ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟಗಾರ ನಾರಾಯಣಗೌಡರ ಬಿಚ್ಚುಮಾತುಗಳು(ಭಾಗ-3)‘ಇವರೆಲ್ಲರೂ ಯಾವ ಸೀಮೆ ಜ್ಞಾನಪೀಠಿಗಳು?’

By Staff
|
Google Oneindia Kannada News


‘ನಾ ಕಂಡ ಕರ್ನಾಟಕ ಅಸ್ತಿತ್ವಕ್ಕೆ ಬರಬೇಕು. ಸಕಲವೂ ಕನ್ನಡ ಮಯವಾಗಬೇಕು. ಈ ಹೋರಾಟದಲ್ಲಿ ನಾನು ಹುತಾತ್ಮನಾದರೂ ಚಿಂತೆಯಿಲ್ಲ. ಇದೇ ನನ್ನ ಆಸೆ’ ಎನ್ನುವ ನಾರಾಯಗೌಡರ ಬಗ್ಗೆ ಇನ್ನಷ್ಟು... ಇದು ಕಡೆಯ ಕಂತು. ಈ ಸರಣಿ ಬಗ್ಗೆ ಓದುಗರು ಅಭಿಪ್ರಾಯ ಬರೆಯಬಹುದು.

Karnataka Rakshana Vedikes President T A Narayanagowdaಬೆಂಗಳೂರು ಇಂದು ಏನಾಗಿದೆ ನೋಡಿ. ಅದು ತೋಟದಪ್ಪನ ಛತ್ರವಾಗಿದೆ. ಇನ್ನು ನಮ್ಮ ಜ್ಞಾನಪೀಠಿಗಳ ವರ್ತನೆ ದೇವರಿಗೆ ಪ್ರೀತಿ. ಅವರು ನಾಡಿಗೆ ಭಾರವಾಗುತ್ತಿದ್ದಾರೆ.

ಮೋರೆಗೆ ಮಸಿ ಬಳಿದ ಪ್ರಕರಣದ ಹಿನ್ನೆಲೆ ಅಂದು ಅನಂತಮೂರ್ತಿ ಅವರು, ‘ಮಹಾರಾಷ್ಟ್ರದವರಿಗೆ ಹೇಗೆ ಮುಖತೋರಿಸಲಿ’ ಎಂದಿದ್ದರು. ಮೊನ್ನೆ ಕಾವೇರಿ ನ್ಯಾಯಮಂಡಳಿ ತೀರ್ಪು ಸಮರ್ಥಿಸಿ, ಇನ್ನೊಬ್ಬ ಜ್ಞಾನಪೀಠಿ ಗಿರೀಶ್‌ ಕಾರ್ನಾಡ್‌, ತಾವೆಂತವರು ಎಂಬುದನ್ನು ತೋರಿಸಿದ್ದಾರೆ.

ಹುತಾತ್ಮನಾಗುವ ಬಯಕೆ..

ಕನ್ನಡ ಚಳವಳಿಗಿಳಿದ ದಿನವೇ, ನಾನು ನನ್ನ ವೈಯಕ್ತಿಕ ಬದುಕಿನ ಮೇಲಿನ ಮೋಹವ ತ್ಯಜಿಸಿಬಿಟ್ಟೆ. ಪುಣ್ಯಕ್ಕೆ ನನ್ನ ಹೆಂಡತಿ ವಿಶಾಲಾಕ್ಷಿಯೂ ಹೋರಾಟಕ್ಕೆ ಸ್ಫೂರ್ತಿ ನೀಡುತ್ತಿದ್ದಾಳೆ. ಮದುವೆಯಾಗಿ 12ವರ್ಷಗಳಾಗಿವೆ. ಒಂದೆರಡು ಸಲ ಸಿನಿಮಾಕ್ಕೆ ಹೋಗಿರಬಹುದು ಅಷ್ಟೆ. ರಾತ್ರಿ 1ಕ್ಕೆ ಮನೆಗೆ ಹೋದರೆ, ಬೆಳಗ್ಗೆ 5ಕ್ಕೆ ಮನೆ ಬಿಡುತ್ತೇನೆ. ನನ್ನ ದಿನಚರಿಗೆ ಮನೆಯವರು ಹೊಂದಿಕೊಂಡಿದ್ದಾರೆ.

‘ನಿಮಗೆ ಏನ್‌ ಆಸೆಯಿದೆ?’ ಎಂದು ನನ್ನ ಹೆಂಡತಿ ಒಂದು ಸಲ ಕೇಳಿದಳು. ‘ನಾ ಕಂಡ ಕರ್ನಾಟಕ ಅಸ್ತಿತ್ವಕ್ಕೆ ಬರಬೇಕು. ಸಕಲವೂ ಕನ್ನಡ ಮಯವಾಗಬೇಕು. ಈ ಹೋರಾಟದಲ್ಲಿ ನಾನು ಹುತಾತ್ಮನಾದರೂ ಚಿಂತೆಯಿಲ್ಲ. ಇದೇ ನನ್ನ ಆಸೆ’ ಎಂದೆ. ‘ಅಂತಹ ಘಟನೆ ಎದುರಿಸಲು, ನೀನು ಮಾನಸಿಕವಾಗಿ ಸಿದ್ಧವಾಗಿರು’ ಎಂದು ವಿಶಾಲಾಕ್ಷಿಗೆ ಸೂಚನೆ ನೀಡಿದ್ದೇನೆ.

ನನಗೆ ರಾಜಕೀಯ ಒಲವಿಲ್ಲ .. ಆದರೆ..

ಹೈಕಮಾಂಡ್‌ಗಳು ರಾಜ್ಯಕ್ಕೆ ಅನ್ಯಾಯ ಮಾಡಿವೆ. ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಕಾವೇರಿ ವಿವಾದದ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಸಮರ್ಥ ಪ್ರಾದೇಶಿಕ ಪಕ್ಷವನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಈಗಿನ ಕಾವೇರಿ ವಿಚಾರ, ಪ್ರಾದೇಶಿಕ ಪಕ್ಷ ಸಂಘಟನೆಗೆ ಸುಸಂದರ್ಭ. ನಾಡಿನ ಪ್ರಜ್ಞಾವಂತರು ಇತ್ತ ಗಮನಹರಿಸಬೇಕು. ರಾಜಕೀಯದಿಂದ ದೂರ ಉಳಿದು, ರಕ್ಷಣಾ ವೇದಿಕೆ ದುಡಿಯುತ್ತಿದೆ. ಇಲ್ಲಿ ವೇದಿಕೆ ಸದಸ್ಯರ ನಿರ್ಧಾರವೇ ಅಂತಿಮ.

ಡೆಲ್ಲಿ ದೊರೆಗಳಿಗೆ ಎಚ್ಚರಿಕೆ..

ಎಲ್ಲರೂ ಕೈಕಟ್ಟಿ ಕೂತರೂ ನಾವು ಸುಮ್ಮನಿರುವುದಿಲ್ಲ. ನಾಡಿನ ರೈತರಿಗೆ ನ್ಯಾಯ ಸಿಕ್ಕುವ ತನಕ ಹೋರಾಟ ನಿರಂತರ. ಮೊನ್ನೆ ಸಾವಿರಾರು ಜನರನ್ನು ಸಂಘಟಿಸಿ ನವದೆಹಲಿಯಲ್ಲಿ ರ್ಯಾಲಿ ನಡೆಸಿ, ಡೆಲ್ಲಿ ದೊರೆಗಳಿಗೆ ಎಚ್ಚರಿಕೆ ರೂಪದ ಮನವಿಯನ್ನು ಸಲ್ಲಿಸಿದ್ದೇವೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಡೆಲ್ಲಿ ದೊರೆಗಳು ಮೌನ ಮುಂದುವರೆಸಿದರೆ, ಹೋರಾಟ ಉಗ್ರ ರೂಪ ಪಡೆಯುತ್ತದೆ. ನಾವು ಕರ್ನಾಟಕವನ್ನು ಒಂದು ರಾಷ್ಟ್ರವೆನ್ನಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ. ನೋಡೋಣ. ಆ ಪರಿಸ್ಥಿತಿ ಬಾರದಿರಲಿ.

ಮಂತ್ರಕ್ಕೆ ಮಾವಿನ ಕಾಯಿ ಉದುರೋದಿಲ್ಲ...

ಬೆಳಗಾವಿ ಮೇಯರ್‌ಗೆ ಮಸಿ ಬಳಿದ ಪ್ರಕರಣವನ್ನು ಕೆಲವರು ಟೀಕಿಸಿದ್ದಾರೆ. ಆದರೆ ಏನ್‌ ಮಾಡೋದು ಮಂತ್ರಕ್ಕೆ ಮಾವಿನ ಕಾಯಿ ಉದುರೋದಿಲ್ಲ. ಯಾವ ಯಾವ ದೇವರಿಗೆ ಯಾವ್ಯಾವುದರಲ್ಲಿ ಪೂಜೆ ಮಾಡಿದ್ರೆ ವರ ಕೊಡ್ತಾನೋ ಅದೇ ರೀತಿ ಪೂಜೆ ಮಾಡಬೇಕು. ಅದು ಅನಿವಾರ್ಯ.

ಮೋರೆಗೆ ನಾವು ಹಿಂದೆ ಬಿಡಿಸಿಬಿಡಿಸಿ ಹೇಳಿದ್ದೆವು. ಅವರು ಮಾತು ಕೇಳಲಿಲ್ಲ. ನಮಗೆ ಬೇರೆ ದಾರಿ ಇರಲಿಲ್ಲ. ಅದೇ ರೀತಿ ಕೆಜಿಎಫ್‌ ಮಾಜಿ ಶಾಸಕ ಭಕ್ತವತ್ಸಲಂ ಹಿಂದೆ, ಕನ್ನಡವನ್ನು ಅಸಡ್ಡೆ ಮಾಡಿದ್ದರು. ನಾವು ಅವರ ಮೇಲೆ ಹಲ್ಲೆ ನಡೆಸಿದೆವೆಂದು ನಮ್ಮ ಮೇಲೆ ಕೇಸ್‌ ಹಾಕಿದ್ದರು. ಕೊನೆಗೆ ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡರು.

ಈಗ ಎಲ್ಲವೂ ತಿಳಿಯಾಗಿ, ಭಕ್ತವತ್ಸಲಂ ಕನ್ನಡ ಕಲಿತಿದ್ದಾನೆ. ಕನ್ನಡ ಶಾಲೆ ಕಟ್ಟಿಸಿದ್ದಾರೆ. ಇಷ್ಟು ಸಾಕಲ್ಲಾ..

ನಾರಾಯಣಗೌಡ ಹೇಳಿದ್ದು :

  • ಮೊನ್ನೆ 1602 ನೈರುತ್ಯ ವಲಯ ನೌಕರರ ನೇಮಕವಾಯಿತು. ಎಲ್ಲರೂ ಬಿಹಾರಿಗಳೇ. ಒಬ್ಬರೂ ಕನ್ನಡಿಗರಿಲ್ಲ.. ಎಂಥಾ ಮೋಸ...
  • ವಲಸೆ ತಡೆಯಲು ಬೆಂಗಳೂರಿಗೆ ಕಾಂಪೌಂಡ್‌ ಹಾಕಬೇಕು.
  • ಚಿನ್ನದಂಥ ಹೆಂಡತಿ ಮನೆಯಲ್ಲಿ ಇದ್ದರೂ... ಕೋತಿಯಂಥಾ ಸೂಳೆ ಮೇಲೆ ಕೆಲವರಿಗೆ ಕಣ್ಣು. ನಮ್ಮ ಕನ್ನಡಿಗರಿಗೆ ಭಾಷಾಭಿಮಾನ ಕಡಿಮೆ.
  • ಭಾಷೆ ಸತ್ತರೆ ನಾವು ಸಾಯುತ್ತೇವೆ. ಕನ್ನಡ ಕುಲ ಉಳಿಯಬೇಕು..
  • ಮೊದಲು ಮನೆ ಮಗನಾಗ ಬೇಕು. ಆದರೆ ಎಲ್ಲರಿಗೂ ಮೊದಲೇ ವಿಶ್ವಮಾನವರಾಗುವ ಬಯಕೆ. ಅದು ಸಾಧ್ಯವಾ? ಸಾಧುವಾ?
  • ಕನ್ನಡ ಚಳವಳಿ ಬಗ್ಗೆ ಖುಷಿ ಪಡುವ ಜೊತೆಗೆ, ಒಂದು ಕೈ ಸೇರಿಸಬೇಕು.
ಹೋರಾಟಗಾರ ನಾರಾಯಣಗೌಡರ ಬಿಚ್ಚುಮಾತುಗಳು(ಭಾಗ-2)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X