ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣ ಕೆಳ ಜಾತಿಯಲ್ಲಿ ಜನಿಸಿದ್ದರೆ ಅದರಿಂದ ಕೆಡುಕೇನು?

By Staff
|
Google Oneindia Kannada News


Is Kannada Sahitya Parishat is losing its image? ಬೆಂಗಳೂರು: ಡಾ. ಬಂಜಗೆರೆ ಜಯಪ್ರಕಾಶ್‌ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’ ಕುರಿತು ಕನ್ನಡ ಸಾಹಿತ್ಯ ಪರಿಷತ್‌ ಶುಕ್ರವಾರ ಏರ್ಪಡಿಸಿದ್ದ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಹಿತಿಗಳ ಮಾತುಗಳು, ಚರ್ಚೆಯಾಗದೆ ವಿವಾದವಾಗುತ್ತಿದೆ. ಈ ಸಮಾರಂಭದಲ್ಲಿ ವಿ.ಎನ್‌. ಕೇಶವರಾವ್‌, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಬಿ.ಟಿ. ಲಲಿತಾ ನಾಯಕ್‌, ಎಂ.ಎಚ್‌. ಕೃಷ್ಣಯ್ಯ, ಎನ್‌.ವಿ. ನರಸಿಂಹಯ್ಯ, ಆರ್‌. ನಾಗೇಶ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸಾಹಿತ್ಯ ವಲಯದಲ್ಲಿ ಚರ್ಚೆ, ಟೀಕೆ, ಅಪವಾದ ಸಾಮಾನ್ಯವಾದ ಸಂಗತಿ. ಬಂಜಗೆರೆ ಜಯ ಪ್ರಕಾಶ್‌ರವರು ತಮ್ಮ ಕೃತಿಯಲ್ಲಿ ಬರೆದ ಅನುಮಾನಿತ ಸತ್ಯದ ಸಾಲುಗಳು ಈಗ ಕಿಡಿಕಾರುತ್ತಿದೆ. ಆನು ದೇವಾ ಹೊರಗಣವನು’ ಕೃತಿಯನ್ನು ಮುಟ್ಟುಗೋಲು ಹಾಕಬೇಕೆಂದು ಒಂದು ವರ್ಗ, ಬೇಡವೆಂದು ಇನ್ನೊಂದು ವರ್ಗ ಪ್ರತಿಪಾದಿಸುತ್ತಾ ಬಂದಿದೆ.

ಓದುಗರ ಸಮ್ಮುಖಕ್ಕೆ ಸಾಹಿತಿಗಳ ಮಾತುಗಳು:

ಚಂಪಾ: ಚರ್ಚೆ ಮತ್ತು ಚಲನಶೀಲತೆ ಇಲ್ಲದೆ ಕನ್ನಡ ಸಾಹಿತ್ಯ ಕಳೆದ 15 ವರ್ಷದಿಂದ ಜಡವಾಗಿತ್ತು. ಆವರಣ ಅಥವಾ ಆನು ದೇವಾ ಯಾವುದೇ ಆಗಿರಲಿ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ಚರ್ಚೆ ನಡೆಯಬೇಕು. ಆದರೆ ಕೆಲವೊಮ್ಮೆ ಹಿತಾಸಕ್ತಿ ವಲಯಗಳು ಪ್ರಭುತ್ವದ ಮೇಲೆ ಒತ್ತಡ ತಂದು ಬಿಡುತ್ತವೆ.

ಕೇಂದ್ರ ಅಥವಾ ರಾಜ್ಯ ಸರಕಾರ ಸೇರಿದಂತೆ ಯಾವುದೇ ವಲಯದಿಂದ ಇಂಥ ಮೌಲ್ಯಗಳಿಗೆ ದಕ್ಕೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್‌ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ್ದರಿಂದ ಇಲ್ಲಿ ಸಮಕಾಲೀನ ಸಾಹಿತ್ಯದ ಎಲ್ಲ ವಾಹಿನಿಗಳಿಗೂ ಪ್ರಾತಿನಿಧ್ಯ ಕೊಡಲು ಯತ್ನಿಸುತ್ತಿದ್ದೇನೆ.

ಕೆ. ಮರುಳಸಿದ್ದಪ್ಪ :ಆನು ದೇವಾ ಕೃತಿಯ ಸತ್ಯಾಸತ್ಯತೆಯ ಪರಾಮರ್ಶೆಯಾಗಲಿ, ಈ ಬಗ್ಗೆ ಸಂಶೋಧನೆ ನಡೆಯಲಿ. ಯಾವುದೇ ಲೇಖಕ ಅಥವಾ ಕಲಾವಿದ ನಿರ್ದಿಷ್ಟ ಸಮೂಹಕ್ಕೆ ನೋವುಂಟು ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ, ಅವನ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ಅಧಿಕಾರ ಸರಕಾರ ಮತ್ತು ಕಾನೂನಿಗೆ ಸೇರಿದ್ದು ,

‘ಪ್ರಬುದ್ಧ ಸಮಾಜದಲ್ಲಿ ವಾದಕ್ಕೆ ಅವಕಾಶ ಇರುತ್ತದೆ. ಬಂಜಗೆರೆ ಅವರ ತೀರ್ಮಾನದ ಬಗ್ಗೆ ನನಗೆ ಒಪ್ಪಿಗೆ ಇಲ್ಲ.

ಆದರೆ ಅವರ ವಿಚಾರಗಳಲ್ಲಿ ಒಂದು ಗಾಂಭೀರ್ಯತೆ ಇದೆ. ಇಡೀ ಶರಣ ಸಮುದಾಯ ಮತ್ತು ಬಸವಣ್ಣನವರನ್ನು ಗೌರವಿಸುತ್ತಾರೆ. ಅವರು ಬಸವಣ್ಣನ ಹುಟ್ಟಿನ ಬಗ್ಗೆ ಉಹಾತ್ಮಕ ತೀರ್ಮಾನ ಕೊಟ್ಟಿದ್ದಾರೆಯೇ ಹೊರತು ನನ್ನದೇ ಅಂತಿಮ ಎಂದು ಎಲ್ಲಿಯೂ ಹೇಳಿಲ್ಲ. ಕೆಲ ಜನ ಯಾವುದೋ ಸಮು ದಾಯದ ಸ್ವಘೋಷಿತ ನಾಯಕರೆಂದು ಭಾವಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಕೋಟಿ ಜನರ ಪರ ಮಾತನಾಡುವ ಹಕ್ಕಿಲ್ಲ ಎಂದರು

ಬರಗೂರು: ಬಸವಣ್ಣನಂಥ ದೊಡ್ಡವರ ಹೆಸರು ಹೇಳಿಕೊಂಡು ಬದುಕುವವರು ಅವರ ತತ್ತ್ವಕ್ಕೆ ವಿರುದ್ಧವಾದವರು. ಹೀಗೆ ದುಂಡಾವರ್ತನೆ ನಡೆಯುತ್ತ ಹೋದರೆ ಕೋಮು-ಜಾತಿ ಸಂಘರ್ಷ ಆರಂಭವಾಗಿ ಬಸವಣ್ಣನವರಿಗೇ ಅವಮಾನವಾಗುತ್ತದೆ. ಕೃತಿಯಲ್ಲಿ ಲೇಖಕರೇ ತಮ್ಮ ತರ್ಕ ಅನುಮಾನಿತ ಸತ್ಯ ಎಂದು ಹೇಳಿದ್ದಾರೆ. ಒಂದು ವೇಳೆ ಬಸವಣ್ಣ ದಲಿತ ಜಾತಿಗೆ ಸೇರಿದವನೇ ಆದರೆ ಏಕೆ ಆಂತಕ ಪಡಬೇಕು? ಅಂಥ ಜಾತಿಯಲ್ಲಿ ಹುಟ್ಟಿ ದೊಡ್ಡ ಚಳವಳಿಗೆ ಕಾರಣನಾದ ಎಂದು ಸಂತೋಷ ಪಡಬೇಕು.

ಚರ್ಚೆ ಗಂಭಿರವಾಗಿ ನಡೆಯಲಿ ಕೃತಿಯ ಮುಟ್ಟುಗೋಲು ಸೂಕ್ತವಲ್ಲ. ಸಂಶೋಧನೆ ಮೂಲಕ ಚರ್ಚೆಗೆ ಅವಕಾಶ ನೀಡಿದ್ದಾರೆ. ಅದಕ್ಕೆ ಸಂಶೋಧನೆ ಮೂಲಕವೇ ತೀರ್ಮಾನ ಒದಗಿಸಬೇಕು. ಈ ನೆಪದಲ್ಲಿ ಜಾತಿ ಘರ್ಷಣೆ ಸೂಕ್ತವಲ್ಲ. ಪುಸ್ತಕ ವಿಚಾರದಿಂದ ಕೂಡಿದೆಯೇ ವಿನಃ ವಿಕೃತಿಯಿಂದಲ್ಲ.

ಜಿ. ರಾಮಕೃಷ್ಣ : ಯಾರು ಜಾತಿ ನಿರಾಕರಿಸಿ ಮೂಲ ಸಿದ್ಧಾಂತ ಮಾಡಿಕೊಂಡನೋ ಅವರ ಜಾತಿಯ ಕುರಿತು ಚರ್ಚೆ ಆತಂಕಕಾರಿ. ಮಣಿಪುರದ ಹೆಂಗಸರು ಬೆತ್ತಲೆ ಪ್ರತಿಭಟನೆ ನಡೆಸಿದಾಗ ಪ್ರತಿಭಟಿಸದ ನಮ್ಮ ಜನ ಈಗ ಧಂಗೆ ಎದ್ದಿದ್ದಾರೆ ! ಸಂಶೋಧನಾ ಶಿಸ್ತಿನಲ್ಲಿ ಯಾವುದೇ ನ್ಯೂನತೆಗಳಿದ್ದರೆ ಮಾತ್ರ ವ್ಯಾಖ್ಯಾನ ಮಾಡುವುದು ಸೂಕ್ತ.

ಎಲ್‌. ಹನುಮಂತಯ್ಯ : ಕೃತಿಯನ್ನು ವಿರೋಧಿಸುತ್ತಿರುವವರು ಮೊದಲು ಮನೋವಿಕಾರದಿಂದ ಹೊರಬರಬೇಕು. ಮನಃಸ್ಥತಿ ಬದಲಾಗದಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಷ್ಟೇ ವ್ಯಾಖ್ಯಾನಿಸಿದರೂ ಪ್ರಯೋಜನವಿಲ್ಲ. ಡಾ. ಬಂಜಗೆರೆ ಜಯಪ್ರಕಾಶ್‌ ಅವರ ಅನುಮಾನಿತ ಸತ್ಯಗಳು ನಿಜ ಎನ್ನುವುದಕ್ಕೆ ನನ್ನ ಬಳಿ ವಿವರಗಳಿವೆ. ಒಳ್ಳೆಯವರು ಕೆಳ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ ಎನ್ನುವುದು ಸಮಾಜದ ನಂಬಿಕೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X