• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ

By ವಾಣಿ ನಾಯಿಕ
|

'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ..' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಸಡಗರವೋಸಡಗರ.

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ.

ಹಣ್ಣು, ಹೂವು, ತರಕಾರಿಗಳ ಮೇಲೆ ಹಣ ಸುರಿದು ಜೇಬು ಖಾಲಿಯಾಗಿದ್ದರೂ 'ಭಾಗ್ಯದ ಲಕ್ಷ್ಮಿ ಬಾರಮ್ಮ..' ಎಂದು ಮಹಾಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರ. ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಕೆಲಸಕ್ಕೆ ಹೋಗುವ ಹೆಂಗಸಾದರೂ ಸಾಧ್ಯವಾದಷ್ಟು ಬೇಗ ಎದ್ದು ಪೂಜೆ ಮುಗಿಸಿ ಗಡಿಬಿಡಿಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ, ಇನ್ನರ್ಧ ಗಂಟೆ ಲೇಟಾಗಿ ಬರುತ್ತೇನೆಂದು ಬಾಸ್‌ಗೆ ಫೋನಾಯಿಸಿ, ಮನೆಮಂದಿಗೆ ಮೃಷ್ಟಾನ್ನ ಬಡಿಸುವ ಸಡಗರ. 'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಕೈತುಂಬಾ ಕೆಲಸ.

ಈ ಬಾರಿಯಾದರೂ ಇನ್ಕ್ರಿಮೆಂಟು ಸಿಗಲಪ್ಪಾ ಅಂತ ಒಬ್ಬ, ಫಾರಿನ್‌ಗೆ ಹೋಗುವ ಹಾಗೆ ಹರಸಮ್ಮ ತಾಯಿ ಅಂತ ಮತ್ತೊಬ್ಬಾಕೆ. ವೀಸಾ ಸಿಗಲಪ್ಪಾ ದೇವರೇ ಅಂತ ಬೇಡಿಕೊಳ್ಳುವವಳು ಇನ್ನೊಬ್ಬಾಕೆ. ಅಂಗಡಿ ಮುಂಗಟ್ಟುಗಳಲ್ಲಿ ನಾನಾ ಬಗೆಯ ಆಫರುಗಳ ಆಸೆಯನ್ನು ತೋರಿಸಿ ಲಾಭ ಮಾಡಿಕೊಳ್ಳುವ ಸ್ಟಂಟುಗಳು. ತಾಯಿ ಲಕ್ಷ್ಮಿ ಒಲಿಯಬೇಕೆಂದು ಯಾರಿಗೆ ಹಂಬಲವಿರುವುದಿಲ್ಲ ಹೇಳಿ? ವರಮಹಾಲಕ್ಷ್ಮಿ ಹಬ್ಬದಂದು ಅಕ್ಕ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರ್ತಾರಾ?

ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು ರೇಷಿಮೆ ಬಟ್ಟೆ ಧರಿಸಿಕೊಂಡು ಸರಬರ ಓಡಾಡುತ್ತಾ ಪೂಜಾ ಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗುತ್ತಾರೆ.

ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಲಶದಲ್ಲಿರಿಸಿ ಅದಕ್ಕೆ ಚೆಂದವಾದ ಜರತಾರಿಯ ಅಂಚು ಸೆರಗು ಇರುವ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀವಲ್ಲಭೆ ಬಾಳೆಯ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಭಾಗ್ಯದ ಲಕ್ಷ್ಮಿ ಬಾರಮ್ಮ... ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ.

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರಭೂಷಿತೆಗೆ ಬಹಳ ಪ್ರಿಯ. ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿತಿನಿಸು, ಹಾಲುಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಮರದ ಬಾಗಣವನ್ನು ಕೊಡಲಾಗುತ್ತದೆ.

ನಂತರ ಕೊನಗೆ, ತಮ್ಮ ಸಂಕಷ್ಟಗಳನ್ನು ದೂರಮಾಡಿ ಸುಖ ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತ..

ಆರತಿ ಬೆಳಗಿರೆ ನಾರಿಯರು ಬೇಗ ಆದಿ

ಕೊಲ್ಹಾಪುರದ ಮಹಾಲಕ್ಷ್ಮಿಗೆ

ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ...

ಎಂದು ಹಾಡುತ್ತಾರೆ.

ಆನಂದತೀರ್ಥ ವರದೇ ದಾನ ವಾರಣ್ಯ ಪಾವಕೆ

ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇಸ್ತು ಮೇಮನಃ

ಶ್ರೀ ವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭೀಷ್ಟದಂ

ಚತುರ್ಮುಖೇರ ತನಯಂ ಶ್ರೀನಿವಾಸಂ ಭಜೇ ನಿಶಂ

ಈ ಮಂತ್ರವನ್ನು ಪಠಿಸಿದರೆ ಶ್ರೀವರಮಹಾಲಕ್ಷ್ಮಿ ಎಲ್ಲರಿಗೆ ಅನುಗ್ರಹ ಮಾಡುತ್ತಾಳೆ ಎಂಬ ನಂಬಿಕೆ. ದಟ್ಸ್‌ಕನ್ನಡ ಓದುವ ಅಕ್ಕತಂಗಿಯರು ಮತ್ತು ಅವರ ನೆಂಟರಿಷ್ಟರಿಗೆ ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು.

English summary
Varamahalakshmi vrutha comes in Shravana masa. Lashing rain never hinders the people to celebrate this festival of Goddess Lakshmi in great fashion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X