• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನೂ ಅಲ್ಲದವರು ಕಿರುತೆರೆಯಲ್ಲಿ ಎಲ್ಲವೂ ಆಗುತ್ತಾರೆ! : ಹೂಲಿ ಗೇಲಿ

By Staff
|

ಈಟೀವಿಯಲ್ಲಿ ಮೂಡಲ ಮನೆಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ, ವೀಕ್ಷಕರು ಪುಳಕಕೊಂಡಿದ್ದರು. ಭಾಷೆಯ ಗತ್ತು,ಗಮ್ಮತ್ತಿಗೆ ಭಲೇ ಭಲೇ ಅನ್ನುತ್ತಿದ್ದರು. ತೆರೆಮರೆಯಲ್ಲಿ ಕೂತು, ಸಂಭಾಷಣೆ ಬರೆಯುತ್ತಿದ್ದವರು; ಹೂಲಿ ಶೇಖರ್. ನಾಟಕ, ಕಿರುತೆರೆ ಎಂದೆಲ್ಲಾ ಬಿಜಿಯಾಗಿರುವ ಅವರ ಜೊತೆ ಮಾತುಕತೆ.


An interview with Shekhar Hooliಮೂಡಲ ಮನೆಆರಂಭವಾಗುವ ಮೊದಲು, ಉತ್ತರ ಕರ್ನಾಟಕದ ಭಾಷೆ ಎಂದರೆ ಹಾಸ್ಯ ಎನ್ನುವ ವ್ಯಂಗ್ಯಕ್ಕೆ ಕಾರಣವಾಗಿತ್ತು. ಈ ಧಾರಾವಾಹಿ ಬಂದ ನಂತರ ಜನರ ದೃಷ್ಟಿ ಬದಲಾಯಿತಲ್ಲಾ.. ಹೇಗೆ?

ಹೌದು. ಮೂಡಲ ಮನೆ ಬರುವ ಮೊದಲು ಉತ್ತರ ಕರ್ನಾಟಕದ ಭಾಷೆಯನ್ನು ತುಂಬ ಲಘುವಾಗಿ ಕಂಡ ಉದಾಹರಣೆಗಳಿವೆ. ಪೊಲೀಸನ ಭಾಷೆಯಾಗಿ, ಕೆಲಸದವನ ಭಾಷೆಯಾಗಿ, ಇಲ್ಲಾ ದ್ವಂಧ್ವಾರ್ಥ ಕೊಡುವ ಭಾಷೆಯಾಗಿ ಇದು ಬಳಕೆಯಲ್ಲಿತ್ತು. ಈ ಭಾಷೆಗೆ ಒಂದು ಹದವಿದೆ, ಲಯವಿದೆ, ಗಾಂಭೀರ್ಯವಿದೆ, ಶ್ರೀಮಂತಿಕೆಯಿದೆ ಎಂದು ತೋರಿಸಿಕೊಡುವ ನನ್ನಾಸೆ ಬಹುದಿನದ್ದು. ಅದಕ್ಕೆ ಮೂಡಲ ಮನೆ ಒಂದು ವೇದಿಕೆಯಾಯಿತಷ್ಟೆ.

ನೀವು ಉತ್ತರ ಕರ್ನಾಟಕದ ಭಾಷೆಗೆ ಸೀಮಿತರಾಗಲು ಬಯಸುತ್ತೀರೋ ಅಥವಾ ಬೇರೆಯ ಸೀಮೆಯ ಭಾಷೆಗೂ ಬರೆಯಲು ಬಯಸುತ್ತೀರೋ?

ಕರ್ನಾಟಕವೆಂದರೆ ಹಲವು ಪ್ರಾದೇಶಿಕತೆಗಳ ಮಿಲನ ಎಂದೇ ಅರ್ಥ. ಕರಾವಳಿ ಕನ್ನಡ, ಗುಲಬರ್ಗ ಕನ್ನಡ, ಮುಂಬೈ ಕನ್ನಡ, ಮದ್ರಾಸ್ ಕನ್ನಡ, ಮೈಸೂರು ಕನ್ನಡ ಮತ್ತು ನಡುಭಾಗದ ಕನ್ನಡ ಎಲ್ಲಾ ಸೇರಿ ಅಖಿಲ ಕನ್ನಡ ನಾಡು ಆದದ್ದು. ಒಬ್ಬ ಲೇಖಕನಿಗೆ ಸೀಮೆ ಎಂಬುದಿಲ್ಲ. ಆತನ ಸೃಜನಶೀಲತೆ ಎಂದೂ ನಿಂತ ನೀರಾಗುವುದಿಲ್ಲ. ಭಾಷೆಯೊಂದೇ ಕನ್ನಡ. ಪ್ರಾದೇಶಿಕತೆ ಎಂಬುದು ನಮ್ಮ ನಡುವೆ ಇರುವ ನಿರಂತರತೆ ಅಷ್ಟೆ. ನಾನು ಈ ನಿರಂತರತೆಯೊಂದಿಗೆ ಇರಬಯಸುತ್ತೇನೆ. ಹೀಗಾಗಿ ಕಿಚ್ಚು, ಕೊಲೆಯಂಥ ಧಾರಾವಾಹಿಗಳಲ್ಲಿ ಮೈಸೂರು ಕನ್ನಡವನ್ನೂ ಬಳಸಿದ್ದೇನೆ.

ಮೂಡಲಮನೆ ಧಾರಾವಾಹಿಗೆ ಅತ್ಯುತ್ತಮ ಸಂಭಾಷಣಾಕಾರ ಪ್ರಶಸ್ತಿ ಲಭಿಸಿದೆ. ಹೀಗಿದ್ದಾಗ ಮತ್ತೊಂದು ಉತ್ತರ ಕರ್ನಾಟಕ ಭಾಷೆಯ ಪ್ರಯತ್ನ ಏಕೆ ಮಾಡಬಾರದು?

ಮಾಡಿದ್ದೇನೆ,ಮಾಡುತ್ತಿದ್ದೇನೆ. ಸದ್ಯ ಕನ್ನಡ ಕಸ್ತೂರಿ ವಾಹಿನಿಗಾಗಿ ಆ ಊರು ಈ ಊರುಧಾರಾವಾಹಿಯಲ್ಲಿ, ಅಪ್ಪಟ ಉತ್ತರ ಕರ್ನಾಟಕದ ಭಾಷೆಯದೇ ದರ್ಬಾರು ಇರುತ್ತದೆ.

ಕೆಲವು ಧಾರಾವಾಹಿಗಳಲ್ಲಿ ನಾವು ನೋಡಿದ್ದೇವೆ. ಸಂಭಾಷಣೆ, ಚಿತ್ರಕತೆ, ನಿರ್ದೇಶನ ಪಟ್ಟ ಒಬ್ಬರ ಹೆಸರಿನಲ್ಲಿರುತ್ತದಲ್ಲ? ಇಷ್ಟೊಂದು ಕೆಲಸ ಒಬ್ಬರಿಂದಲೇ ಸಾದ್ಯವೇ?

ಏನೂ ಇಲ್ಲದವರು ಎಲ್ಲವೂ ಆಗಬಯಸುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಅಂದರೆ ಈಗ ಬರುತ್ತಿರುವ ಅಂಥ ಕೆಲವು ಧಾರಾವಾಹಿಗಳು.

ಕೆಲವು ಸಲ ಬರಹಗಾರರ ಶ್ರಮ ವ್ಯರ್ಥವಾಗುವ ಸಾಧ್ಯತೆ ಇದೆ. ಹೇಗೆಂದರೆ ಎಷ್ಟೋ ದಿನ ಕುಳಿತು ಬರಹಗಾರ ಒಳ್ಳೆಯ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುತ್ತಾನೆ. ಆದರೆ ಧಾರವಾಹಿ ಕೊನೆಯಲ್ಲಿ ಹೆಗ್ಗಳಿಕೆ ಹೋಗೋದು ಪಾತ್ರಧಾರಿಗಳಿಗೆ ಹಾಗು ನಿರ್ದೇಶಕನಿಗೆ. ಇದರ ಬಗ್ಗೆ ಏನನಿಸುತ್ತದೆ?

ಇದು ಕನ್ನಡದಲ್ಲಿ ಮಾತ್ರಸಾಧ್ಯ. ಮರ್ಯಾದೆ ಇದ್ದವರು ಯಾರೂ ಹಾಗೆ ಮಾಡುವುದಿಲ್ಲ. ಇಲ್ಲದವರು ಎಲ್ಲವನ್ನು ಮಾಡುತ್ತಾರೆ. ಇವತ್ತು ದಿನಕ್ಕೆ 60ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರ ಆಗುತ್ತವೆ. ಲೇಖಕನ ಧಾರಾವಾಹಿಗಳು ಮಾತ್ರ ಯಶಸ್ಸು ಕಂಡಿವೆ. ಲೇಖಕರ ಧಾರಾವಾಹಿ ಅಂದರೆ ಕತೆ, ಚಿತ್ರಕತೆ, ಸಂಭಾಷಣೆಗೆ ಮರ್ಯಾದೆ ಸಿಕ್ಕ ಧಾರಾವಾಹಿಗಳು ಎಂದರ್ಥ.

ಒಬ್ಬ ಬರಹಗಾರನಿಗೆ ಒಂದೇ ಸೀರಿಯಲ್ ನಿರಂತರವಾಗಿ ಬರೆಯುವುದು ಕಷ್ಟ ಅಂತ ಕೇಳಿದ್ದೆ. ಹೀಗಿದ್ದಾಗ ನೀವು ಎರಡು ಧಾರವಾಹಿಗಳಿಗೆ ಸಂಭಾಷಣೆ ಬರೆಯುತ್ತೀದ್ದೀರಿ. ಇದು ಹೇಗೆ?

ನಾನು ದಿನಕ್ಕೆ ಎರಡು ಧಾರಾವಾಹಿಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುತ್ತೇನೆ. ಹೇಗಂತೀರಾ? ಒಂದು ಮನೆಯಲ್ಲಿ ನಾಲ್ಕೈದು ಕೋಣೆಗಳಿದ್ದರೂ ಯಾವ ಕೋಣೆಯಲ್ಲಿ ಏನು ಇದೆ, ಏನು ಇಲ್ಲ ಎಂಬುದು ಮನೆಯ ಯಜಮಾನನಿಗೆ ಮಾತ್ರ ಗೊತ್ತಿರುತ್ತದೆ. ಅಂಥ ಯಜಮಾನಿಕೆ ಇದ್ದಲ್ಲಿ ಮಾತ್ರ ಹೀಗೆ ಬರೆಯಲು ಸಾಧ್ಯ.

ಸಿನಿಮಾದ ಕಡೆ ಒಲವಿಲ್ಲವೇ?

ಯಾಕಿಲ್ಲ. ಈಗಾಗಲೇ ಎರಡು ಸಿನಿಮಾಗಳಿಗೆ ಬರೆದಿದ್ದೇನೆ. ಅವು ಇನ್ನು ಚಿತ್ರೀಕರಣ ಪ್ರಾರಂಭಿಸಿಲ್ಲ. ಅಲ್ಲಿ ಟೋಪಿ ಹಾಕುವ ಜನ ಇದ್ದಾರೆ. ಹಾಗಾಗಿ ಜಾಗೃತೆ ಇಟ್ಟುಕೊಳ್ಳಬೇಕಾಗಿದೆ. ಆಶೀರ್ವಾದ ಮಾಡುವ ಕೈಗಳಿಗೆ ನನ್ನ ತಲೆ ಸಿಗುತ್ತದೆ. ಟೋಪಿ ಹಾಕುವ ಕೈಗಳಿಗೆ ಸಿಗುವುದಿಲ್ಲ.

ನೀವು ಕಿರುತೆರೆ ಪ್ರವೇಶಿಸಿದಾಗಿನಿಂದ ನಾಟಕಗಳತ್ತ ಒಲವು ಕಡಿಮೆಯಾಗಿದೆ ಅನಿಸುತ್ತಿದೆಯೇ? ಸದ್ಯದಲ್ಲಿ ಯಾವ ನಾಟಕ ಪ್ರಸ್ತುತದಲ್ಲಿದೆ?

ನಾಟಕದ ಬರವಣಿಗೆ ನಿಂತಿಲ್ಲ. ಈ ವರ್ಷ ಎರಡು ನಾಟಕಗಳನ್ನು ಪ್ರಕಟಿಸಿದ್ದೇನೆ. ಕಡಿಮೆಯಾಗಿರುವುದು ರಂಗ ಚಟುವಟಿಕೆ. ಮೊದಲಾದರೆ ತಂಡ ಕಟ್ಟಿಕೊಂಡು ರಂಗಮಂದಿರದ ಕಸ ಹೊಡೆಯುತ್ತಿದೆ. ಪರದೆ ಹೊಲಿಯುವುದರಿಂದ ಹಿಡಿದು ಗ್ರೀನ್ ರೂಂ, ಪ್ರಾಕ್ಟೀಸ್ ವರೆಗೆ ಕೆಲಸ ಮಾಡುತ್ತಿದೆ. ಈಗ ಸಮಯ ಸಾಲುತ್ತಿಲ್ಲ. ದಿನ ಹನ್ನೆರಡು ಗಂಟೆಗಳ ಕಾಲ ಬರೆಯಬೇಕಾಗಿದೆ. ಪ್ರತೀ ಧಾರಾವಾಹಿ ಬರವಣಿಗೆಗೆ 6ಗಂಟೆ ಮೀಸಲಿಟ್ಟಿದ್ದೇನೆ.

ನಿಮ್ಮ ಕಲ್ಯಾಣದಲ್ಲಿ ಒಂದು ಕ್ರಾಂತಿನಾಟಕ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಅದರ ಬಗ್ಗೆ ಹೇಳಿ..

ಕಲ್ಯಾಣದಲ್ಲಿ ಒಂದು ಕ್ರಾಂತಿ ನಾಟಕಕ್ಕೆ ದೊಡ್ಡ ಗಲಾಟೆಯೇ ನಡೆದು ಹೋಯಿತು. 1983ರ ಸಮಯ. ಬಾಗಲಕೋಟೆ, ಇಳಕಲ್ಲು, ಧಾರವಾಡ ಕೂಡಲ ಸಂಗಮದಲ್ಲಿ ಪ್ರಯೋಗ ನಡೆಯುತ್ತಿದ್ದಾಗ ಎದುರಾದ ಗಲಾಟೆ ಯನ್ನು ಲೆಕ್ಕಿಸದೆ ನಾಟಕ ಆಡಲಾಯಿತು. ಪ್ರತಿಭಟನೆ ಯಾಕೆ ಎಂಬುದು ಅದನ್ನು ಮಾಡಿದವರಿಗೆ ಗೊತ್ತಿರಲಿಲ್ಲ. ಈಗಲೂ ಆ ನಾಟಕ ಪ್ರಸ್ತುತವಾಗಿಯೇ ಇದೆ.

ನೀವು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದೀರಿ ಅಂತ ಕೇಳಿದ್ದೆ, ಅದರ ಅನುಭವ ಹೇಗಿತ್ತು?

ನಾನು ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದು, ಅಂಕೋಲೆ, ದಾಂಡೇಲಿಯಲ್ಲಿ ಈ ಬಗ್ಗೆ ಭಾಷಣ ಮಾಡಿದ್ದು, ಆಗಿನ ಜನರ ಪ್ರತಿಕ್ರಿಯೆ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಕನ್ನಡ ಕೆಲಸಗಳಿಗೆ ಮುನ್ನುಗ್ಗುವ ಪ್ರಕೃತಿ ಇಂದಿಗೂ ಇದೆ.

ಇಂದಿನ ಯುವ ಬರಹಗಾರರ ಬಗ್ಗೆ ಏನನಿಸುತ್ತದೆ?

ಉತ್ಸಾಹವಿದೆ. ಓದು ಸಾಲದು. ಅನುಭವ, ಶಬ್ದಸಂಪತ್ತು ಬಳಕೆಯ ಜಾಣತನ ರೂಢಿಸಿಕೊಳ್ಳಬೇಕು. ಬಹಳ ಸಲ ಹೊಸಬರು ಬರೆದದ್ದೆಲ್ಲ ರಿಕಾರ್ಡ್ ಆಗಬೇಕು ಅನ್ನುತ್ತಾರೆ. ನಾನು 35ವರ್ಷದಿಂದ ಬರೆಯುತ್ತಲೇ ಬಂದಿದ್ದೇನೆ. ಆದಾಗಲೂ ಏನೋ ಕೊರತೆ ಕಾಣುತ್ತಲೇ ಇರುತ್ತದೆ. ಕಾಡುತ್ತಲೇ ಇರುತ್ತದೆ.

ನಿಮ್ಮ ಮುಂದಿನ ಆಸೆ?

ಒಂದು ಧಾರಾವಾಹಿ ಮತ್ತು ಸಿನಿಮಾ ನಿರ್ದೇಶಿಸಬೇಕು.

ಪೂರಕ ಓದಿಗೆ-

ಅಂತರ್ಜಾಲ ಮತ್ತು ‘ಹೂಮನೆ’ಯಲ್ಲಿ ಹೂಲಿ ಶೇಖರ್‌!

ಹೂಲಿಶೇಖರ್‌ರ ಕತೆ ‘ಪ್ರೀತಿಗೊಂದು ಕಣ್ಣು’

ತಿಳಿದಿಲ್ಲ ನಮಗ ಪೂರಾ : ಒಂದು ಲಾವಣಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X