• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಚೆಸ್‌ ಚಾಂಪಿಯನ್‌ ಮಾ. ಗಿರೀಶ್‌ ಕೌಶಿಕ್‌ಗೆ ಅನ್ಯಾಯ!

By Staff
|

10ವರ್ಷ ವಯೋಮಿತಿಯಾಳಗಿನ ವಿಶ್ವದ ಎಲ್ಲಾ ಸ್ಪರ್ಧಾಳುಗಳನ್ನು ಹಿಂದಿಕ್ಕಿ, ಬಾಲಕರ ವಿಭಾಗದ ವಿಶ್ವಚೆಸ್‌ ಚಾಂಪಿಯನ್‌ ಆದ ಒಂಭತ್ತೂವರೆ ವರ್ಷ ವಯಸ್ಸಿನ ಬಾಲಪ್ರತಿಭೆ ಗಿರೀಶ್‌ ಕೌಶಿಕ್‌. ಇವ ನಮ್ಮ ಹುಡುಗ. ನಮ್ಮ ಸರ್ಕಾರದ ನಿರ್ಲಕ್ಷ್ಯಕ್ಕೆ ಗುರಿಯಾದ ಹುಡುಗ.

Girish Koushik with awardsಇನ್ನು ಕೆಲವರ್ಷಗಳಲ್ಲಿಯೇ ಭಾರತದ ಅತ್ಯಂತ ಕಿರಿಯ ವಯಸ್ಸಿನ ಗ್ರಾಂಡ್‌ ಮಾಸ್ಟರ್‌ ಎಂಬ ಕೀರ್ತಿಗೆ ಪಾತ್ರನಾಗುವ ಕನಸು ಕಾಣುತ್ತಿರುವ ಗಿರೀಶ್‌ ಕೌಶಿಕ್‌ಗೆ, ಯುರೋಪಿಯನ್‌ ದೇಶಗಳಲ್ಲಿ ಚೆಸ್‌ ತರಬೇತಿ ಹೊಂದುವ ಆಸೆ. ಆದರೆ ಅದಕ್ಕೆ ಬೇಕಾದ ಹಣ ಮುಂತಾದ ಸವಲತ್ತುಗಳು ಮನೆಯಲ್ಲಿಲ್ಲ. ಹೀಗಾಗಿ ನಿರಾಸೆ. ಇತ್ತ ಸರ್ಕಾರವಾಗಲಿ, ಕಾರ್ಪೋರೇಟ್‌ ವಲಯದಿಂದಾಗಲಿ ಅಥವಾ ಯಾವುದೇ ನಾಗರಿಕ ಸಂಸ್ಥೆಗಳ ನೆರವು ದೊರೆತಿಲ್ಲ ಎಂಬುದು ಗಿರೀಶ್‌ ಮತ್ತು ಅವರ ಹೆತ್ತವರ ನೋವು.

ಯುರೋಪಿಯನ್‌ ದೇಶಗಳಲ್ಲಿ ತರಬೇತಿ ಪಡೆಯಲು ವರ್ಷವೊಂದಕ್ಕೆ ಸರಾಸರಿ 35 ಲಕ್ಷ ರೂ.ನಷ್ಟು ಮೊತ್ತ ತೆರಬೇಕು. ಆದರೆ ರಷ್ಯಾ ಮುಂತಾದ ದೇಶಗಳಲ್ಲಿ ತರಬೇತಿ ಪಡೆದು, ಯುರೋಪಿಯನ್‌ ವಲಯದಲ್ಲಿ ಚೆಸ್‌ ಆಡುವುದರಿಂದ ವಿಶ್ವಮಟ್ಟದಲ್ಲಿ ಆಡಿದ ಅನುಭವದ ಜೊತೆಗೆ ಉತ್ತಮ ಇಎಲ್‌ಓ ಅಂಕಗಳನ್ನು ಗಳಿಸಬಹುದಾಗಿದೆ. ಈ ತರಬೇತಿ ಗಿರೀಶ್‌ಗೆ ದಕ್ಕಬೇಕು.

ಸರ್ಕಾರದ ನೆರವು ಹಾಗಿರಲಿ, ಕಾರ್ಪೋರೇಟ್‌ ವಲಯಗಳು ಕ್ರಿಕೆಟ್‌ ಆಟದ ಹಿಂದೆ ಬಿದ್ದಿರುವಾಗ, ಚೆಸ್‌ನಂತ ಆಟಕ್ಕೆ ಪ್ರಾಯೋಜಕತ್ವ ಮಾಡಲು ಯಾರು ಮುಂದೆ ಬರುತ್ತಾರೆ ಎನ್ನುವುದು ಗಿರೀಶನ ತಂದೆ ಅರುಣ್‌ ಕೌಶಿಕ್‌ರ ಪ್ರಶ್ನೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾರ್ಜಿಯಾ ದೇಶದ ಬಟುಮಿಯಲ್ಲಿ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದ ನಂತರದ ದಿನಗಳು, ಗಿರೀಶನ ಪಾಲಿಗೆ ಆಶಾದಾಯಕವಾಗಿರಲಿಲ್ಲ. ಸರ್ಕಾರಿ ಸ್ವಾಮ್ಯದ ಕ್ರೀಡಾ ಉತ್ತೇಜನ ಸೇವೆಯಡಿಯಲ್ಲಿ 25 ಸಾವಿರ ಗೌರವಧನ ಲಭಿಸಿದ್ದು ಬಿಟ್ಟರೆ, ಬೇರೆ ಯಾವ ಮೂಲದಿಂದಲೂ ಬಿಡಿಗಾಸು ಲಭಿಸಿಲ್ಲ ಎಂದು ಅರುಣ್‌ ಹೇಳುತ್ತಾರೆ.

ದಟ್ಸ್‌ ಕನ್ನಡ ಕಚೇರಿಯಲ್ಲಿ ಮಾತಿಗೆ ಕುಳಿತ ಗಿರೀಶ್‌ ಮತ್ತು ಅವರ ತಂದೆ ಅರುಣ್‌ ಕೌಶಿಕ್‌, ಭವಿಷ್ಯದ ಪ್ರಶ್ನೆ ಬಿಡಿಸುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ. ಮಗ ಪ್ರತಿಭಾವಂತ, ಆದರೆ ಆತನ ಪ್ರತಿಭೆಗೆ ನೀರು ಎರೆಯುವುದು ನನ್ನಿಂದಾಗುತ್ತಿಲ್ಲವಲ್ಲ ಎಂಬ ಕೊರಗು ಅರುಣ್‌ ಅವರಲ್ಲಿದೆ.

ಒಂದು ವಿಷಯ ಗಮನಿಸಿ : ಪಕ್ಕದ ಗೋವಾ ರಾಜ್ಯದ ಬಾಲಕಿ ಇವನಾ ಫುರ್ತಡೋ 8 ವರ್ಷ ವಯೋಮಿತಿಯಾಳಗಿನವರ ವಿಶ್ವ ಚೆಸ್‌ ಪ್ರಶಸ್ತಿ ಗಳಿಸಿದಾಗ, ಗೋವಾ ಸರ್ಕಾರ 7ಲಕ್ಷ ನೀಡಿ ಸನ್ಮಾನಿಸಿತು. ಆದರೆ ನಮ್ಮ ಸರ್ಕಾರ , ಗಿರೀಶ್‌ರನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಜೊತೆಗೆ ಅಸಮಾಧಾನ.

7 ಲಕ್ಷದ ಮಾತು ಹಾಗಿರಲಿ, ವಿಶ್ವಚೆಸ್‌ ಪ್ರಶಸ್ತಿ ಹಾಗೂ ಏಷ್ಯಾ ಮಟ್ಟದಲ್ಲಿ ಗಳಿಸಿದ ಚಾಂಪಿಯನ್‌ಶಿಪ್‌ಗಳ ಆಧಾರದ ಮೇಲೆ ಕ್ರಮವಾಗಿ ತಲಾ 1 ಲಕ್ಷಹಾಗೂ 50 ಸಾವಿರ ನೀಡುವಂತೆ ಸ್ಪೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾ, ಎನ್‌ಐಎಸ್‌, ಪಾಟಿಯಾಲಕ್ಕೆ ಮನವಿ ಮಾಡಿದ್ದೊಂದೆ ಬಂತು. ಇದುವರೆವಿಗೂ, ಈ ಬಗ್ಗೆ ಉತ್ತರವಿಲ್ಲ ಎಂದು ಅರುಣ್‌ ಹೇಳುತ್ತಾರೆ.

Girish Koushik in a happy moment with his friends and teachersಬಾಲ ಚೆಸ್‌ ಪ್ರತಿಭೆಯ ಪ್ರಗತಿಪಥ :

  • 2004ರಲ್ಲಿ ಫಿಡೆ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅತ್ಯುತ್ತಮ ಆಟಗಾರನೆಂದು ಘೋಷಣೆ.
  • 2005ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯಾ ಮಟ್ಟ ದ 8 ವರ್ಷ ವಯೋಮಿತಿಯ ಚೆಸ್‌ ಚಾಂಪಿಯನ್‌ ಕಿರೀಟ.
  • 2006ರಲ್ಲಿ ಜಾರ್ಜಿಯಾದಲ್ಲಿ ನಡೆದ 10ವರ್ಷ ವಯೋಮಿತಿಯ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಇನ್ನು ಮೂರು ಸುತ್ತು ಇರುವಾಗಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೀರ್ತಿ ಗೀರೀಶ್‌ಗೆ ಸಲ್ಲುತ್ತದೆ.

ಚಿಕ್ಕ ಊರಿನಲ್ಲಿದ್ದುಕೊಂಡು ಗೀರೀಶ್‌, ಯಾವುದೇ ತರಬೇತುದಾರರ ನೆರವಿಲ್ಲದೆ, ಚೆಸ್‌ ಆಟವನ್ನು ಶಾಸ್ತ್ರೀಯವಾಗಿ ಅಭ್ಯಸಿಸದೆ, ಲ್ಯಾಪ್‌ ಟಾಪ್‌ ಹಾಗೂ ಇನ್ನಿತರ ಆಧುನಿಕ ಸೌಲಭ್ಯಗಳ ನೆರವಿಲ್ಲದೆ ವಿಶ್ವ ಮಟ್ಟಕ್ಕೆ ಏರಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಅದ್ಭುತ ಬಾಲ ಚೆಸ್‌ ಪಟುವಿನ ಕನಸುಗಳು....

ಗಿರೀಶ್‌ಗೆ ಇನ್ನೂ ಚಿಕ್ಕಪ್ರಾಯವಾದರೂ, ಹಗಲುಕನಸು ಕಾಣುವ ಪೈಕಿಯಲ್ಲ. ರಷ್ಯಾದ ಚೆಸ್‌ ಮಾಂತ್ರಿಕ ಗ್ಯಾರಿ ಕ್ಯಾಸ್ಪರೋವ್‌ ಅವರನ್ನು ಇಷ್ಟ ಪಡುವ ಗಿರೀಶ್‌ಗೆ, ಲಿನಾರೆಸ್‌, ಆ್ಯಂಬರ್‌ ಮುಂತಾದ ಯುರೋಪಿಯನ್‌ ಪ್ರತಿಷ್ಠಿತ ಚೆಸ್‌ ಲೀಗ್‌ಗಳಲ್ಲಿ ಆಡಬೇಕೆಂಬ ಬಯಕೆಯಿದೆ.

ಅಂತಾರಾಷ್ಟ್ರೀಯ ಮಟ್ಟದ ಚೆಸ್‌ಪಟುಗಳೊಡನೆ ಆಡುವುದರಿಂದ ನನ್ನ ಆಟವು ಉತ್ತಮಗೊಳ್ಳುತ್ತಾ ಹೋಗುತ್ತದೆ. ಇದರಿಂದ ಚೆಸ್‌ ರೇಟಿಂಗ್‌ನಲ್ಲಿ ಸ್ಥಾನ ಗಳಿಸುವುದರ ಜತೆಗೆ, ಸಾಕಷ್ಟು ಹಣಗಳಿಸಬಹುದಾಗಿದೆ ಎಂದು ತನ್ನ ಮುಗ್ಧ ಭಾಷೆಯಲ್ಲಿ ಗಿರೀಶ್‌ ವಿವರಿಸುತ್ತಾನೆ.

ಭಾರತದಲ್ಲಿ ಚೆಸ್‌ ಹೆಚ್ಚು ಜನರನ್ನು ಆಕರ್ಷಿಸದೇ ಹೋದರೂ, ಪ್ರತಿಭಾವಂತರಿಗೆ ಪ್ರೋತ್ಸಾಹವಂತೂ ಸಿಗುತ್ತಿದೆ. ಚೆಸ್‌ನಲ್ಲಿ ಗ್ರಾಂಡ್‌ ಮಾಸ್ಟರ್‌ ಪಟ್ಟ ದೊರೆಯುವವರೆಗೂ ಸ್ವಲ್ಪ ಕಷ್ಟ. ಭಾರತದ ಕಿರಿಯ ಚೆಸ್‌ಪಟುಗಳಾದ ತನಿಯಾ ಸಚ್‌ದೇವ್‌(ಹ್ಯೂಸ್‌ ಸಾಫ್ಟ್‌ ವೇರ್‌ ಲಿ. ಇಂಡಿಯನ್‌ ಏರ್‌ವೇಸ್‌ ಮತ್ತು ಓನ್‌ಜಿಸಿ ಪ್ರಾಯೋಜಿಸುತ್ತಿದೆ) ಸಹಜ್‌ (ಕೇಮ್ಕ ಸಮೂಹ ಸಂಸ್ಥೆ) ಮತ್ತು ನೇಗಿ (ಟಾಟಾ ಟೀ ಮತ್ತು ಏರ್‌ ಇಂಡಿಯಾ). ಹೀಗೆ ಕೆಲ ಪ್ರತಿಭೆಗಳಿಗೆ ಪ್ರಾಯೋಜಕತ್ವದ ಅದೃಷ್ಟ ಲಭಿಸಿದೆ . ಆದರೆ ಗಿರೀಶ್‌ ವಿಷಯದಲ್ಲಿ ಅದೃಷ್ಟ ಯಾಕೋ ಕೈ ಕೊಟ್ಟಿದೆ.

ಹಿರಿಯ ಚೆಸ್‌ ಪಟುಗಳ ಪಾಡು ಕೂಡ ಇದರಿಂದ ಹೊರತಾಗಿಲ್ಲ. ವಿಶ್ವದ ಎರಡನೇ ಶ್ರೇಯಾಂಕಿತೆಯಾಗಿದ್ದ ಭಾರತದ ಕೊನೆರು ಹಂಪಿಯವರು ಕೂಡ, ಚೆಸ್‌ ಜತೆಗೆ, ಜಾಹೀರಾತು ಹಾಗೂ ಸಿನೆಮಾದಲ್ಲಿ ನಟಿಸಿ ಹಣ ಗಳಿಸಿ, ಚೆಸ್‌ ಆಟವನ್ನು ಬೆಳೆಸಬೇಕಾಗಿದೆ ಎಂದು ಹೇಳಿದ್ದಾರೆ.

ಬಾಲಕ ಗಿರೀಶನಿಗೆ ಅದ್ಭುತ ಪ್ರತಿಭೆಯಿದೆ. ಆದರೆ ಹಣಕಾಸಿನದೇ ಕೊರತೆ. ವಿಶ್ವಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತದ ಕೀರ್ತಿಯನ್ನು ಬೆಳಗಲು ಹಾತೊರೆದಿರುವ ಈ ಬಾಲಕನಿಗೆ ನಮ್ಮ ನಿಮ್ಮೆಲ್ಲರ ನೆರವು ಬೇಕಾಗಿದೆ.

ಗೀರೀಶನಿಗೆ ಸಹಾಯ ಮಾಡಲಿಚ್ಛಿಸುವವರಿಗೆ ವಿಳಾಸ ಇಲ್ಲಿದೆ :

ಗಿರೀಶ್‌ ಕೌಶಿಕ್‌

S/o ಅರುಣ್‌ ಕೌಶಿಕ್‌,

ನಂ. 796, ಗಿರಿನಿವಾಸ್‌,

26ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ,

ವಿದ್ಯಾರಣ್ಯಪುರ,

ಮೈಸೂರು-570 008, ಕರ್ನಾಟಕ.

ಇ-ಮೇಲ್‌ ವಿಳಾಸ : arunkumarhv@sancharnet.com

ಕರೆ ಮಾಡಿ : 99868 89690

ನೋಡಿ : ಚದುರಂಗ ಪ್ರವೀಣನ ಹೆಜ್ಜೆ ಗುರುತು..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more