ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವ! ಶಿವಾ!! ದಂಗುಬಡಿಸುವ ಶಿವಕಾಶಿ ಪಟಾಕಿ ಉದ್ದಿಮೆ

By Staff
|
Google Oneindia Kannada News


ಬಹಳಷ್ಟು ಜನಕ್ಕೆ ಒಂದು ಸಣ್ಣ ಸಂದೇಹ. ಶಿವಕಾಶಿಯಲ್ಲೇ ಯಾಕೆ ಪಟಾಕಿ ತಯಾರಿಸಬೇಕು. ನಮ್ಮಲ್ಲೆಲ್ಲೂ ಜಾಗ ಇಲ್ವ ಅಂತ.

  • ರಾಜೇಂದ್ರ ಚಿಂತಾಮಣಿ

ದೀಪಾವಳಿ ಶುಭ ತರಲಿ ಪಟಾಕಿ ಅಂದ್ರೆ ಶಿವಕಾಶಿ, ಶಿವಕಾಶಿ ಎಂದರೆ ಬೆಂಕಿಕಡ್ಡಿ, ಕೆಲವೊಂದು ನೋಟ್ ಪುಸ್ತಕಗಳು ಜ್ಞಾಪಕಕ್ಕೆ ಬರುತ್ತವೆ. ಆ ಹೆಸರು ಕೇಳದವರು ವಿರಳ ಅಂತಲೇ ಹೇಳಬೇಕು. ತಮಿಳುನಾಡಿನ ವಿರುದುನಗರ್ ಜಿಲ್ಲೆಗೆ ಸೇರಿದ ಶಿವಕಾಶಿ, ಅದೊಂದು ಪುಟ್ಟ ಜಪಾನ್ ಇದ್ದಂತೆ. ಅಲ್ಲಿ ಮೂರು ಮುಖ್ಯ ಉದ್ದಿಮೆಗಳು ಸದಾ ಸೈರನ್ ಮೊಳಗಿಸುತ್ತಲೇ ಇರುತ್ತವೆ. ಪಟಾಕಿ ಬಾಣಬಿರುಸಿನಿಂದ ಹಿಡಿದು ಬೆಂಕಿಪೊಟ್ಟಣ ಹಾಗೂ ಆಫ್‌ಸೆಟ್ ಮುದ್ರಣದವರೆಗೆ ಇದರ ಖ್ಯಾತಿ ಹಬ್ಬಿದೆ.

ಸಿಗರೇಟ್ ಹಚ್ಚಲು, ಒಲೆ ಉರಿಸಲು, ಒಮ್ಮೆಮ್ಮೆ ಗ್ಯಾಸ್ ಲೈಟರ್ ಇಲ್ಲದಿದ್ದರೆ, ಕರೆಂಟ್ ಕಣ್ಣಾಮುಚ್ಚಾಲೆ ಆಡಿದಾಗ ತಡಕಾಡುವುದು ಬೆಂಕಿಕಡ್ದಿಗಾಗಿಯೇ. ಯಾವುದೇ ಬ್ರಾಂಡ್ ಕಡ್ಡಿಪೆಟ್ಟಿಗೆ ತಗೊಳ್ಳಿ ಅವೆಲ್ಲಾ made in Shivkashi. ಇಡೀ ದೇಶಕ್ಕೆ ಶೇ.80ರಷ್ಟು ಬೆಂಕಿಪೊಟ್ಟಣ, ಶೇ.90ರಷ್ಟು ಬಾಣಬಿರುಸು ಸುಡುಮದ್ದುಗಳು, ಶೇ.60ರಷ್ಟು ಆಫ್‌ಸೆಟ್ ಪ್ರಿಂಟಿಂಗ್ ಕೆಲಸಗಳು ಇಲ್ಲೇ ಜನ್ಮಪಡೆಯುವುದು. ಅಂದಹಾಗೆ ನೀವು ನೈಟಿಂಗೇಲ್ ದಿನಚರಿ ಪುಸ್ತಕ ನೋಡಿರಬಹುದು. ಅದು ತಯಾರಾಗುವುದು ಇಲ್ಲೇ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಶೇ.100ರಷ್ಟು ಮಂದಿಗೆ ಉದ್ಯೋಗ ಒದಗಿಸಿಕೊಟ್ಟ ಊರೆಂದರೆ ಶಿವಕಾಶಿ.

ಶಿವಕಾಶಿಯಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಹಿಂದೂ ಧರ್ಮೀಯರೇ ಇದ್ದರೂ ಮುಸ್ಲಿಂ ಹಾಗೂ ಕ್ರೈಸ್ತಧರ್ಮೀಯರೂ ಅಲ್ಲಲ್ಲಿ ಕಾಣಿಸುತ್ತಾರೆ. ಇಲ್ಲಿನ ಬಾಣಬಿರುಸಿನ ವ್ಯಾಪಾರಿ ವಹಿವಾಟು 800ರಿಂದ 1000 ಕೊಟಿ ರೂಪಾಯಿಗಳು. ಒಟ್ಟು 450 ಪಟಾಕಿ ಕಾರ್ಖಾನೆಗಳು 40,000 ಜನಕ್ಕೆ ಉದ್ಯೋಗ ಕೊಟ್ಟಿವೆ. ವೈರ್ ಕಟಿಂಗ್, ಬಾಕ್ಸ್‌‍ಗಳನ್ನು ತಯಾರಿಸುವ ಕಂಪನಿಗಳು ಪರೋಕ್ಷವಾಗಿ ಒಂದು ಲಕ್ಷಜನಕ್ಕೆ ಉದ್ಯೋಗ ದೊರಕಿಸಿವೆ. ಮಿಲಿಟರಿ ತರಬೇತಿಯ ಶಸ್ತ್ರಾಸ್ತ್ರಗಳೂ ಇಲ್ಲೇ ತಯಾರಾಗುತ್ತವೆ. ವಿಮಾನಕ್ಕೆ ಪಕ್ಷಿಗಳು ಢಿಕ್ಕಿ ಹೊಡೆಯದಂತೆ ವಿಮಾನ ನಿಲ್ದಾಣದಲ್ಲಿ ಹಾರಿಸುವ ರಾಕೆಟ್‌ಗಳು ಸರಬರಾಜಾಗುವುದು ಇಲ್ಲಿಂದಲೇ.

ಬಹಳಷ್ಟು ಜನಕ್ಕೆ ಒಂದು ಸಣ್ಣ ಸಂದೇಹ. ಶಿವಕಾಶಿಯಲ್ಲೇ ಯಾಕೆ ಪಟಾಕಿ ತಯಾರಿಸಬೇಕು. ನಮ್ಮಲ್ಲೆಲ್ಲೂ ಜಾಗ ಇಲ್ವ ಅಂತ. ನೀವು ಕೇಳೋದು ಸರೀನೆ. ಆದ್ರೆ ಇಲ್ಲಿನ ಭಣಭಣ ಎನ್ನುವ ಒಣ ಹವಾಗುಣ, ಕಡಿಮೆ ಮಳೆ, ಈ ವಾತಾವರಣಕ್ಕೆ ಬೆಚ್ಚದ ಕಾರ್ಮಿಕರು. ಹೀಗೆ ಇನ್ನೂ ಏನೇನೋ ಇರುವುದರಿಂದ ಮೂರು ದಿನದ ಹಬ್ಬಕ್ಕಾಗಿ 300 ದಿನವೂ ಕೆಲಸ ಮಾಡಿ ಢಂ ಢಂ ಪಟಾಕಿ ತಯಾರಿಸುತ್ತಾರೆ.

ಸರಪಟಾಕಿ ಸಿಡಿದಂತೆ ಇಲ್ಲಿನ ಪಟಾಕಿ ಉದ್ದಿಮೆಗಳೂ ಆಗಾಗ ಸಿಡಿದು ನಷ್ಟಕ್ಕೆ ಒಳಗಾಗುವುದುಂಟು. 1934ರಲ್ಲಿ ಶುರುವಾದ ಸಣ್ಣ ಪಟಾಕಿ ಉದ್ದಿಮೆ ಇಂದು ಬೃಹದಾಕಾರ ಬೆಳದಿದೆ. ಮೊದಲೆಲ್ಲಾ ಜರ್ಮನಿ, ಯುಕೆಯಿಂದ ಬಾಣಬಿರುಸುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಈಗೆಲ್ಲಾ made in shivkashiನೇ!

ಅಂದಹಾಗೆ ಮರೆತೆ ಶಿವಕಾಶಿಗೆ ಆ ಹೆಸರು ಬಂದದ್ದು ಹೇಗೆಂದು. ಇದರ ಹಿಂದೆ ಸುದೀರ್ಘ ಇತಿಹಾಸವೇ ಇದೆ. ಅದೆಲ್ಲಾ ಇಲ್ಯಾಕೆ. ಕಾಶಿಯಿಂದ ಶಿವಲಿಂಗ ತಂದು ಪ್ರತಿಷ್ಠಾಪಿಸಿದ್ದಕ್ಕೆ ಶಿವಕಾಶಿ ಎಂದು ಪುರಾಣ ತಿಳಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X