ಹಾರಿ ಪ್ರಾಣವ ಬಿಟ್ಟ ಹುಲಿಯ ನೆನೆಯುತ್ತಾ...
ತನ್ನ ಹೆಸರನ್ನು ಗೀಚಿ ಹೋಗುವುದಕ್ಕೂ ಇಷ್ಟವಿಲ್ಲದ ಆ ಕವಿ ರಚಿತ ‘ಗೋವಿನ ಹಾಡಿ’ನ ಒಂದು ಸೀಳುನೋಟ.
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ...
ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಆ ಅನುಮಾನ ಇದು - ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ ಕರುವಿಗೆ ಒಂದು ನಿಮಿಷದಲ್ಲಿ ಹಾಲು ಕುಡಿಸಿ ಬಂದು ಹುಲಿಗೆ ಆಹಾರವಾಗುವುದಾಗಿ ಮಾತು ಕೊಟ್ಟಿತು ನಿಜ.
ಆದರೆ ಒಂದು ನಿಮಿಷದಿ ಹಾಲು ಕೊಟ್ಟು ಬರುತ್ತೇನೆ ಅನ್ನುವ ಪುಣ್ಯಕೋಟಿಯ ಕಾರಣವನ್ನು ಹುಲಿ ಒಪ್ಪಿದ್ದಾದರೂ ಹೇಗೆ ? not valid reason ಎಂದು ಹುಲಿ ಅದನ್ನು ನಿರಾಕರಿಸಬಹುದಿತ್ತಲ್ಲ. ಹಾಗೆ ನಿರಾಕರಿಸುವುದಕ್ಕೆ ಹುಲಿಗೆ ಸಾಕಷ್ಟು ಕಾರಣಗಳೂ ಇದ್ದವಲ್ಲ...
ಮೊದಲನೆಯದಾಗಿ ಸಾಯುತ್ತಿರುವ ಪುಣ್ಯಕೋಟಿ ಒಂದು ನಿಮಿಷ ಹಾಲು ಕುಡಿಸಿ ಬರುತ್ತೇನೆ ಅನ್ನುವ ಮಾತಲ್ಲಿ ಅರ್ಥವೇ ಇಲ್ಲ. ಯಾಕೆಂದರೆ ಹೇಗೂ ಪುಣ್ಯಕೋಟಿ ಸಾಯುತ್ತದೆ. ಮಾರನೆಯ ದಿನ ಅದರ ಕಂದ ಕರುವಿಗೆ ಯಾರು ಹಾಲು ಕುಡಿಸುತ್ತಾರೆ. ಬೇರೆ ಯಾರಾದರೂ ಕುಡಿಸುತ್ತಾರೆ ಎನ್ನುವುದಾದರೆ ಪುಣ್ಯಕೋಟಿ ತಕ್ಷಣವೇ ಹುಲಿಗೆ ‘ಖಂಡವಿದೆಕೋ’ ಎಂದು ಕೊಟ್ಟು ಬಿಡಬಹುದಿತ್ತಲ್ಲ. ಅದಕ್ಕಿಂತ ಹೆಚ್ಚಾಗಿ ಪುಣ್ಯಕೋಟಿಯ ಕಂದನಷ್ಟೇ ಅರ್ಬುದ ವ್ಯಾಘ್ರನೂ ಹಸಿದಿದ್ದನಲ್ಲ. ಹಸಿದ ಹುಲಿಗೆ ಪುಣ್ಯಕೋಟಿಯ ಕಂದನ ಹಸಿವು ಅದು ಹೇಗೆ ಅರ್ಥವಾಯಿತು. ಹಸಿದವರಿಗಷ್ಟೇ ಮತ್ತೊಬ್ಬರ ಹಸಿವು ಅರ್ಥವಾಗುತ್ತಾ?
ಟೀವಿ ಸೀರಿಯಲ್ ಕತೆಗಾರರಿಗೆ ಕೊಟ್ಟರೆ ಅದೊಂದು ಎಂಥಾ ಸೆಂಟಿಮೆಂಟಿನ ಎಸಿಸೋಡಾಗುತ್ತಿತ್ತು ಊಹಿಸಿ. ಅವರ ಕಲ್ಪನೆಯಲ್ಲಿ ಪುಣ್ಯಕೋಟಿಯನ್ನು ಹುಲಿ ಸುಮ್ಮನೆ ಹೋಗಲು ಬಿಡುತ್ತಲೇ ಇರಲಿಲ್ಲ. ತಕ್ಷಣದ ಹಸಿವು ತೀರಿಸಿಕೊಳ್ಳಲು ಪುಣ್ಯಕೋಟಿಯ ಸ್ವಲ್ಪ ಮಾಂಸವನ್ನು ತಿಂದೇ ಕಳಿಸುತ್ತಿತ್ತು. ಒದ್ದಾಡುತ್ತಾ, ತೆವಳಿಕೊಂಡು ಕಂದಮ್ಮನನ್ನು ಪುಣ್ಯಕೋಟಿ ನೋಡಲು ಹೋಗುವುದನ್ನು ಐವತ್ತು ಎಪಿಸೋಡುಗಳ ತನಕ ಎಳೆದು ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಬಹುದಾಗಿತ್ತು ಎಂಬ ಸಂತೋಷದಲ್ಲಿ ಸೀರಿಯಲ್ ಕತೆಗಾರರ ಪಲ್ಸ್‌ರೇಟ್ ಹೆಚ್ಚಾಗುತ್ತಿತ್ತು.
ಇಂಥ ತರಲೆಗಳನ್ನೆಲ್ಲ ಕಸದ ಬುಟ್ಟಿಗೆ ಹಾಕಿ ನೋಡುತ್ತಾ ಹೋದರೆ ‘ಗೋವಿನ ಹಾಡು’ ವಿಚಿತ್ರ ಕಾರಣಗಳಿಗೆ ರಂಜಿಸುತ್ತದೆ.ಇತ್ತೀಚೆಗೆ ಪದ್ಯವನ್ನು ಮತ್ತೊಂದು ರೀತಿಯಲ್ಲಿ ಸಂಸ್ಕೃತಿ ಕಥನಕಾರರು ವಿವರಿಸುತ್ತಾರೆ. ತನ್ನೆಲ್ಲ ಚಿತ್ರರೂಪಕತೆ ಮತ್ತು ಸೊಗಸಿಗಿಂತ ಆಳವಾದ ಅರ್ಥವೊಂದು ಗೋವಿನ ಹಾಡಿನಲ್ಲಿ ಅಡಗಿದೆ ಎನ್ನುವುದು ಸುಳ್ಳಲ್ಲ. ಅದು ಸಮಾಜದ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದ್ದರೆ, ನೈತಿಕತೆಯನ್ನು ಹೆಚ್ಚಿಸುವುದು ಅಂದರೆ ಶೋಷಣೆಯನ್ನು ಹೆಚ್ಚಿಸುವುದೇ ಎಂಬ ಪ್ರಶ್ನೆಯನ್ನು ಪರಂಪರೆಯನ್ನು ಆಧುನಿಕವಾಗಿ ಪರಿಭಾವಿಸುವ ಮಂದಿ ಕೇಳುತ್ತಾರೆ.
ಅವರ ಪ್ರಕಾರ ‘ಗೋವಿನ ಹಾಡು’ ಶೋಷಿತರನ್ನು ಮತ್ತಷ್ಟು ಶೋಷಿಸುವ ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ. ಅವರು ತೀರಾ ಸಂಕೀರ್ಣವಾದ ವಿವರಗಳಲ್ಲಿ ಕೊಡುವ ಕಾರಣಗಳನ್ನು ತೀರಾ ಸರಳವಾಗಿ ಬರೆದಿಟ್ಟರೆ ಅದು ಇಷ್ಟು - (ಆದರೆ ವಿಮರ್ಶೆಯನ್ನಾಗಲೀ ಅದರ ಪರಿಭಾಷೆಯನ್ನಾಗಲೀ ಪೂರಕವಾದ ಅಧ್ಯಯನ ಪ್ರಕ್ರಿಯೆಯ ಸ್ವರೂಪವನ್ನೂ ವಿನ್ಯಾಸವನ್ನೂ ಸಂರಚನೆಯನ್ನೂ ಸಂವಿಧಾನವನ್ನೂ ಸರಳಗೊಳಿಸುವುದು ಸರಿಯಲ್ಲ ಎನ್ನುವುದು ಆಧುನಿಕ ವಿಮರ್ಶಕರ ವಾದ. ಅವರಲ್ಲಿ ಕ್ಷಮೆ.)
ಇಲ್ಲಿ ಪುಣ್ಯಕೋಟಿ ಎಂದರೆ ಆಳುವ ವರ್ಗ. ಪುರೋಹಿತ ಶಾಹಿಗಳು. ಹುಲಿಯೆಂಬುದು ಶ್ರಮಿಸುವ ವರ್ಗ. ಶ್ರಮಿಸುವ ವರ್ಗದವರಿಗೆ ಗೋವಿನ ಕುಟಿಲೋಪಾಯಗಳು ಗೊತ್ತಿಲ್ಲ. ಗೋವು ಸತ್ಯದ ಹೆಸರಿನಲ್ಲಿ ಹುಲಿಯನ್ನು ಕೊನೆಗೂ ಕೊಂದು ಹಾಕುತ್ತದೆ. ಯಾವುದು ಸಾಧುವೋ ಅದು ಗೆಲ್ಲುತ್ತದೆ ಕ್ರೌರ್ಯ ಸೋಲುತ್ತದೆ ಎಂದು ನಾವು ಇದುವರೆಗೆ ತಿಳಿದುಕೊಂಡಿರುವುದು ತಪ್ಪು. ಗೆಲ್ಲುವುದು ಸಾಧುವಲ್ಲ , ನಿಜವಾದ ಕ್ರೌರ್ಯ. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಹಸು ತನ್ನನ್ನು
ತಾನು ಸತ್ಯಕ್ಕೆ ವಿಧಿಸಿಕೊಳ್ಳುವ ಮೂಲಕ ಕೊಲ್ಲುವುದೇ ಪುಣ್ಯಕೋಟಿಯ ಕತೆ.
ಇದನ್ನು ಒಪ್ಪಿಕೊಂಡರೆ ಗೋವಿನ ಹಾಡು ಎಂಬ ಸರಳ ಪದ್ಯಗಳನ್ನು ಹೀಗೆ ವಿಶ್ಲೇಷಿಸುವುದು ತಪ್ಪು ಎನ್ನುವವರೂ ಸಿಗುತ್ತಾರೆ. ಆದರೆ ಒಂದು ಪದ್ಯ ಕಾಲಕ್ರಮೇಣ ಪಡೆದುಕೊಳ್ಳುವ ಹೊಸ ಅರ್ಥಗಳ ಬಗ್ಗೆ ಚಿಂತಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದು ಕವಿತೆಯ ಶಕ್ತಿಯ ಬಗ್ಗೆ ನಾವು ಬೆರಗಾಗುತ್ತೇವೆ.












Click it and Unblock the Notifications