• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋರಾಟಗಾರ ನಾರಾಯಣಗೌಡರ ಬಿಚ್ಚುಮಾತುಗಳು(ಭಾಗ-1)‘ಕನ್ನಡಕ್ಕೆ ಕೈ ಎತ್ತಿದ್ದಕ್ಕೆ ನನಗೆ ಏನೇನು ಸಿಕ್ಕಿದೆ ಗೊತ್ತಾ?’

By Staff
|

ನಾಡು-ನುಡಿಗೆ ಅಪಮಾನವಾದರೆ, ಕೆರಳಿದ ಸಿಂಹದಂತೆ ಘರ್ಜಿಸುವ ನಾರಾಯಣಗೌಡ, ‘ದಟ್ಸ್‌ ಕನ್ನಡ’ ಜೊತೆ ಮಾತನಾಡುತ್ತಾ, ಅನೇಕ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲವರ ಬಣ್ಣ ಬಯಲು ಮಾಡಿದ್ದಾರೆ. ವಿವರಗಳು ನಿಮ್ಮ ಮುಂದೆ...

KRV President T A Narayanagowda in Thatskannada officeಕನ್ನಡಪರ ಸಂಘಟನೆಗಳು ಜೀವ ಕಳೆದುಕೊಳ್ಳುತ್ತಿವೆ ಎನ್ನುವ ಕೊರಗಿನ ಮಧ್ಯೆಯೇ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಗಮನ ಸೆಳೆಯುತ್ತಿದೆ.

ಅದರಲ್ಲೂ ಕಾವೇರಿ ಚಳವಳಿಯಲ್ಲಿ ರಕ್ಷಣಾ ವೇದಿಕೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಕಾವೇರಿ ನ್ಯಾಯಮಂಡಳಿ ತೀರ್ಪು ಹೊರಬಿದ್ದ ದಿನದಿಂಲೂ ಒಂದಲ್ಲ ಒಂದು ರೀತಿ, ಪ್ರತಿಭಟನೆಯನ್ನು ಜೀವಂತವಾಗಿಟ್ಟಿದೆ. ರೈತ ನಾಯಕರು ಸೇರಿದಂತೆ ಎಲ್ಲರೂ ದಣಿದರೂ ವೇದಿಕೆ ದಣಿದಿಲ್ಲ.

ಹೌದು, ನಾಡಿನ ಉದ್ದಗಲ್ಲಕ್ಕೂ ರಕ್ಷಣಾ ವೇದಿಕೆ, ರಾಜ್ಯದ ಕಾವಲು ಬೇಲಿಯಂತೆ ಕೆಲಸ ಮಾಡುತ್ತಿದೆ. ಬಲಿಷ್ಠವಾಗುತ್ತಿದೆ. ಕನ್ನಡಿಗರ ಕೆರಳಿಸಿದರೆ, ಮಸಿ ಬಳಿಸಿಕೊಳ್ಳಬೇಕಾಗುತ್ತದೆ ಎನ್ನುವ ಕನಿಷ್ಠ ಭಯವನ್ನಂತೂ ವೇದಿಕೆ, ಕನ್ನಡ ವಿರೋಧಿಗಳ ಮನದಲ್ಲಿ ಬಿತ್ತಿದೆ.

‘ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ’ ಎನ್ನುವ ಧ್ಯೇಯ ವಾಕ್ಯ ಹೊಂದಿರುವ ವೇದಿಕೆಯ ಹಿಂದಿನ ಶಕ್ತಿ ಟಿ.ಎ. ನಾರಾಯಣಗೌಡ. ಕನ್ನಡ ಚಳವಳಿ ಅವರ ಪಾಲಿಗೆ ಅವರೇ ಹೇಳುವಂತೆ, ವೃತ್ತಿಯಲ್ಲ.. ಪ್ರೀತಿಯಲ್ಲ.. ಹವ್ಯಾಸವಲ್ಲ.. ಫ್ಯಾಷನ್‌ ಅಲ್ಲ.. ಅದು ಅವರ ಬದುಕು.

ಚಳವಳಿಗಳಲ್ಲಿ ಅಬ್ಬರಿಸುವ, ಕೆರಳಿದ ಸಿಂಹದಂತೆ ನುಗ್ಗುವ ನಾರಾಯಣಗೌಡ ಎಲ್ಲರಿಗೂ ಗೊತ್ತು. ನಾರಾಯಣಗೌಡ ಎನ್ನುವ ನಾಯಕ, ಇದ್ದಕ್ಕಿದ್ದಂತೆ ಹುಟ್ಟಿ ಬಂದವನಲ್ಲ. ನಮ್ಮ ನಡುವೆಯೇ ಇದ್ದವರು. ನಾಡು-ನುಡಿ ಬಗ್ಗೆ ಏನೇನೋ ಕನಸು ಕಂಡವರು. ಕನಸಿನ ಸಾಕ್ಷಾತ್ಕಾರಕ್ಕೆ ಬದುಕು ಸವೆಸುತ್ತಿರುವವರು.

ಇತ್ತೀಚೆಗೆ ‘ದಟ್ಸ್‌ ಕನ್ನಡ’ ಕಚೇರಿಗೆ ಆಗಮಿಸಿದ್ದ ಟಿ.ಎ.ನಾರಾಯಣಗೌಡ ಅವರ ಜೊತೆ ಕೂತು, ಕೆಲಕಾಲ ಮಾತನಾಡಿದೆವು. ತಮ್ಮ ಬಗ್ಗೆ, ತಮ್ಮ ಸಂಘಟನೆ ಬಗ್ಗೆ, ನಾಡು-ನುಡಿ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದರು. ಆ ವಿವರಗಳು ನಿಮ್ಮ ಮುಂದೆ..

ಆ ಹಿಂದಿನ ದಿನಗಳು...

ನನ್ನದು ಹಾಸನ ಜಿಲ್ಲೆ. ಅರಸೀಕೆರೆ ತಾಲೂಕಿನ ಮಾಲ್ಲೇಗಲ್‌ ತಿರುಪತಿ ನನ್ನ ಹುಟ್ಟೂರು. ತಂದೆ-ಅನಂತಯ್ಯ. ತಾಯಿ ಗೌರಮ್ಮ. ನಮ್ಮಪ್ಪನಿಗೆ 9ಜನ ಮಕ್ಕಳು. ಅದರಲ್ಲಿ ಒಬ್ಬಳು ಹೆಣ್ಣು ಮಗಳು.

ನನ್ನ ಪ್ರಾಥಮಿಕ ಶಿಕ್ಷಣ ಕಾರೇಹಳ್ಳಿಯಲ್ಲಿ ಆಯಿತು. ಅರಸೀಕೆರೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್‌ ವಿದ್ಯಾಭ್ಯಾಸ. ಏಳನೇ ತರಗತಿಯಲ್ಲೇ ನಾನು ಹೋರಾಟದ ಹಾದಿ ತುಳಿದೆ. ರೈತ ಸಂಘದ ಸುಂದರೇಶ್‌, ನಂಜುಂಡ ಸ್ವಾಮಿ ನನ್ನನ್ನು ಸೆಳೆದಿದ್ದರು. ಸುಮಾರು 82-83ರಲ್ಲಿ ದುರ್ಗಪ್ಪ ಶೆಟ್ಟರ ಜೊತೆ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದೆ. ಮೂರು ವರ್ಷ ಸ್ವಯಂ ಸೇವಕನಾಗಿ ಕೆಲಸ ಮಾಡಿದೆ. ಆಗಲೇ ನನ್ನಲ್ಲಿ ಚಳವಳಿ ಕಿಡಿಗಳು ಸೇರಿಕೊಂಡಿದ್ದವು.

ನನಗೆ ಬಿದ್ದ ಮೊದಲ ಪೊಲೀಸ್‌ ಒದೆ!

ಆಗ 9ನೇ ತರಗತಿ ಪೂರ್ಣವಾಗಿತ್ತು. ಅರಸೀಕೆರೆಯಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ 3ತಿಂಗಳ ಕಾಲ ಆಚರಿಸುತ್ತಾರೆ. ಅಲ್ಲಿ ತಮಿಳಿನ ಆರ್ಕೆಸ್ಟ್ರಾ ಸಾಮಾನ್ಯವಾಗಿ ಇರ್ತಾಯಿತ್ತು. ನಾನು ರಾಜ್‌ಕುಮಾರ್‌ರ ಕಟ್ಟಾ ಅಭಿಮಾನಿ. ಕನ್ನಡ ಹಾಡಿಗೆ ಒತ್ತಾಯ ಮಾಡಿದೆ. ಮಾತಿಗೆ ಮಾತು ಬೆಳೆಯಿತು. ನನ್ನನ್ನು ಬಂಧಿಸಿದ ಎಸ್‌ಐ ಮಾದೇಶ್‌, ಎರಡು ದಿವಸ ಕೈಕಾಲು ಕಟ್ಟಿ ಲಾಕಪ್‌ನಲ್ಲಿ ಉರುಳಿ ಹಾಕಿದರು.

ನಮ್ಮಪ್ಪ ಪಿಡಬ್ಲೂಡಿ ಕಂಟ್ರ್ಯಾಕ್ಟರ್‌. ಠಾಣೆಗೆ ಬಂದು ನನಗೆ ಬುದ್ದಿ ಮಾತು ಹೇಳಿದರು. ‘ಚಳವಳಿ ತಂಟೆಗೆ ಹೋಗಬೇಡ... ದುಡಿಯೋದು ನೋಡು’ ಎಂದರು. ನಾನು ಒಪ್ಪಲಿಲ್ಲ. ಅವರಿಗೆ ಸಕತ್ತು ಸಿಟ್ಟು ಬಂತು. ನನ್ನನ್ನು ಪೊಲೀಸರಿಂದ ಬಿಡಿಸಲಿಲ್ಲ. ಕೊನೆಗೆ ಅರಸೀಕೆರೆಯ ಡಾ.ರವೀಂದ್ರ ಎನ್ನುವವರು ಬಿಡಿಸಿದರು.

ಮನೆಯಲ್ಲಿ ತಿರಸ್ಕಾರ...

ಎರಡು ದಿವಸದ ನಂತರ ಮನೆಗೆ ಹೋದೆ. ‘ನಿನ್ನಿಂದ ನಮ್ಮನೆಗೆ ಅವಮಾನ’ ಎಂದು ನನ್ನ ಮಾವ ಹೊಡೆದರು. ತಲೆಗೆ ಪೆಟ್ಟು ಬಿತ್ತು. ನಮ್ಮಮ್ಮ ತಲೆಗೆ ಕಾಫಿಪುಡಿ ಹಾಕಿ ಪಟ್ಟಿ ಕಟ್ಟಿದರು. ರಾತ್ರಿ ಚಿಂತನೆ ನಡೆಸಿದೆ. ‘ನನ್ನ ದಾರಿ ಬೇರೆ’ ಎಂಬುದು ನನ್ಗೆ ಆಗ ಗೊತ್ತಾಗಿತ್ತು.

‘ನಾ ಮಾಡಿದ ತಪ್ಪಾದರೂ ಏನು? ಕನ್ನಡಕ್ಕೆ ಕೈ ಎತ್ತಿದರೆ ಇದಾ ಬಹುಮಾನ?’ ಅನ್ನಿಸಿತು. ಒಂದು ಕ್ಷಣ ಮನಸ್ಸಿಗೆ ಬೇಸರ. ಅಂದು ರಾತ್ರಿಯೇ ಲಾರಿ ಹತ್ತಿ ಬಾಂಬೆಗೆ ಹೋದೆ.

ಬಾಂಬೆ ಸೇರಿದ ನಂತರ...

ಕೆಲಸಕ್ಕಾಗಿ ಅಲ್ಲಿ ಸಾಕಷ್ಟು ತಿರುಗಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯವರೊಬ್ಬರು ಪರಿಚಿತರಾದರು. ಅವರ ಮೂಲಕ ಕೆಲಸ ಸಿಕ್ತು. ಅದು ಐಸ್‌ ಕ್ರೀಂ ಕಾರ್ಖಾನೆಯಲ್ಲಿ ಪುಟ್ಟದೊಂದು ಕೆಲಸ.

ಆಗ ಅಲ್ಲಿ ಚಾಲುಕ್ಯ ಕನ್ನಡ ಕೂಟ(1986-87) ಸಕ್ರಿಯವಾಗಿತ್ತು. ಇನ್ನೊಂದು ಕಡೆ ಶಿವಸೇನೆ ಬಲವಾಗುತ್ತಿದ್ದ ದಿನಗಳವು. ಅಲ್ಲಿಯೂ ನನ್ನ ಕನ್ನಡ ಪ್ರೇಮ ಆಗಾಗ ಸದ್ದು ಮಾಡುತ್ತಿತ್ತು. 6ವರ್ಷ ಬಾಂಬೆಯಲ್ಲಿದ್ದೆ. ಅಲ್ಲಿಂದ ಬೆಂಗಳೂರಿಗೆ ಬಂದೆ.

ಬೆಂಗಳೂರಲ್ಲಿ ಉದ್ಯೋಗ ಬೇಟೆ...

ಬೆಂಗಳೂರಲ್ಲಿ ಉದ್ಯೋಗಾನ್ವೇಷಣೆ ಆರಂಭಿಸಿದೆ. ಕೋರಮಂಗಲದ ಸೌತ್‌ ಇಂಡಿಯಾ ಕಂಪ್ಯೂಟರ್‌ ಲಿ.,ನಲ್ಲಿ ಕೆಲಸ ಶುರು ಮಾಡಿದೆ. ಅದು ಹಾರ್ಡ್‌ವೇರ್‌ ಅಸೆಂಬಲ್‌ ಮಾಡುವ ಕಂಪನಿ. ದಿನಕ್ಕೆ 70ರೂಪಾಯಿ ಕೂಲಿ ಕೊಡುತ್ತಿದ್ದರು. ಒಂದೂವರೆ ವರ್ಷ ಕೆಲಸ ಮಾಡಿದೆ. ತಾವರೇಕೆರೆಯಲ್ಲಿ ಗೆಳೆಯರ ಜೊತೆ ರೂಂನಲ್ಲಿದ್ದೆ.

ಯಾಕೋ ಕಂಪನಿ ಕ್ಲೋಸ್‌ ಆಯಿತು. ವೈಶ್ಯ ಬ್ಯಾಂಕ್‌ನಲ್ಲಿ ಕೆಲಸ ಹುಡುಕಿದೆ. ಅದು ತಮಿಳರ ಬ್ಯಾಂಕ್‌. ನನ್ನನ್ನು ಮತ್ತು ನನ್ನ ಕನ್ನಡ ಪ್ರೀತಿಯನ್ನು ಅಲ್ಲಿ ಗೇಲಿ ಮಾಡುತ್ತಿದ್ದರು. ಒಂದು ಸಲ ಲೀಡರ್‌ ಜೊತೆ ಜಗಳ ಮಾಡಿಕೊಂಡೆ. ನನ್ನನ್ನು ಹೊರ ಹಾಕಿದರು.

ಇದೇ ಸಮಯದಲ್ಲಿ ರಾಜ್‌ ಅಭಿಮಾನಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ನಾನು ಪಾಲ್ಗೊಳ್ಳುತ್ತಿದ್ದೆ.

ಅಮ್ಮನ ಕಾಸಿನ ಸರ, ಬದುಕು ನೀಡಿತು...

ಈ ಮಧ್ಯೆ ಅಪೆಂಡಿಸೈಟಿಸ್‌ ಆಗಿ ಮಾರ್ಥಾಸ್‌ ಆಸ್ಪತ್ರೆಯಲ್ಲಿ ಮಲಗಿದ್ದೆ. ಆದರೂ ಅಪ್ಪನ ಸಿಟ್ಟು ಇಳಿದಿರಲಿಲ್ಲ. ಅಮ್ಮ ಬಂದರು. ನನಗೆ ಕಾಯಿಲೆಗಿಂತಲೂ, ಬದುಕಿನಲ್ಲಿ ನಿಲ್ಲಲಾಗಲಿಲ್ಲವಲ್ಲ ಎಂಬ ಕೊರಗಿತ್ತು. ‘ನನ್ನ ಕಾಸಿನ ಸರ ಮಾರಿ, ಏನಾದರೂ ವ್ಯಾಪಾರ ಮಾಡು’ ಎಂದು ತಮ್ಮ ಸರ ನೀಡಿದರು.

ಅವಿನ್ಯೂ ರಸ್ತೆಯ ಮಾರ್ವಾಡಿಗೆ ಸರ ಮಾರಿ 45 ಸಾವಿರ ಪಡೆದೆ. ಪುಷ್ಪ ಗಾರ್ಮೆಂಟ್ಸ್‌ ಶುರು ಮಾಡಿದೆ. ಅಲ್ಲಿ ಹೋಲ್‌ ಸೆಲ್‌ ವ್ಯಾಪಾರ, ಫೈನಾನ್ಸ್‌ ಹೀಗೆ ಏನೇನೋ ಮಾಡಿದೆ. ದುಡ್ಡು ನೀರಿನಂತೆ ಹರಿದು ಬರುತ್ತಿತ್ತು. ಮುಂದೆ ಶ್ರೀಮಾತಾ ಆಡಿಯೋ ಕ್ಯಾಸೆಟ್‌ ಕಂಪನಿ ಆರಂಭಿಸಿದೆ. ನೂರಾರು ಕ್ಯಾಸೆಟ್‌ಗಳ ಹೊರತಂದೆ.

ಈ ಮಧ್ಯೆಯೂ ಚಳವಳಿ ಕಿಚ್ಚು, ನನ್ನ ಮೈಯಲ್ಲಿ ಆರಿರಲಿಲ್ಲ. ಕೊನೆಗೆ ಚಳವಳಿ ಬದುಕನ್ನು ಆರಿಸಿಕೊಂಡ ಮೇಲೆ, ಅದರ ನಿರ್ವಹಣೆಯನ್ನು ಒಂದಿಷ್ಟು ದುಡ್ಡು ಪಡೆದು, ಇನ್ನೊಬ್ಬರಿಗೆ ಒಪ್ಪಿಸಿದೆ. ಅವರು ನನಗೀಗ 40ಸಾವಿರ ನೀಡುತ್ತಾರೆ. ಅದೇ ನನ್ನ ವರಮಾನ.

ಸಾ.ರಾ.ಗೋವಿಂದ್‌, ವಾಟಾಳ್‌, ಜಾಣಗೆರೆ ಬಗ್ಗೆ ಟೀಕಾ ಪ್ರಹಾರ.. ನಾಳೆ ನೋಡಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more