ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟೆಕ್ ಯುಗದಲ್ಲಿ ಗಂಡನ ಪೂಜೆ ಹೇಗಿರುತ್ತೇ ಗೊತ್ತಾ?

By Staff
|
Google Oneindia Kannada News


ಆಷಾಢ ಮಾಸ ಮುಗಿದು ಶ್ರಾವಣ ಶುರುವಾಯಿತೆಂದರೆ ಎಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾದಂತೆ. ಆಷಾಢದ ಗಾಳಿಗೆ, ಎಡಬಿಡದೆ ಸುರಿವ ಮುಂಗಾರು ಮಳೆಗೆ ಮೈಯೊಡ್ಡಿ ಮನತಣಿಸಿಕೊಂಡ ನೀರೆ ಶ್ರಾವಣದ ಸಂಭ್ರಮಕ್ಕೆ ಕಾಯುತ್ತಿರುತ್ತಾಳೆ.



Do Indian women know the meaning of festival celebrations?ಆಷಾಢ ಮಾಸ ಮುಗಿಯುತ್ತಿದ್ದಂತೆ ಹಬ್ಬಗಳು ಸಾಲು ಸಾಲಿಗೆ ನಿಮ್ಮ ಮುಂದೆ ನಿಲ್ಲುತ್ತದೆ. ಆಷಾಡದ ಕೊನೆ ದಿನವಾದ ಅಮಾವಾಸ್ಯೆಯಂದು ಹೆಂಗಳೆಯರು ಭಕ್ತಿ ಭಾವದಿಂದ ಶಿವನನ್ನು ಪೂಜಿಸುವ ದಿನವೇ "ಭೀಮನ ಅಮಾವಾಸ್ಯೆ".

ಆದರೆ ಈ ಹೈಟೆಕ್ ಯುಗದಲ್ಲಿ ಭೀಮನ ಅಮಾವಾಸ್ಯೆ , ಗಂಡನ ಪೂಜೆ ಎಂದರೆ ಮೂಗು ಮುರಿಯುವುದು ಖಂಡಿತ..ಯಾಕೆ ಹೀಗೆ ಆಮೇಲೆ ನೋಡೋಣ.

ಹಬ್ಬದ ಆಚರಣೆ:

ಸಾಮಾನ್ಯವಾಗಿ ಈ ಹಬ್ಬವನ್ನು ಭಾರತದೆಲ್ಲೆಡೆ ಮದುವೆಯಾದ ಗೃಹಿಣಿ, ಮದುವೆಯಾಗದ ತರುಣಿಯಿಂದ ಹಿಡಿದು, ಪುಟ್ಟ ಬಾಲಕಿಯರೂ ಆಚರಿಸುವುದುಂಟು.ಅಮಾವಾಸ್ಯೆಯ ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಗೃಹಿಣಿಯರು ಉಪವಾಸ ಮಾಡುತ್ತಾರೆ. ಗಂಡ(ಪತಿ ಪರಮೇಶ್ವರ)ನ ಆಯುಷ್ಯ ಹೆಚ್ಚಾಗಲಿ ಎಂದು ಪರಮಶಿವನನ್ನು ಭಕ್ತಿಯಿಂದ? ಪೂಜಿಸುತ್ತಾರೆ. ಶಿವನನ್ನು ಜ್ಯೋತಿ ಸ್ವರೂಪದಲ್ಲಿ ಕಾಣುವ ಗೃಹಿಣಿಯರು ಜ್ಯೋತಿರ್‌ ಭೀಮೇಶ್ವರ ವ್ರತವನ್ನು ಈ ದಿನ ಕೈಗೊಳ್ಳುತ್ತಾರೆ.ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ, ಜ್ಯೋತಿ ಸ್ತಂಭ ವ್ರತ ಎಂದು ಕೆಲವು ಕಡೆ ಕರೆಯುವುದಂಟು.

ವಿವಿಧ ಬಗೆಯ ರಂಜಿತ ಹಬ್ಬ:

ಕರಾವಳಿಯಲ್ಲಿ ಆಷಾಢದ ಅಮಾವಸ್ಯೆಯ ದಿನವನ್ನು ಆಟಿ ಅಮಾವಸ್ಯೆ ಅಥವಾ ಅಳಿಯನ ಅಮವಾಸ್ಯೆಎಂದು ಕರೆಯುವುದುಂಟು. ಈ ದಿನ ಮಲೆನಾಡಿನ ಜಿಲ್ಲೆಗಳ ಅಳಿಯಂದಿರಿಗೆ ಶುಭಕಾಲ. ಮಾವನ ಮನೆಗೆ ಅಳಿಯ ಈದಿನ ಬರಿಗೈಯಲ್ಲಿ ಎಂಟ್ರಿ ಕೊಟ್ಟು ಮಾರನೇ ದಿನದ ಪಾಡ್ಯದ ಹಬ್ಬದೂಟ ಹೊಡೆದು ರಾಶಿಗಟ್ಟಲೆ ಉಡುಗೊರೆಯನ್ನು ಹೊತ್ತೊಯ್ಯುತ್ತಾನೆ. ಬಹುಶಃ ದೀಪಾವಳಿಗೆ ಉಡುಗೊರೆ ಹೇಗೆ ಪಡೆಯೋದು ಅನ್ನೊದಕ್ಕೆ ಇದು ರಿಹರ್ಸಲ್ ಎನ್ನಬಹುದು.

ಇನ್ನೂ ಕೆಲ ಕಡೆ ಇನ್ನೊಂದು ಬಗೆಯಲ್ಲಿ ಆಚರಣೆ ಮಾಡುವುದನ್ನು ಕಂಡಿದ್ದೇನೆ. ಈದಿನ ಮದುವೆಯಾಗದ ಕನ್ಯೆಯರು ಜ್ಯೋತಿ ಸ್ವರೂಪನಾದ ಶಿವನನ್ನು ಪೂಜಿಸಿ, ಒಳ್ಳೆ ಗಂಡನನ್ನು ಕೊಡಪ್ಪ ಎಂದು ಕೇಳಿಕೊಳ್ಳುತ್ತಾರೆ. ಇದರ ಜೊತೆಗೆ ಒಡಹುಟ್ಟಿದ ಸೋದರರ ಬೆನ್ನು ಮೂಳೆ ಮುರಿಯುತ್ತಾರೆ?! ಛೇ! ಎಲ್ಲಿಯಾದರೂ ಉಂಟೇ ಅನ್ನಬೇಡಿ. ಈ ಹಬ್ಬ ಆಚರಿಸಿದವರಿಗೆ ಗೊತ್ತು.

ಮನೆಯ ಹೊಸ್ತಿಲ ಮೇಲೆ ಹಿಟ್ಟಿನಿಂದ (ಯಾವ ಹಿಟ್ಟೋ ಅಮ್ಮನಿಗೆ ಗೊತ್ತು) ಬಿಲ್ಲೆಯಾಕಾರ ಆಕೃತಿಯನ್ನು ಮಾಡಿ ಇಡಲಾಗುತ್ತದೆ. ಇದಕ್ಕೆ "ಭಂಡಾರ ಎಂದು ಹೆಸರಂತೆ. ಮನೆಯ ಮುಖ್ಯ ದ್ವಾರದ ಹೊಸ್ತಿಲ ಮೂರು ಕಡೆ ಇಟ್ಟಂತಹ ಈ ಭಂಡಾರವನ್ನು ನೆಲಕ್ಕೂರಿ ಅಣ್ಣಂದಿರು/ತಮ್ಮಂದಿರು ತಮ್ಮ ಮೊಣಕೈಯಿಂದ ಹೊಡೆಯಬೇಕು. ಅವರು ಹೊಡೆಯುವಷ್ಟರಲ್ಲಿ ಆತನ ಅಕ್ಕ/ತಂಗಿ ಅವನ ಬೆನ್ನ ಮೇಲೆ ತನ್ನ ಮನಸೋ ಇಚ್ಛೆ ಗುದ್ದಬೇಕು. ಯಾಕೋ ಗುದ್ದಬೇಕು ಆ ಶಿವನೇ ಬಲ್ಲ. ಮೂರು ಕಡೆ ಇಟ್ಟ ಭಂಡಾರದಲ್ಲಿ ಒಂದರಲ್ಲಿ ಮಾತ್ರ ನಿಮಗೆ ನಿಧಿ ಸಿಗುತ್ತದೆ. ನಿಧಿಯಂದರೆ 1,2 ಅಬ್ಬಬ್ಬಾ ಅಂದರೆ 5 ರು ನಾಣ್ಯ ಅಷ್ಟೆ. ಹೀಗೆ ಭಂಡಾರ ಹೊಡೆದ ಮೇಲೆ ಅಣ್ಣಂದಿರಿಗೆ ತಂಗಿಯರು ದಕ್ಷಿಣೆ ಕೊಟ್ಟು, ನಮಸ್ಕಾರ ಮಾಡಿ( ಕಾಲಿಗೆ ಬಿದ್ದು) ಆಶೀರ್ವಾದ ಬೇಡುತ್ತಾರೆ. ಈ ರೀತಿಯ ಆಚರಣೆಗೆ ನಾನು ಒಳಗಾಗಿ ಸುಮಾರು ವರ್ಷದಿಂದ ಭಂಡಾರ ಹೊಡೆಯುತ್ತಾ ಬಂದಿದ್ದೀನಿ ಆದರೆ ದಕ್ಕಿದ್ದು ಮಾತ್ರ ಕಮ್ಮಿ ಅನ್ನಿ. ಮುಂದಿನ ಕಲೆಕ್ಷನ್ ಗಾಗಿ ನಾಗರ ಪಂಚಮಿ ದಿನದವರೆಗೂ ಕಾಯಬೇಕು.

ಈ ರೀತಿ ವರ್ಷಕ್ಕೆ ಎರಡು ಬಾರಿ ತಂಗಿಯರಿಂದ ಹಣ ವಸೂಲಿ ಪಡೆದ ಅಣ್ಣಂದಿರು, ಆಮೇಲೆ ಬಡ್ಡಿ ಸಮೇತ ಗೌರಿ ಹಬ್ಬದಂದು ತಂಗಿಯರಿಗೆ ವಾಪಾಸ್ ಕೊಡೊದು ಇದ್ದದ್ದೇ. ಈಗ ಈ ಲಿಸ್ಟ್ ಗೆ ಹೊಸದಾಗಿ ರಾಖಿ ಹಬ್ಬ ಬೇರೆ ಸೇರಿದೆ.

ಆಚರಣೆ ಪುರಾಣ:

ನಾನು ಇಲ್ಲಿ ಭೀಮನ ಅಮಾವಾಸ್ಯೆ ವ್ರತಕಥೆಯ ಪುರಾಣ ಹೇಳಲು ಹೊರಟಿಲ್ಲ. ಕಥೆ ಬೇಕಾದರೆ ವ್ರತಕಥಾ ಮಾಲೆ ಪುಸ್ತಕದಲ್ಲಿ ದೊರೆಯುತ್ತದೆ. ಒಂದಾನೊಂದು ಕಾಲದಲ್ಲಿ ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳು, ಸೂತಮಹಾಮುನಿಗಳ ಬಳಿ ಬಂದು .. .. . .ಎಂದು ಶುರುವಾಗುತ್ತೆ ಬಿಡಿ.

ಹಬ್ಬದ ಹಿನ್ನೆಲೆ ಏನೇ ಇರಲಿ, ನಾವು ಆಚರಿಸುವ ವಿಧಾನ ಮುಖ್ಯ ಅನ್ನೋದು ನನ್ನ ವಾದ.ಹಬ್ಬದ ಕುರುಡು ಆಚರಣೆಗಿಂತ ಅದರಹಿಂದಿನ ಮಹತ್ವ, ಆಶಯವನ್ನು ಅರಿಯುವುದು ಮುಖ್ಯ ಎನಿಸುತ್ತ್ತದೆ. ಆ... ಈಗ ಬರುತ್ತೀನಿ ಮುಂಚೆ ಹೇಳಿದ ಮಾತಿಗೆ ಹೈಟೆಕ್ ಯುಗದ ಗಂಡನ ಪೂಜೆ ಬಗ್ಗೆ..

ಮಹಿಳಾ ಸಮಾನತೆ ಬಗ್ಗೆ ಮಾತಾಡೊ ಹೆಂಗಳೆಯರು ಈ ದಿನವನ್ನು ಹೇಗೆ ಆಚರಿಸುತ್ತಾರೆ ಅನ್ನೋದು ನನ್ನ ಕುತೂಹಲ. ಅದು ಗಂಡನ ಪ್ರತ್ಯಕ್ಷ ದೇವರು ಎಂದು ತಿಳಿದು, ಅವನ ಪಾದಕ್ಕೆ ನಮಿಸಿ, ಭಕ್ತಿ ಭಾವದಿಂದ ಅವನನ್ನು ಪೂಜಿಸಬೇಕಾದ ಈ ದಿನ, ನಿಜಕ್ಕೂ ಪ್ರಸ್ತುತವೇ ಎಂಬುದು ಕೆಲವರ ವಾದ.ಇವರಲ್ಲಿ ಕೆಲವರಿಗೆ ಈ ಹಬ್ಬ ,ಅದರ ಆಚರಣೆ, ಮಹತ್ವ, ಸಂಭ್ರಮದ ಬಗ್ಗೆ ತಿಳಿದೆ ಇರೋಲ್ಲ ಅನ್ನೊದು ಬೇರೆ ಮಾತು. ತಿಳಿದವರು ತಿಳಿಯದವರಿಗೆ ಹೇಳೊಕ್ಕೆ ಹೋಗಿಲ್ಲ, ತಿಳಿಯದವರು ತಿಳಿದವರ ಕೇಳೋ ಗೋಜಿಗೆ ಹೋಗಲ್ಲ. ಅಜ್ಜಿ ಹೇಳಿದ ಆಚರಣೆಯ ವಿಧಾನವೇ ಸರಿ ಎಂದು ನಂಬಿ ಆಚರಿಸುವವರು ಹಲವು ಮಂದಿ.

ಪುರಾಣವ ನಂಬುವ ಜನರಿಗೆ ಅಷ್ಟಕ್ಕೂ " ಪುರಾಣ"ಎಂಬ ಶಬ್ದಕ್ಕೆ ಅರ್ಥನಾದರೂ ಗೊತ್ತೋ ಇಲ್ವೋ ಗೊತ್ತಿಲ್ಲ. ಪುರಾಣ ಎಂದರೆ ಹಳೆ ಕಂದಾಚಾರ ಅಲ್ಲ . "ಪುರಾ ನವ ಇತಿ ಪುರಾಣ "ಎಂದು ಪುರಾಣವನ್ನು ಬಿಡಿಸಿದರೆ ಸಿಗುವ ಅರ್ಥ. ಪುರದಲ್ಲಿ ಯಾವುದು ಹೊಸ ಆಯಾಮವನ್ನು, ಹೊಸತನವನ್ನು ನೀಡುವುದೋ ಅದುವೇ ಪುರಾಣ ಎನ್ನುತ್ತದೆ ಈ ವಾಕ್ಯ. ಆದರೆ ಹೊಸತನಕ್ಕೆ ಎಲ್ಲಿದೆ ಇಲ್ಲಿ ಆಸ್ಪದ. ಎಲ್ಲಾ ಕಾಲನ ಹಿಂದೆ ಓಡುವ ಮಹಿಳಾಮಣಿಗಳು ಹಳೆ ವಿಚಾರಗಳನ್ನು ಖಂಡಿಸುವುದರ ಬದಲು ಹೊಸ ವಿಧಾನವ ಅಳವಡಿಕೆಯ ಪ್ರಯತ್ನಕ್ಕೆ ತೊಡಗಿದರೆ ಸಾರ್ಥಕ ಅನ್ನಿಸುತ್ತದೆ.

ಹಬ್ಬ ಆಚರಣೆ ಮಾಡೋದು ಸಂತೋಷಕ್ಕೆ, ಪರಸ್ಪರ ಸಮರ್ಪಣಾ ಭಾವ ಇದ್ದಾಗ ಮಾತ್ರ ಇದು ಸಾಧ್ಯ.. ಪ್ರೀತಿ, ವಿಶ್ವಾಸ, ಭಾಂದವ್ಯ, ಬೆಸುಗೆಯ ಗಟ್ಟಿಗೊಳಿಸುವುದಕ್ಕೆ ಹಬ್ಬಗಳು ಪೂರಕ. ಕಾಟಚಾರಕ್ಕೆ ದೇವಸ್ಥಾನಕ್ಕೆ ಹೋಗಿ, ಗಂಡನ ಕಾಲಿಗೆರಗಿ, ಹಬ್ಬದೂಟ ಮಾಡಿ, ಮಾರನೇ ದಿನ ಎಲ್ಲವನ್ನು ಮರೆತು, ಗಂಡನ ಜತೆ ಜಗಳಕ್ಕೆ ಇಳಿಯೋ ಭಾರತೀಯರಲ್ಲಿ ,ಹಬ್ಬಗಳು ಹೀಗೆ ಬಂದು ಹಾಗೆ ಹೋಗೋ ಫಿಲ್ಮಂ ಟ್ರೇಲರ್ ತರಾ ಆಗಿಹೋಗಿದೆ.

ಯಾರದೋ ಒತ್ತಾಯಕ್ಕೆ ಮಣಿದು, ಇಷ್ಟವಿಲ್ಲದ ಆಚರಣೆಯಲ್ಲಿ ತೊಡಗುವುದರ ಬದಲು, ಪ್ರತಿ ದಿನ ಹಬ್ಬವನ್ನು ಆಚರಿಸುವ ಸಂಕಲ್ಪ ಮಾಡಿಕೊಂಡರೆ, ಮನಸ್ಸಿಗೆ ಒಪ್ಪುವ ಹಾಗೆ ಜೀವನ ಸಾಫಲ್ಯ ಕಾಣಲು ಸಾಧ್ಯ. . ಆದರೆ ಒಂದು ದಿನದ ಸುಖಕ್ಕಾಗಿ (ಆಚರಣೆ) ಹಲವು ದಿನಗಳ ಬಲಿಕೊಡುವ ನಮ್ಮ ಜನರ ಪರಿಯ ಏನೆಂಥು ಬಲ್ಲಿಸಲಿ.

ಹ್ಞು.. .. ಹಬ್ಬಗಳ ಸಾಲು ಸಾಲು ಬರುತ್ತಿದೆ ಸ್ವಾಗತಿಸಲು ಕಾಯುತ್ತಿರಿ.ಇಲ್ಲಾ ಹಬ್ಬದ ಹಿನ್ನೆಲೆ ಹುಡುಕುತ್ತಾ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X