ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವನು ದೇವಾ ಊರ್ಣತಿಂದವನು?(ದೇವನೂರು ಮಹಾದೇವರ ಕ್ಷಮೆ ಇರಲಿ)

By Staff
|
Google Oneindia Kannada News


ಹೀಗೊಂದು ವಿಡಂಬನಾತ್ಮಕ ಲೇಖನ. ಸುಮ್ಮನೆ ಒಂದಿಷ್ಟು ತಮಾಷೆಗಾಗಿ, ಬೇತಾಳ ಪ್ರಿಯರಿಗಾಗಿ..



Vikram aur Betaal!ಥತ್‍ತೇರೀಕೆ ಇದ್ರ ವಂಸ ಎಕ್ಕುಟ್ಟೋಗ ಅಂತಾ ಬಯ್ಕೊಂಡೇಯ ಇಕ್ರಮ ಮಾರಾಜ ಮತ್ತೆ ಮಸಾಣಕ್ ಬಂದೂ ನೇತಾಡ್ತಿದ್ದ ಸವವನ್ನ ಎತ್ತಿ ಬೆನ್‍ಮೇಲಾಕ್ಕೊಂಡಿ, ಮನಸ್ನಾಗೇ ಈ ದಪ ಬುಟ್ಟೇನಾ ನಿನ್ನಾ ಆ ವಯ್ಯನ್‍ತಾಗೆ ಕರಕೊಂಡ್ ಓಗೇ ಓಯ್ತೀನಿ ಅಂದ್‍ಕೊಂಡಿ ಧಪಾ ಧಪಾ ವಾಟ ಕಿತ್‍ತಾ ಇರೋವಾಗೇಯ ಆ ಬೇತಾಳ ಮುಸಿ ಮುಸಿ ನಗಕತ್ತಿ ಕೆಮ್ಮಿ ಕ್ಯಾಕರ್ಸೀ ಗಂಟಲಾ ಸರಿ ಮಾಡ್ಕೊಂಡೀ " ಏನಯ್ಯಾ ಇಂಗ್ ಓಟ ಕಿತ್ಕೊಂಡ್ ಬುಟ್ಟೀ ನಿಂಗೇನೋ ಇದು ಸ್ಯಾನೇ ಖುಸೀ ಇರಬೈದು ನಂಗಾಯಾಸಾಗಕಿಲ್ವ? ವಸಿ ಮೆತ್ತಗ್ ನಡಿ, ನಾನ್ ಏಳ್‍ಬ್ಯಾಡ್ವಾ ಒಂದು ಕತೆಯಾ? ಅದು ಲಾಗಾಯ್ತಿಂದ ಬಂದಿದ್ದಲ್ಲವಾ? ಸುಮ್ಕೆ ಇದ್ರೆ ನನ್ನ್ಯಾರಾದ್ರೂ ಬೇತಾಳಾಂತ ಕರೀತಾರಾ? ನನ್ ರೆಪ್ಯುಠೇಸನ್ ಎಕ್ಕುಟ್ಟೋಗಕಿಲ್ವಾ? ಇಸ್ಟ್ ಬಿರೀನ್ ಎಜ್ಜೆ ಆಕಿದ್ರೆ ನಾ ಎಂಗ್ಲಾ ಕತೆ ಏಳಾದೂ’ ಅಂತ ದಬಾಯಿಸಿತು.

ಆಟೊತ್ಗೇ ಏದುಬ್ಬಸ ಬಂದಂಗಾಗಿ ಮಾರಾಜ್ನೂನೂವೆ ಈ ದರಿದ್ರ ಬೇತಾಳ ಒಟ್ಗೆ ಏನ್ ತಿಂತೈತೋ ಏನೋ ಈ ಪಾಟಿ ಆನೆಗಾತ್ರ ಊದ್ಕೊಂಡ್ ಬುಟ್ಟೈತಲ್ಲಾಂತವ ಬೊಯ್ಕೊಂಡೇಯ ವಸಿ ವಾಟ ಕಮ್ಮಿ ಮಾಡಿ ಸುಮ್ಕೆ ನಡೆಯಾಕ್ ಸುರು ಮಾಡಿದ್ ಮ್ಯಾಗೆ ಬೇತಾಳ ಕತೆ ಶುರುಮಾಡಿದ.

" ಅಲ್ಲಯ್ಯಾ ರಾಜ ನೀಯೇನ್ ಮನ್ಸಾನೇನಯ್ಯ? ನಾನೂ ಲಾಗಾಯ್ತಿಂದ ನೋಡ್ತಾನೇ ಇವ್ನಿ, ಒಂದೇ ಕೆಲ್ಸಾವಾ ಬ್ಯಾಜಾರಿಲ್ದೇ ಮಾಡ್ತಾಯಿದೀಯಪ್ಪ, ಈಗಿನ್ ಕಾಲ್ದೋರ್ನ ನೋಡಾದ್ರೂ ವಸಿ ಕಲೀಬಾರ್ದ? ನೋಡು ಹುಟ್ಟಿದ್ ಹೈಕಳೆಲ್ಲಾ ಎಂಗೆ ಕೈಲಿ ಅದೆಂಥೇದೋ ಮೊಬೈಲೋ ಏನೋ ಅಂತಾರಪ್ಪ ಅದ್ನ ಮಡಿಕೊಂಡಿ ಒಬ್ಬೊಬ್ರೇ ಒಳ್ಳೆ ಉಚ್ಚರಂಗೆ ದಾರೀಗುಂಟಾ ಮಾತಾಡ್‍ಕೊಂಡಿ, ಎದ್ರುಗ್ ಬಂದವರ್‍ನ ಕ್ಯಾರೇ ಅಂದೇ ತಮ್ಮದೇ ಲೋಕದಲ್ಲಿರೂವಾಗ ನೀಯಾವ ಸೀಮೆ ರಾಜನಪ್ಪ ತಲತಲಾಂತರದಿಂದ ನನ್ನ ಹೊತ್ಗೊಂಡಿ ಇದ್ ಬದ್ ಕೆಲ್ಸಾನೆಲ್ಲಾ ಬುಟ್‍ಬುಟ್ಟಿ ಇದೇನ್ ಸೆಂದಾಕಿಲ್ಲ. ಓಗ್ಲೀ ಬುಡು ನಂ ಪ್ಯಾಕೇಜ್ ಟೂರ್‍ನ ಈ ದಪಾನೂ ಇಂಗೇ ಮುಂದ್‍ವರೆಸೂವಾ, ನಾನೊಂದ್ ಕತೆ ಏಳ್ತೀನಿ, ಒಂದು ಪ್ರಸ್ನೆ ಕೇಳ್ತೀವ್ನಿ, ನೀ ಒಳ್ಳೆ ಪೆದ್ದಯ್ಯನ ತರ ಬಾಯ್ಬುಡ್ತೀಯಾ ನಾ ವಾಪಸ್ ನನ್ ಮಸಾಣಕ್ಕೋಗಿ ನಂದೇ ಮರವ ಆಯ್ಕೊಂಡಿ ನೇತಾಕ್ಕೋತೀನಿ, ಇದೇ ನಿಂಗೂ ಕುಸಿ ನಂಗೂ ಕುಸಿ ಅಲ್ಲವಾ?

ಇಗೇನಾಗಿದೆ ಈ ಬೂಲೋಕ್ದಾಗೆ? ವಸಿ ಕಣ್ ಬುಟ್ ನೋಡೀಯಾ? ಅದ್ಯಾರೋ ಅನ್ನೆರಡನೇ ಸತಮಾನದೋನಂತೆ ಅಸಿಯಣ್ಣಾಂತ ಅವ್ನಿಗೆ ಸದಾ ಗ್ಯಾನದ ಅಸಿವಂತ ಓದೀ ಓದೀ ಗುಡ್ಡೆ ಆಕ್ಬುಟ್ಟಿ ಅದೇನೋ ಬರ್ದೂ ಬರ್ದೂ ಮಡಗವನಂತ ಅವನ್ ಬರೆದದ್ದೆಲ್ಲಾ ಓದೀ ಓದೀ ಈ ಕಾಲ್ದಾವೂ ಇದ್ವಾಂಸ ಅನ್ನಿಸ್ಕೊಳ್ಳಾಕೆ ಅವನ್ ಮ್ಯಾಗೇಯ ಬುಕ್ ಬರೀತವ್ರಂತ. ಅದ್ಯಾವೋನೋ ಒಬ್ಬ ಆ ಅಸಿವಣ್ಣಂಗೆ ಬರೀ ಗ್ಯಾನದ ಅಸಿವಲ್ಲ ಇದ್ದದ್ದೂ ಅವುನ್ಗೆ ಒಟ್ಟೇಗೆ ಇಟ್ಟೂ ಇರ್ನಿಲ್ಲಾ ಅದ್ಕೇ ಅಸಿವೂ ಅಸಿವೂ ಅಮ್ತ ಬರೆದವ್ನೆ ಅಂತಾ ಯಾವನು ದೇವಾ ಊರ್ಣತಿಂದವನು’ ಅಂತ ಒಂದು ಪುಸ್ತುಕಾವ ಬರೆದ್ ಬುಟ್ಟೀ ಸ್ಯಾನೆ ಜನಕ್ ಅಂಚ್‍ಬುಟ್ಟ.

ಆ ಅಸಿವಣ್ಣನ್ ಬಕ್ತರ್ಗಳ್ಗೆ ಅಂಗಾಲಿಂದ ನೆತ್ತೀಗಂಟಾ ಉರಿಕಿತ್ಗಂಡಿ ಈ ವಯ್ಯನ್ ಸುಮ್ಕೆ ಬುಡ್ ಬಾರದು ಅಂತಾವಾ ಸ್ಯಾನೆ ಗಲಾಟ ಮಾಡೀ ರೋಸಾನೇ ಎಲ್ಲಾರ್ ಉಸಿರಾಗೀ, ಉಸುರು ಊರೆಲ್ಲಾ ತುಂಬ್ಕೊಂಡೀ ಈ ಪುಸ್ತೂಕಾನೆಲ್ಲಾ ಬೆಂಕೀಗ್ ಆಕ್‍ಬುಟ್ಟೀ, ಸರ್ಕಾರದ್ ಮ್ಯಾಗೆ ಸ್ಯಾನೆ ಆಕ್ರೋಸಾ ತೋರಿಸ್ತಾ ಸ್ವಾಮ್‍ಗೋಳೂ ಅಯ್ಯಗೋಳೂ ಮಾರಾಜನ ಅರಮನೇ ತಾವ ಸ್ಯಾನೆ ಗಲಾಟ ಮಾಡ್ತಾ ಇರೋವಾಗ್ಲೇ ನಾನೊಂದ್ ತಮಾಸೆ ಕಂಡನಪ್ಪ.

ನಮ್ ಅರಿಸ್ಚಂದ್ರ ಗಾಟ್ ಅತ್ತಿರ ಸುತ್ತಾ ಮುತ್ತಾ ಮನೆಗೊಳಾಗಿ ನಾ ನೇತಾಡ್ತಿರೂವಾಗ್ಲೇಯ ಯಾರ್‍ದಾರಾ ಮನೆ ಟಿ.ವಿ ಒಳಗಡ್ಲೇಯ ಈ ಉಡ್ಗೀರು ಅರೆಬರೆ ಬಟ್ಟೆ ಆಕ್ಕೊಂಡೀ ಥಕಾ ಥೈ ಅಂತಾ ಕುಣೀತಾರಲ್ಲ ಅದ್ನ ನೋಡ್ತಾ ಕುಸೀ ಪಡೂವಾಗ್ಲೇಯ ಅದೆಂತದೋ ಚೆಲ್ಲಾಟ ಅನ್ನೋ ಸಿನೀಮ್‍ದಾಗೆ ಇಂದು ಎನಗೆ ಗೋವಿಂದ ಅಂಬ್ತ ಆಡೇಳ್ಕೊಂಡಿ ಕುಣಿಯಾಕ್ ಸುರೂ ಅಚ್ಕೊಂಡ್ರಪ್ಪ, ನನ್ನ ಪಕ್ಕದ್ ಮರನಾಗಿರೂ ದೆಯ್ಯಾ ಗೊಳೋ ಅಂತ ಅಳಾದೇನೂ ಬಿಕ್ಕೀಬಿಕ್ಕೀ ಬೀಳೋದೇನು? ಪಾಪ ಆ ತಾಪ ನೋಡಕಾಗಕಿಲ್ಲ, ಯಾಕಯ್ಯಾ ಈ ಪಾಟಿ ಅಳ್ತೀ ಅಂದ್ರೆ;

ಅಯ್ಯೋ ನಾನ್ನೂರು ವರ್ಷದ ಹಿಂದೆ ಇದ್ದ ನಮ್ ಸ್ವಾಮಿಗಳು ಬರೆದಿದ್ದ ಹಾಡು ಇದು. ಈ ಕೆಟ್ಟ್ ಜನ ಸಿನಿಮಾಗೆ ಇದನ್ನೂ ತಗೋಳೊದು ಬಿಟ್ಟಿಲ್ಲವಲ್ಲ? ಬೇರೆ ಜಾತಿಯವರ ಸಾಹಿತ್ಯಾನ ಒಂದು ಅಕ್ಷರ ಕೆಡಿಸಿದ್ರೂ ಸ್ವಾಮಿಗಳಿಂದ ಹಿಡಿದು ಸಾಮಾನ್ಯನವರೆಗೆ ತರಾಟೆಗೆ ತಗೋತಾರೆ, ನಮ್ ಜನ ಎಂಥಾ ಹೃದಯ ಹೀನರು, ಸ್ವಾಭಿಮಾನವೇ ಇಲ್ಲದವರು. ಜೀವ ಇರೋವಾಗ್ಲೇ ತಮ್ಮ ತಲೇ ಮೇಲೆ ನೂರಾ ಎಂಟು ತೆಂಗಿನಕಾಯಿ ಒಡೆಸಿಕೊಂಡು ಜೀವ ಬಿಟ್ಟು, ಬೃಂದಾವನ ಸೇರಿದ ಮಹಾತ್ಮ ಆತ ಅವರು ಬರೆದ ಹಾಡನ್ನ ಹೇಳಿಕೊಂಡು ಈ ತುಂಡುಲಂಗದ ಹುಡುಗಿಯರೂ ಜುಟ್ಟು ಬಿಟ್ಕೊಂಡು ಲೋಲಾಕ್ ಹಾಕ್ಕೋಂಡು ಇರೋ ಈ ಹುಡುಗರೂ ಯದ್ವಾತದ್ವಾ ಕುಣೀತಿದಾರಲ್ಲಾ? ಏನ್ ಕಾಲ ಬಂತಪ್ಪಾ ಶ್ರೀರಾಘವೇಂದ್ರಾ ಅಮ್ತಾ ಗೊಳೋ ಅಂತು.

ಈಗೇಳಪ್ಪ? ಎಂಟು ನೂರು ವರ್ಸಗಳ ಕೆಳಗೆ ಇದ್ದ ಅಸಿವಣ್ಣನ ಪದಗಳ್ನ ಒಬ್ಬರೂ ಮುಟ್ಟಕ್ಕಾಗದು, ನಾನೂರು ವರ್ಸದ ಕೆಳಗೆ ಇದ್ದ ರಾಗವೇಂದ್ರಸಾಮಿಗಳ ಪದಕ್ಕೆ ಕುಣೀಬೈದು ಎಂದ್ರ ಎಂಗಾಗ್ತೈತೆ? ಈ ಪ್ರಸ್ನೇಗೆ ಉತ್ರ ಏಳ್‍ದೇ ಇದ್ರೆ ನಿನ್ ತಲೆ ಕಲ್ಪನಾ ಚಾವ್ಲಾ ಬರ್ತಾಯಿದ್ದ ಮಿಸೈಲ್ನಂಗೆ ಚಕಾ ಚೂರಾಯ್ತದೆ ಗೊತ್ತುತಾನೇ ಉಸಾರ್" ಅಂತಾ ಬಾಯಿಗ್ ಬೀಗಾ ಆಕೊಂಡಂಗೆ ಬೇತಾಳ ತೆಪ್ಪಗಾಯ್ತು.

ಮಾರಾಜ ಹೇಳಾಕೆ ಬಾಯ್ ಬುಟ್ಟ, "ಅಲ್ಕಣಯ್ಯಾ ನಿನ್ ಪ್ರಸ್ನೇನಾಗೇ ಉತ್ತರ ಐತಲ್ಲ ಸುಮ್ಕೆ ನನ್ ಬಾಯ್ಬುಡಿಸ್ಬುಟ್ಟೀ ಆಡ್ತೀಯಾ ಅದೇ ಆಟ್ವಾ? ಅನ್ನೇರಡನೇ ಸತಮಾನಾಂದ್ರೆ ಎಂಟು ನೂರು ವರ್ಸಾತು. ವರ್ಸಕ್ಕೆ ಒಂದು ಮಠ ಉಟ್ಟಿದ್ರೂವೆ ಎಂಟು ನೂರು ವರ್ಸಕ್ಕೆ ಎಂಟು ನೂರು ಮಠಗಳು ಉಟ್ಕೊಂಡವೆ, ಆ ಮಠದ ಬಕ್ತರ ಸಂಕ್ಯೆನೂ ಅಪಾರ ಅಲ್ಲವಾ? ಅಸ್ಟೋಂದು ಜನ ಬಕ್ತರಿಗೆ ಬ್ಯಾಸರಾದ್ರೆ ಅದ್ಕೆ ನ್ಯಾಯಾವ ಕೊಡ್ಲೇ ಬೇಕಲ್ಲವಾಂತೀನಿ?

ಇನ್ನ ನಾನೂರು ವರ್ಸದ ಇಂದಿದ್ದ ಸ್ವಾಮ್ಗೋಳು, ಅವರ್ ಮಠಾ ಎಷ್ಟಿದ್ದಾತೂ? ಅಲ್ದೇ ಇವರ್ ಕಾಲದಾಗ ತಮ್ಮ್ ಕೈ ನಡಿಯೂವಾಗ್ಲೆಲ್ಲಾ ಇವರೂ ನೂವೆ ಸ್ಯಾನೆ ಜನನ್ನ ಗೋಳಾಸ್ಡವ್ರೆ ಅವರ್ ಆಗ ಮಾಡಿದ್ ತಪ್ಪಗ ಇನ್ನೂ ಎಸ್ಟೋಜನ ಇನ್ನೂನೂವೆ ಕಸ್ಟ ಪಡ್ತಾವ್ರರಂತೆ ಈಗೇನಾದ್ರೂ ಇವರ್ ನಮ್ಮ್ ಜಾತೀಗೀತೀಂತ ತರ್ಲೆ ತೆಗುದ್ರೂಂದ್ರೆ ಬ್ಯಾರೆಯೋರು ಸುಮ್ಕೆ ಬುಟ್ಟಾರಾ? ಅದ್ಕೇ ಈ ಮಂದಿ ಬಾಯೇ ಬುಡಾಕಿಲ್ಲ. ಮೊದ್ಲೇ ಈ ಜಾತಿಯೋರ್ಗೆ ಒಂದಿಷ್ಟೂ ಒಗ್ಗಟ್ಟಿಲ್ಲವಂತೆ. ಮತ್ತೆ ಈ ಜಾತಿಯೋರು ಏನೋ ಇಂಗ್ಲೀಸೂ ಪಂಗ್ಲೀಸೂ ಅಂತ ಸ್ಯಾನೇ ಓದಿ, ಅಮೆರಿಕಾ ಇಂಗ್ಲೇಂಡು ಸಿಂಗಪುರಾಂತ ಚದುರೇ ಓಗವರಂತೆ? ಈ ನಾಕು ಅಕ್ಷರಾ ಇದ್ಯೆ ಕಲಿತಮಂದಿ ಕನ್ನಡ ಸಿನಿಮಾಗಳ್ನ ನೋಡ್ತಾರೇಂತ ತಿಳಿದ್ಯಾ? ನೋಡಾಕಿಲ್ಲ, ಅಂಗಾಗೇ ಎಂತಾ ಸಾಮಿಗೋಳ್ ಬರೆದ ಪದನಾದ್ರೂ ತಗಾಬೋದು" ಅಂತೇಳಲಾಗಿ ಸರ್ರ್ ಅಂತಾ ಬೇತಾಳ ವಾಪಸ್ ಅರಿಸ್ಚಂದ್ರ ಘಾಟ್ಗೆ ವಾಪ್ಸಾಗಿ, ಅಲ್ಲಿದ್ ಮರಗಳ್ನೆಲ್ಲಾ ಕಡಿದಿರಲಾಗಿ ಮರ ಉಡಿಕೊಂಡಿ ಈ ಊರ್‍ನೇ ಬಿಟ್ಟೊಯ್ತು.

ಪಾಪ ಇಕ್ರಮ ಮಾರಾಜ ಅದನ್ನ ಉಡಿಕ್ಕೊಂಡಿ ರಸ್ತೆ ರಸ್ತೆ ತಿರುಗ್ತಾ ಅವನಂತೆ, ನಿಮಗೇನಾರ ಆ ವಯ್ಯನ ಅಡ್ರೆಸ್ ಗೊತ್ತಿದ್ರೆ ವಸಿ ಏಳಿ ಪುಣ್ಯೇವು ಕಟ್ಗೊಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X