಸಲ್ಲಿ ನಿಲ್ಲುವುದು ಹಸುವಲ್ಲ, ಕಾಳಿಂಗನೆಂಬ ಗೊಲ್ಲನೂ ಅಲ್ಲ. ತ್ಯಾಗಜೀವಿ ಹುಲಿ.

ಇದಕ್ಕಿಂತ ಉತ್ತಮವಾದ ಕೊನೆ ಈ ಕವಿತೆಗೆ ಸಾಧ್ಯವಿತ್ತೇ ಎಂದು ಯೋಚಿಸಿದರೆ ಮತ್ತೇನೂ ಹೊಳೆಯುವುದೇ ಇಲ್ಲ. ಪ್ರತಿಯಾಂದು ಹಂತದಲ್ಲೂ ಅದು ಪ್ರಶ್ನೆಗಳನ್ನೂ ಪರಿಹಾರಗಳನ್ನೂ ಸೃಷ್ಟಿಸುತ್ತಾ ಮುಂದುವರೆಯುತ್ತದೆ. ಹುಲಿಯಿಂದ ಹಸು ಹೇಗೆ ಪಾರಾಗುತ್ತದೆ, ಹಸುವಿನ ಮಾತನ್ನು ಹುಲಿ ನಂಬುತ್ತದೆಯೇ, ತಪ್ಪಿಸಿಕೊಂಡು ಬಂದ ಹಸು ಮತ್ತೆ ಹುಲಿಯ ಹತ್ತಿರ ಹೋಗುತ್ತದೆಯೇ, ಸಾವಲ್ಲದೆ ಹುಲಿಗೆ ಬೇರೆ ದಾರಿ ಯಾವುದಿತ್ತು....

ಅತ್ಯಂತ ಘೋರವಾಗಿ ಕವಿತೆ ಕೊನೆಯಾಗುತ್ತದೆ. ಸತ್ತ ಮೇಲೂ ಹುಲಿ ಬದುಕಿ ಉಳಿಯುತ್ತದೆ. ಹುಲಿಯನ್ನು ಕೊಂದದ್ದು ಪುಣ್ಯಕೋಟಿಯ ಒಳ್ಳೆಯತನವೋ, ಹುಲಿಯ ಹುಂಬತನವೋ ಅಥವಾ ಸತ್ಯವೆಂಬ ಆಯುಧವೋ.... ನೀವೇ ಯೋಚಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X