• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಜ್ಜನ ನೆನಪು

By Staff
|

ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನುವ ಮಾತಿದೆ. ಆದರೆ ಗಳು ಇಂದಿಗೂ ಕೈಹಿಡಿದು ಜಗ್ಗುತ್ತವೆ. ಅಜ್ಜನ ಬಗ್ಗೆ ನೆನೆದಾಗಲೆಲ್ಲ ಖುಷಿ, ಹೆಮ್ಮೆ, ಸಂತೋಷ.. ಇನ್ನು ಏನೇನೋ... ಜೊತೆಯಲ್ಲಿ ಬೇಡಬೇಡವೆಂದರೂ ಕಣ್ಣಲ್ಲಿ ಗಂಗಾ-ಕಾವೇರಿ-ಸರಸ್ವತಿ...

Memories of My Grand Father, a write up by Vandanaಬಾಲ್ಯದ ನನ್ನ ಅನೇಕ ಸವಿನೆನಪುಗಳಲ್ಲಿ ಅಜ್ಜ(ತಂದೆಯ ತಂದೆ) ಆಗಾಗ್ಗೆ ಬಂದು ನಮ್ಮೊಡನಿರುತ್ತಿದ್ದ ದಿನಗಳು ಒಂದು. ಪಿಡಬ್ಲ್ಯುಡಿಯಲ್ಲಿ ಕೆಲಸದಲ್ಲಿದ್ದ ತಂದೆಗೆ 3 ವರ್ಷಕ್ಕೊಮ್ಮೆ ವರ್ಗಾವಣೆ. ದಾವಣಗೆರೆಯಲ್ಲಿದ್ದ ನನ್ನ ಅಜ್ಜ ನಾವು ಎಲ್ಲಿದ್ದರೂ ಅಲ್ಲಿ ಬಂದು ನಮ್ಮೊಡನೆ ಕೆಲವು ದಿನ ಇದ್ದು ಹೋಗುತ್ತಿದ್ದರು. ತಾಯಿಯ ಕಡೆ ಅಜ್ಜ ಅಜ್ಜಿ ಇಬ್ಬರೂ ನಾವು ನೋಡುವ ಮೊದಲೇ ಕಾಲವಾಗಿದ್ದರು. ಇನ್ನೊಬ್ಬ ಅಜ್ಜಿಯಿಂದ ಪ್ರೀತಿಯನ್ನೇನೂ ಕಾಣದ ನಮಗೆ ಈ ಅಜ್ಜ ಒಬ್ಬರೇ ಆ ಪ್ರೀತಿಯನ್ನು ಉಣಿಸಿದ್ದು.

ಶಾಲಾ ಮಾಸ್ತರರಾಗಿ ನಿವೃತ್ತರಾಗಿದ್ದ ಅಜ್ಜ ಸರಳ ಸ್ನೇಹಜೀವಿ. ತಾವು ಉದ್ದಕ್ಕೂ ಕಷ್ಟದಲ್ಲೇ ಜೀವಿಸಿದ್ದರೂ, ಇನ್ನೊಬ್ಬರ ಕಷ್ಟಕ್ಕೆ ಮರುಗುವವರು. ಅವರು ಮನೆಗೆ ಬಂದರೆ ನಮಗೆಲ್ಲಾ ಸಂಭ್ರಮ. ಅವರಿಗೆ ನಾವು ಮಾಡುತ್ತಿದ್ದ ಕುಚೇಷ್ಟೆಗಳು, ತರಲೆಗಳು ಎಲ್ಲಾ ಅಜ್ಜನಿಗೆ ಪ್ರಿಯವೇ, ಎಂದೂ ನಮ್ಮನ್ನು ಗದರಿದ್ದಿಲ್ಲ.

ಅಜ್ಜನ ತೆಳುವಾದ, ಸ್ವಲ್ಪ ಉದ್ದವಿದ್ದ ಕೂದಲನ್ನೆಲ್ಲ ನಾವು ಒಟ್ಟುಗೂಡಿಸಿ, ನೆತ್ತಿಯ ಮೇಲೆತ್ತಿ ಒಂದು ರಬ್ಬರ್‌ ಬ್ಯಾಂಡ್‌ ಹಾಕಿ, ಅಜ್ಜಾ, ನಿನ್ನ ಜುಟ್ಟು ನೋಡಿಕೋ ಅಂತ ಜೋರಾಗಿ ನಗುತ್ತಿದ್ದರೆ ಅಜ್ಜನೂ ನಮ್ಮೊಡನೆ ನಗುತ್ತಿದ್ದರು. ನಮ್ಮ ಜುಟ್ಟು ಕಟ್ಟುವ ಸಡಗರವೋ ಸಾಕಷ್ಟು ದೀರ್ಘ ಕಾಲ ನಡೆಯುತ್ತಿತ್ತು. ಅಷ್ಟು ಹೊತ್ತೂ ಅಜ್ಜ ಸ್ವಲ್ಪವೂ ಬೇಸರಿಸದೇ ನಮ್ಮ ಕೈಗೆ ತಲೆ ಕೊಟ್ಟು ಸುಮ್ಮನೇ ನಗುತ್ತ ಕುಳಿತಿರುತ್ತಿದ್ದರು. ತೀರಾ ಸಾಕಾದಾಗಲೊಮ್ಮೆ ‘ಸಾಕು ಬಿಡ್ರೋ ಪಾಪಾ’ ಅನ್ನುತ್ತಿದ್ದುದೊಂದೇ ಅವರು ತೋರುತ್ತಿದ್ದ ಅತಿ ದೊಡ್ಡ ಗದರಿಕೆ (ನಾವೆಲ್ಲರೂ ಅವರಿಗೆ ‘ಪಾಪಾ’ ನೇ, ಚಿಕ್ಕ ಪಾಪಾ, ದೊಡ್ಡ ಪಾಪಾ, ಹೀಗೆ ಬೇರೆ ಬೇರೆ ಅಷ್ಟೇ).

ಮನೆಯೆದುರು ಇದ್ದ ಮಾವಿನ ಮರ ಹತ್ತಲು ಸಹಾಯ ಮಾಡುತ್ತಿದ್ದ ಅಜ್ಜ, ಅವರ ಹಳ್ಳಿಯಲ್ಲಿ ಎಂದೋ ನಡೆದ ತಮಾಷೆಯ ಪ್ರಸಂಗಗಳನ್ನೆಲ್ಲಾ ನಮಗೆ ಅಭಿನಯ ಸಹಿತ ವಿವರಿಸಿ ನಗಿಸುತ್ತಿದ್ದ ಅಜ್ಜ, ನಾವೆಲ್ಲಾ ಮತ್ತೆ ಮತ್ತೆ ‘ಅಜ್ಜಾ, ಅದು ಹೆಂಗೆ ಮಾಡ್ತಿದ್ರು ತೋರಿಸು’ ಅಂದ್ರೆ ಮತ್ತೆ ಅಷ್ಟೇ ಉತ್ಸಾಹದಿಂದ ಮಾಡಿ ತೋರಿಸಿ ನಗುವಿನಲ್ಲಿ ಮುಳುಗಿಸುತ್ತಿದ್ದ ಅಜ್ಜ, ಗೋಕರ್ಣದ ಸಮುದ್ರದ ದೊಡ್ಡ ದೊಡ್ಡ ಅಲೆಗಳ ಮಧ್ಯೆ ನಮ್ಮನ್ನು ಕರೆದುಕೊಂಡು ಹೋಗಿ, ಬಂಡೆಗಳ ಮೇಲೆ ಕೂರಿಸಿ ಸ್ನಾನ ಮಾಡಿಸುತ್ತಿದ್ದ ಅಜ್ಜ, ಹೀಗೆ ಬಾಲ್ಯದ ನೂರೆಂಟು ಖುಷಿಯ ಪ್ರಸಂಗಗಳೊಂದಿಗೆ ಅಜ್ಜ ನೆನಪಾಗುತ್ತಾರೆ.

ನನಗೆ ಅಜ್ಜ ಯಾವಾಗ್ಲೂ ಹೇಳ್ತಾ ಇದ್ದದ್ದು, ‘ನೀನು ಡಾಕ್ಟರಾಗೋ ಪಾಪಾ, ನಮ್ಮ ಮನೆಯಲ್ಲಿ ಯಾರೂ ಡಾಕ್ಟರಿಲ್ಲ, ನಮ್ಮ ಕೋಮಲಿ (ಅವರ ದೂರದ ಸಂಬಂಧಿ) ನೋಡು, ಹೆಂಗೆ ಡಾಕ್ಟರಾಗಿ ಜರ್ಬಾಗಿ ಇದಾಳೆ’, ಅದೊಂದು ಅವರ ದೊಡ್ಡ ಕನಸು. ಆಗ ಅದೇ ಕನಸುಗಳು ನನ್ನಲ್ಲೂ.

ನಾನು 7ನೇ ತರಗತಿಯಲ್ಲಿದ್ದಾಗ ನಾವು ಹಳಿಯಾಳ ಅನ್ನುವ ಚಿಕ್ಕ ತಾಲೂಕಿನಲ್ಲಿ ಇದ್ದೆವು (ಕಾರವಾರ ಜಿಲ್ಲೆ). ಅಲ್ಲಿಗೆ ಅಜ್ಜ ಹಲವು ಸಾರಿ ಬಂದಿದ್ದರು. ಅಲ್ಲಿದ್ದ ಒಂದೇ ಒಂದು ಚಿಕ್ಕ ಹೋಟೆಲ್ಗೆ, ಬನ್ರೋ ತಿಂಡಿ ಕೊಡುಸ್ತೀನಿ ಅಂತ ಕರ್ಕೊಂಡು ಹೋದ್ರೆ, ನಮ್ಮ ಬಾಯಲ್ಲೆಲ್ಲಾ ನೀರು (ಆಗ ಹೋಟೆಲ್‌ ಗೆ ಹೋಗುವ ಸಂಪ್ರದಾಯವೇ ಇಲ್ಲದ, ಹೊರಗಿನ ತಿಂಡಿಯನ್ನೂ ತಂದು ತಿನ್ನದಿದ್ದ ನಮಗೆ ಅದೊಂದು ದೊಡ್ಡ ಟ್ರೀಟ್‌ !!). ಅಜ್ಜ ಪೇಟೆ ಕಡೆ ಹೋಗಿ ಬರ್ತೀನಿ ಅಂತ ಹೋದ್ರೆ ಅವರು ಬರೋದನ್ನೇ ಕಾಯುತ್ತಿದ್ದದ್ದು, ಬಂದ ತಕ್ಷಣ ಜೇಬಿನಿಂದ ತೆಗೆದು ತಗೊಳ್ರೋ ಪಾಪಾ, ಅಂತ ಕೊಡುತ್ತಿದ್ದ ಚಿಕ್ಕಿಯೋ, ಚಾಕಲೇಟೋ, ಮಂಡಕ್ಕಿ ಉಂಡೆಯೋ ಹೀಗೆ ಏನೋ ಒಂದು ಚಿಕ್ಕ ತಿನಿಸಿಗಾಗಿ.

ಅಲ್ಲಿದ್ದಾಗ ಒಮ್ಮೆ ನನ್ನಮ್ಮ ಏನೋ ಕಾರಣಕ್ಕಾಗಿ ನಮ್ಮ ಶಾಲೆಯ ಟೀಚರ್ರನ್ನು ಮನೆಗೆ ಕರೆ ತರಲು ಹೇಳಿದ್ದರು. ಅಂದು ಸಂಜೆ ನಾನೂ, ನನ್ನ ಟೀಚರ್ರೂ ಮನೆಗೆ ನಡೆದು ಹೋಗ್ತಾ ಇದ್ವಿ. ಹೋಗುವಾಗ, ನಾಲ್ಕು ದಾರಿ ಕೂಡುವ ಒಂದು ಚಿಕ್ಕ ವೃತ್ತವನ್ನು ದಾಟಿ ಹೋಗಬೇಕು, ಅಲ್ಲಿ ವೃತ್ತದ ಸುತ್ತಲೂ ಒಂದು ಮೋಟು ಗೋಡೆಯ ಥರಾ ಇತ್ತು. ನಾನು ದೂರದಿಂದಲೇ ನೋಡಿದೆ, ಅಜ್ಜ ಆ ಗೋಡೆಯ ಮೇಲೆ ಕೂತಿದಾರೆ.

ನನಗೆ ತಕ್ಷಣ ಮನಸ್ಸಿನಲ್ಲಿ ಕೋಪ, ಯಾಕೆ ಅಜ್ಜ ಇಲ್ಲಿ ಕೂತ್ಕೋಬೇಕು, ಒಳ್ಳೆ ಗಮಾರರ ಥರಾ, ಎಲ್ಲಾ ಓಡಾಡೋ ಜಾಗದಲ್ಲಿ ಹೀಗೆ ಗೋಡೆಯ ಮೇಲೆ ಕೂತ್ರೆ ಏನು ಚಂದ, ಈಗಲೇ ಇವ್ರು ಇಲ್ಲಿ ಕೂತಿರ್ಬೇಕಾ, ನನ್ನ ಟೀಚರ್‌ ನೋಡಿದ್ರೆ ನಮ್ಮ ಬಗ್ಗೆ ಏನಂದ್ಕೋತಾರೆ, .........ಅವರೆದುರಿಗೆ ನಮ್ಮ ಮನೆಯವರು ಹಾಗೆ ಎಲ್ಲೆಲ್ಲೋ ಕೂತಿರೋದು ತೀರಾ ಅವಮಾನದ ಸಂಗತಿ ಎನಿಸಿಬಿಟ್ಟಿತು.

ಹೇಗಾದ್ರೂ ನನ್ನ ಟೀಚರ್ಗೆ ಅಲ್ಲಿ ಕೂತಿರೋದು ನನ್ನ ಅಜ್ಜ ಅಂತ ಗೊತ್ತಾಗದ ಹಾಗೆ ಅಲ್ಲಿಂದ ದಾಟಿ ಹೋಗಿಬಿಡಬೇಕು ಅಂತ ನನ್ನ ಯೋಚನೆ. ಅಜ್ಜನ ಕಡೆಯೇ ತಿರುಗಿ ನೋಡದೇ ಮುಖ ತಪ್ಪಿಸಿಕೊಂಡು ಮುಂದೆ ನಡೆದೆ. ಸ್ವಲ್ಪವೇ ಮುಂದೆ ಹೋಗಿರಬೇಕು, ಹಿಂದಿನಿಂದ ’ಪಾಪಾ, ಪಾಪಾ’ ಅಂತ ಕೂಗುವುದು ಕೇಳಿಸಿತು, ಜೋರಾಗಿ. ಅದು ನನಗೆ ಇನ್ನೂ ಅವಮಾನ, ಪಬ್ಲಿಕ್‌ ಜಾಗದಲ್ಲಿ ಹಾಗೆ ಜೋರಾಗಿ ಕೂಗೋದಂದ್ರೇನು, ಛೇ, ಈ ಅಜ್ಜನಿಗೆ ಅಷ್ಟೂ ಗೊತ್ತಾಗಬಾರದಾ, ಟೀಚರ್‌ ನಮ್ಮನ್ನು ಅನಾಗರಿಕ, ಮಾನರ್ಸ್‌ ಇಲ್ಲದ ಜನ ಅಂದ್ಕೊಂಡು ಬಿಟ್ಟರೆ.....ಇಲ್ಲ, ತಿರುಗಿ ನೋಡಲೇ ಬಾರದು, ಹಾಗೇ ಕೂಗಿ ಕೂಗಿ ಸುಮ್ಮನಾಗಲಿ ಈ ಅಜ್ಜ ಬೇಕಾದ್ರೆ ಅಂತ ತೀರ್ಮಾನಿಸಿಯೇ ಬಿಟ್ಟೆ.

ಪಾಪಾ ಅಂದಾಗ ತಿರುಗಿ ನೋಡದ್ದಕ್ಕೋ ಏನೋ, ಅಜ್ಜ ನನ್ನ ಹೆಸರಿಡಿದು ಕೂಗೋಕೆ ಶುರು ಮಾಡಿದ್ರು. ಆಗಲೂ ಕೇಳದ ಹಾಗೇ ನಟಿಸುತ್ತಿದ್ದೆ, ಆದ್ರೆ ನನ್ನ ಟೀಚರ್ಗೆ ಅದು ಕೇಳಿಸಿಬಿಟ್ಟಿತು ! ಯಾರೋ ನಿನ್ನ ಕರೀತಿದಾರೆ ನೋಡು ಅಂದರು. ಆಗ ಕೇಳಿಸಿದ ಹಾಗೆ ನಟಿಸಿ, ಹಾಂ, ಹೌದು, ನನ್ನ ಅಜ್ಜ ಅಂತ ತಿರುಗಿ ಓಡಿ ಹೋದೆ ಅಜ್ಜನ ಹತ್ತಿರ. ಮನಸ್ಸಿನಲ್ಲಿ ತೀವ್ರ ಕೋಪ, ಅವಮಾನದ ಭಾವನೆ.

ಏನಜ್ಜಾ, ಯಾಕೆ ಹಂಗೆ ಕೂಗ್ತಿದೀಯಾ ಅಂದಾಗ, ಜೇಬಿಗೆ ಕೈ ಹಾಕಿದ ಅಜ್ಜ, ತಗೋಳೋ ಪಾಪಾ, ನಿಮಗೆ ಅಂತ ತಗೊಂಡೆ, ನನ್ನ ಹತ್ರ ಇದ್ರೆ ನಾನೇ ತಿಂದುಬಿಡ್ತೀನಿ ಅಂತ ನನ್ನ ಕೈಗೆ ಚಿಕ್ಕವೆರಡು ಚಾಕಲೇಟನ್ನಿಟ್ಟರು. ಅದನ್ನು ನೋಡಿಯೂ ನನ್ನ ಕೋಪ ಆರಲಿಲ್ಲ. ಇದಕ್ಯಾಕೆ ಅಷ್ಟು ಕೂಗಿದೆ, ಮನೆಗೆ ಬಂದ ಮೇಲೆ ಕೊಟ್ರೆ ಆಗ್ತಿರಲಿಲ್ವ ಅಂತ ಸ್ವಲ್ಪ ಜೋರಾಗಿ ಹೇಳಿದವಳೇ, ಅಲ್ಲಿಂದ ಟೀಚರ್‌ ಬಳಿ ಓಡಿದೆ. ರಾತ್ರಿ ಮನೆಯಲ್ಲೂ ಅದೇ ಮುನಿಸು, ಜಗಳ, ಯಾಕೆ ಅಲ್ಲಿ ಕೂತಿದ್ದೆ, ಯಾಕೆ ನನ್ನ ಜೋರಾಗಿ ಕೂಗಿದೆ.....ಅಲ್ಲ ಕಣೋ ಪಾಪಾ, ನೀನು ಸಿಗದೇ ಇದ್ದಿದ್ರೆ ನಾನೇ ಅದನ್ನ ತಿಂದು ಬಿಡ್ತಿದ್ನೇನೋ, ಅದಕ್ಕೇ ನೀನು ಸಿಕ್ಕ ತಕ್ಷಣ ಕೊಟ್ಟು ಬಿಡೋಣ ಅಂತ,....... ಅಜ್ಜನ ಸಮಾಧಾನ ನನಗೆ.

ಕಾಲ ಚಕ್ರ ಉರುಳಿತು......ನಾನು 10ನೇ ತರಗತಿಗೆ ಬರುವ ಹೊತ್ತಿಗೆ ಅಜ್ಜ ಪಾರ್ಶ್ವವಾಯುವಿನಿಂದಾಗಿ ಹಾಸಿಗೆ ಹಿಡಿದು ಬಿಟ್ಟರು. ಅಲ್ಲಿಗೆ ಅವರು ನಮ್ಮ ಊರಿಗೆ ಬರುವುದು ನಿಂತು ಹೋಯಿತು. ನಾವು ಅವರನ್ನು ನೋಡಲು ಹೋದಾಗಲೆಲ್ಲಾ ನಮ್ಮ ಮುಖ ಕಂಡ ತಕ್ಷಣ ಜೋರಾಗಿ ಅಳುತ್ತಿದ್ದರು ಅಜ್ಜ. ಮುಂದೆ ಪಿಯುಸಿ ಮುಗಿಸಿದ ನನಗೆ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಎರಡರಲ್ಲೂ ಪ್ರವೇಶ ಸಿಕ್ಕಿತು, ಆದರೆ ಅಷ್ಟರಲ್ಲಿ ಬಯಾಲಜಿಯಿಂದ ಬೋರ್‌ ಹೊಡೆಸಿಕೊಂಡಿದ್ದ ನನಗೆ ಮೆಡಿಕಲ್‌ ಓದುವ ಆಸಕ್ತಿ ಪೂರ್ತಿ ಹೊರಟು ಹೋಗಿತ್ತು.

ಆಗಲೂ, ಅಜ್ಜಾ, ಮೆಡಿಕಲ್ಗೆ ಹೋಗ್ಬೇಕಾ ಅಂದರೆ, ಮಾತಾಡುವ ಶಕ್ತಿ ಕಳೆದುಕೊಂಡಿದ್ದ ಅಜ್ಜ ಹೂಂ ಹೂಂ ಅಂತ ಜೋರಾಗಿ ತಲೆದೂಗುತ್ತಿದ್ದರು. ಇಲ್ಲ ಅಜ್ಜಾ, ನಂಗೆ ಎಂಜಿನಿಯರಿಂಗೇ ಇಷ್ಟ ಅಂದ್ರೆ, ಊಂಹೂಂ ಊಂಹೂಂ ಅಂತ ಬೇಡ ಅನ್ನುವುದನ್ನು ಸ್ಪಷ್ಟವಾಗಿ ಮುಖದಲ್ಲೇ ಹೇಳುತ್ತಿದ್ದರು. ಕೊನೆಗೂ ನಾನು ದಾವಣಗೆರೆಯಲ್ಲೇ ಎಂಜಿನಿಯರಿಂಗ್‌ ಸೇರಿಕೊಂಡೆ. ಹಾಸ್ಟೆಲಿನಲ್ಲಿದ್ದು, ಆಗಾಗ್ಗೆ ಅಜ್ಜನ ಮನೆಗೆ ಹೋಗುತ್ತಿದ್ದ ನಾನು ಸುಮ್ಮನೇ ಅಜ್ಜನ ಕೈ ಹಿಡಿದು ಕೂರುವುದು, ತಲೆ ನೇವರಿಸಿ ಸ್ವಲ್ಪ ಮಾತಾಡುವುದು ಮಾಡಿ ಬರುತ್ತಿದ್ದೆ, ಆದರೆ ಅಜ್ಜನ ಮಾತೇ ನಿಂತುಹೋಗಿದ್ದರಿಂದ ಇನ್ನೆಂದೂ ನನ್ನನ್ನು ಪಾಪಾ ಅಂತ ಕರೆಯುವಂತಿರಲಿಲ್ಲ.

ನಮ್ಮನ್ನೆಲ್ಲಾ ನಗಿಸುತ್ತಿದ್ದ ಅಜ್ಜನ ಮುಖದಿಂದ ನಗು ಮಾಸಿಹೋಗಿತ್ತು. 24 ಗಂಟೆಯೂ ತಾರಸಿ ನೋಡುತ್ತಾ ಮಲಗಿದಲ್ಲೇ ಇರಬೇಕಾದ ಅಸಹಾಯಕತೆ, ದೈನ್ಯತೆ ತುಂಬಿತ್ತು. ನಾವು ಎಷ್ಟೇ ನಗಿಸುವ ಪ್ರಯತ್ನ ಮಾಡಿದರೂ, ಆ ನಗು ಮೂಡಲೇ ಇಲ್ಲ. ಅಜ್ಜನನ್ನು ಹಾಗೆ ನೋಡುವುದು ಸಂಕಟದ ವಿಷಯವಾಗಿತ್ತು(ಇಲ್ಲಿರುವ ಫೋಟೋ ಆ ಸಮಯದಲ್ಲೇ ತೆಗೆದದ್ದು, ಕಣ್ಣುಗಳಲ್ಲಿ ಆ ವೇದನೆ, ಶೂನ್ಯತೆ ಎದ್ದು ಕಾಣುತ್ತದೆ). ಮುಂದೊಂದು ವರ್ಷದಲ್ಲಿ ಅಜ್ಜ ನಮ್ಮಿಂದ ದೂರವಾದರು.

ಮುಂದೆ ಪ್ರೌಢತೆ ಬೆಳೆಯುತ್ತಾ ಹೋದಂತೆಲ್ಲ, ನನಗೆ ಹಳಿಯಾಳದ ಆ ಘಟನೆ ಆಗಾಗ್ಗೆ ನೆನಪಾಗಿ, ಆಗಿನ ನನ್ನ ಎಳೆಯ ಮನಸ್ಸಿನ ಅಪಕ್ವ, ಬಾಲಿಶ ಯೋಚನೆಗಳು, ನಾನೇ ಕಟ್ಟಿಕೊಂಡ ವಿಚಿತ್ರವಾದ ಮಾನ ಅವಮಾನಗಳ ಕಲ್ಪನೆಯಿಂದಾಗಿ, ಅಜ್ಜನ ಪ್ರೀತಿಯ ಆಳ ಅರಿಯದೇ ಅವರ ಮೇಲೆ ಸಿಟ್ಟಾದದ್ದು, ಜೋರು ಮಾಡಿದ್ದು ಎಲ್ಲಾ ನೆನಪಾಗಿ ಪಶ್ಚಾತ್ತಾಪದಿಂದ, ಕಂಗಳು ಪ್ರತೀ ಸಾರಿಯೂ ಹನಿದಿವೆ, ಗಂಟಲು ಕಟ್ಟಿದೆ.

ಆ ಮುಗ್ಧ, ನಿರ್ವ್ಯಾಜ ಪ್ರೀತಿಯ ಮುಂದೆ ಬೇರೆ ಯಾವುದಕ್ಕೇನು ಬೆಲೆ? ಯಾವುದು ಮಾನ, ಯಾವುದು ಅವಮಾನ ? ಈಗಂತೂ ಜೀವನದ ಗಾಲಿ ಉರುಳುತ್ತಿದ್ದಂತೆ, ಮನಸ್ಸು ಇನ್ನೂ ಹೆಚ್ಚು ಸೂಕ್ಷ್ಮಸಂವೇದಿಯಾಗುತ್ತಾ, ಆ ಘಟನೆಯ ನೆನಪು ನನ್ನನ್ನು ತೀವ್ರವಾಗಿ ತಟ್ಟುತ್ತದೆ, ನೋಯಿಸುತ್ತದೆ. ಒಮ್ಮೆಯಾದರೂ ಅಜ್ಜನಿಗೆ Sorry ಕೂಡಾ ಹೇಳಲಿಲ್ಲವಲ್ಲಾ...........ಈಗ, ಇದನ್ನು ಬರೆಯುವಾಗಲೂ, ಕಣ್ಣು ಮಂಜಾಗುತ್ತಿವೆ, ಇನ್ನು ಬರೆಯಲಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more