• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೂಪಾಯಿ = ಬಲಿಷ್ಠ ಭಾರತ

By Staff
|

ಮೊದಲ ತ್ರೈಮಾಸಿಕ ಲಾಭಾಂಶ ಪ್ರಕಟವಾಗುತ್ತಿದ್ದಂತೆ ಅನೇಕ ದೈತ್ಯ ಕಂಪನಿಗಳು ಥರಗುಟ್ಟುತ್ತಿವೆ. ಹೊರದೇಶಗಳಲ್ಲಿಯೇ ಹೆಚ್ಚಿನ ವ್ಯಾಪಾರ ಹೊಂದಿರುವ ಭಾರತೀಯ ಕಂಪನಿಗಳು ರೂಪಾಯಿಯ ಮೌಲ್ಯವೃದ್ಧಿಯನ್ನು ಹಳಿಯುತ್ತಿವೆ. ಇದು ಹೀಗೇ ಮುಂದುವರಿದರೆ ಭಾರತೀಯ ಕಂಪನಿಗಳು ಭಾರತದಿಂದ ಹೊರಹೋಗಬಹುದು ಎಂದು ನಾಸ್ಕಾಂ ಅಧ್ಯಕ್ಷರು ಬೇರೆ ಹೆದರಿಸಿದ್ದಾರೆ. ಇದು ಸರಿಯೇ? ರೂಪಾಯಿ ಮೌಲ್ಯವೃದ್ಧಿ, ಆಗಬೇಕಾದ ಕೆಲಸ ಕುರಿತು ಒಂದು ಕಣ್ಣುತೆರೆಯಿಸುವ ಲೇಖನ ಇಲ್ಲಿದೆ.


Rupee going stronger against Dollarಇವತ್ತಿನ ದಿನಗಳಲ್ಲಿ ಡಾಲರ್ ಬೆಲೆ ರೂಪಾಯಿಯ ಮುಂದೆ ಗಣನೀಯವಾಗಿ ಕುಸಿದಿದೆ. ಮೊದಲು 1ಡಾಲರ್‌ಗೆ ಸುಮಾರು 47 ರೂಪಾಯಿಗಳಷ್ಟಿದ್ದದ್ದು ಈಗ ಸುಮಾರು 40 ರೂಪಾಯಿಯಾಗಿದೆ.

ಹೀಗಾಗುತ್ತಿದ್ದಂತೆ ಭಾರತದ ಐಟಿ ಕಂಪನಿಗಳು ಹಾವು ತುಳಿದಂತೆ ಬೆಚ್ಚಿಬಿದ್ದು ಆತಂಕಕ್ಕೊಳಗಾಗಿವೆ. ರೂಪಾಯಿಯ ಬೆಲೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಚ್ಚಾದಾಗ ಖುಷಿಯಾಗುವುದನ್ನು ಬಿಟ್ಟು ಐಟಿ ಕಂಪನಿಗಳು ಹೀಗೇಕೆ ದುಗುಡಗೊಂಡಿವೆ ಎಂಬುದನ್ನು ನೋಡಿದರೆ ಈ ಕಂಪನಿಗಳ ಲಾಭವು ನೇರವಾಗಿ ಅಮೆರಿಕದ ಕಂಪನಿಗಳು ಕೊಡುವ ಡಾಲರಗಳ ಮೇಲೆ ನಿಂತಿರುವುದು ತಿಳಿಯುತ್ತದೆ. ಈಗ ರೂಪಾಯಿಯ ಬೆಲೆ ಜಾಸ್ತಿಯಾದುದರಿಂದ ಕಂಪನಿಗಳಿಗೆ ಸಿಗುತ್ತಿದ್ದ ಡಾಲರುಗಳು ರೂಪಾಯಿಗಳಿಗೆ ಪರಿವರ್ತಿತವಾದಾಗ ಸಿಗುತ್ತಿದ್ದ ಲಾಭ ಕಡಿಮೆಯಾಗಿದೆ. ದೇಶದ ಆರ್ಥಿಕತೆಯು ಗಟ್ಟಿಯಾಗುತ್ತಿರುವುದರಿಂದ ದೇಶವು ಸಂಭ್ರಮಮಿಸುತ್ತಿರುವಾಗ ಈ ಐಟಿ ಕಂಪನಿಗಳು ಈ ಬೆಳವಣಿಗೆಯಿಂದ ತಮ್ಮ ಲಾಭಕ್ಕಾದ ಅಲ್ಪಹಾನಿಯನ್ನು ತುಂಬಿಕೊಳ್ಳುವುದಕ್ಕೋಸ್ಕರ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಇನ್ನೂ ಒಂದು ದಿನ ಹೆಚ್ಚು ದುಡಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ. ಈ ಮೂಲಕ ಹೆಚ್ಚಿನ ಕೆಲಸ ಮಾಡಿ ತಮ್ಮ ಲಾಭವನ್ನು ಸರಿದೂಗಿಸಿಕೊಳ್ಳುವುದು ಅವುಗಳ ತಂತ್ರ.

ನಾವು ಯೋಚಿಸಬೇಕಾದುದೇನೆಂದರೆ ಈ ಐಟಿ ಕಂಪನಿಗಳು ಡಾಲರಿನ ಬೆಲೆ ಬಿದ್ದುದಕ್ಕೆ ಆತಂಕಗೊಂಡು ಹುಯಿಲಿಡುವ ಬದಲು ನಮ್ಮ ದೇಶಕ್ಕೆ ಸದೃಢ ಆರ್ಥಿಕತೆಯನ್ನು (strong economy) ತಂದುಕೊಳ್ಳುವಂತ ಸ್ವಾಭಿಮಾನಿ ಕೆಲಸಗಳಲ್ಲೇಕೆ ತೊಡಗುತ್ತಿಲ್ಲ ಎನ್ನುವುದು!

ಇದೆಲ್ಲಕ್ಕಿಂದ ಮೊದಲು ನಮ್ಮ ದೇಶಕ್ಕೆ ಯಾವ ರೀತಿ ಆರ್ಥಿಕ ಸಧೃಡತೆ (economic strength) ಬೇಕು ಎಂಬುದನ್ನು ಯೋಚಿಸೋಣ.

ಅ) ವಿದೇಶಿ ಕಂಪನಿಗಳು ಕೊಡುವ ಕೆಲಸಗಳನ್ನು ಮಾಡುತ್ತಾ, ಅವರು ಉನ್ನತ ತಂತ್ರಜ್ಞಾನದ ಕೆಲಸದಲ್ಲಿ ತೊಡಗಿರುವಾಗ ಅವರ ಕೆಲಸಗಳಿಗೆ ಬೆಂಬಲ, ಸೇವೆ ನೀಡುವ, ನಿರ್ವಹಣಾ ಕೆಲಸಗಳನ್ನು ಮಾಡುತ್ತಾ, ಅವರು ಹೇಳಿದ ಬದಲಾವಣೆಗಳನ್ನು ಮಾಡುತ್ತಾ, ಅವರಿಗೆ ಬೇಕಾದ ಸಾಫ್ಟ್‌ವೇರ್ ಇತ್ಯಾದಿ ಉತ್ಪನ್ನಗಳಿಗೆ ಕೋಡಿಂಗ್ ಮಾಡುತ್ತಾ, ತಡರಾತ್ರಿಯವರೆಗೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಾ , ಒಟ್ಟಾರೆ ಇಂತಹ low profile ಕೆಲಸಗಳಿಗೆ ತಕ್ಕುದಾದ ಅಗ್ಗದ ಮಾನವ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುವ ಆರ್ಥಿಕತೆ ಬೇಕೆ?

ಅಥವಾ

ಬ) ನಮ್ಮದೇ ಆದ ಸೃಜನಶೀಲ, ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತಾ, ಹೊಸ ಹೊಸ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಾ, ಭಾರತದ ಉತ್ಪನ್ನಗಳಿಗೆ (software/product) ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತೆ ಮಾಡಿ, ಎಷ್ಟು ಡಾಲರಗಳಿಗೆ ಎಷ್ಟು ರೂಪಾಯಿಯೆಂದು ತಲೆಕೆಡಿಸಿಕೊಳ್ಳದೇ ದಿನದ ಸಮಯದಲ್ಲಿ ದುಡಿದು ಉಳಿದ ಸಮಯವನ್ನು ವೈಯಕ್ತಿಕ, ಸಾಮಾಜಿಕ ಜೀವನಕ್ಕೆ ತೊಡಗಿಸಿಕೊಂಡು ಬದುಕುವ ಸ್ವಾವಲಂಬೀ ಆರ್ಥಿಕತೆ ಬೇಕೆ?

ನಿಜವಾಗಿಯೂ ನೋಡಿದರೆ ಇವತ್ತಿನ ಅರ್ಥಿಕತೆ ಬೆಳೆದು ನಿಂತಿದ್ದು, ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ಎಲ್ಲವೂ ಮೊದಲನೆಯ (ಅ) ರೀತಿಯ ಆರ್ಥಿಕತೆಯಿಂದ ಅನ್ನುವುದರಲ್ಲಿ ಸಂಶಯವಿಲ್ಲ. ಬೇರೆ ದೇಶಗಳಿಂದ ನಮಗೆ ಕೆಲಸಗಳು, ಗುತ್ತಿಗೆಗಳು ಹರಿದು ಬಂದಿದ್ದು, ಬರುತ್ತಿರುವುದು ಎಲ್ಲವೂ ಇಲ್ಲಿ ಸಿಗುವ ಅಗ್ಗದ ಮಾನವ ಸಂಪನ್ಮೂಲದಿಂದ ಎಂಬುದೂ ಸತ್ಯ. ಇಷ್ಟು ದಿನವೇನೋ ಹೀಗಾಯಿತು. ಆದರೆ ನಾವು ಶಾಶ್ವತವಾಗಿ ಇದೇ ರೀತಿಯಲ್ಲೆ ಉಳಿಯಬೇಕೆ? ನಾವು ಅಗ್ಗದ ಸಂಪನ್ಮೂಲವೆಂದು ಅನಿಸಿಕೊಂಡಿರುವುದಕ್ಕೆ ಕಾರಣವೇ ನಮ್ಮ ದುರ್ಬಲ ಆರ್ಥಿಕತೆ. ಇವತ್ತು ನಾವು ಅಮೆರಿಕದಲ್ಲಿ ಏನಾದರೂ ಆದರೆ ಅಲ್ಲಿನ ನೇರ ಪರಿಣಾಮ ಇಲ್ಲಿ ಅನುಭವಿಸುತ್ತೇವೆ, ಡಾಲರ್ ಎದುರು ರೂಪಾಯಿ ಚಿಗಿತುಕೊಂಡರೆ ಆತಂಕಕ್ಕೊಳಗಾಗುತ್ತೇವೆ.

ಎಂಥಾ ವಿಪರ್ಯಾಸ !!

1947ರಲ್ಲಿ ಸ್ವಾತಂತ್ರ್ಯ ಬಂದಾಗ ಒಂದು ಡಾಲರು = ಒಂದು ರೂಪಾಯಿ ಆಗಿತ್ತು ಎಂಬುದು ಎಷ್ಟು ಜನರಿಗೆ ಗೊತ್ತು? ಆದರೆ ಅದೇ ಆರ್ಥಿಕತೆಯನ್ನು ನಾವೇಕೆ ಉಳಿಸಿಕೊಳ್ಳಲು ಆಗಲಿಲ್ಲ?

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ನಮಗೆ ಬೇಕಾಗುವ ಎಲ್ಲಾ ವಸ್ತುಗಳನ್ನು / ತಂತ್ರಜ್ಞಾನಗಳನ್ನು ನಾವೇ ತಯಾರು ಮಾಡಿಕೊಳ್ಳುವಷ್ಟು ಮಟ್ಟಿಗೆ ನಮ್ಮಲ್ಲಿ skilled, unskilled ಸಂಪನ್ಮೂಲ ಇದೆ. ಈ ಐಟಿ ಕಂಪನಿಗಳು ಈಗಲಾದರೂ ಡಾಲರ್ ಬೆಲೆ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಇಲ್ಲಿಯೇ ಹೊಸ ಸಾಫ್ಟ್ ವೇರ್/ ಟೆಕ್ನಾಲಜಿಗಳನ್ನು ತಯಾರಿಸುವ ಕೆಲಸಗಳಲ್ಲಿ ತೊಡಗಬೇಕು. ಇದುವರೆಗೂ ಈ ಕಂಪನಿಗಳು ಇಂತಹ ಹೊಸದನ್ನು ಮಾಡಿರುವುದು ಬಹಳ ಕಡಿಮೆ. ನಮ್ಮಲ್ಲೇಕೆ ಇದುವರೆಗೂ Operating Systems, Compilers, database systems, development platforms ಇತ್ಯಾದಿಗಳು ತಯಾರಾಗುತ್ತಿಲ್ಲ? ನಮ್ಮಲ್ಲೇಕೆ ಫೋಟೋಶಾಪ್, ಫ್ಲಾಶ್ ಇತ್ಯಾದಿ ಟೂಲ್‌ಗಳು ಹೊರಬರುತ್ತಿಲ್ಲ?

ನಮ್ಮಲ್ಲಿ ಇದನ್ನೆಲ್ಲಾ ಮಾಡುವ ಪ್ರತಿಭೆ, ತಾಕತ್ತು, ಸವಲತ್ತು ಎಲ್ಲವೂ ಇದೆ. ಆದರೆ ನಾವು ಮಾಡುತ್ತಿರುವುದು ಅಮೆರಿಕದ ಕಂಪನಿಗಳಿಗೆ. ನಮ್ಮಿಂದ ಅಗ್ಗದ ಬೆಲೆಗೆ ಮಾಡಿಸಿಕೊಂಡು ಅವರು ಅದೇ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಿ ಹೆಚ್ಚಿನ ಲಾಭ ತಂದುಕೊಳ್ಳುತ್ತಾರೆ. ಉದಾಹರಣೆಗೆ: ಬೋಯಿಂಗ್, ಏರ್ ಬಸ್ ವಿಮಾನಗಳ ಮೊದಲ ಹಂತದ ಕೆಲಸಗಳು ಭಾರತದ ಕಂಪನಿಗಳಲ್ಲಿ ನೆಡೆಯುತ್ತಿವೆ. ಆದರೆ ಅದೇ ವಿಮಾನಗಳ ಅಭಿವೃದ್ಧಿ ಕೆಲಸಗಳು ನೆಡೆಯುತ್ತಿರುವುದು ವಿದೇಶಗಳಲ್ಲಿ. ನಮಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದರೂ ಸಹ ಅವರ ಕೆಲಸಗಳನ್ನು ಮಾಡಿಕೊಟ್ಟು ನಂತರ ಅದನ್ನೇ ನಾವು ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತಿದ್ದೇವೆ. ಅದರ ಬದಲು ನಮ್ಮ ಕಂಪನಿಗಳೇ ತಮ್ಮಲ್ಲೇ ಇಂತಹ ಉತ್ಪನ್ನಗಳನ್ನು ತಯಾರು ಮಾಡುವ ಕೆಲಸದಲ್ಲೇಕೆ ತೊಡಗಬಾರದು? ಕೊನೆ ಪಕ್ಷ ಈ ಕೆಲಸಕ್ಕಾಗಿ ತಮ್ಮ ಕಂಪನಿಗಳಲ್ಲಿ ಒಂದು ಸಣ್ಣ ವಿಭಾಗವನ್ನೇಕೆ ತೆರೆಯಬಾರದು?

ಭಾರತವು ಸೂಪರ್ ಪವರ್ ಆಗಬೇಕು, ವಿಶ್ವದ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ನಿಲ್ಲಬೇಕೆಂದು ಬಯಸುತ್ತೇವೆ. ಹೀಗೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಒಂದು ಬಲಿಷ್ಠ ಆರ್ಥಿಕತೆ ಹೊರತು ಬೇರೇನಲ್ಲ. ಆದರೆ ಹೀಗೆ ನಮ್ಮ ರೂಪಾಯಿ ಅಪಮೌಲ್ಯವನ್ನೇ ಬಂಡವಾಳ ಮಾಡಿಕೊಂಡು ಮುಂದುವರೆಯುತ್ತಾ ಹೋದರೆ ನಮ್ಮ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇರುವುದಿಲ್ಲ. ನಮ್ಮ ರೂಪಾಯಿ ಮೌಲ್ಯ ದಿನೇ ದಿನೇ ಹೆಚ್ಚ ಬೇಕು. Low profile ಕೆಲಸಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಯಾತ್ಮಕ ಕೆಲಸಗಳಲ್ಲಿ, ಉನ್ನತ ತಂತ್ರಜ್ಞಾನದ ಕೆಲಸಗಳಲ್ಲಿ, ನಮ್ಮ ದೇಶಕ್ಕೆ, ನಮ್ಮ ಆರ್ಥಿಕತೆಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಬೇಕು. ಇವು ಬರೀ ಸಾಫ್ಟ್‌ವೇರ್‌ಗೆ ಸೀಮಿತವಾಗಬೇಕಿಲ್ಲ. ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೂ ಅಭಿವೃದ್ಧಿ ಕಾರ್ಯಗಳನ್ನು ವಿಸ್ತರಿಸಬಹುದು. ನಮ್ಮ ಉತ್ಪನ್ನಗಳನ್ನು , ನಮ್ಮ ಸಾಫ್ಟ್‌ವೇರ್, ಸಲಕರಣೆಗಳನ್ನು ಕೊಳ್ಳಲು, ನಮ್ಮಲ್ಲಿ ತಯಾರಾದ ಮೊಬೈಲು, ವಿಮಾನ, ಆಟೊಮೊಬೈಲುಗಳನ್ನು ಕೊಳ್ಳಲು ಇತರ ರಾಷ್ಟ್ರಗಳು ತವಕಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು.

ರೂಪಾಯಿ ಬೆಲೆ ಹೆಚ್ಚಾದಾಗ ನಾವು ಬೋಯಿಂಗ್ ವಿಮಾನ ಕೊಳ್ಳಲು ಕೋಟ್ಯಂತರ ರೂಪಾಯಿ ಸುರಿಯಬೇಕಿಲ್ಲ. ವಿದೇಶ ಪ್ರಯಾಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ. ಸುಲಭವಾಗಿ ಯಾವ ದೇಶಕ್ಕಾದರೂ ಹೋಗಬಹುದು. ಆಗ ಜಗತ್ತಿನ ಯಾವುದೇ ವಸ್ತುವಿನ ಬೆಲೆ ನಮ್ಮ ಕೈಗೆಟುಕುವ ಮಟ್ಟ ತಲುಪುತ್ತದೆ. ಮಾರುತಿ ಕಾರು ಹಾಗೂ ಬೆಂಜ್ ಕಾರು ಕೊಳ್ಳುವುದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾವು ಕುಲು ಮನಾಲಿಗೆ ಪ್ರವಾಸ ಹೋಗುವಂತೆ ಸ್ವಿಡ್ಜರ್ಲ್ಯಾಂಡಿಗೂ ಪ್ರವಾಸ ಹೋಗಬಹುದು. ಅಮೆರಿಕಾದ ಜನರು ಸುಲಭ ವಿಶ್ವ ಪ್ರವಾಸ ಮಾಡಲು ಕಾರಣವಾಗಿರುವುದು ಅವರು ಹೆಚ್ಚು ದುಡಿಯುತ್ತಾರೆ, ಗಳಿಸುತ್ತಾರೆ ಎಂಬುದು ಅಲ್ಲ. ಬದಲಾಗಿ ಅವರ ಕರೆನ್ಸಿಗಿರುವ ಮೌಲ್ಯದಿಂದ. ರೂಪಾಯಿಯ ಮೌಲ್ಯವು ಹೆಚ್ಚಾದಾಗ ನಮಗೆ ಇವೆಲ್ಲವೂ ಸಾಧ್ಯವಾಗುತ್ತದೆ.

Low End ಕೆಲಸಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದರ ಮೇಲೆ ಅವಲಂಬಿತವಾಗಿ ಉಳಿದು ಬಿಡುವ ಬದಲು ಕ್ರಿಯಾತ್ಮಕ ಕೆಲಸಗಳಿಂದ, ಸಂಶೋಧನೆಗಳಿಂದ, ಉತ್ಪನ್ನಗಳಿಂದ ನಮ್ಮ ಸ್ವಾವಲಂಬಿ ಬಲಿಷ್ಠ ಆರ್ಥಿಕತೆಯನ್ನು ನಿರ್ಮಿಸಿಕೊಳ್ಳುವ ಯಶಸ್ಸಿನ ಪಥದಲ್ಲಿ ಸಾಗೋಣ.

ಆ ನಿಟ್ಟಿನಲ್ಲಿ ಪ್ರಯಾಣ ಈಗ ಆರಂಭಗೊಂಡಿದೆ. ಇದು ಎಲ್ಲದಕ್ಕೂ ನಾಂದಿಯಾಗಲಿ.

(ರುಪಾಯಿ ಮೌಲ್ಯವರ್ಧನೆ, ಬಹುರಾಷ್ಟ್ರೀಯ ಕಂಪನಿಗಳ ಚಟಪಡಿಕೆ, ಭಾರತದ ಆರ್ಥಿಕ ಸ್ಥಿತಿ ಕುರಿತಂತೆ ಚಿಂತನೆಗೆ ಹಚ್ಚಿದ ಲೇಖನವನ್ನು ವಿಕಾಸ ಹೆಗಡೆ ಕನ್ನಡೀಕರಿಸಿದ್ದಾರೆ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more