• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರತೇಜಸ್ವಿ ಉಳಿಸಿಹೋದ ಅಗಾಧ ನಿರಾಶೆ.....

By Staff
|

ಇನ್ನೊಂದೆರಡು ವರ್ಷಗಳಲ್ಲಿ ಒಳ್ಳೆಯ ಪುಸ್ತಕವೊಂದು ಅವರ ಲೇಖನಿಯಿಂದ ಖಂಡಿತಾ ಹರಿದುಬರುತ್ತದೆಂದು ಕಾದುಕೊಂಡಿದ್ದೆ. ಈ ಕಾಯುವಿಕೆ ಇನ್ನೆಂದೂ ಪೂರ್ಣವಾಗಲಾರದು. ಅದಕ್ಕಾಗಿ ನನಗೆ ಬೇಸರವಿದೆ, ನೋವಿದೆ, ನಿರಾಶೆಯಿದೆ.

All the works of Tejaswi are masterpieceಸರಿಯಾಗಿ ಒಂದುವರ್ಷದ ಹಿಂದೆ ಮಂಗಳೂರಿನ ಗೆಳೆಯ ಡಾ. ಜಯರಾಜ್‌ ಅಮೀನ್‌ ಅವರು ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಲೋಕ’ವನ್ನು ತಂದುಕೊಟ್ಟಾಗ ನಾನು ಓದುವ ಆ ಮಹಾನ್‌ ಲೇಖಕನ ಕೊನೆಯ ಪುಸ್ತಕ ಅದಾಗಬಹುದೆಂದು ನೆನಸಿರಲಿಲ್ಲ. ಗುರುವಾರ ಮಧ್ಯಾಹ್ನ ಇದೇ ದಟ್ಸ್‌ಕನ್ನಡದಲ್ಲಿ ಅವರ ನಿಧನವಾರ್ತೆಯನ್ನು ನೋಡಿದಾಗ ನನ್ನಲ್ಲುಂಟಾದ ಶೂನ್ಯತೆಯ ಭಾವಕ್ಕೆ ಹಲವಾರು ಆಯಾಮಗಳಿದ್ದವು.

ಮೂವತ್ತಮೂರು ವರ್ಷಗಳ ಹಿಂದೆ ಇಂಥದೇ ಏಪ್ರಿಲ್‌ ತಿಂಗಳ ಒಂದು ಮಧ್ಯಾಹ್ನ ತೇಜಸ್ವಿಯವರ ‘ನಿಗೂಢ ಮನುಷ್ಯರು’ ಕಿರುಕಾದಂಬರಿಯನ್ನು ‘ಕಸ್ತೂರಿ’ ಮಾಸಿಕದ ವಿಶೇಷಾಂಕದಲ್ಲಿ ಓದಿದಾಗಿನ ಅನುಭವವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಶಾಲಾಬಾಲಕನಾಗಿದ್ದ ನಾನು ಮಳೆಯೊಂದಿಗೆ ಆರಂಭವಾಗಿ, ಮಳೆಯೊಂದಿಗೆ ಮುಂದೆ ಸಾಗಿ, ಮಳೆಯೊಂದಿಗೇ ಕೊನೆಯಾಗುವ ಆ ಕಥನವನ್ನು ಅತ್ತಿತ್ತ ಅಲುಗದೇ ಒಂದೇ ಭಂಗಿಯಲ್ಲಿ ಕೂತು ಓದಿ ಮುಗಿಸಿದಾಗ ಸ್ವಲ್ಪ ಕೈಕಾಲು ಆಡಿಸಲೆಂದು ಮನೆಯಿಂದ ಹೊರಹೋಗಬೇಕೆನಿಸಿದ್ದು ಸಹಜವೇ ಆಗಿತ್ತು. ಮರುಕ್ಷಣ ಏನೋ ಬೇಸರ. ‘ಈ ಜಿಟಿಜಿಟಿ ಮಳೆಯಲ್ಲಿ ಹೇಗೆ ತಾನೆ ಹೊರಹೋಗೋದು? ಥತ್‌!’ ಎಂದುಕೊಳ್ಳುತ್ತಾ ಬೇಸರದಿಂದಲೇ ಹೊರಗೆ ಕಣ್ಣಾಡಿಸಿದೆ. ಅವಾಕ್ಕಾದೆ.

ಹೊರಗೆ ಪ್ರಖರ ಬಿಸಿಲಿತ್ತು!

ಮಳೆಯಿರಲಿ, ಮಳೆ ಬಿದ್ದ ಕುರುಹಾಗಲೀ, ಮಳೆ ತರುವ ಮುಗಿಲುಗಳ ಸುಳಿವಾಗಲೀ ಇರಲಿಲ್ಲ. ‘ನಿಗೂಢ ಮನುಷ್ಯರು’ವಿನಲ್ಲಿನ ಮಳೆ ನಾನಿದ್ದ ಪರಿಸರದ ಅರಿವನ್ನೇ ನನ್ನಿಂದ ಮರೆಮಾಡಿ ನನ್ನನ್ನು ಬೇರೊಂದು ನಿಗೂಢಲೋಕಕ್ಕೆ ಒಯ್ದು ಕೆಡವಿತ್ತು! ತೇಜಸ್ವಿಯವರ ಬರಹಗಳಲ್ಲಿನ ನಿಗೂಢ, ರಸಭರಿತ, ಕಲಿಕೆಯ ಲೋಕಕ್ಕೆ ಅಂದು ಪ್ರವೇಶಿಸಿದ ನಾನು ಇನ್ನೂ ಅಲ್ಲಲ್ಲೇ ಸುತ್ತಿ ಸುಳಿದಾಡುತ್ತಿದ್ದೇನೆ. ಈ ಮೂವತ್ತಮೂರು ವರ್ಷಗಳಲ್ಲಿ ಸರಿಸುಮಾರು ಅವರ ಎಲ್ಲ ಕೃತಿಗಳನ್ನೂ ನಾನು ಕೊಂಡು ಓದಿದ್ದೇನೆ.

ಮೈಸೂರಿನ ಗೀತಾ ಬುಕ್‌ ಹೌಸ್‌ನಲ್ಲಿ ಸಿಗದೇಹೋದಾಗ ಸರಸ್ವತಿಪುರಂನಲ್ಲಿರುವ ಪ್ರೊ. ಶ್ರೀರಾಮ್‌ ಅವರ ಮನೆಗೇ ಹೋಗಿ ಕೊಂಡುಕೊಂಡಿದ್ದೇನೆ. ಒಂದೆರಡರ ಹೊರತಾಗಿ ಎಲ್ಲವೂ ಇನ್ನೂ ನನ್ನ ಬಳಿ ಇವೆ. ನನ್ನೊಡನೆ ನನ್ನ ಸಂಗಾತಿಯಾಗಿ ಅವು ಕೊಳ್ಳೇಗಾಲ, ದೆಹಲಿ, ಮೈಸೂರು, ಪಾಂಡಿಚೆರಿಯಲ್ಲೆಲ್ಲಾ ಬದುಕು ಸವೆಸಿವೆ. ಕೆಲವಂತೂ ವಾಷಿಂಗ್ಟನ್‌, ಬೋಸ್ಟನ್‌, ಸಾನ್‌ಫ್ರಾನ್ಸಿಸ್ಕೋಗಳವರೆಗೂ ನನ್ನ ಜತೆ ಅಲೆದಾಡಿವೆ. ತೇಜಸ್ವಿಯವರನ್ನು ಓದಿದಷ್ಟು ಕನ್ನಡದ ಇನ್ನಾವ ಬರಹಗಾರರನ್ನೂ ನಾನು ಓದಿಲ್ಲ.

ನವಿರು ಹಾಸ್ಯದೊಡನೆ ಗಂಭೀರ ಸತ್ಯಗಳನ್ನು ಹೇಳುವ ತೇಜಸ್ವಿಯವರ ಕಥೆಗಳಲ್ಲಿ ಕಾಣುವ ವಿಭಿನ್ನ ಬದುಕಿನ ಚಿತ್ರಣ ಅನನ್ಯವಾದದ್ದು. ಕರ್ವಾಲೋ, ಕಿರಗೂರಿನ ಗಯ್ಯಾಳಿಗಳು, ಮಾಯಾಮೃಗ, ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಜುಗಾರಿ ಕ್ರಾಸ್‌, ಮಾಯಾಲೋಕಗಳಲ್ಲಿ ಅವರು ಸೃಷ್ಟಿಸುವ ಮಾಯಾಲೋಕವಂತೂ ಅದ್ಭುತರಮ್ಯ. ಅವರ ಕಲ್ಪನೆಯ ಡೇರ್‌ ಡೆವಿಲ್‌ ಮುಸ್ತಾಫಾ, ತಬರ, ಕುಬಿ, ತುಕ್ಕೋಜಿ, ಕೃಷ್ಣೇಗೌಡ, ಅಣ್ಣಪ್ಪಣ್ಣ- ಮುಂತಾದ ನೂರೊಂದು ಪಾತ್ರಗಳು ಮನುಷ್ಯಸ್ವಭಾವದ ನೂರೊಂದು ವೈಚಿತ್ರ್ಯ ವೈರುದ್ಧಗಳೊಡನೆ, ಮನುಷ್ಯಸಂಬಂಧದ ಸಾವಿರದೊಂದು ಆಯಾಮಗಳೊಡನೆ ನಾವೆಂದೂ ಮರೆಯಲಾಗದ ರೀತಿಯಲ್ಲಿ ನಮ್ಮನ್ನು ಮುಖಾಮುಖಿಯಾಗಿಸುತ್ತವೆ. ಅವರ ಬರಹಗಳಲ್ಲಿ ಅಜರಾಮರರಾಗಿಹೋಗಿರುವ ಮಾರ ಮತ್ತು ಅವನನ್ನು ಕಾಡಿಸುವ ಕುಕ್ಕುಟ ಪಿಶಾಚ, ಕೊಳಕ ಮಾಸ್ತಿ ಮತ್ತವನ ಬಡಪಾಯಿ ನಾಯಿ, ಪ್ಯಾರ ಮತ್ತವನ ಪ್ಯಾಂಟಿನೊಳಗೆ ನುಗ್ಗಿ ದಾಂಧಲೆ ಎಬ್ಬಿಸುವ ಓತಿಕ್ಯಾತ, ಹಾವಾಡಿಗ ಎಂಗ್ಟ, ಅವನ ಹೆಂಡತಿ, ಅವಳ ಮೊಲೆಯನ್ನು ಗುಡಗುಡಿ ಸೇದುವಂತೆ ಕಚ್ಚಿಕೊಂಡಿರುವ ಮಗು, ಎರಡು ಕಾಲಿನವುಗಳಲ್ಲಿ ಮನುಷ್ಯ ಮತ್ತು ನಾಲ್ಕು ಕಾಲಿನವುಗಳಲ್ಲಿ ಕುರ್ಚಿ ಮೇಜು ಮಂಚಗಳನ್ನು ಬಿಟ್ಟು ಉಳಿದೆಲ್ಲವೂ ಇರುವುದು ನಮ್ಮ ಭಕ್ಷಣೆಗಾಗಿಯೇ ಎಂದು ನಂಬಿದ ಪ್ರೊ. ಶ್ರೀರಾಮ್‌, ಲಾರಿ ಡ್ರೈವರುಗಳ ಪಟ್ಟದರಾಣಿಯರಾದ ಹೈವೇ ಗರ್ಲ್ಸ್‌, ಜಗಳಗಂಟ ಬಂಗಾಳಿ, ‘ನಾನು ಲಿಂಗಾಯತ, ಹಾವು ನಮಗೆ ದೇವರು’ ಹಾಗೂ ‘ಅಯ್ಯೋ ನನ್ನ ಹೆಂಡತಿ ಬಸುರಿ, ನಾನು ಹಾವು ಹೊಡೆಯುವುದಿಲ್ಲ’ ಎಂದು ಓಡಿಹೋಗುವ ‘ವಿಜ್ಞಾನಿ’ಗಳು, ದನ ಮೇಯಿಸುವ ಬೆಪ್ಪು ತಲಪುರಕಿ, ದುರುಳ ಸಬ್‌ಇನ್ಸ್‌ಪೆಕ್ಟರ್‌ ಪೀಟರ್‌ ರಾಣಿ, ಬೇಟೆಯೆಂದರೆ ತುದಿಗಾಲಲ್ಲಿ ನಿಲ್ಲುವ ಕಿವಿ ಮತ್ತದರ ಮೂತಿಗೇ ಉಚ್ಚೆಯ ಪಿಚಕಾರಿ ಹೊಡೆಯುವ ಕಪ್ಪೆ, ನರಕದ ತುತ್ತೂರಿಯಂತೆ ಕೂಗುವ ಹಂದಿಮರಿ, ಶಾಂತಾ ಅವರನ್ನು ಸಮುದ್ರಸ್ನಾನಕ್ಕಿಳಿಸಲು ಹಂಚಿಕೆ ಹಾಕುವ ಅಂಡಮಾನಿನ ಅಕ್ಟೋಪಸ್‌, ಕಣ್ಣಿಗೆಲ್ಲಾ ಟಾರ್‌ ಮೆತ್ತಿಕೊಂಡು ದಿಕ್ಕುತೋಚದೇ ಹುಚ್ಚೆದ್ದು ಕುಣಿಯುವ ಕಾಳಪ್ಪನ ಕೋಬ್ರ, ಫಾರೆಸ್ಟರ್‌ ಗಾಡ್ಲಿಯನ್ನೇ ಬೋನಿನೊಳಗೆ ಕೂಡಿಹಾಕುವ ಮಂಗಗಳು-

ಮುಂತಾದ ಅಸಂಖ್ಯ ನೈಜಪಾತ್ರಗಳು ಈ ಜಗತ್ತು ಅದೆಷ್ಟು ವೈವಿಧ್ಯಮಯ, ಸ್ವಾರಸ್ಯಕರ ಎಂದು ಸಾರಿಹೇಳುತ್ತವೆ. ಜತೆಗೇ ತೇಜಸ್ವಿಯವರ ಕುತೂಹಲಪೂರ್ಣ ಕಣ್ಣು ಕಿವಿಗಳ ಬಗ್ಗೆ ಬೆರಗು ಹುಟ್ಟಿಸುತ್ತವೆ. ಅಷ್ಟೇ ಅಲ್ಲ, ನಿಮ್ಮ ನಿಮ್ಮ ಚಿಪ್ಪುಗಳಿಂದ ಹೊರಬನ್ನಿರೋ, ಸುತ್ತಲ ಪ್ರಪಂಚವನ್ನು ಕಣ್ಣುಬಿಟ್ಟುಕೊಂಡು ನೋಡಿರೋ, ನೋಡಿ ಕಲಿಯಿರೋ, ಕಲಿತು ನಲಿಯಿರೋ ಎಂದು ಪ್ರೀತಿಯಿಂದ ಅನುನಯಿಸುತ್ತವೆ, ಹಠ ತೊಟ್ಟು ಜುಲುಮೆ ಮಾಡುತ್ತವೆ.

ತೇಜಸ್ವಿಯವರ ಮಾನವಶಾಸ್ತ್ರ ಮತ್ತು ಹಾರುವ ತಟ್ಟೆಗಳ ಬಗೆಗಿನ ಬರಹಗಳು, ವಿಸ್ಮಯ ಹಾಗೂ ಮಿಲನಿಯಮ್‌ ಸರಣಿಗಳು ಕನ್ನಡದ ಓದುಗರಿಗೆ ತೆರೆದಿಡುವ ಜಗತ್ತು ಅಗಾಧ, ಅದ್ವಿತೀಯ. ಈ ವಿಷಯಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಸಾಕಷ್ಟು ಓದಿರುವ ನನಗೆ ತೇಜಸ್ವಿಯವರ ಬರಹಗಳು ನೀಡುವ ವಿವರಗಳು ದಶಕಗಳಷ್ಟು ಹಳೆಯದೆನಿಸಿದರೂ ಕನ್ನಡ ಓದುಗರಿಗೆ ಈ ವಿಷಯಗಳನ್ನು ಪರಿಚಯಿಸಲು, ಇಷ್ಟಾದರೂ ವಿವರಗಳನ್ನು ನೀಡಲು ಅವರು ನಡೆಸಿದ ಪ್ರಯತ್ನದ ಬಗ್ಗೆ ಅತೀವ ಮೆಚ್ಚುಗೆಯಿದೆ.

ತಾವು ಕಂಡ, ಜನ ಜಾನುವಾರುಗಳ ಬಗ್ಗೆ ಬರೆಯುವಾಗ, ಅಷ್ಟೇಕೆ ತಮ್ಮ ಬಗ್ಗೆಯೇ ಹೇಳಿಕೊಳ್ಳುವಾಗ ಅವರ ಬರಹಗಳಲ್ಲಿ ಕಂಡುಬರುವ ಪ್ರಾಮಾಣಿಕತೆಯೇ ಅವುಗಳನ್ನು ಮತ್ತೆ ಮತ್ತೆ ಓದುವಂತೆ ನನ್ನನ್ನು ಪ್ರೇರೇಪಿಸುತ್ತವೆ. ಹೊಸ ಬರಹಗಳಿಗಾಗಿ ಕಾತುರದಿಂದ ಕಾಯುವಂತೆ ಮಾಡುತ್ತವೆ. ತೇಜಸ್ವಿಯವರದು ನೇರ ನಡೆ, ನೇರ ನುಡಿ. ಸ್ವರ್ಗ ನರಕ, ದೇವರು ದೆವ್ವ- ಮುಂತಾದುವುಗಳ ಬಗ್ಗೆ ನಂಬಿಕೆಯೇ ಇಲ್ಲದ, ಜಗತ್ತಿನ ಎಲ್ಲ ಕ್ರಿಯೆ ಪ್ರಕ್ರಿಯೆಗಳಿಗೆ ಭೌತಿಕ ಕಾರಣಗಳಿವೆ ಎಂದು ನಂಬುವ ಒಂದು ರೀತಿಯ ಅಗ್ನೋಸ್ಟಿಕ್‌ ಆದ ವಿಚಾರಧಾರೆ ಅವರದಾಗಿತ್ತು. ಹೀಗಾಗಿಯೇ ‘ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ’ ಎಂದು ಮುಂತಾಗಿ ಹೇಳಲು ಅಥವಾ ಬರೆಯಲು ನನಗೆ ನಿಜಕ್ಕೂ ಹಿಂಜರಿಕೆಯಾಗುತ್ತಿದೆ.

ಅವರ ಹೊಸ ಪುಸ್ತಕಗಳು ಹೊರಬರುವುದನ್ನು ಕಾದುಕೊಂಡಿರುತ್ತಿದ್ದ ನನಗೀಗ ಅವರ ನಿಧನದಿಂದ ವೈಯುಕ್ತಿಕವಾಗಿ ನಷ್ಟವೆನಿಸುತ್ತಿದೆ. ಅವರ ಬರಹಗಳು ಇನ್ನು ಓದಲು ಸಿಗುವುದಿಲ್ಲವಲ್ಲಾ ಎನ್ನುವುದೇ ನನ್ನ ಕೊರಗು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more