ರಂಗೋಲಿ ಇಲ್ಲದ ಅಂಗಳ ಕುಂಕುಮವಿಲ್ಲದ ಅವಳ ಹಣೆ!


ನಮ್ಮ ಸಂಪ್ರದಾಯವನ್ನು ನೆನಪಿಸಲು ಈಗೀಗ ಪ್ಲಾಸ್ಟಿಕ್‌ ಹಾಳೆಯ ರಂಗವಲ್ಲಿಯಾದರೂ ಇದೆಯಲ್ಲಾ!! ಈಗಂತೂ ಯಾರಿಗೂ ಸಮಯವಿಲ್ಲ. ಇದ್ದರೂ ಯಾವಾಗಲೋ ಮಲಗುವುದು. ಮನಸ್ಸು ಬಂದ ಹೊತ್ತಿಗೆ ಏಳುವುದು. ರಂಗವಲ್ಲಿ ಹಾಕುವುದೂ ಬೇಡ. ಮನೆಯ ದೊಡ್ಡವರು ಹೇಳಿದರೆ, ನಮಗೇನೂ ಹೇಳಬೇಡಿ, ಅದೆಲ್ಲ ನಿಮ್ಮ ಕಾಲಕ್ಕಾಯ್ತು, ನಮಗೆ ಹೇಗಿರಬೇಕೋ ಹಾಗಿರುತ್ತೇವೆ, ಎಂದು ಹಿರಿಯರ ಬಾಯಿ ಮುಚ್ಚಿಸುವ ತಾಂತ್ರಿಕ ಯುಗದಲ್ಲಿದ್ದೇವೆ. ಇದ್ದರೇನಂತೆ, ನಮ್ಮ ಸಂಸ್ಕೃತಿಯನ್ನು ಅವಹೇಳನ ಮಾಡುವುದಾಗಲಿ, ತಿರಸ್ಕರಿಸುವುದಾಗಲಿ ಮಾಡಬೇಕಾಗಿಲ್ಲ.

ಮನೆಯ ಯಜಮಾನ ಹೊರಗೆ ಹೊರಡುವ ಮುನ್ನ ಶುಭ ಕೋರಿ ಕಳುಹಿಸಿ ಕೊಡುವ ಸಂಪ್ರದಾಯ ಒಳ್ಳೆಯದೇ. ಈಗಿನ ಕಾಲದಲ್ಲಿ ಇಬ್ಬರೂ ದುಡಿಯುವುದರಿಂದ, ರಂಗವಲ್ಲಿ ಹಾಕಿ, ಅತ್ತೆಮಾವಂದಿರನ್ನು ನೋಡಿಕೊಂಡು, ಅಡುಗೆಯನ್ನು ಮಾಡಿಟ್ಟು ಕೆಲಸಕ್ಕೆ ಹೋಗುವವರಿದ್ದಾರೆ. ಮನಸ್ಸಿರಬೇಕಷ್ಟೇ!! ಮನಸ್ಸಿದ್ದರೆ ಮಾರ್ಗವಿದ್ದೇ ಇರುತ್ತೆ.

ರಂಗವಲ್ಲಿಯನ್ನು ಹಾಕುವಾಗ ಆದಷ್ಟು ನೇರವಾದ ಗೆರೆಗಳನ್ನು ಹಾಕಬೇಕು, ಇಲ್ಲದಿದ್ದರೆ ಹುಟ್ಟುವ ಮಗು ಅಂಗವಿಕಲತೆಯನ್ನು ಹೊಂದಿರುತ್ತೆ ಎಂದು ಹೇಳುವುದು ವಾಡಿಕೆ. ಸರಿಯಾಗಿ ವಿದ್ಯೆ ಕಲಿಯಲಿ ಎಂದು ಹೆದರಿಸುತ್ತಿದ್ದಂತೆ ಕಾಣುತ್ತೆ. ಸೊಟ್ಟಗೆ ಗೆರೆ ಹಾಕಲು ಬಂದನಂತರವೇ ಅಲ್ಲವೇ, ಅಭ್ಯಾಸದಿಂದ ಅದೇ ಗೆರೆ ಸರಿಯಾಗಿ ಎಳೆಯಲು ಬರುವುದು. ಅದೇ, ನಮ್ಮ ಪೂರ್ವಜರ ಮಾತು ಇಂದಿನ ಯುವಜನತೆ ಎಲ್ಲ ಬಿಟ್ಟು ಕೂರುವುದಕ್ಕೆ ಕಾರಣವಾಗಿರಬಹುದು. ರಂಗವಲ್ಲಿ ಹಾಕು ಅನ್ನುವುದೂ ಅಲ್ಲದೆ, ಹೀಗೇ ಹಾಕಬೇಕೆಂದರೆ ಹಾಕುವುದೇ ಇಲ್ಲ. ಬೇಕಾದರೆ, ನೀನೇ ಹಾಕಿಕೋ ಎಂದು ಹೇಳಿದವರ ಮುಖಕ್ಕೆ ಮಂಗಳಾರತಿಯಾಗುವುದು.

ಹವಾಮಾನದ ವೈಪರೀತ್ಯದಿಂದ ದಿನಾ ಮನೆಯ ಮುಂದೆ ರಂಗವಲ್ಲಿ ಹಾಕಲಾಗದು. ಸ್ವಲ್ಪ ಚಳಿ ಕಡಿಮೆಯಾಗಿ, ಹಿಮ ಸುರಿಯುವುದು ನಿಂತಮೇಲೆ, ಪ್ರತಿ ಶುಕ್ರವಾರ ನಮ್ಮ ಮನೆ ಬಾಗಿಲಿಗೆ ರಂಗವಲ್ಲಿ ತಪ್ಪುವುದಿಲ್ಲ. ಮುಂಬಾಗಿಲಿಗೆ ಸಜ್ಜವಿರುವುದರಿಂದ ಇಟ್ಟ ರಂಗವಲ್ಲಿ ಮುಂದಿನ ಶುಕ್ರವಾರದವರೆಗೂ ಅಳಿಸುವುದೂ ಇಲ್ಲ. ಮುಂಬಾಗಿಲಿಂದ ಓಡಾಡುವುದು ಕಡಿಮೆ. ವಾಹನ ನಿಲ್ಲಿಸಿ ಒಳಬಾಗಿಲಿನಿಂದ ಕಳ್ಳನುಗ್ಗುವ ಹಾಗೆ, ನಮ್ಮ ಮನೆಗೆ ನಾವೇ ಮೆಲ್ಲಗೆ ನುಸುಳಿಕೊಳ್ಳುವುದು ವಾಡಿಕೆ. ಹೀಗಾಗಿ, ರಂಗವಲ್ಲಿ ಚೈತ್ರಮಾಸದಿಂದ ಕಾರ್ತೀಕಮಾಸದವರೆಗೆ ನಗುತ್ತಿರುತ್ತದೆ.

ಒಮ್ಮೆ, ಬೆಂಗಳೂರಿನಿಂದ ಬಂದಿದ್ದ ಕೆಲವು ಸಂಬಂಧಿಕರನ್ನು ಮನೆಗೆ ಆಹ್ವಾನಿಸಿದ್ದೆ. ಮಗ ಸೊಸೆ ಮೊಮ್ಮಗಳ ಜೊತೆಯಲ್ಲಿ ಹಿರಿಯರು ಬಂದಿದ್ದರು. ಮನೆಯ ಮುಂಬಾಗಿಲಿಂದ ಬಂದವರು, ದೇವರಮನೆಯ ಬಾಗಿಲಲ್ಲಿ ನಿಂತರು. ಬೆಂಗಳೂರಿನ ನಮ್ಮ ದೇವರಮನೆಯಿದ್ದ ಹಾಗಿದೆ ಅಂದರು. ಅವರ ಮನೆಯ ದೇವರಕೋಣೆಯನ್ನು ನಾನು ನೋಡಿಲ್ಲವಾಗಿ, ಎಲ್ಲರೂ ಇಲ್ಲಿ ನಿಂತು ದೇವರಮನೆ ಚೆನ್ನಾಗಿದೆ ಅಂತ ಹೇಳಿ ಮುಂದೆ ಹೋಗುತ್ತಾರೆ, ಎಂದೆ.

ಉಭಯಕುಶಲೋಪರಿಯ ನಂತರ ತಿಂಡಿ ಕಾಫಿ ಆಯಿತು. ನಂತರ, ಹೊರಟ ಅತಿಥಿಗಳಿಗೆ ಅರಿಸಿನ ಕುಂಕುಮ ಕೊಟ್ಟು, ಮತ್ತೆ ಮುಂಬಾಗಿಲಿಗೆ ಬೀಳ್ಕೊಡಲು ಬಂದೆವು. ಬಂದಿದ್ದ ಹಿರಿಯರು, ಇಲ್ಲಿ ರಂಗವಲ್ಲಿ ಹಾಕಿದರೆ ಪರವಾಗಿಲ್ಲವೇ? ಅಂದರು. ನಮ್ಮ ಮನೆ ಮುಂದೆ ನಾವು ರಂಗವಲ್ಲಿ ಹಾಕಿದರೆ, ಎಲ್ಲ ಎಷ್ಟು ಕಲಾತ್ಮಿಕವಾಗಿದೆ ಅಂತಾರೆ, ಚಿಕ್ಕ ಮಕ್ಕಳೆಲ್ಲ ಚುಕ್ಕಿ ಚುಕ್ಕಿ ಸೇರೀ,ಸೇರೀ ಅಂತ ಅವರೂ ಸಹ ಹಾಕುತ್ತಾರೆ, ಅಂದೆ. ನನ್ನ ಮಾತು ಮುಗಿಯುವುದರಲ್ಲಿ ಆಕೆಯ ಕಣ್ಣಿನಲ್ಲಿ ನೀರು. ಕಾರಣವಿಷ್ಟೇ!! ತಮ್ಮ ಮಗನ ಮನೆಯ ಬಾಗಿಲಿಗೆ ರಂಗವಲ್ಲಿ ಹಾಕಲು ಹೋದಾಗ, ಮಗ ಹಾಕಲು ಬಿಡದೆ, ನಿನ್ನ ಮನೆಯ ಮುಂದೆ ಬೆಂಗಳೂರಿನಲ್ಲಿ ಹಾಕಬೇಕೆಂದು, ಇಲ್ಲಿ ಯಾರೂ ರಂಗವಲ್ಲಿ ಹಾಕುವುದಿಲ್ಲವೆಂದೂ ತಿಳಿಸಿದ್ದಾರೆ. ನಮ್ಮ ಮನೆಯ ಮುಂದಿನ ರಂಗವಲ್ಲಿ ಈ ಹಿರಿಯರನ್ನು ಅಣಕಿಸಿತ್ತು.

ನಮಗೆ ಮಾಡಲು ಬೇಡವಾದರೆ ಬೇಡ, ಆದರೆ ಬಂದ ಹಿರಿಯರಿಗೆ ಗೌರವ ಕೊಡುವಾಗಿಯಾದರೂ, ಅವರು ಅನಾದಿ ಕಾಲದಿಂದ ಆಚರಣೆಯಲ್ಲಿ ತಂದಿರುವ ನಮ್ಮ ಸಂಸ್ಕೃತಿಯ ನಶಿಸಲು ಬಿಡಬೇಡಿ. ಹಿರಿಯರಿಂದಾದರೂ ನಮ್ಮ ಕಲೆ ಉಳಿಯಲಿ, ಸಾಧ್ಯವಾದರೆ ಬೆಳೆಯಲು ಸಹಾಯ ಮಾಡಿ.ಎಲ್ಲಿದ್ದರೇನಂತೆ, ನಮ್ಮತನ ಉಳಿಸಿಕೊಳ್ಳಲು ಹೆದರಬೇಕೇ? ಅಥವಾ, ರಂಗವಲ್ಲಿ ಹಾಕುವುದು ಬಿಡಬೇಕೇ? ನೀವು ನಿಮ್ಮಿಷ್ಟ. ಸರೀನೇ. ಆದರೆ, ಒಂದು ಮಾತು ನೆನಪಿರಲಿ. ರಂಗೋಲಿ ಸಂಭಂದಗಳನ್ನು ವೃದ್ಧಿಸುವ ಒಂದು ಚಿತ್ತಾರ! ನಿಮ್ಮ ಮನೆಮುಂದೆ ನಗುತ್ತ ಮಲಗಿರುವ ಸ್ವಾಗತಕಾರ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+