ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ
ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..
ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ ’ಬಿಗಿ ಸಾಕಾ?’ ಕೇಳುತ್ತಿದ್ದ. ನಾನು ’ಸಾಕು’ ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‌ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು.
ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ ’ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ’ ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ ’ಇನ್ನೊಂದ್ ಬೆರಳು’ ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ ’ಇಶಿಶೀ..!’ ಎನ್ನುತ್ತಿದ್ದಳು.
ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ ’ಎಲ್ಲಿ ತುರುಸ್ತು?’ ಎಂದು ಕೇಳುತ್ತಾ ತುರುಸಿಕೊಂಡದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.
’ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?’ ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ ’ಕೆಂಪೆಲ್ಲಾ ಅಳಿಸಿಹೋದರೇ?’ ಅಂತ ಕೈ ತೊಳೆಯಲಿಕ್ಕೆ ಅಂಜಿಕೆ..
’ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..’ ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. ’ಹುಡುಗ್ರಿಗೆ ಇಷ್ಟೇ ಕೆಂಪಾಗದು’ ಎಂದವಳಂದಾಗ ಸುಪ್ತ ಸಮಾಧಾನ..
ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು.
ಶಾಲೆಯಲ್ಲೂ ಅವತ್ತಿಡೀ ’ನಿಮ್ಮನೆಲಿ ಯಾರು ಬೀಸಿದ್ದು?’ ’ಸುಣ್ಣ ಹಾಕಿ ಬೀಸಿದ್ದಿದ್ರಾ?’ ’ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು’ ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.
ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.
ಇದನ್ನೂ ಓದಿ :












Click it and Unblock the Notifications