ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ
ನಾವು ಚಿಕ್ಕವರಾಗಿದ್ದಾಗ ನಾಗರ ಪಂಚಮಿ ಆಚರಣೆ ಹೇಗಿತ್ತು? ಆ ಸಂದರ್ಭದ ಮೆಹಂದಿ ಸಡಗರ ಎಂಥದ್ದು? ಇವೆಲ್ಲವನ್ನೂ ನೆನೆಸಿಕೊಂಡರೆ, ಏನೋ ಒಂಥರಾ ಖುಷಿ!
ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು...
ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, ’ಉಫ್ ಉಫ್’ ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ ’ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬಂತು .. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..’ ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ ’ಏಯ್ ಇನ್ನೂ ನೈವೇದ್ಯ ಆಗಿಲ್ಲ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..’ ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...
ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ ’ನಿಮ್ಮನೆ ಪೂಜೆ ಆಯ್ತೇನೇ?’ ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...
ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. ’ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತದ..’ ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು..
ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ..
ಅಪ್ಪ ಚುಟುಕಾಗಿ ಪೂಜೆ ಮುಗಿಸುತ್ತಿದ್ದರು. ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.
ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ..
ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು.