ಹೊಸ ಕೇಸುಗಳ ಉಡುಗೊರೆ ನೀಡಿದ್ದಾರೆ..!’
ನನ್ನ ಇಬ್ಬರು ಮಕ್ಕಳು ಹುಟ್ಟಿದಾಗಲೂ ಜೈಲಿನಲ್ಲಿದ್ದೆ. ಈ ಜೈಲು, ಪೊಲೀಸರಿಂದ ನನ್ನ ಕನ್ನಡ ಪ್ರೀತಿ ಕರಗಿಸಲು ಅಸಾಧ್ಯ. ನಿಮಗೆ ಗೊತ್ತೇ? ಈ ನಾರಾಣಗೌಡನಿಗೆ ಬಾಡಿಗೆ ಮನೆ ಸಿಗಲಿಲ್ಲಾ...? ಅಂದಿನ ಕಾವೇರಿ ಹೋರಾಟದ ಸಂದರ್ಭದಲ್ಲಿ ನನ್ನ ಮುಗಿಸುವ ಯತ್ನ ನಡೆದಿತ್ತು. ಅಂದು ನಾನು ಜೈಲಿನಲ್ಲಿದ್ದಾಗ, ಜಾಣಗೆರೆ ಗೋವಾ ಪ್ರವಾಸದಲ್ಲಿದ್ದರು!
ನನ್ನ ವಿರುದ್ಧ 43ಕೇಸುಗಳಿವೆ. ಯಾವುದೂ ನನ್ನ ವೈಯಕ್ತಿಕ ಕೇಸುಗಳಲ್ಲ. ಎಲ್ಲವೂ ಕನ್ನಡ ಚಳವಳಿಯ ಕೇಸುಗಳೇ. ಪ್ರತಿದಿನ ಕೋರ್ಟ್‌ಗೆ ಹೋಗಬೇಕು. ಇದರಲ್ಲಿಯೇ ಸಮಯ ವ್ಯಯವಾಗುತ್ತಿದೆ. ಆದರೆ ವಿಧಿಯಿಲ್ಲ. ಧರ್ಮಸಿಂಗ್ ಸರ್ಕಾರ, ಕೆಲ ಕೇಸುಗಳ ಹಿಂದಕ್ಕೆ ಪಡೆದಿತ್ತು. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಹೊಸ ಕೇಸುಗಳ ಉಡುಗೊರೆ ನೀಡಿದ್ದಾರೆ! ನಾವು ಇದಕ್ಕೆಲ್ಲ ಜಗ್ಗುವುದಿಲ್ಲ.
ವಿವಿಧ ಚಳವಳಿಗಳಲ್ಲಿ ಬಂಧಿಸಿ ನನ್ನನ್ನು ಕರೆದೊಯ್ದ ಪೊಲೀಸರು ಬಟ್ಟೆ ಬಿಚ್ಚಿಸಿದರು, ಕೈಗೆ ಸ್ಲೇಟ್ ಕೊಟ್ಟರು. ಇದೆಲ್ಲ ಯಾಕೆ? ನಾನೇನು ಕೊಲೆ ಮಾಡಿಲ್ಲ... ಕದ್ದಿಲ್ಲ... ಆದರೂ ಯಾಕೆ ಶಿಕ್ಷೆ? ಹೋರಾಟ ಮುಳ್ಳಿನ ಹಾಸಿಗೆ ಅನ್ನೋದು ನನಗೆ ಗೊತ್ತಿದೆ.
ನಮ್ಮವರು ನಾಲಯಕ್ಕು ನಾಯಕರು!
ಕನ್ನಡ ನಾಯಕರ ಬಗ್ಗೆ ನನ್ನ ನಂಬಿಕೆ ಕಳೆದುಹೋಗಿದೆ. ‘ಬೆಳಗ್ಗೆ ಹೋರಾಟ, ಸಂಜೆ ಅಡ್‌ಸಸ್ಟ್‌ಮೆಂಟ್' ಅನ್ನುವ ಪದ್ಧತಿ ಅವರದು. ನಮ್ಮ ನಡುವಿನ ಖ್ಯಾತ ನಾಯಕರು ಮಾಡುತ್ತಾ ಬಂದಿರುವುದು ಇಂತಹ ಹೋರಾಟವನ್ನೇ.. ಸಾ.ರಾ.ಗೋವಿಂದ್, ವಾಟಾಳ್ ನಾಗರಾಜ್, ನಾರಾಯಣ್ ಕುಮಾರ್ ಮತ್ತಿತರ ಕನ್ನಡ ಕಲಿ(?)ಗಳ ಹೋರಾಟ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತು. ನಾನಿಲ್ಲಿ ಪ್ರತ್ಯೇಕವಾಗಿ ಹೇಳುವುದು ಬೇಕಿಲ್ಲ.
ನಮ್ಮ ನಾಯಕರ ಹೋರಾಟದಲ್ಲಿ ಗಟ್ಟಿತನವಿಲ್ಲ. ಮುಖ್ಯಮಂತ್ರಿಗಳ ಜೊತೆ ರಾಜಿಗೆ ಹಿಂದೆ ಮುಂದೆ ನೋಡೋದಿಲ್ಲ. ವಿಷಯ ಎತ್ತಿಕೊಂಡರೆ ಫಲ ಸಿಗುವ ತನಕ ಹೋರಾಡಿದ ನಿದರ್ಶನಗಳಿಲ್ಲ. ಕಾರ್ಯಕರ್ತ ಜೈಲಿಗೆ ಹೋದರೆ ಬಿಡಿಸಿ ತರಲಿಲ್ಲ. ಇಂತಹ ನಾಯಕರನ್ನು ನೆಚ್ಚಿಕೊಂಡ ಚಳವಳಿ ಫಲ ನೀಡಲು ಹೇಗೆ ಸಾಧ್ಯ? ಇವರನ್ನೆಲ್ಲ ನೋಡಿ ನಾನು ಬದಲಾದೆ. ನಿಜವಾದ ನಾಯಕನಾಗಲು ಪಣ ತೊಟ್ಟೆ.
ಚಳವಳಿ ದಿಕ್ಕು ತಪ್ಪಿದೆ..
ನಾಡಿನಲ್ಲಿ ಎಷ್ಟೊಂದು ಚಳವಳಿ ನಡೆದಿವೆ. ಆದರೆ ಗಂಭೀರ ಬದಲಾವಣೆಗಳು ಮಾತ್ರ ಸಾಧ್ಯವಾಗಿಲ್ಲ. ಇದ್ದುದ್ದರಲ್ಲಿ, ರೈತ ಚಳವಳಿ ಫಲಕಾರಿ. ಅನಕೃ ನಂತರ ಚಳವಳಿ ಕೇವಲ ಹಾರಾಟವಾಗಿದೆ. 40ವರ್ಷದ ಹೋರಾಟದ ಫಲ ನನಗಂತೂ ತಿಳಿಯುತ್ತಿಲ್ಲ. ಗುರಿ ಮತ್ತು ಗುರು ಇಲ್ಲದ ಸ್ಥಿತಿ ನಮ್ಮ ಮುಂದಿದೆ.
ಅಂದು ಕನ್ನಡ ಹುಡುಗರು ಕಂಗಾಲು...
ನಮ್ಮಲ್ಲಿ ಬಲಿಷ್ಠ ಕನ್ನಡ ಹುಡುಗರಿದ್ದರು. ನಾಯಕರಿರಲಿಲ್ಲ. ಕೆಂಪಾಪುರ ಅಗ್ರಹಾರದ ಹುಡುಗರ ನಿಷ್ಠೆ ದೊಡ್ಡದು. ರಣಧೀರ ಪಡೆಯ ಆರ್.ಎಸ್.ಎನ್.ಗೌಡ ಗಮನಾರ್ಹ ಕೆಲಸ ಮಾಡಿದವರು. ಕನ್ನಡ ನಾಯಕರು ಸಹಿಸಲಿಲ್ಲ. ಅವರ ಮುಗಿಸಲು ಪ್ರಯತ್ನ ನಡೆಯಿತು. ಕೇಸಿನಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅಲ್ಲಿ ತಮಿಳು ರೌಡಿಗಳಿಂದ ಹಲ್ಲೆ ಮಾಡಿಸಲಾಯಿತು. ಕೊನೆಗೆ ಜೈಲಿಂದ ಹೊರಬಂದ ಗೌಡ್ರು, ಹೋರಾಟ ಬಿಟ್ಟರು. ಕುಣಿಗಲ್ ಹಳ್ಳಿಯಲ್ಲಿ ವಾಸ ಮಾಡ್ತಾ ಇದ್ದಾರೆ. ಹೀಗೆ ಕನ್ನಡ ಚಳವಳಿ ಮುಗ್ಗರಿಸಿದೆ.
ಜಾಣಗೆರೆ ಕೋಣ ಆದರು...
ಜಾಣಗೆರೆ ವೆಂಕಟರಾಮಯ್ಯ ಅಷ್ಟೋ ಇಷ್ಟೋ ಪ್ರಾಮಾಣಿಕ ಅನ್ನಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಸಂಘಟನೆ ಆಯಿತು. 1998ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಚಾಲನೆ ಸಿಕ್ಕಿತು. ಅವಿನ್ಯೂ ರಸ್ತೆಯ ಕೃಷ್ಣಯ್ಯ ಶೆಟ್ಟಿ ಪ್ರೌಢಶಾಲೆಯಲ್ಲಿ ಸಭೆ ನಡೆಯಿತು. ನಗರಾಧ್ಯಕ್ಷರಾಗಿ ನಾನು, ರಾಜ್ಯಾಧ್ಯಕ್ಷರಾಗಿ ಜಾಣಗೆರೆ ಆಯ್ಕೆಯಾದರು. ರಾಜ್ಯ ವಿಧಾನಸಭೆಯಲ್ಲಿ ಶಾಖೆಗಳು ಆರಂಭಗೊಂಡವು.
ಆದರೆ ನಂತರ ಜಾಣಗೆರೆ, ನಮ್ಮೆಲ್ಲರ ನಂಬಿಕೆಗೆ ಮೋಸ ಮಾಡಿದರು. ವ್ಯತಿರಿಕ್ತ ದಾರಿಯಲ್ಲಿ ನಡೆದರು.
ಮಾರ್ವಾಡಿಗಳು ಬೆಂಗಳೂರಿನಿಂದ ಜೈಪುರಕ್ಕೆ ರೈಲು ಬೇಕೆಂದು ಹೋರಾಟ ಮಾಡಿದರು. ಕನ್ನಡ ಹೋರಾಟಗಾರರು ಖಂಡಿಸಲಿಲ್ಲ. ಆದರೆ ನನ್ನ ನಾಯಕತ್ವದಲ್ಲಿ ವಿರೋಧ ವ್ಯಕ್ತವಾಯಿತು. ನಾವು ಚಿಕ್ಕಪೇಟೆ ಬಂದ್ ಮಾಡಿಸಿದೆವು. ಜಾಣಗೆರೆ ಬಗ್ಗೆ ನಮ್ಮ ನಂಬಿಕೆ ಕಡಿಮೆಯಾಗುತ್ತಾ ಬಂತು.. ಕೊನೆಗೆ ಅವರ ಸಖ್ಯ ಬಿಟ್ಟು ಹೊರಬಂದೆವು.
ಚಳವಳಿ ಪರ್ವ
ಆಲಮಟ್ಟಿ,, ಒಂದಂಕಿ ಲಾಟರಿ, ರಾಜ್ ಅಪಹರಣ, ಚಿತ್ರಾವತಿ ಅಣೆಕಟ್ಟು, ನೈರುತ್ಯ ರೈಲ್ವೆ, ನೆಡುಮಾರನ್, ಪಾಲಿಕೆಯ ಕನ್ನಡ ವಿರೋಧಿ ನೀತಿ -ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಹತ್ತಾರು ಚಳವಳಿಗಳು, ಹೋರಾಟಗಳು ನಡೆದವು. ಇಲ್ಲಿ ವೇದಿಕೆ ಜನಪರ ಸಂಘಟನೆಯಾಗಿ ಗುರ್ತಿಸಿಕೊಂಡಿತು.
ಮುಖ್ಯಮಂತ್ರಿ ಅಥವಾ ಸಚಿವರ ಆಮಿಷಕ್ಕೆ ಬಗ್ಗೋದಿಲ್ಲ...
ನನಗೆ ಕನ್ನಡವಷ್ಟೇ ಮುಖ್ಯ. ಯಾರ ಆಮಿಷಕ್ಕೂ ಬಡ್ಗಿೋದಿಲ್ಲ. ಕಾವೇರಿ ವಿವಾದದ ಸಂದರ್ಭದಲ್ಲಿ 3ತಿಂಗಳು ತಮಿಳು ಸಿನಿಮಾ ಮತ್ತು ಚಾನೆಲ್ ನಿಲ್ಲಿಸಿದ್ದೆವು. ಆ ಸಂದರ್ಭದಲ್ಲಿ ಒಂದು ದಿನ ರಾತ್ರಿ 11ರವೇಳೆಯಲ್ಲಿ ಪೋನ್ ಬಂತು.
ಆ ಕಡೆಯಿಂದ ಸಚಿವರೊಬ್ಬರ ಹೆಸರೇಳಿ, ನನ್ನೊಂದಿಗೆ ಸಂಭಾಷಣೆ ಶುರು ಮಾಡಿದರು. ಬಿಡಿಎ ಸೈಟು, ಮನೆಕಟ್ಟಿಕೊಳ್ಳಲು ದುಡ್ಡು ಕೊಡುವ ಆಮಿಷವೊಡ್ಡಿದರು. ಚಳವಳಿ ಬಿಡಿ ಎಂಬ ಉಪದೇಶವೂ ಇತ್ತು. ನಾನು ಪೋನ್ ಕಟ್ ಮಾಡಿದೆ.
ರಾತ್ರಿ 12ಕ್ಕೆ ಇನ್ನೊಂದು ಸಲ ಫೋನ್ ರಿಂಗ್ ಆಯಿತು. ಆ ಕಡೆಯಿಂದ ನನ್ನನ್ನು ಜೈಲಿಗೆ ಕಳಿಸುವ ಬೆದರಿಕೆ ಬಂತು. ಆಮೇಲೆ ಜೈಲಿಗೆ ಸಹಾ ಕಳಿಸಿದರು. 22ದಿವಸ ಬೆಂಗಳೂರು ಜೈಲಲ್ಲಿದ್ದೆ. ನಂತರ 12ದಿವಸ ಬಳ್ಳಾರಿ ಜೈಲು ನೋಡಿದೆ. ಇವ್ಯಾವುವೂ ನನ್ನ ಉತ್ಸಾಹವನ್ನು ಕುಗ್ಗಿಸಲಿಲ್ಲ.
ಮಕ್ಕಳು ಹುಟ್ಟಿದಾಗ ಜೈಲಿನಲ್ಲಿದ್ದೆ..
ನನ್ನ ಇಬ್ಬರು ಮಕ್ಕಳು ಹುಟ್ಟಿದಾಗಲೂ ಜೈಲಿನಲ್ಲಿದ್ದೆ. ಈ ಜೈಲು, ಪೊಲೀಸರಿಂದ ನನ್ನ ಕನ್ನಡ ಪ್ರೀತಿ ಕರಗಿಸಲು ಅಸಾಧ್ಯ. ಅಂದಿನ ಕಾವೇರಿ ಹೋರಾಟದ ಸಂದರ್ಭದಲ್ಲಿ ನನ್ನ ಮುಗಿಸುವ ಯತ್ನ ನಡೆಯುತ್ತಿತ್ತು. ನಾನು ಜೈಲಿನಲ್ಲಿದ್ದಾಗ, ಜಾಣಗೆರೆ ಗೋವಾ ಪ್ರವಾಸದಲ್ಲಿದ್ದರು!
ನನ್ನನ್ನು ರೌಡಿಗಳ ಸೆಲ್‌ಗೆ ಹಾಕಿದರು. ಬಾತ್ ರೂ ಕ್ಲೀನ್ ಮಾಡಲು ಹೇಳುತ್ತಿದ್ದರು. ಗೇಲಿ ಮಾಡುತ್ತಿದ್ದರು. ಇಕ್ಕಟ್ಟಿನ ಜಾಗವದು. ಟವಲ್ ಹಾಸಿಕೊಂಡು ಮಲಗಿದ್ದೆ. ನಿದ್ದೆ ಬರಲಿಲ್ಲ. ನನಗೆ ಹಸಿವು ಬೇರೆ ಜಾಸ್ತಿ. ಬೆಳಗ್ಗೆ 7ಗಂಟೆಗೆ 4ಸ್ಪೂನ್ ಉಪ್ಪಿಟ್ಟು ಕೊಟ್ಟರು. ನನಗೆ ತಿನ್ನಲು ಮನಸ್ಸಾಗಲಿಲ್ಲ.. ಇಷ್ಟಕ್ಕೂ ನಾನು ಮಾಡಿದ ತಪ್ಪೇನು? ಕನ್ನಡಕ್ಕೆಕೈಎತ್ತಿದ್ದೇ ತಪ್ಪೇ.. ?
ನನ್ಗೆ ಬಾಡಿಗೆ ಮನೆ ಸಿಗಲಿಲ್ಲ..
ನನಗೀಗ 40ವರ್ಷ. ಆರ್‌ಪಿಸಿ ಲೇಔಟ್‌ನಲ್ಲಿ ವಾಸವಿದ್ದೇನೆ. ಫುಲ್ ಟೈಮ್ ಚಳವಳಿ ಮಾಡ್ತಾಯಿದ್ದೀನಿ. ನನ್ನಂಥವನಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗಲಿಲ್ಲ. ಮನೆ ಕೊಡಲು ಹಿಂದೆಮುಂದೆ ನೋಡ್ತಾರೆ. ಕೊನೆಗೆ ನನಗೆ ಮನೆಕೊಟ್ಟವರು ಮರಾಠಿಗರು! ಅವರು ನನ್ನ ಅಭಿಮಾನಿಗಳಂತೆ.
ಹಿಂದಿನ ನಾರಾಯಣಗೌಡ ಬೇರೆ ಥರಾ ಇದ್ದ...
ರಾಜಿ-ರಾಜಕೀಯ ಇಲ್ಲದೇ ಬದುಕುವುದು ನನ್ನ ಶೈಲಿ. ಮೊದಲು ನನ್ನ ಮೈಮೇಲೆ ಅರ್ಧ ಕೇಜಿ ಬಂಗಾರ ಇತ್ತು. ಕೈತುಂಬ ಹಣ ಇತ್ತು. 4-5ಲಕ್ಷ ತಿಂಗಳಿಗೆ ಸಂಪಾದನೆ ಇತ್ತು. 6ತಿಂಗಳಿಗೊಂದು ಕಾರು ಬದಲಿಸುತ್ತಿದ್ದೆ. ರಕ್ಷಣಾ ವೇದಿಕೆಗೆ ಬಂದ ಮೇಲೆ ಎಲ್ಲವನ್ನೂ ಕಳೆದುಕೊಂಡೆ. ನನಗೀಗ ಕನ್ನಡವೇ ಆಸ್ತಿ. ನಾನು ಎಂದೂ ಯಾರನ್ನು ಕೇಳಿದವನಲ್ಲ. ಕಾರ್ಯಕರ್ತರ ಚೆನ್ನಾಗಿ ನೋಡಿಕೊಂಡೆ. ಅವರ ಮನೆ ಕಷ್ಟದಲ್ಲಿ ಭಾಗಿಯಾದೆ. ಹೀಗಾಗಿ ನನ್ನ ಮೇಲೆ ಕಾರ್ಯಕರ್ತರಿಗೆ ವಿಶ್ವಾಸ. ಪ್ರೀತಿ ಮತ್ತು ಅಭಿಮಾನ.
ನಾವು ಚಂದ ಕೇಳೋಲ್ಲ..
ವೇದಿಕೆ ಸದಸ್ಯರ ವಾರ್ಷಿಕ ಸದಸ್ಯತ್ವ 25ರೂಪಾಯಿ. ಈ ರೂಪದಲ್ಲಿ ತಿಂಗಳಿಗೆ 1ಲಕ್ಷ ಹಣ ಬರುತ್ತೆ. ದಿನಾ 500ರಿಂದ 1000ಜನ ಸದಸ್ಯತ್ವಕ್ಕೆ ಮುಂದೆ ಬರುತ್ತಿದ್ದಾರೆ. ಅವರ ಹಿನ್ನೆಲೆ ನೋಡಿ ಸದಸ್ಯತ್ವ ನೀಡುತ್ತಿದ್ದೇವೆ. ರಕ್ಷಣಾ ವೇದಿಕೆಗೆ ರಾಜಕಾರಣಿಗಳಿಗೆ ಪ್ರವೇಶವಿಲ್ಲ.
ರಕ್ಷಣಾ ವೇದಿಕೆ 3684ಶಾಖೆಗಳನ್ನು ಹೊಂದಿದ್ದು, 4.60ಲಕ್ಷ ಕಾರ್ಯಕರ್ತರಿದ್ದಾರೆ. 28ಜಿಲ್ಲೆಗಳಲ್ಲೂ ವೇದಿಕೆ ಕ್ರಿಯಾಶೀಲವಾಗಿದೆ. ಪಾಂಡುಪುರದಂತಹ ಒಂದೇ ತಾಲೂಕಲ್ಲಿ 66ಶಾಖೆಗಳನ್ನು ವೇದಿಕೆ ಹೊಂದಿದೆ. ವೇದಿಕೆ ಬೆಳೆದಿದೆ.. ಹೀಗಾಗಿ ನಾಡು-ನುಡಿ ಹೋರಾಟದ ಕೂಗು ಗಟ್ಟಿಯಾಗಿದೆ.