ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಸುದಾಸ್‌ ವಿವಾದ : ಆತನೊಲಿದಮೇಲೆ ಯಾತರ ಕುಲವಯ್ಯಾ?

By Staff
|
Google Oneindia Kannada News


ಹಿಂದೂ ಸಂಸ್ಕೃತಿಯಲ್ಲಿ‘ಪಾಪ’ ಇಂಗ್ಲಿಷಿನ ‘ಸಿನ್‌’ ಗೆ ಸಮನಲ್ಲ. ಕೇವಲ ಒಬ್ಬರಿಂದ ಮತ್ತೊಬ್ಬರಿಗೆ ಆಗುವ ಅಪಕಾರ, ಹಿಂಸೆ, ಅನ್ಯಾಯಗಳು ಮಾತ್ರಾ ಪಾಪವಲ್ಲ. ಮಾನವ ಜೀವನದ ಪರಮಗುರಿಯಾದ ಮೋಕ್ಷಸಾಧನೆಗೆ ಅಡ್ಡಿಯಾಗುವ ಎಲ್ಲಾ ಅಂಶಗಳು ಪಾಪವೇ. ಇಲ್ಲಿ ಒಪ್ಪಿತವಾಗಿರುವ ಕರ್ಮ ಸಿದ್ಧಾಂತ, ಕ್ರಿಯೆ-ಪ್ರತಿಕ್ರಿಯೆ-ಪಲಿತಾಂಶ ಸರಣಿಯ ನಿಯಮವನ್ನು ಅನುಸರಿಸಿರುವುದಾಗಿದೆ. ಹೀಗಾಗಿ ನಮ್ಮ ನಮ್ಮ ಕರ್ಮದ ಫಲವನ್ನು ನಾವು ಅನುಭವಿಸಿಯೇ ತೀರಬೇಕು. ಬೇರೆ ಮತಗಳಲ್ಲಿರುವಂತೆ ಇಲ್ಲಿ ‘ಎಸ್ಕೇಪ್‌ ರೂಟ್‌’ ಇಲ್ಲ, ಈ ತರ್ಕಸರಣಿಯಲ್ಲಿ ಪುನರ್ಜನ್ಮಕ್ಕೆ ಮಾನ್ಯತೆ ದೊರಕಿದೆ.

ಇತರ ಮತಗಳು ಒಂದಾನೊಂದು ಗ್ರಂಥ, ಒಬ್ಬ ಪ್ರವರ್ತಕನ ಮೇಲೆ ಆಧರಿಸಿವೆ, ಅಯಾ ಮತಗ್ರಂಥಗಳು ದೇವರಿಂದ ಆಯಾ ಪ್ರವಾದಿಯಮೂಲಕ ಕೊಡಲ್ಪಟ್ಟಿವೆ ಹೀಗಾಗಿ ಅದರಲ್ಲಿ ಹೇಳಿರುವ ಯಾವುದೂ ತಪ್ಪಾಗಿರಲು ಸಾದ್ಯವಿಲ್ಲ ಆದ್ದರಿಂದ ಅದರಲ್ಲಿ ಯಾವ ಬದಲಾವಣೆಗೂ ಅವಕಾಶವಿಲ್ಲ.

ಬದಲಾಗುತ್ತಿರುವ ಕಾಲದಲ್ಲಿ, ಆಚರಣೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲೊಪ್ಪದೆ ಹಟ ಹಿಡಿಯುತ್ತಿರುವ ಮತೀಯ ನಾಯಕರಿಂದ ಸಮಾಜದಲ್ಲಿ ಅತೃಪ್ತಿ, ಕ್ಷೋಭೆ ಹೆಚ್ಚುತ್ತಿದೆ. ಹಿಂದೂ ಧರ್ಮದಲ್ಲಿ ಈ ಆಪಾಯವಿಲ್ಲ. ಕಾಲ ಕಾಲಕ್ಕೆ ಸ್ಮೃತಿಗಳು ಪರಿಷ್ಕಾರಗೊಳ್ಳುತ್ತಾಬಂದಿವೆ. ಸಾಮಾಜಿಕ ಪದ್ಧತಿಗಳು, ಧಾರ್ಮಿಕ ಆಚರಣೆಗಳು ಬದಲಾಗುತ್ತಲೇ ಇದೆ.

ಹಿಂದೂ ಶಾಸ್ತ್ರಗಳಲ್ಲಿ ಹೇಳಿರುವ ಆಚರಣೆಗಳ, ವಿಧಿ-ನಿಷೇಧಗಳ ಅಕ್ಷರಶ: ಅನುಸರಣೆಗಿಂತ ಅದರ ತಿರುಳನ್ನು ಆರ್ಥಮಾಡಿಕೊಂಡು ಆಚರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜೇಸುದಾಸರ ದೇವಾಲಯ ಪ್ರವೇಶಾವಕಾಶದ ಗೊಂದಲಕ್ಕೆ ಪರಿಹಾರ ಹೀಗಿದೆ :

  • ಒಬ್ಬ ವ್ಯಕ್ತಿಗಾಗಿ ದೇವಾಲಯದ ಪುರಾತನ ಸಂಪ್ರದಾಯವನ್ನು ಮುರಿಯಬೇಕೆ? ಏಕೆ?ದೇವಾಲಯದ ಸಂಪ್ರದಾಯವನ್ನು ಮುರಿಯಬೇಕಿಲ್ಲ, ಬದಲಾಗಿ ದೇವಾಲಯದ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿ ಮಾಡಬಹುದು. ಆಡಳಿತ ಮಂಡಲಿಗೆ ಈ ಅಧಿಕಾರವಿದೆ.
  • ಜೇಸುದಾಸರು ಪ್ರಸಿದ್ದ ವ್ಯಕ್ತಿಯಾಗಿರುವುದರಿಂದ ಅವರ ದೇವಾಲಯಪ್ರವೇಶ ಗಮನಸೆಳೆಯುತ್ತಿದೆ. ಜನ ಸಾಮಾನ್ಯರು, ಹಿಂದೂಗಳಲ್ಲದವರು ದೇವಾಲಯಪ್ರವೇಶ ಮಾಡಿದರೆ ಯಾರಿಗೂ ತಿಳಿಯುವುದಿಲ್ಲ, ಎಷ್ಟುಜನ ಹಿಂದೂಗಳಲ್ಲದವರು ಭಕ್ತಿಯಿಂದಲ್ಲದಿದ್ದರೂ ಕುತೂಹಲದಿಂದ ದೇವಾಲಯಪ್ರವೇಶ ಮಾಡಿರುವ ಸಾಧ್ಯತೆಯಿಲ್ಲ, ಇದನ್ನು ತಡೆಯುವುದು ಆಡಳಿತ ಮಂಡಲಿಗೆ ಸಾಧ್ಯವಾಗಿದೆಯೇ?
  • ಶ್ರೀಕ್ಷೇತ್ರ ತಿರುಪತಿಯಲ್ಲಿರುವ ನಿಯಮದಂತಹದೇ ನಿಯಮವನ್ನು ಗುರುವಾಯೂರಿನ ದೇವಾಲಯದಲ್ಲೂ ಜಾರಿಗೆತಂದು ಈ ಗೊಂದಲಕ್ಕೆ ಮಂಗಳ ಹಾಡಬಹುದು.
  • ಆಚಾರ್ಯ ಶಂಕರರು ಸಂಪ್ರದಾಯಕ್ಕೆ ವಿರೋಧವಾಗಿ ತಾಯಿಯ ಶವಸಂಸ್ಕಾರದಲ್ಲಿ ಭಾಗವಹಿಸಿ, ತಾಯಿ ಸ್ಥಾನದ ಮಹಿಮೆಯನ್ನೂ, ಸಂಪ್ರದಾಯ, ಕಟ್ಟು-ಕಟ್ಟಲೆಗಳ ಬದಲಾವಣೆಯ ಅವಶ್ಯಕತೆಯನ್ನೂ ಸಾರಿದ್ದಾರೆ. ಈ ಕಾರಣಕ್ಕಾಗಿ ಅಂದಿನ ಬ್ರಾಹ್ಮಣ ಸಮಾಜದ ಶಾಪಕ್ಕೂ ಗುರಿಯಾಗಿದ್ದರು, ಅದರ ಪಳೆಯುಳಿಕೆ ಇಂದೂ ಕೇರಳದಲ್ಲಿ ಕಾಣಬರುತ್ತಿದೆ. ಕರ್ಮಜಡತ್ವವನ್ನು ಖಂಡಿಸಿ ತತ್ವಜ್ಞಾನವನ್ನು ಪ್ರತಿಷ್ಠಾಪಿಸಿದ ಶ್ರೀಮದಾಚಾರ್ಯರ ನಾಡಿನಲ್ಲಿದ್ದ ಅಸ್ಪೃಶ್ಯತೆಯ ಅವಾಂತರವನ್ನು ಕಂಡು ತೀವ್ರವಾಗಿನೊಂದಿದ್ದರು, ಖಂಡಿಸಿದ್ದರು ಸ್ವಾಮೀ ವಿವೇಕಾನಂದರು.
  • ಹಿಂದೂ ಧರ್ಮ ನಿಂತ ನೀರಲ್ಲ, ಇದೊಂದು ನಿರ್ಮಲ ಪ್ರವಾಹ ಎಂಬುದನ್ನು ಅರಿತವರು ಬದಲಾವಣೆಗೆ ಹೆದರುವುದಿಲ್ಲ. ಇದೀಗ ವೈದಿಕ ಸಂಸ್ಕೃತಿಯ ವಿಶಾಲ ಹೃದಯದ ಪರಿಚಯವನ್ನು ಮತ್ತೆ ಮಾಡಬೇಕಾಗಿದೆ. ಎಲ್ಲ ವಿಭಿನ್ನ ವಿಚಾರಗಳಿಗೂ ಆಚಾರಗಳಿಗು ತನ್ನಲ್ಲಿ ಆಶ್ರಯವಿತ್ತು ಪೊರೆವಗುಣವುಳ್ಳ ಭಾರತದ ‘ವಿಶ್ವಮಾನವ’ ಸಂದೇಶ ಬಿತ್ತರಗೊಳ್ಳಲಿ, ವಸುಧೈವ ಕುಟುಂಬಕಂ ಸಾಕಾರವಾಗಲಿ.
ಆದರೆ ಪಾಗನ್‌ ಆಚರಣೆಗಳನ್ನೊಪ್ಪದ ಫಾದರ್‌ಗಳಿಂದ ಜೇಸುದಾಸರು ಖಂಡಿಸಲ್ಪಟ್ಟರೆ, ಸ್ವರ್ಗದಲ್ಲಿರುವ ತಂದೆಯು ಸಿಟ್ಟಾದರೆ? ಜೇಸುದಾಸರೇ ಉತ್ತರಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X