ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೋಲಿ ಇಲ್ಲದ ಅಂಗಳ ಕುಂಕುಮವಿಲ್ಲದ ಅವಳ ಹಣೆ!

By Staff
|
Google Oneindia Kannada News


ನಮ್ಮ ಮನೆಗಳಿಗೆ ನಿತ್ಯ ವೆಲ್‌ಕಮ್‌ ನೋಟ್‌ ಬರೆಯುವ ರಂಗೋಲಿಯು ಕಲೆ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ಸ್ವಾಗತಕಾರ ಕೂಡ. ಬನ್ರಮ್ಮ.. ಇವತ್ತಾದರೂ ರಂಗೋಲಿ ಹಾಕೋಣಂತೆ..

Defending a dying artಭಾರತದ ಅತ್ಯಂತ ಪುರಾತನ ಕಲೆಗಳಲ್ಲಿ ರಂಗವಲ್ಲಿ ಬಿಡಿಸುವುದೂ ಒಂದು. ಚಿಕ್ಕವರಿಂದ, ಬೆನ್ನು ಬಾಗಿದ ಅಜ್ಜಿಯವರೆಗೆ ಮನೆ ಬಾಗಿಲಿಗೆ ನೀರು ಹಾಕಿ ರಂಗವಲ್ಲಿ ಬಿಡಿಸುವುದು ಅನಾದಿಕಾಲದಿಂದ ನಡೆಯುತ್ತಾ ಬಂದಿದೆ. ಈಗ ಬಿಡಿ, ಪೈಂಟ್‌ ಅಥವಾ ಗೋಂದಿನ ಪ್ಲಾಸ್ಟಿಕ್‌ ಹಾಳೆ ಅಂಟಿಸಿ ಬಿಟ್ಟರೆ ಆಯಿತು. ಮನೆಯೊಳಗೆ ಮನೆಯೊಡತಿ ಇದ್ದಾಳೊ ,ಇಲ್ಲವೋ..

ನಾವು ಚಿಕ್ಕವರಿದ್ದಾಗ, ಅದರಲ್ಲೂ ಶಾಲೆಯಲ್ಲಿ ರೇಖಾಗಣಿತ ಅಭ್ಯಾಸ ಮಾಡುತ್ತಿದ್ದಾಗ, ಚುಕ್ಕಿಗಳನ್ನು ಇಟ್ಟು ,ಸರಿಯಾಗಿ ಒಂದೊಂದು ಚುಕ್ಕಿಯನ್ನು ಸೇರಿಸುವುದು ಅಭ್ಯಾಸ ಮಾಡುತ್ತಿದ್ದೆವು. ಅದರ ಸಲುವಾಗಿ, ಅಜ್ಜಿ ಹಾಗೂ ಅಮ್ಮನಿಂದ ರಂಗವಲ್ಲಿ ಬಿಡಿಸುವ ಕಲೆ ಪ್ರಾರಂಭವಾಯಿತು. ನನಗೆ ಇದರಲ್ಲಿ ಆಸಕ್ತಿ ಇಲ್ಲ, ನನ್ನನ್ನು ಬಲವಂತ ಮಾಡಬೇಡ, ಇದು ನಿನ್ನ ಕಾಲದ ಕಲೆ, ನೀನೇ ಇಟ್ಟುಕೋ ಎಂದೆಲ್ಲ ದಬಾಯಿಸುತ್ತಿರಲಿಲ್ಲ.

ಕಲಿಸಿದ ವಿದ್ಯೆಯನ್ನು ಆಸಕ್ತಿಯಿಂದ ಕಲಿಯುತ್ತಿದ್ದೆವು. ಕಲಿಯುವಾಗ ರೇಖೆಗಳು ಸೊಟ್ಟಗಾಗಿರುತ್ತಿತ್ತು. ತದನಂತರದಲ್ಲಿ, ನಿಧಾನವಾಗಿ ನೇರ ರೇಖೆಗಳು ಬರಲು ಶುರುವಾಯಿತು. ಕಸ ಗುಡಿಸಿ, ರಂಗವಲ್ಲಿ ಪುಡಿಯನ್ನು ಜರಡಿ ಹಿಡಿದು ಎತ್ತಿಟ್ಟಿದ್ದು, ಅದೇ ಪುಡಿಯನ್ನು ಮತ್ತೆ ಮತ್ತೆ ಪಯೋಗಿಸುತ್ತಿದ್ದೆವು. ಮನೆಯಲ್ಲಿ ಕೆಂಪು ನೆಲದ ಮೇಲೆ ಕಲಿಯುವಾಗ. ಕೆಲಸವೆಲ್ಲ ಮುಗಿದ ನಂತರ ನೋಡಲು ಬಣ್ಣದ ದೂರದರ್ಶನವಿರಲಿಲ್ಲವಾಗಿ, ಪುಸ್ತಗಳನ್ನು ಓದುವುದು, ಇಲ್ಲವೆ ವಿವಿಧ ಕಲೆಗಳಲ್ಲಿ ತೊಡಗಿಸಿ ಕೊಳ್ಳುವುದನ್ನು ಕಲಿತೆವು. ಕಂಡಕಂಡವರ ಮನೆಗಳಿಗೆ ಹೋಗಿ ಹರಣ ಕಾಲಹರಣ ಮಾಡುವುದು ಯಾರಿಗೂ ಇಷ್ಟವಿರಲಿಲ್ಲ. ಬಹಳ ಶ್ರಮ ವಹಿಸಿ ಶ್ರದ್ಧೆಯಿಂದ ಸಂಗೀತ, ಸಾಹಿತ್ಯ, ದೇವರನಾಮಗಳ ಬಾಯಿಪಾಠ ಇವೆಲ್ಲ ದಿನಚರಿಯಾಗಿತ್ತು.

ತರತರನಾದ ರಂಗವಲ್ಲಿ ಇಡುವುದು ದಿನ ನಿತ್ಯದ ಕೆಲಸವಾದರೆ, ಹಬ್ಬಹರಿದಿನಗಳಲ್ಲಿ ಬಣ್ಣತುಂಬಿ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದೆವು. ನವರಾತ್ರಿಯಲ್ಲಂತೂ, ಒಂಭತ್ತು ರಾತ್ರಿಗೂ ದಿನಕ್ಕೊಂದರಂತೆ ರಂಗವಲ್ಲಿ ಹಾಕುವುದು. ಪಕ್ಕದ ಮನೆಯವರು ಹಾಕಿದ್ದನ್ನು ನಾವು ಹಾಕಬಾರದೆಂದು ಪೈಪೋಟಿಯಲ್ಲಿ ಹೊಸ ಬಗೆಯನ್ನು ಹುಡುಕಿ ತೆಗೆಯುವುದು. ಎಲ್ಲಿಯೂ ದುಡ್ಡು ಕೊಟ್ಟು ಅದಕ್ಕಾಗಿಯೇ ಇರುವ ಶಾಲೆಗಳಿಗೆ ಹೋಗಿ ಕಲಿಯುವ ಸಂದರ್ಭ ಒದಗಿಬರಲಿಲ್ಲ.

ಶಾಲೆಯಲ್ಲಂತೂ ಅದೆಷ್ಟು ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ನನ್ನ ಗೆಳತಿ ರಾಧಿಕಾ, ಪಾತ್ರೆಯಲ್ಲಿ ನೀರು ಹಾಕಿ ಅದರ ಮೇಲೆ ಇದ್ದಿಲ ಪುಡಿಯನ್ನು ಹರಡಿ ಅದರ ಮೇಲೆ ಹಾಕಿದ ರಂಗವಲ್ಲಿ ಮರೆಯಲು ಸಾಧ್ಯವೇ ಇಲ್ಲ. ಅದರಲ್ಲೂ ನಖಿ ಹಾಕಿದ ರಂಗವಲ್ಲಿ ಮೇಣದ ಬತ್ತಿಯ ಬೆಳಕಿನಲ್ಲಿ ಬಹಳ ಸುಂದರವಾಗಿತ್ತು. ನಾನೂ ಸಹ ಇದನ್ನು ಕಲಿತು, ದೀಪವಾರಿಸುವವರೆಗೆ ಕಾದಿದ್ದು ಮೇಣದಬತ್ತಿ ಬೆಳಕಿನಲ್ಲಿ ರಂಗವಲ್ಲಿ ಶೋಭಿಸುವುದನ್ನು ಕಂಡು ಆನಂದಿಸಿದ್ದೆ. ನಮ್ಮಲ್ಲಿ ಮೇಣದಬತ್ತಿಯ ಉಪಯೋಗವಾಗುವುದು ಬರಿ ವಿದ್ಯುಚ್ಚಕ್ತಿ ಮಂಡಳಿಯವರು ಕಡ್ಡಾಯವಾಗಿ ವಿದ್ಯುತ್‌ ಕಡಿತ ಮಾಡಿದಾಗ ಮಾತ್ರ.

ನಮ್ಮ ಸಂಸ್ಕೃತಿಯಲ್ಲಿ, ಅದರಲ್ಲೂ ದೇವರ ಪೂಜೆಯ ಸಮಯದಲ್ಲಿ ಎಷ್ಟೇ ಚಂದದ ರಂಗವಲ್ಲಿ ಇಟ್ಟಿದ್ದ್ದರೂ ದೀಪವಾರಿಸುವುದಿಲ್ಲ. ಹಾಗಾಗಿ, ಮಲಗುವ ಮುನ್ನ ದೀಪವಾರಿಸಿ ಸ್ವಲ್ಪ ಕಾಲ ಮೇಣದಬತ್ತಿಯ ಬೆಳಕಿನಲ್ಲಿ ನೀರಿನ ಮೇಲಿನ ರಂಗವಲ್ಲಿಯ ವೀಕ್ಷಣಾ ಸಮಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X