ಪುಣ್ಯಕೋಟಿ ಹಾಡು : ಒಂದು ಹೊಸ ನೋಟ!


ಅತ್ಯಂತ ಮಹತ್ವದ ಘಟ್ಟವೆಂದರೆ- ‘ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ...’. ಪುಣ್ಯಕೋಟಿ ಹುಲಿಯ ಬಾಯಿಗೆ ಬೀಳುತ್ತೇನೆಂದಾಗ, ಕರು ‘ಯಾಕೆ ಸುಮ್ಮನೆ ಹೋಗ್ತೀಯ, ಇಲ್ಲೇ ಇರು, ನಮಗ್ಯಾರು ಗತಿ’ ಅಂತ ಗೋಳಿಡುತ್ತೆ. ಆದರೆ ಪುಣ್ಯಕೋಟಿ ಸತ್ಯನಿಷ್ಠ. ಕೊಟ್ಟಬಾಷೆಯ ಮೀರಲಾರೆನೆಂದು ಹೊರಡಲು ಅಣಿಯಾಗುತ್ತೆ. ಆದರೆ, ಸತ್ಯನಿಷ್ಠನಾದ ತನ್ನ ಕುಡಿಯನ್ನು ದಯಮಾಡಿ ನಿರ್ಲಕ್ಷಿಸಬೇಡಿ ಅಂತ ಕೇಳಿಕೊಳ್ಳುತ್ತದೆ.

ಸತ್ಯ, ಧರ್ಮ, ಕ್ರಿಯೆ, ಪುಣ್ಯ ಎಲ್ಲವೂ ಒಂದೇ ತಾಯಿಯ ಮಕ್ಕಳು. ಸತ್ಯ ಕಣ್ಣಮುಂದೆ ರಾಚುವಾಗ ಢಂಭಾಚಾರದಲಿ ಅದರ ಮೇಲೆ ಹಾಯಬೇಡಿ. ಅದನ್ನು ತಿವಿದು ಮುನ್ನಡೆಯಬೇಡಿ. ನಿಮ್ಮನ್ನು ಹಿಂಬಾಲಿಸಿದರೆ ಒದ್ದು ಮುನ್ನಡೆಯಬೇಡಿ. ಇದು ಸತ್ಯನಿಷ್ಠನಾದ ಪುಣ್ಯಕೋಟಿಯ ಕುಡಿ. ಇದು ನಿಮ್ಮ ಕಂದ, ಜೋಪಾನ ಮಾಡಿ. ಸತ್ಯದ ಕೈ ಬಿಡಬೇಡಿ. ಯಾವ ಕಾಲಕ್ಕೂ ಮುಗ್ಧ-ಸಾಧಾರಣ-ಸತ್ಯತಪ್ತರನ್ನು ಹಸಿದ ವ್ಯಾಘ್ರ ಹೊಂಚು ಹಾಕಿ ತಿನ್ನಲು ಸಿದ್ಧವಾಗಿಯೇ ಇರುವುದೆಂದು ಸತ್ಯನಿಷ್ಠ ಪುಣ್ಯಕೋಟಿ ತನ್ನ ಕುಡಿಗೆ ಎಚ್ಚರಿಸುತ್ತದೆ.

ಪುಣ್ಯಕೋಟಿ ಏಕೆ ಹಿಂದಿರುಗಬೇಕು? ಕೊಟ್ಟ ಮಾತಿಗೆ ತಪ್ಪಿದರೆ ಇಂದಲ್ಲ ನಾಳೆ ಹುಲಿ ಹೊಂಚು ಹಾಕಿ ತನ್ನನ್ನು ಹಿಡಿದೇ ಹಿಡಿಯುತ್ತಾನೆ ಎಂದುಕೊಂಡರೂ, ಎಂದಾದರೊಂದು ದಿನ ಸಾಯುವುದೇ ಅಂತ ಯಾರಾದರೂ ಕತ್ತು ಕುಯ್ದು ಕೊಳ್ಳುತ್ತಾರಾ? ಹುಲಿ ನಾಳೆಯವರೆಗೆ ಬದುಕಿರಬಹುದೆಂಬ ಖಾತ್ರಿಯೇನು?. ಯಾವ ದೃಷ್ಟಿಯಿಂದ ನೋಡಿದರೂ ಪುಣ್ಯಕೋಟಿ ಹಿಂದಿರುಗಿದ್ದು ಸತ್ಯನಿಷ್ಠೆಯೇ. ಅದು ಹೋಗುವುದಾದರು ಹೇಗೆ?. ‘ಗೋವು ಸ್ನಾನವ ಮಾಡಿಕೊಂಡು.....’. ಸಾವನಪ್ಪಲು ಶುಚೀಭೂತಳಾಗಿ ಸಾವಿನ ಬಾಗಿಲಿಗೆ ಹೊರಟು ನಿಂತಿರುವ ಪುಣ್ಯಕೋಟಿಯದು ಎಂತಹ ಸಂಸ್ಕಾರ!

ಗವಿಯ ಬಾಗಿಲಿಗೆ ಬಂದು ‘ಖಂಡವಿದೆಕೋ ಮಾಂಸವಿದೆಕೋ....’ ಎಂದು ಹೇಳಿದ್ದು ಪುಣ್ಯಕೋಟಿಯ ತಂತ್ರವೆ? ಆಳುವ ವರ್ಗ ಶ್ರಮಿಕ ವರ್ಗವನ್ನು ತನ್ನನ್ನು ತಾನೇ ಮುಗಿಸಿಕೊಳ್ಳುವಂತೆ ಮಾಡುವ ತಂತ್ರವೇ? ಆದರೆ ಆ ಹುಲಿ ಹಸುವನ್ನು ನುಂಗಲು ಬಂದಿರುವಂತದ್ದು. ಹಾಗಿರಬೇಕಾದರೆ ತನ್ನ ಪ್ರಾಣ ರಕ್ಷೆಗೆ ಹಸು ಹಾಗೆ ಹೇಳಿದ್ದು ಸಮರ್ಥನೀಯವೆನಿಸುತ್ತದೆ. ಇದನ್ನು ಸಮಯಪ್ರಜ್ಞೆ ಎಂದು ಏಕೆ ತಿಳಿಯಬಾರದು? ಇನ್ನು ಈ ಮಾತನ್ನು ಕೇಳಿ ಕಣ್ಣೀರು ಸುರಿಸಿ ಪ್ರಾಣ ಬಿಡುವ ಹುಲಿಯೋ- ಶುದ್ಧ ಅವಿವೇಕಿ. ಕವಿ ಖಂಡಿತ ಹುಲಿಯನ್ನು ಕಂಡಿರಲಾರ.

ತನಗಿಂತ ಮೇಲಿರುವವನು ತನ್ನ ಬಗ್ಗೆ ಹಂಗಿಸಿ ಮಾತಾನಾಡಿದಾಗ ದುಖವಾಗುತ್ತೆ. ಆದರೆ, ತನ್ನ ಬೇಟೆ ತನ್ನ ಹಿಡಿತದಲ್ಲಿರುವ ತನ್ನ ಗುಲಾಮ ತನ್ನ ಬಗ್ಗೆ ವ್ಯಂಗ್ಯವಾಡಿದಾಗ ವ್ಯಾಘ್ರ ಇನ್ನಷ್ಟು ವ್ಯಗ್ರನಾಗಬೇಕಿತ್ತು. ಮುಚ್ಚು ಬಾಯಿ ಅಂತ ಸೀಳಿ ಹಾಕಬೇಕಿತ್ತು. ಆದರೆ ಹುಲಿ ಕಣ್ಣೀರು ಸುರಿಸಿದೆ ಅಂದರೆ ಪುಣ್ಯಕೋಟಿಯ ಸತ್ಯನಿಷ್ಠೆ ಹುಲಿಯನ್ನು ಪರಿವರ್ತಿಸಿದೆಯೇ ಹೊರತು ವ್ಯಂಗ್ಯ ಮಾತುಗಳಲ್ಲ (ಮನಃ ಪರಿವರ್ತನೆಯನ್ನು ಒಪ್ಪಿದರೆ, ಹುಲಿಗೆ ಪುಣ್ಯಕೋಟಿಯ ಮೇಲೆ ಸಂಪೂರ್ಣ ವಿಶ್ವಾಸವಿರಲಿಲ್ಲ ಅಂತಲೇ ತಿಳಿಯಬೇಕು).

ಒಬ್ಬರ ವ್ಯಂಗ್ಯ ನುಡಿ ನಡವಳಿಕೆಯನ್ನು ತಿದ್ದಿಕೊಳ್ಳುವಂತೆ ಮಾಡಬಹುದೇ ಹೊರತು ಜೀವದ ಸ್ವಭಾವದಲ್ಲೇ ಪರಿವರ್ತನೆ ತರುವುದು ಸಾಧ್ಯವಿಲ್ಲ. ಅದು ಆ ಜೀವಿಯದೇ ಆಂತರ್ಯ ಸಂಘರ್ಷದ ಪರಿಣಾಮ. ಏನೇ ಹೇಳಿದರೂ ಹುಲಿ ಹಸುವನ್ನು ಕೊಂದು ತಿಂದಿದ್ದರೆ ಅದು ತಪ್ಪಾಗುತ್ತಿರಲಿಲ್ಲ. ಹಸು ಹುಲಿಯ ಆಹಾರ. ಅದು ಪ್ರಕೃತಿ. ಅದು ಕೇವಲ ಹುಲಿಯಲ್ಲ. ಅದು ಹಸಿವು, ವ್ಯಗ್ರ ಹಸಿವು. ಪುಣ್ಯಕೋಟಿಯನ್ನು ಕೊಂದಾದರೂ ಸರಿ ತಾನು ಬಯಸಿದ್ದನ್ನು ಪಡೆಯಬೇಕೆಂಬ ವಿಪರೀತ ಹಸಿವು. ಆದರೆ ಪುಣ್ಯಕೋಟಿಯ ಸತ್ಯನಿಷ್ಠೆ ಕಂಡ ಮೇಲೆ ಏನನ್ನೋ ಸಾಕ್ಷಾತ್ಕರಿಸಿಕೊಂಡಂತೆ ಹುಲಿ ಸಾಯುತ್ತದೆ. ಹುಲಿ ಸಾಯಲೇ ಬೇಕು. ಹಸಿವು ಸಾಯಲೇ ಬೇಕು. ಈ ಪುಣ್ಯಕೋಟಿಯನ್ನು ಕಳುಹಿಸಿಕೊಟ್ಟರೆ ಅಲ್ಲಿಗೆ ಮುಗಿಯುವುದಿಲ್ಲ. ಹಸಿವು ಇದ್ದೇ ಇದೆ. ನಾಳೆ ಇನ್ಯಾವುದೋ ಪುಣ್ಯಕೋಟಿಯನ್ನು ಬಲಿತೆಗೆದುಕೊಳ್ಳಬೇಕು. ಸತ್ಯನಿಷ್ಠರನ್ನು ತಿಂದು ತಿಂದು ತನಗೆ ಸಿಗುವುದಾದರೂ ಏನು?. ಇದು ಎಂದಿಗೆ ನೀಗುವ ಹಸಿವು?. ಈ ಕ್ಷುದ್ರ ಹಸಿವು ಸಾಯಲೇ ಬೇಕು.

ಒಂದು ಕೃತಿಯನ್ನು ಇಡಿಯಾಗಿ ನೋಡದೆ selective reading ಮಾಡಿಕೊಂಡಾಗೆಲ್ಲ ಕವಿತೆಯ ಉದ್ದೇಶವನ್ನೇ ಹಿಂದುಮುಂದು ಮಾಡಬಹುದಾದ ಅಪಾಯವಿರುತ್ತದೆ. ಮತ್ತು, ಈ selective reading ಎನ್ನುವುದು ಬಹುತೇಕ ವ್ಯಾಖ್ಯಾನಕಾರರ ಸ್ವಉದ್ದೇಶಪೂರ್ವಕ ಕುತಂತ್ರವೇ ಆಗಿರುತ್ತದೆ. ಇದೇನು ಮಹಾನ್‌ ದರ್ಶನವಲ್ಲ.

ಇಲ್ಲಿ ನಮ್ಮ ಗಾಂಧೀಜೀಯ ಸತ್ಯಾಗ್ರಹಕ್ಕೂ ಪುಣ್ಯಕೋಟಿಯ ಸತ್ಯನಿಷ್ಠೆಗೂ ತೆಳುವಾದ ಗೆರೆಯಿದೆ. ಪುಣ್ಯಕೋಟಿಯಲ್ಲಿ ಆಗ್ರಹವಿಲ್ಲ, ನಿಷ್ಠೆ ಮಾತ್ರ. ಗಾಂಧಿಯಲ್ಲಿ ಆಗ್ರಹವಿದೆ, ಉದ್ದೇಶವಿದೆ, ಸಂಕಲ್ಪವಿದೆ. ಪುಣ್ಯಕೋಟಿ ಗಾಂಧಿಗಿಂತ ಹೆಚ್ಚು ಪ್ರಾಮಾಣಿಕವೆನಿಸುತ್ತದೆ. ಈಗ, ಪುಣ್ಯಕೋಟಿಯದು ಪ್ರಚ್ಛನ್ನವಾದ, ತಂತ್ರವೆಂದು ಒಪ್ಪಿಕೊಂಡರೂ ಅದು ತಪ್ಪೆಂದರೆ ಗಾಂಧಿ ಪೊಳ್ಳಾಗಿಬಿಡುತ್ತಾರೆ(ಯೆಸ್‌ ಯೆಸ್‌, ಮುನ್ನಾಭಾಯಿ ಕೂಡ). ಗಾಂಧಿಗೆ ಯಾರಾದರು ಪುಣ್ಯಕೋಟಿಯ ಕತೆ ಕೇಳಿಸಿದ್ರಾ?.

ಪುಣ್ಯಕೋಟಿಯ ಬಗ್ಗೆ ಬರೆಯಲು ಪ್ರೇರೇಪಿಸಿದ ಜಾನಕಿಯವರ ಬರಹಕ್ಕೆ ಕೋಟಿಪುಣ್ಯ ಬರಲಿ.

‘ಸತ್ಯಮೇವ ಜಯತೇ’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+