‘ ಕನ್ನಡಿಗರಿಗೆ ಧೈರ್ಯಾನೆ ಇಲ್ಲ ಕಣ್ರಿ’ -ಸಿದ್ಧಲಿಂಗಯ್ಯ


ಬಾವಿ ಕಪ್ಪೆಗಳಾದ ಕನ್ನಡಿಗರು :

ಕನ್ನಡಿಗರು ಮನೆಯಲ್ಲಿ ಕೂತಿದ್ದರಿಂದಲೇ ಅವರಲ್ಲಿ ಕನ್ನಡ ಪ್ರಜ್ಞೆ ಮೊಳೆಯಲಿಲ್ಲ ಎನ್ನುತ್ತಾರೆ ಸಿದ್ಧಲಿಂಗಯ್ಯ. ತಮಿಳರನ್ನ ನೋಡಿ, ಮಲಯಾಳಿಗರನ್ನ ನೋಡಿ, ಬದುಕಲಿಕ್ಕೆ ಎಲ್ಲಿಗೆ ಹೋಗಲೂ ಸೈ. ಆದರೇಕೋ ಕನ್ನಡಿಗರು ಮಾತ್ರ ಮೊದಲಿನಿಂದ ಮನೆಯಲ್ಲಿಯೇ ಉಳಿದರು. ಬೇರೆ ಕಡೆ ವಲಸೆ ಹೋದಾಗ ಭಾಷೆಯ ಬಗೆಗೆ ತುಡಿತ ಹುಟ್ಟಲಿಕ್ಕೆ ಸಾಧ್ಯ. ಆದರೆ, ಕನ್ನಡಿಗರಿಗೆ ಯಾವತ್ತೂ ಅಭದ್ರತೆಯ ಭಾವನೆ ಬರಲೇ ಇಲ್ಲ . ಸ್ವಲ್ಪ ಮಟ್ಟಿಗೆ ಬೆಂಗಳೂರಿನ ಕನ್ನಡಿಗರಿಗೆ ತಮ್ಮ ಸುರಕ್ಷತೆಯ ಬಗ್ಗೆ ಆತಂಕವಿದೆ. ಆದರೆ, ಇವರು ಹೋರಾಟದ ಜನ ಅಲ್ಲ ಎನ್ನುವುದು ಸಿದ್ಧಲಿಂಗಯ್ಯನವರ ನಿಲುವು.

ಹೊರಗೆಲ್ಲೂ ಹೋಗದ ಕನ್ನಡಿಗರು, ಪರಭಾಷಿಗರನ್ನು ಸ್ವಾಗತಿಸುವಲ್ಲಿ ಮಾತ್ರ ಔದಾರ್ಯ ತೋರಿದರು. ವಲಸೆ ಬಂದವರಿಗೆ ಇಲ್ಲಿನ ನೆಲ, ಜಲ ಬಳಸಿಕೊಳ್ಳಲಿಕ್ಕೆ ಅವಕಾಶ ನೀಡಿದರು. ಅವರ ಭಾಷೆಯ ಬೆಳವಣಿಗೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯವನ್ನೂ ಮಾಡಿದರು. ತಾವಾಗಿಯೇ ತಮಿಳು ಕಲಿತರು. ಬಾಗುಂಡಾರಾ ಎಂದು ತೆಲುಗರ ಉಭಯ ಕುಶಲೋಪರಿ ವಿಚಾರಿಸಿದರು, ಮಲಯಾಳಿಗಳಿಗೇಕೆ ಬೇಜಾರು ಎಂದು ಮಲಯಾಳಂನಲ್ಲಿ ಕೂಡ ತೊದಲತೊಡಗಿದರು. ಈ ನಡುವೆ ತಮಿಳು- ತೆಲುಗು- ಮಲಯಾಳಿಗಳು ಅವರಾಗಿಯೇ ಉಳಿದರು. ಕರ್ನಾಟಕದಲ್ಲಿದ್ದೂ ಕನ್ನಡ ಅವರಿಗೆ ಅನಗತ್ಯವಾಯಿತು. ಕನ್ನಡಿಗ ತಮಿಳು ಕಲಿಯುವ ಮೂಲಕ ತಮಿಳರೊಂದಿಗೆ ವ್ಯವಹರಿಸಲು ಕಲಿತದ್ದರಿಂದ, ತಮಿಳನಿಗೆ ಕನ್ನಡ ಕಲಿಯುವ ಅವಶ್ಯಕತೆಯೂ ಬೀಳಲಿಲ್ಲ . ಅವನಿಗೆ ಕನ್ನಡ ಕಲಿಸಬೇಕೆಂದು ಕನ್ನಡಿಗನಿಗೂ ಅನ್ನಿಸಲಿಲ್ಲ . ಪಾಪ, ಅವನಿಗೆ ತಾನೆ ಕಸ್ತೂರಿ ಕನ್ನಡ ಪೂರ್ತಿಯಾಗಿ ಎಲ್ಲಿ ಗೊತ್ತು ? ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳೆಷ್ಟು ಎಂದು ತಪ್ಪಿಲ್ಲದೇ ಎಷ್ಟು ಜನ ಹೇಳಬಲ್ಲರು?

ಸಿದ್ಧಲಿಂಗಯ್ಯ ಹೇಳುವುದು ಇದನ್ನೇ. ಭಾಷೆಯ ಬಗ್ಗೆ ತುಡಿತ ಇಲ್ಲದಿದ್ದರೆ ಇಂಥ ಅಪಾಯಗಳು ಸಂಭವಿಸುತ್ತವೆ. ಬೆಂಗಳೂರಲ್ಲೇ ಚಿಕ್ಕ ಚಿಕ್ಕ ತಮಿಳು, ಮಲಯಾಳಿ ದ್ವೀಪಗಳು ರೂಪುಗೊಳ್ಳುತ್ತವೆ. ಅಲ್ಪ ಸಂಖ್ಯಾಕರಿಗೆ ಅವರವರ ಭಾಷೆಗಳನ್ನು ಕಲಿಸಲು ಸರ್ಕಾರ ವ್ಯವಸ್ಥೆ ಮಾಡುತ್ತದೆ. ಕನ್ನಡ ಕಡೆಗಣನೆಗೆ ಒಳಗಾಗುತ್ತದೆ!

ಕನ್ನಡಕ್ಕಾಗಿ ಕೈ ಎತ್ತುವವರು ಯಾರು ? :

ಯಾರೂ ಇಲ್ಲ ಎನ್ನುತ್ತಾರೆ ಸಿದ್ಧಲಿಂಗಯ್ಯ. ಹೋರಾಟ ಮಾಡುವ ಜನರಾದರೂ ಎಂಥವರು? ಸಿದ್ಧಲಿಂಗಯ್ಯನವರ ಪ್ರಕಾರ- ರೈತರು, ಗ್ರಾಮೀಣರು, ಕಾರ್ಮಿಕರು ಹೋರಾಟ ಮಾಡುವ ತಾಕತ್ತುಳ್ಳವರು. ಆದರೆ, ಗ್ರಾಮೀಣರಿಗೆ ಹಾಗೂ ರೈತರಿಗೆ ಭಾಷೆಯ ಆತಂಕ ತಟ್ಟಿಲ್ಲ . ಆದ್ದರಿಂದ ಅವರು ಹೋರಾಟ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ . ಇನ್ನು ಕಾರ್ಮಿಕರು ಹೋರಾಟ ಮಾಡುತ್ತಾರೆಂದರೆ- ಬೆಂಗಳೂರಿನಲ್ಲಿರುವ ಬಹುತೇಕ ಕಾರ್ಮಿಕರು ತಮಿಳರು, ಮಲಯಾಳಿಗಳು. ಕನ್ನಡಕ್ಕಾಗಿ ಕೈ ಎತ್ತಲು ಒಬ್ಬರೂ ಉಳಿದಿಲ್ಲ .

ಕನ್ನಡ ಕುರಿತು ಆಗಾಗ ಧ್ವನಿ ಎತ್ತಲು ಉಳಿದಿರುವವರೆಂದರೆ ಸಾಹಿತಿಗಳು. ಅವರಲ್ಲಿ ಸರ್ಕಾರಿ ಸಾಹಿತಿಗಳು ಎನ್ನುವ ಉಪ ಪಂಗಡವೂ ಇದೆ. ಯಾವುದಾದರೂ ಅಕಾಡೆಮಿಗೆ ಅಧ್ಯಕ್ಷರೋ ಸದಸ್ಯರೋ ಆಗುವವರೆಗೆ ಅವರ ಹೋರಾಟ ಪ್ರಖರವಾಗಿರುತ್ತದೆ. ಆನಂತರ ಹೋರಾಟ ಕೈಬಿಟ್ಟು , ಆಡಳಿತದ ಮೂಲಕ ಯಾರಿಗೂ ಬೇಜಾರಾಗದಂತೆ ಕನ್ನಡ ಕಟ್ಟುವ ಕೆಲಸ ಮಾಡುತ್ತಾರೆ!

ಸಾಹಿತಿಗಳದು ಸಾಂಕೇತಿಕ ಪ್ರತಿಭಟನೆ, ಅವರ ಪ್ರತಿಭಟನೆ ಜನತೆಗೆ ನಗೆಪಾಟಲಿನ ವಸ್ತುವಾಗಿದೆ. ಸರ್ಕಾರ ಕೂಡ ಈ ಪ್ರತಿಭಟನೆಯನ್ನು ಲಘುವಾಗಿ ಪರಿಗಣಿಸಿದೆ ಎನ್ನುತ್ತಾರೆ ಸಿದ್ಧಲಿಂಗಯ್ಯ. ಈ ಕುರಿತು ಇತ್ತೀಚಿನ ಇಂಗ್ಲೀಷ್‌ ಶಾಲೆಗಳ ವಿರುದ್ಧದ ಪ್ರತಿಭಟನೆಯನ್ನು ಉದಾಹರಣೆಯಾಗಿ ನೀಡುವ ಅವರು,- ಸರ್ಕಾರದ ವಿರುದ್ಧ ಸೊಲ್ಲೆತ್ತಿದ ಸಾಹಿತಿಗಳನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿದ ಸಚಿವರು, ಸಾಹಿತಿಗಳನ್ನು ಬ್ಲಾಕ್‌ಮೇಲ್‌ ಮಾಡಲು ತೊಡಗಿದರು. ಯಾವ ಸಾಹಿತಿಯ ಮಕ್ಕಳು, ಮೊಮ್ಮಕ್ಕಳು ಇಂಗ್ಲೀಷ್‌ ಶಾಲೆಗಳಲ್ಲಿ ಓದುತ್ತಿದ್ದಾರೆ ಎನ್ನುವ ವರದಿ ಸಚಿವರ ಕೈ ಸೇರಿದ್ದೇ ತಡ, ಪ್ರತಿಭಟನೆ ತಣ್ಣಗಾಯಿತು ಎನ್ನುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+