ಕನ್ನಡಿಗರೇ, ಏನಾಗಿದೆ ನಿಮಗೆ? ನೀವೇಕೆ ಹೀಗೆ?
‘ನಾನು ಕನ್ನಡಿಗ’ ಎಂಬ ಹೆಮ್ಮೆಯಿಂದ ಕನ್ನಡಿಗರು ಎದೆಯುಬ್ಬಿಸಿ ನಿಂತರೆ ಪ್ರಪಂಚದ ಅದಾವ ಶಕ್ತಿ ಎದುರಿಗೆ ನಿಂತೀತು...? ಕನ್ನಡಿಗರಿಗೆ ಸರಿಸಾಟಿಯಾಗಿ ಯಾರಿಂದ ನಿಲ್ಲಲು ಆದೀತು?
ನಾಸಿರುದ್ದೀನ್ ಖ್ಯಾತ ಸೂಫಿ ಸಂತ. ಓಮ್ಮೆ ನಾಸಿರುದ್ದೀನ್ ಹೊರಗೆ ಅಂಗಳದಲ್ಲಿ ಏನೋ ಹುಡುಕುತ್ತಿದ್ದ. ಮಿತ್ರನೊಬ್ಬ ಕೇಳಿದ ‘ನಾಸಿರುದ್ದೀನ್, ಏನು ಹುಡುಕುತ್ತಿದ್ದೀಯಾ?’. ನಾಸಿರುದ್ದೀನ್ ಹೇಳಿದ ‘ಅಯ್ಯೋ ರೂಪಾಯಿ ನಾಣ್ಯ ಕಳೆದುಹೋಗಿದೆ. ಸ್ವಲ್ಪ ಹುಡುಕಲು ಸಹಾಯ ಮಾಡು’ ಬಹಳ ಹೊತ್ತು ಹುಡುಕಿ ಬೇಸ್ತು ಬಿದ್ದ ಮಿತ್ರ ಕೇಳಿದ ‘ನಾಣ್ಯವನ್ನು ಇಲ್ಲೇ ಕಳಕೊಂಡೆ ತಾನೇ?’ ನಾಸಿರುದ್ದೀನ್ ಹೇಳಿದ ‘ಇಲ್ಲಾ ಒಳಗೆ ಅಡುಗೆಮನೆಯಲ್ಲಿ ಕಳಕೊಂಡೆ’.
‘ಮತ್ತೆ ಇಲ್ಲಿ ಯಾಕೆ ಹುಡುಕುತ್ತಿರುವೆ?’
‘ಅಯ್ಯೋ ಅಲ್ಲಿ ತುಂಬಾ ಕತ್ತಲೆ. ಇಲ್ಲಿ ಒಳ್ಳೆ ಬೆಳಕಿದೆ ಅಂತ ಇಲ್ಲಿ ಹುಡುಕುತ್ತಿದ್ಡೇನೆ’
-ಹಾಸ್ಯ ಲೇಪಿತವಾದ ಈ ಸೂಫಿ ಕಥೆ ಮಾನವನ ಜೀವನಕ್ಕೆ ಒಳ್ಳೆಯ ವಿಡಂಬನೆ. ಎಲ್ಲೋ ಕಳಕೊಂಡು, ಎಲ್ಲೋ ಹುಡುಕುವ ಮಾನವನ ಪ್ರವೃತ್ತಿಗೆ ನೇರವಾದ ವ್ಯಂಗ್ಯ. ಎಲ್ಲರೂ ಇದನ್ನು ಆಳವಾಗಿ ಯೋಚಿಸಬೇಕಾದ, ವಿಮರ್ಶಿಸಿ ಕೊಳ್ಳಬೇಕಾದ ಚಿಂತನೆಯಾದರೂ, ಕನ್ನಡಿಗರಿಗೆ ವಿಶೇಷತಃ ಅನ್ವಯವಾಗುವ ಸಂಗತಿ.
ಕನ್ನಡದ ಮೇಲೆ ಹೊರಭಾಷೆಯ ದಾಳಿ ಹೆಚ್ಚಾಗಿದೆ, ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಆಕ್ರಮಣವಾಗುತ್ತಿದೆ, ಕನ್ನಡಿಗರಿಗೆ ಅನ್ಯಾಯ ಅಗುತ್ತಿದೆ ಎಂಬ ಕೂಗು ಇಂದು ಅತ್ಯಂತ ಸಾಮಾನ್ಯ. ಬೆಂಗಳೂರಿನಲ್ಲಿ ಅಪ್ಪಿ ತಪ್ಪಿ ‘ಏನ್ರೀ ಚೆನ್ನಾಗಿದ್ದೀರಾ?’ ಎಂದು ಕೇಳಿದರೆ ‘ಯೆಹ್ ಕೋನ್ಸಿ ಭಾಷಾ ಹೈ?’ ಎಂಬ ಉಲಿತ ಕೇಳುವ ಸೌಭಾಗ್ಯ ದೊರಕೀತು. ಆಥವಾ ‘ಏನ್ನಡಾ, ತಮಿಳ್ ತೆರಿಮಾ?’ ಎಂಬ ಮೊರೆತವನ್ನೋ ಅಥವಾ ಯಾವುದೋ ಕಾಡುಪ್ರಾಣಿಯಂತೆ ತಮ್ಮನ್ನು ಆಪಾದಮಸ್ತಕವಾಗಿ ವೀಕ್ಷಿಸಿ ‘ಟಾಕ್ ಇನ್ ಇಂಗ್ಲಿಷ್ ಐ ಸೇ’ ಎಂಬ ಅಬ್ಬರದ ಭೋರ್ಗರೆತ ತಮ್ಮನ್ನು ತಬ್ಬಿಬ್ಬುಗೊಳಿಸೀತು.
ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಿದರೆ ನಿಜವಾಗಿಯೂ ಏನಾದರೂ ನಮ್ಮ ಎಸ್.ಎಂ.ಕೃಷ್ಣ ಬೆಂಗಳೂರನ್ನು ಸಿಂಗಪುರ ಮಾಡಲು ಹೋಗಿ ಯಾಮಾರಿ ಏನಾದರೂ ಲಂಡನ್ ನ್ಯೂಯಾರ್ಕ್ ಮಾಡಿದರಾ? ಎಂಬ ಭ್ರಮೆ ಅಮರಿಕೊಂಡರೆ ಅದು ಖಂಡಿತ ನಮ್ಮ ನಿಮ್ಮ ತಪ್ಪಲ್ಲ. ಎಲ್ಲೊ ಮೂಲೆಯಲ್ಲಿ ತೂಗುವ ಕನ್ನಡದ ಹಳೆಯ ಬೋರ್ಡು, ಅಥವಾ ಅಪ್ಪಿ ತಪ್ಪಿ ಎಫ್ ಎಮ್ ರೇಡಿಯೋದಲ್ಲಿ ಕನ್ನಡದ ಪದ, ಹಳ್ಳಕೊಳ್ಳ ತುಂಬಿದ ರಸ್ತೆ, ‘ಯಾವನೋ ಅವ್ನು ಬೋ..... ಮಗನೆ’ ಎಂಬ ಪೊಲೀಸನ ಸುಸಂಸ್ಕೃತ ಉವಾಚ ತಮ್ಮನ್ನು ‘ಓಹೋ ಇದು ಕನ್ನಡಭ್ರಷ್ಟ ಬೆಂಗಳೂರು’ ಎಂಬ ನಿಲುವಿಗೆ ಬಂದರೆ, ಅದು ಭ್ರಮೆಯಲ್ಲ-ವಾಸ್ತವ.
ವಾಸ್ತವ ಸ್ಥಿತಿಗೆ ನಾವು ಸಾಮಾನ್ಯವಾಗಿ ದೂರುವುದು ಹೊರರಾಜ್ಯದವರನ್ನು. ನಿಜ. ಕರ್ಣಾಟಕದಲ್ಲಿ, ಅದೂ ವಿಶೇಷವಾಗಿ ಬೆಂಗಳೂರು, ಮಂಗಳೂರು ಮುಂತಾದ ಮುಖ್ಯ ಪಟ್ಟಣಗಳಲ್ಲಿ ವಲಸೆ ಇಂದು ಅತ್ಯಂತ ದೊಡ್ಡ ಸಮಸ್ಯೆ. ಆದರೆ, ಅದೊಂದೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೇ? ವಲಸೆ ಕೇವಲ ಕರ್ನಾಟಕದ ಸಮಸ್ಯೆ ಅಲ್ಲ. ಪ್ರಪಂಚದ ಎಲ್ಲಾ ಮಹಾನಗರಗಳ ಸಮಸ್ಯೆ. ಆದರೆ, ಎಲ್ಲಾ ಮಹಾನಗರಗಳಲ್ಲೂ ಕರ್ನಾಟಕ, ಕನ್ನಡ, ಬೆಂಗಳೂರು ಎದಿರುಸುತ್ತಿರುವಷ್ಟು ತೀಕ್ಷ್ಣವಾದ ಸಮಸ್ಯೆಯಾಗಿಲ್ಲ. ಹಾಗೇಕೆ ಎಂದು ಕನ್ನಡಿಗರು ಅತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಬಂದು ಬಹಳ ವರ್ಷಗಳೇ ಸಂದಿವೆ.
ಸಿಂಹಾವಲೋಕನ :
ಕನ್ನಡ ಭಾಷೆಯ ಬಗ್ಗೆ ಸ್ಪಲ್ಪ ವಿಶ್ಲೇಷಿಸೋಣ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಕನ್ನಡ. ರಂಗಭೂಮಿಯಲ್ಲಿ, ಬಹುಶಃ ಬಂಗಾಲಿ, ಮರಾಠಿಯ ನಂತರ ಅತ್ಯಂತ ಪ್ರತಿಭಾನ್ವಿತರನ್ನು ಕೊಟ್ಟ ಹೆಮ್ಮೆ ತಾಯಿ ಭುವನೇಶ್ವರಿಯದ್ದು.












Click it and Unblock the Notifications