‘ಯುವರ್ ಆನರ್, ಮಹಿಳಾ ವಕೀಲರು ದೌರ್ಜನ್ಯಕ್ಕೆ ಸಿಲುಕಿದ್ದಾರೆ..’
ಕಕ್ಷಿದಾರರಲ್ಲೂ ಸಹ ಮಹಿಳಾ ನ್ಯಾಯವಾದಿಗಳ ಮೇಲೆ ಇನ್ನೂ ದೃಢವಾದ ನಂಬಿಕೆ ಬಂದಿಲ್ಲ ಮತ್ತು ಅವರ ಅರ್ಹತೆಯ ಬಗ್ಗೆ ಗೌರವವಿಲ್ಲ. ಪುರುಷ ಸಹೋದ್ಯೋಗಿಗಳೂ ಪ್ರೋತ್ಸಾಹದಾಯಕವಾಗಿಲ್ಲದೆ ಸಾಧ್ಯವಾದ ಕಡೆಯಲ್ಲೆಲ್ಲ ಮಹಿಳೆಯರ ತೇಜೋವಧೆ ಮಾಡಲು ಹಿಂಜರಿಯುವುದಿಲ್ಲ. ರಾಜ್ಯದಾದ್ಯಂತ ಎಷ್ಟೋ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರುಗಳಿಗಾಗಿ ಪ್ರತ್ಯೇಕ ಕೋಣೆಯೂ ಇಲ್ಲ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ನಿಂತರೂ ಈ ಕ್ಷೇತ್ರದಲ್ಲಿ ದುಡಿಮೆಗೆ ತಕ್ಕ ಆರ್ಥಿಕ ಪ್ರತಿಫಲವಿಲ್ಲ ಎನ್ನುವುದು ತೆರೆದ ಸತ್ಯ.
ಸಮಸ್ಯೆಗಳ ಸಾಮಾಜಿಕ ಮುಖ : ಹೆಂಗಸರು ಹೊರಗಡೆ ಎಷ್ಟೇ ದುಡಿದು ಬಂದರೂ ಮನೆ ಕೆಲಸ ಮತ್ತು ಕುಟುಂಬ ನಿರ್ವಹಣೆ ಕೇವಲ ಅವಳೊಬ್ಬಳ ಹೊಣೆ ಮಾತ್ರ ಎನ್ನುವ ಅಲಿಖಿತ ಶಾಸನ ಮಾಡಿಟ್ಟಿದ್ದೇವೆ. ವೃತ್ತಿ, ಅದರಲ್ಲಿ ಗುರಿ, ಸಾಧನೆ ಕನಸುಗಳ ಜೊತೆಗೆ ಗಂಡ, ಮಕ್ಕಳು, ಅತ್ತೆ ಮಾವ ಎಲ್ಲರ ಜವಾಬ್ದಾರಿಯು ಎಲ್ಲಾ ಮಹಿಳೆಯರಿಗೆ ಇರುವಂತೆ ನಮ್ಮ ಮಹಿಳಾ ವಕೀಲರುಗಳಿಗೂ ಇದ್ದೇ ಇದೆ.
ಮನೆ-ಆಫೀಸ್‌ಗಳ ನಡುವೆ ದೊಂಬರಾಟ ಮಾಡುತ್ತಾ ಹೈರಾಣಾಗಿ, ಕುಟುಂಬದ ಸದಸ್ಯರುಗಳ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ ಇವರುಗಳು. ಸಂಸಾರಕ್ಕೆ ಸಂಬಂಧಪಟ್ಟ ಯಾವುದೇ ಮಾತುಕತೆಯಲ್ಲಿ ತರ್ಕ ಬದ್ದ ಮಾತುಗಳನ್ನಾಡಿದರೂ ‘ನಿನ್ನ ಲಾಯರ್ ಬುದ್ಧಿ ಇಲ್ಲಿ ತೋರಿಸಬೇಡ‘ ಎನ್ನುವ ವ್ಯಂಗ್ಯಕ್ಕೂ ಗುರಿಯಾಗ ಬೇಕಾಗುತ್ತದೆ.
ಕಾನೂನು ಪದವಿ ಇರುವ ಹೆಣ್ಣು ಮಕ್ಕಳಿಗೆ ಈ ದಿನಗಳಲ್ಲಿ ವಿವಾಹವಾಗುವುದು ಕಷ್ಟವಾಗುತ್ತಿದೆ ಎನ್ನುವುದು ಹಾಸ್ಯಾಸ್ಪದ ಎನ್ನಿಸಿದರೂ ವಿಚಿತ್ರ ಸತ್ಯ. ಬನಶಂಕರಿ ಮಹಿಳಾ ಸಮಾಜದ ಸಂಸ್ಥಾಪಕರಾದ ಶ್ರೀಮತಿ ಪರಿಮಳ ಇಜೇರಿ ಅವರು ಹೇಳುತ್ತಾರೆ ‘‘ನಮ್ಮ ವಧು-ವರಾನ್ವೇಷಣೆ ವಿಭಾಗದಲ್ಲಿ ಬರುವ ಎಲ್ಲಾ ಗಂಡುಗಳು ಮತ್ತವರ ಮನೆಯವರು ತಮ್ಮ ಸ್ಥಾನ ಮಾನ ಏನೇ ಇದ್ದರೂ ಕಾನೂನು ಪದವಿ ಇರುವ ಮತ್ತು ವಕೀಲ ವೃತ್ತಿಯಲ್ಲಿರುವ ಹೆಣ್ಣುಗಳು ಮಾತ್ರ ಖಂಡಿತವಾಗಿ ಬೇಡ ಎನ್ನುತ್ತಾರೆ. ಹಾಗೆಯೇ ವೃತ್ತಿನಿರತ ಮಹಿಳಾ ನ್ಯಾಯವಾದಿಗಳು ಯಾವ ಗಂಡಾದರೂ ಸರಿ ಒಪ್ಪಿದರೆ ವೃತ್ತಿಯನ್ನು ಬಿಡುವುದಾಗಿ ಹೇಳುತ್ತಾರೆ.’’
ಈ ದಿನಗಳಲ್ಲಿ ಮಹಿಳೆಯರು ಹೊರಗೆ ದುಡಿಯುವುದು ಹಲವಾರು ಕಾರಣಗಳಿಂದ ಅನಿವಾರ್ಯವಾಗುತ್ತಿದೆ. ಇದನ್ನು ಕುಟುಂಬ ಮತ್ತು ಪುರುಷ ಉದ್ಯೋಗಿಗಳು ಅರ್ಥ ಮಾಡಿಕೊಳ್ಳಲೇ ಬೇಕು. ಹಾಗೆಯೇ ಮಹಿಳೆಯರು ಗೌರವಯುತವಾದ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು. ಕೇವಲ ಆರ್ಥಿಕ ಅವಶ್ಯಕತೆಗೆ ಮಾತ್ರ ಮಹಿಳೆಯರು ದುಡಿಯುತ್ತಾರೆ ಎನ್ನುವ ಧೋರಣೆ ತೊಲಗಬೇಕು. ಸಮಾಜದ ಬೌದ್ಧಿಕ ಬೆಳವಣಿಗೆಯಲ್ಲಿ ಅವಳ ದುಡಿಮೆ ಮಹತ್ತ್ವದ ಪಾತ್ರವಹಿಸುತ್ತದೆ. ಮದುವೆಯೇ ಹೆಣ್ಣಿನ ಬಾಳಿನ ಅಂತಿಮ ಗುರಿಯಲ್ಲ ಎನ್ನುವುದನ್ನು ಎಲ್ಲರೂ ಮನಗಾಣಬೇಕು.
‘‘ಇನ್ನೇನು ಸಾಧಿಸದಿದ್ದರೂ ಪರವಾಗಿಲ್ಲ, ಒಳ್ಳೆಯ ಹೆಂಡತಿಯಾಗಬೇಕು‘‘ ಎನ್ನುವ ನಮ್ಮ ಸಮಾಜದ ಮನೋಸ್ಥಿತಿ ಹೆಣ್ಣುಮಕ್ಕಳ ಮನಸ್ಸಿನ ಮೇಲೆ ಹೊರೆಯಾಗಬಾರದು. ವೃತ್ತಿನಿರತಳಾಗಲು ಅವಳಿಗೆ ಕನಿಷ್ಟ ಮಟ್ಟದ ಅನುಕೂಲಗಳನ್ನೂ ರೂಪಿಸಿಕೊಡದೆ, ಮಾನಸಿಕವಾಗಿ ಅವಳನ್ನು ಜರ್ಝರಿತಳನ್ನಾಗಿ ಮಾಡುವುದು, ಅವಳನ್ನು ಗಂಡಿಗಿಂತ ಸದಾಕಾಲವೂ ಕಡಿಮೆಯೇ ಎಂದು ಪ್ರತಿಪಾದಿಸುವುದು ನಾಗರೀಕ ಸಮಾಜಕ್ಕೆ ತಕ್ಕುದ್ದಲ್ಲ. ಸಮಾಜಕ್ಕೆ ನ್ಯಾಯವನ್ನು ದಕ್ಕಿಸಿಕೊಡಲು ಹೋರಾಡುವ ನ್ಯಾಯವಾದಿ ಮಹಿಳೆಯರೊಡನೆಯೇ ನಾವು ಅನ್ಯಾಯವಾಗಿ ವರ್ತಿಸುವುದು ಸಭ್ಯವಲ್ಲ.