‘..ನಂಬಿದೆ ನಿನ್ನ, ಕಾಪಾಡು ಶ್ರೀ ಸತ್ಯನಾರಾಯಣ..’
ಮೈಸೂರಿನಲ್ಲಿ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಸಕಲವೂ ಕನ್ನಡಮಯ! ಕನ್ನಡ ಮಂತ್ರ ಮತ್ತು ಕನ್ನಡ ಪೂಜೆಯ ವೈಖರಿ ಕಂಡು ಎಲ್ಲರಿಗೂ ಹಿಗ್ಗು!
ಹಿಂದು ಸಮುದಾಯ ಭಕ್ತಿಭಾವದಿಂದ ಆಚರಿಸುವ ವ್ರತಗಳಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೂ ಒಂದು. ಪೂ ಜೆಯನ್ನು ವ್ರತವೆಂದೂ ಕರೆಯಬಹುದು. ಶ್ರದ್ಧೆಯಿಂದ ನೇಮ ನಿಷ್ಠೆಯಿಂದ, ಚಾಚೂ ತಪ್ಪದೆ , ವಿಧಿವಿಧಾನಗಳನ್ನು ಅಲಕ್ಷಿಸದೆ ಕಾಯಾ ವಾಚಾ ಮನಸಾ ಮಾಡುವ ಪೂಜಾ ಕೈಂಕರ್ಯಕ್ಕೆ ವ್ರತ ಎನ್ನಬಹುದೆ? ಪ್ರಾಜ್ಞರು ವಿವರಿಸಬೇಕು.
ಅವರವರ ಶ್ರದ್ಧೆ ಮತ್ತು ಕುಟುಂಬದ ಪರಂಪರೆಯ ಪ್ರಕಾರ, ಮನೆತನದ ಭಕ್ತಿ -ಭಾವಗಳಿಗನುಸಾರ, ಹಿರಿಯರು ಹಾಕಿಕೊಟ್ಟ ಸಂಪ್ರದಾಯದ ಪ್ರಕಾರ ಹಿಂದುಗಳು ಅನೇಕ ವ್ರತಗಳನ್ನು ಕೈಗೊಳ್ಳುವರು. ಗೌರಿ ಗಣೇಶ, ಅನಂತಪದ್ಮನಾಭ, ಲಕ್ಷ್ಮೀ ಮುಂತಾದ ಅನೇಕಾನೇಕ ವ್ರತಗಳನ್ನು ತಪ್ಪದೆ ಆಚರಿಸುವ ಭಕ್ತ ಸಮೂಹ ದೊಡ್ಡದು. ನಿಮ್ಮ ಮನೆಯಲ್ಲೂ ವ್ರತ ಮಾಡ್ತೀರಾ? ವಿಶೇಷವಾಗಿ ಶ್ರೀಸತ್ಯನಾರಾಯಣ ಪೂಜೆ ತುಂಬಾ ಪಾಪುಲರ್. ಇಲ್ಲಿ ಭಯಕ್ಕಿಂತ , ಭಕ್ತ್ತಿಗಿಂತ ಭಾವ ದೊಡ್ಡದು ಎಂದರೆ ನೀವು ನನ್ನನ್ನು ಎಂದಿನಂತೆ ತಪ್ಪು ತಿಳಿಯಲ್ಲ ತಾನೆ?
ಮೊನ್ನೆ ಮೈಸೂರಿನಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಮಹೋತ್ಸವ ನಡೆಯಿತು. ಒಬ್ಬರಲ್ಲ ಇಬ್ಬರಲ್ಲ 80 ಜೋಡಿಗಳು ವಿಧಿಬದ್ಧವಾಗಿ ಕಂಕಣ ಕಟ್ಟಿಕೊಂಡು ವ್ರತ ಮಾಡಿದರು. ಕಥೆ ಓದಿದರು, ಹಾಡಿದರು, ಕನ್ನಡದಲ್ಲೇ ಸತ್ಯನಾರಾಯಣನನ್ನು ಕೊಂಡಾಡಿದರು.
ಜಾತಿ ಮತ, ಪಂಗಡ ಭೇದಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಪೂಜೆ ಮಾಡಿದ್ದು, ಈ ಪೂಜಾ ಮಹೋತ್ಸವದ ಹೆಗ್ಗಳಿಕೆ. ವ್ರತ ಮಾಡಿದ್ದು 80 ದಂಪತಿಗಳಾದರೆ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಸಂಭ್ರಮಿಸಿದವರ ಸಂಖ್ಯೆ 500ಕ್ಕೂ ಹೆಚ್ಚು ಎನ್ನುತ್ತಾರೆ ಪೂಜೆಯನ್ನು ಸಾಂಗವಾಗಿ ವ್ಯವಸ್ಥೆಗೊಳಿಸಿದ್ದ ಶ್ರೀಮತಿ ನಾಗಲಕ್ಷ್ಮಿ ಮತ್ತು ಶಿಕಾರಿಪುರ ಹರಿಹರೇಶ್ವರ.
ಹಿಂದೂ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವ ಬಯಲು ದಾರಿಯಲ್ಲಿ ಇಂಥ ಸಾಮೂಹಿಕ ಪೂಜಾ ಪ್ರಯತ್ನಗಳು ತುಂಬಾ ಅರ್ಥಪೂರ್ಣವಾಗುತ್ತವೆ. ನಾವು ಇಟ್ಟಿರುವುದು ಒಂದು ಹೆಜ್ಜೆ ಮಾತ್ರ ಎನ್ನುತ್ತಾರೆ ಅವರು.
ಇನ್ನೊಂದು ವಿಶೇಷವೆಂದರೆ ಪೂಜೆ ಪೂರ್ತಿ ಕನ್ನಡದಲ್ಲೇ ನಡೆದದ್ದು. ಹರಿಹರೇಶ್ವರ ಅವರು ಕನ್ನಡೀಕರಿಸಿದ ಶ್ರೀ ಸತ್ಯನಾರಾಯಣ ಪೂಜೆಯ ಪುಸ್ತಕ ಈ ಸಂದರ್ಭದಲ್ಲೇ ಬಿಡುಗಡೆ ಆದದ್ದು.
ವಿಶೇಷ ಸತ್ಯನಾರಾಯಣ ಪೂಜಾ ಮಹೋತ್ಸವದ ಅಂಗಳಕ್ಕೆ ಸ್ವಾಗತ...












Click it and Unblock the Notifications