ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ಕನ್ನಡಿಗರಿಗೆ ಧೈರ್ಯಾನೆ ಇಲ್ಲ ಕಣ್ರಿ’ -ಸಿದ್ಧಲಿಂಗಯ್ಯ

By Staff
|
Google Oneindia Kannada News


ಕೊಳಗೇರಿಯಿಂದ ವಿಧನಸೌಧದವರೆಗೆ ಬೆಳೆದುಬಂದ ದಲಿತ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಲಿಂಗಯ್ಯ ಅವರದು ಕನ್ನಡದ ವಿಶಿಷ್ಟ ದನಿ. ಕನ್ನಡದ ವರ್ತಮಾನ ಹಾಗೂ ಭವಿಷ್ಯಗಳ ಕುರಿತು ಅವರೇನು ಹೇಳು-ತ್ತಾರೆ? ಚಿಂತನ ಲಹರಿಯಿದು.. ಹಂಚಿಕೊಳ್ಳಿ..

‘ಕನ್ನಡಕ್ಕಾಗಿ ಸತ್ತ ಆ ತಮಿಳನ ಹೆಸರು ಗೋವಿಂದರಾಜು!

ಆ ಘಟನೆ ನಡೆದಿದ್ದು ಹೀಗೆ- 1969ನೇ ಇಸವಿ, ಬೆಂಗಳೂರು. ಮಹಾಜನ್‌ ವರದಿ ಅನುಷ್ಠಾನಕ್ಕಾಗಿ ಚಳವಳಿ ಜೋರಿನಲ್ಲಿ ನಡೆಯುತ್ತಿತ್ತು . ಕೆಲವು ಕನ್ನಡ ಚಳವಳಿಕಾರರು ಬೆಳಗಾವಿಗೆ ಹೋಗುವ ರೈಲನ್ನು ತಡೆಯಲು ನಿಶ್ಚಯಿಸಿ, ಸ್ವತಂತ್ರಪಾಳ್ಯದ ಬಳಿ ರೈಲ್ವೆ ಹಳಿಯ ಮೇಲೆ ಮಲಗಿದರು. ದುರಾದೃಷ್ಟವಶಾತ್‌ ರೈಲೂ ಬಂತು. ರೈಲು ಹತ್ತಿರ ಹತ್ತಿರವಾದಂತೆ- ಮೊದಲಿಗೆ ಚಳವಳಿಯ ನೇತೃತ್ವ ವಹಿಸಿದ್ದ ನಾಯಕ, ಆಮೇಲೆ ಒಬ್ಬೊಬ್ಬರಾಗಿ ಹಿಂಬಾಲಕರು ಓಡಿದರು. ಕೊನೆಗೆ ಕನ್ನಡಕ್ಕಾಗಿ ಸತ್ತವನು ಒಬ್ಬ. ಆತ ತಮಿಳಿಗ, ಗೋವಿಂದರಾಜು ಎಂದು ಹೆಸರು. ಕನ್ನಡ ಹೋರಾಟಗಾರರ ಜೊತೆ ಸೇರಿ ಚಳವಳಿಗಿಳಿದಿದ್ದ. ಒಂದು ವೇಳೆ ಅವನೂ ಕನ್ನಡಿಗನಾಗಿದ್ದರೆ ಓಡಿಹೋಗಿರುತ್ತಿದ್ದ !’

ಕನ್ನಡ ಚಳವಳಿ ಎತ್ತ ಸಾಗಿದೆ? ಅದು ನಿಂತಿರುವುದೆಲ್ಲಿ? ಕರ್ನಾಟಕದಲ್ಲಿ ಕನ್ನಡದ ಅನುಷ್ಠಾನ ಹಾಗೂ ಕನ್ನಡದ ಸ್ಥಿತಿಗತಿ- ವಿಷಯಗಳ ಕುರಿತು ಪ್ರಸ್ತಾಪಿಸಿದಾಗ ದಲಿತ ಕವಿ ಸಿದ್ಧಲಿಂಗಯ್ಯ ಮಾತು ಶುರು ಹಚ್ಚಿಕೊಂಡಿದ್ದೇ ಈ ಪ್ರಸಂಗವನ್ನು ನೆನಪಿಸಿಕೊಳ್ಳುವುದರ ಮೂಲಕ.

ಕನ್ನಡಿಗರಿಗೆ ಧೈರ್ಯಾನೆ ಇಲ್ಲ ಕಣ್ರಿ. ಅದನ್ನ ಹೇಡಿತನ ಅನ್ನೋಕಾಗೊಲ್ಲ ; ಒಂಥರಾ ಸಂಕೋಚ ಪ್ರವೃತ್ತಿ. ಈ ಸಂಕೋಚ ಪ್ರವೃತ್ತಿಯೇ ಭಯವಾಗಿ ಬದಲಾಗುತ್ತದೆ. ಕನ್ನಡದ ಹಿತಕ್ಕೆ ಮುಳುವಾಗುತ್ತೆ. ಜೊತೆಗೆ ಕನ್ನಡಿಗರಲ್ಲಿ ಅವಕಾಶವಾದಿತನವೂ ಇದೆ. ಅವರಿಗೆ ಹುಮ್ಮಸ್ಸೇ ಇಲ್ಲ. ಬೋಳೇತನ, ಉಡಾಫೆಯ ಮನೋಭಾವ. ಮನೋಧರ್ಮ ಹೀಗಿರುವಾಗ ಕನ್ನಡ ಬೆಳೆಯುವುದಾದರೂ ಹೇಗೆ?

ಹಾಗೆ ನೋಡಿದರೆ, ಕನ್ನಡ ಕನ್ನಡಿಗರ ಆದ್ಯತೆಯ ವಿಷಯವೇ ಅಲ್ಲ. ಕನ್ನಡಿಗರನ್ನು ಒಟ್ಟುಗೂಡಿಸುವ ಶಕ್ತಿಯಾಗಿಯೂ ಕನ್ನಡ ಬೆಳೆದಿಲ್ಲ. ಇಲ್ಲಿ ಜಾತಿ ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ದಲಿತರು ಅನ್ನಿ - ದಲಿತರೆಲ್ಲಾ ಒಟ್ಟುಗೂಡುತ್ತಾರೆ, ಒಕ್ಕಲಿಗರೆನ್ನಿ - ಒಕ್ಕಲಿಗರೆಲ್ಲಾ ಒಗ್ಗಟ್ಟಾಗುತ್ತಾರೆ, ಕನ್ನಡಿಗರೆನ್ನಿ - ಅಲ್ಲಿ ಯಾರೂ ಇರುವುದಿಲ್ಲ. ನಮ್ಮ ದುರಂತವೇ ಇದು. ಆದರೆ, ನೆರೆಯ ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲಿ ಈ ಪರಿಸ್ಥಿತಿಯಿಲ್ಲ . ಅಲ್ಲಿ ಭಾಷೆ ಅವರ ಬದುಕಿನ ಅವಿಭಾಜ್ಯ ಅಂಗ.

ತಮಿಳುನಾಡನ್ನು ನೋಡಿ : ಭಾಷೆಗಾಗಿ ಅಲ್ಲಿ ಬೆಂಕಿ ಹಚ್ಚಿಕೊಳ್ಳುತ್ತಾರೆ. ಬಲಿದಾನ ಮಾಡಿ ಭಾಷೆ ಉಳಿಸಿಕೊಂಡಿದಾರೆ. ತಮಿಳರ ಮನೆಗಳಿಗೆ ಹೋದರೆ, ಅಂಗಳದ ತುಂಬಾ ದೊಡ್ಡ ಫೋಟೋಗಳು. ಇವರು ಇಂಥ ಸಂದರ್ಭದಲ್ಲಿ ಬೆಂಕಿ ಹಚ್ಚಿಕೊಂಡು ಸತ್ತರು, ಇವರು ಈ ಕಾರಣಕ್ಕಾಗಿ ಆತ್ಮಾರ್ಪಣೆ ಮಾಡಿಕೊಂಡರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಪಾನ್‌ ಬಿಟ್ಟರೆ ತಮಿಳ್ನಾಡಲ್ಲೇ ಹರಾಕಿರಿ ಹೆಚ್ಚು.

ಭಾಷೆಗಾಗಿ ಕನ್ನಡಿಗರು ಸಾಯಬೇಕು ಅಂತ ಅರ್ಥವಲ್ಲ. ಆದರೆ, ಅವರಿಗೆ ಭಾಷೆಯ ಬಗ್ಗೆ ‘ಅರ್ಜ್‌’ ಇಲ್ಲ. ತುಡಿತ ಇಲ್ಲದಿದ್ದಲ್ಲಿ ಭಾಷೆ ಬಾಳುವುದಾದರೂ ಹೇಗೆ? ಕನ್ನಡಿಗರ ಮನೋಧರ್ಮದಲ್ಲೇ ಕುಂದಿದೆ ಅನ್ಸುತ್ತೆ. ಒಂಥರಾ ವಿಚಿತ್ರ ಪರಿಸ್ಥಿತಿಯಲ್ಲಿ ಕನ್ನಡಿಗರು ಬದುಕುತ್ತಿದ್ದಾರೆ.

ಕನ್ನಡದ ಇವತ್ತಿನ ಪರಿಸ್ಥಿತಿಯನ್ನು ಸಿದ್ಧಲಿಂಗಯ್ಯ ಎದುರಿಗಿಟ್ಟಿದ್ದು ಹೀಗೆ. ದೀರ್ಘ ಕಾಲ ವಿಧಾನ ಪರಿಷತ್ತಿನ ಸದಸ್ಯರಾಗಿ ಸರ್ಕಾರಕ್ಕೆ ಕನ್ನಡದ ಅಂಕುಶವಾಗಿ ಕಾಡುತ್ತಿದ್ದ, ಸದನದಲ್ಲಿ ಕನ್ನಡ ಪ್ರಜ್ಞೆಯಾಗಿದ್ದ ಸಿದ್ಧಲಿಂಗಯ್ಯನವರಿಗೀಗ ಕನ್ನಡ ಅಭಿ-ವೃದ್ಧಿ ಪ್ರಾಧಿ-ಕಾ-ರದ ಅಧ್ಯ-ಕ್ಷ. ಆದರೆ ಅವರು ಸರ-ಕಾರಿ ಕುರ್ಚಿ-ಯಲ್ಲಿ ಕುಳಿತು ಕನ್ನಡ ಮರೆ-ತ-ವ-ರಲ್ಲ. ಅವರ ಹೋರಾಟದ ಬದುಕು ಚೌಕಟ್ಟಿನಲ್ಲಿ ಕೂರುವಂಥದ್ದೂ ಅಲ್ಲ. ಯಾವುದೇ ಮುಲಾಜಿಲ್ಲದೆ ಮಾತನಾಡಬಲ್ಲ ಸಿದ್ಧಲಿಂಗಯ್ಯ ಸಿಲಿಕಾನ್‌ ವ್ಯಾಲಿಯ ಕನ್ನಡ ದಾಸಯ್ಯ! ಖಡಕ್ಕು ಸಿದ್ಧಲಿಂಗಯ್ಯ ಅವರ ಮಾತುಗಳು ಕೇವಲ ಶಬ್ದಗಳಲ್ಲ ; ಮನಸಿಟ್ಟು ನೋಡಿ, ಪ್ರತಿ ಮಾತಿನಲ್ಲೂ ಕನ್ನಡದ ಕಳಕಳಿ ಕಾಣುತ್ತದೆ. ಸಿದ್ಧಲಿಂಗಯ್ಯನವರ ಶಕ್ತಿಯೇ ಅದು- ಪ್ರಾಮಾಣಿಕತೆ! ತೋರಿಕೆ ನಡವಳಿಕೆ ಅವರಿಗೆ ಒಗ್ಗದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X