• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಸೋಷಿಯಲ್ ಮೇಷ್ಟ್ರು ರಾಮಕೃಷ್ಣ

By Staff
|

ಅವರು ಇತಿಹಾಸದಲ್ಲಿ ರಾಜರ, ಸಾಮ್ರಾಜ್ಯಗಳ ಪಾಠ ಮಾಡಬೇಕಾದರೆ ರಾಜ ಮಹಾರಾಜರ ಶೌರ್ಯ, ರಾಜ್ಯದ ವಿಸ್ತೀರ್ಣದ ಬಗ್ಗೆ ಹೇಳಿದ ನಂತರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದರು. ಹಾಗೆ ವಿವರಿಸುವಾಗ ಯಾವಾಗಲೂ ಇವರ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು....... ಎಂದು ಹೇಳುತ್ತಿದ್ದರು. ಅದು ನಮಗೂ ಅವರಿಗೂ ಅಭ್ಯಾಸವಾಗಿಬಿಟ್ಟಿತ್ತು. ಅವರು ಪರಿಸ್ಥಿತಿ.... ಎನ್ನುತ್ತಿದ್ದಂತೆ ನಾವೆಲ್ಲ ಉತ್ತಮವಾಗಿತ್ತು ಎನ್ನುತ್ತಿದ್ದೆವು. ಒಮ್ಮೆ ಮಹಮದ್ ಬಿನ್ ತುಘಲಕ್‌ನ ಅತಂತ್ರ ವ್ಯವಸ್ಥೆಯ ಬಗ್ಗೆ ಹೇಳುತಿದ್ದರು. ಆಗ ಅವರು ಇವನ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ... ಎನ್ನುತ್ತಿದ್ದಂತೆ ನಾವು ಅಭ್ಯಾಸಬಲದಿಂದ ಉತ್ತಮವಾಗಿತ್ತು ಎಂದು ಹೇಳಬೇಕೇ?! ಅವರು ನಗುತ್ತಾ ಪಾಠದ ಮೇಲೆ ಆಸಕ್ತಿ ಇದ್ದರೆ ಸಾಲದು, active ಆಗಿ ಇರಬೇಕು ಎಂದು ಬುದ್ಧಿ ಹೇಳಿ ಮುಂದುವರಿಸಿದ್ದರು.

***

ಅವರು ಪಾಠ ಮಾಡುವಾಗ ನಾವು ನೋಟ್ಸ್ ಮಾಡಿಕೊಳ್ಳಬೇಕಾಗಿತ್ತು. ಹೀಗೆ ಎರಡೂ ಕಡೆ concentrateಮಾಡುವುದು ಹಲವರಿಗೆ ಕಷ್ಟವಾಗಿತ್ತು. ಆದರೆ ನಾನು ಮತ್ತು ಕೆಲವು ಗೆಳತಿಯರು ಈ ಕೆಲಸವನ್ನು ಒಂದು ರೀತಿಯ ಚಾಲೆಂಜಿನಂತೆ ಮಾಡುತ್ತಿದ್ದೆವು. ಯಾರು ಹೆಚ್ಚು ನೋಟ್ಸ್ ಬರೆದುಕೊಳ್ಳುತ್ತಾರೆಂಬ ಸ್ಪರ್ಧೆಯಂತೆ ಬರೆದುಕೊಳ್ಳುತ್ತಿದ್ದೆವು. ಒಮ್ಮೆ ನನ್ನ ನೋಟ್ಸ್ ನೋಡಿದ ಸರ್ ಉದ್ಗರಿಸಿದ್ದರು-ನನಗೇ ನಾನು ಇಷ್ಟು ಹೇಳಿದ್ದೇನೆಂಬುದನ್ನು ನಂಬಲಾಗುತ್ತಿಲ್ಲ. ಅಷ್ಟು ಚನ್ನಾಗಿ ಬರೆದುಕೊಂಡಿದ್ದೀಯ, ಕಾಲೇಜ್ ಲೆವೆಲ್‌ನಲ್ಲಿ ಬರೆದುಕೊಂಡಿದ್ದೀಯ... good, ನನಗೋ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಯಾರು ಏನೇ ಹೇಳಲಿ, ಸಹಪಾಠಿಗಳೆದುರಿಗೆ ನೀನೇ ಶ್ರೇಷ್ಠ ಎಂದು ಹೊಗಳಿಸಿಕೊಳ್ಳುವಾಗ ಸಿಗುವ ಸಂತೋಷ ಎಷ್ಟು ಕೋಟಿ ದುಡ್ಡು ಕೊಟ್ಟರೂ ಸಿಗಲಿಕ್ಕಿಲ್ಲ.

ಅವರು ಬರೀ ಪಾಠದ ವಿಷಯವಷ್ಟೇ ಅಲ್ಲದೇ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವೂ ಹೆಚ್ಚಬೇಕೆಂದು ಬಯಸುತ್ತಿದ್ದರು. ಹಾಗೆಂದು ಸುಮ್ಮನೇ ಕುಳಿತವರಲ್ಲ. ಬಿಡುವಿನ ವೇಳೆಯಲ್ಲಿ ಕ್ಲಾಸ್‌ರೂಮಿನಲ್ಲೇ ಎರಡು ತಂಡಗಳನ್ನು ಮಾಡಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುತ್ತಿದ್ದರು. ಹುಡುಗರದ್ದೊಂದು ತಂಡ, ಹುಡುಗಿಯರದ್ದೊಂದು ತಂಡ ಮಾಡಿ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸರಿಯುತ್ತರಕ್ಕೆ ತಕ್ಕಂತೆ ಅಂಕಗಳನ್ನು ನೀಡಿ ಕೊನೆಯಲ್ಲಿ ವಿಜೇತ ತಂಡವನ್ನು ಘೋಷಿಸುತ್ತಿದ್ದರು.

ಒಂದು ಬಾರಿ ಹೀಗೆ ಮಾಡುವಾಗ ಹೆಚ್ಚಿನ ಪ್ರಶ್ನೆಗಳಿಗೆ ಹುಡುಗಿಯರ ಕಡೆಯಿಂದ ಅದರಲ್ಲೂ ಹೆಚ್ಚಾಗಿ ನಾನೇ ಉತ್ತರ ಹೇಳುತ್ತಿದ್ದೆ. ಅದಕ್ಕವರು ಹುಡುಗರನ್ನು ಕುರಿತು ಏನ್ರೋ ಹುಡುಗರ ಮರ್ಯಾದಿ ತೆಗೀತೀರಲ್ರೋ.... ಅಂತ ತಮಾಷೆ ಮಾಡಿದಾಗ ಒಬ್ಬ ಅವಳೊಬ್ಬಳಿಲ್ಲದಿದ್ರೆ ಖಂಡಿತಾ ನಾವೇ ಗೆಲ್ತಿದ್ವಿ ಅಂದ. ಆಗ ಅವರು ಅವಳೊಬ್ಬಳು ಇಲ್ಲದಿದ್ರೆ ಅಲ್ಲ ಅವಳೊಬ್ಬಳೇ ಇದ್ದಿದ್ರೂ ನಿಮಗೆ ಸೋಲಿಸೋದು ಕಷ್ಟ ಇತ್ತು ಅಂದರು. ಅದು ಹುಡುಗರನ್ನು ಅಣಕಿಸಿದ್ದೋ ನನ್ನನ್ನು ಹೊಗಳಿದ್ದೋ ಗೊತ್ತಾಗಲಿಲ್ಲ.

ನಮ್ಮ ಶಾಲೆ ಅನೇಕ ಪಠ್ಯೇತರ ಚಟುವಟಿಕೆಗಳಿಗೆ ಹೆಸರಾಗಿತ್ತು. ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳನ್ನು ಸಂಬಂಧಪಟ್ಟ ಅಧ್ಯಾಪಕರೊಂದಿಗೆ ಕೇಳಿದರೆ ಉತ್ತರ ದೊರಕುತ್ತಿದ್ದುದಲ್ಲದೇ ಸ್ಟಾಫ್‌ರೂಮಿನಲ್ಲಿ ಬಿಸಿಬಿಸಿ ಚರ್ಚೆಯೇರ್ಪಡುತ್ತಿತ್ತು. ಹೊಸ ಹೊಸ ವಿಷಯಗಳು ಹೊರಬರುತ್ತಿದ್ದವು. ಆ ಚರ್ಚೆಗೆ ವಿಷಯ ಒದಗಿಸುವುದು ನನ್ನ ಪ್ರಿಯ ಹವ್ಯಾಸವಾಗಿತ್ತು. ಯಾವುದೋ ಪುಸ್ತಕದಲ್ಲಿ, ಗೊತ್ತಿಲ್ಲದ ವಿಷಯವಿದ್ದರೆ, ಆ ಪುಸ್ತಕದೊಂದಿಗೆ ಸೀದಾ ಸ್ಟಾಫ್‌ರೂಮಿನಲ್ಲಿ ಹಾಜರಾಗಿಬಿಡುತ್ತಿದ್ದೆ. ಜಗತ್ತಿನ ದೊಡ್ಡ ನದಿ, ಪರ್ವತ ಮುಂತಾದವುಗಳ ಬಗ್ಗೆ ಬೇರೆ ಬೇರೆ ಪುಸ್ತಕಗಳಲ್ಲಿ ಬೇರೆ ಬೇರೆ ಉತ್ತರಗಳಿದ್ದರೆ ನನಗೆ ಹಬ್ಬ, ಮೇಷ್ಟರುಗಳಿಗೆ ತಲೆನೋವು!! ಹಾಗಾಗಿ ನಾನು ಸ್ಟಾಫ್‌ರೂಮಿಗೆ ಬಂದೆನೆಂದರೆ ಸೋಷಿಯಲ್ ಮಾಷ್ಟ್ರು ಉದ್ದ, ಅಗಲ ಪ್ರಶ್ನೆ ಬಂತು...ರೆಡಿಯಾಗಿರಿ ಎಂದು ಹಾಸ್ಯ ಮಾಡುತ್ತಿದ್ದರು. ಅಷ್ಟು ಸ್ನೇಹಿತರಂತೆ ಇರುತ್ತಿದ್ದರು.

ಅವರ ಬಗ್ಗೆ ಇನ್ನೊಂದು ಘಟನೆ ಉದ್ಧರಿಸದೇ ಹೋದರೆ ತಪ್ಪಾಗುತ್ತದೆ. ನಾವು ಹತ್ತನೇ ತರಗತಿಯಲ್ಲಿದ್ದಾಗ ನಮ್ಮ ಶಾಲೆಯಿಂದ ಬೆಂಗಳೂರು-ಮೈಸೂರಿಗೆ ಪ್ರವಾಸ ಏರ್ಪಡಿಸಿದ್ದರು. ಮೂರು ದಿನಗಳ ಪ್ರವಾಸವದು. ನಗರದಿಂದ ಬೆಂಗಳೂರಿಗೆ ಸುಮಾರು ಏಳೆಂಟು ಘಂಟೆಗಳ ಪ್ರಯಾಣ. ನಮ್ಮ ತರಗತಿಯಿಂದ ನನ್ನ ಬಹಳಷ್ಟು ಗೆಳತಿಯರು ಹೊರಟಿದ್ದರು. ಆದರೆ ಆ ದಿನವೇ ಬೇರೆ ಏನೋ ಕೆಲಸ ನಿಗದಿಯಾಗಿದ್ದ ಕಾರಣ ನಮ್ಮ ಮನೆಯಲ್ಲಿ ನಾನು ಹೋಗುವುದಕ್ಕೆ ಸಮ್ಮತಿಸಿರಲಿಲ್ಲ.

ನನಗೆ ಬೆಂಗಳೂರು-ಮೈಸೂರು ನೋಡಬೇಕು ಎಂಬುದಕ್ಕಿಂತ ನನ್ನ ಕೆಲವು ಆಪ್ತ ಗೆಳತಿಯರು ಹೊರಟಿರುವಾಗ ಅವರೊಂದಿಗೆ ಹೋಗಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದೇ ಬಹಳ ಬೇಸರವಾಗಿತ್ತು. ಆದರೆ ನನ್ನ ಗೆಳತಿಯರು ಹೊರಟಿದ್ದರಿಂದ ನಾನೂ ಹೊರಟಿದ್ದೇನೆಂದೇ ಸೋಷಿಯಲ್ ಮಾಷ್ಟ್ರು ಅಂದುಕೊಂಡಿದ್ದರು. ಆದರೆ ನಾನು ಪ್ರವಾಸ ಹೊರಟಿರುವವರ ಪಟ್ಟಿಗೆ ಹೆಸರು ಕೊಟ್ಟಿಲ್ಲವೆಂದು ಗೊತ್ತಾದೊಡನೆ ಅವರು ನನ್ನನ್ನು ಕರೆಸಿ ಏಕೆ ಬರುವುದಿಲ್ಲವೆಂದು ಕೇಳಿದರು. ಅರೆಮನಸ್ಸಿನಿಂದ ನಾನು ಕಾರಣವನ್ನು ಹೇಳಿದೆ.

ನನಗೆ ಬರಲು ಇಷ್ಟವಿದೆಯೆಂದು ಗ್ರಹಿಸಿದ ಅವರು ನಿಮ್ಮ ತಂದೆಯ ಜೊತೆ ಮಾತಾಡಿ ಒಪ್ಪಿಸಲೇ? ಎಂದು ಕೇಳಿದರು. ನಮ್ಮ ತಂದೆಗೆ ಇಬ್ಬಂದಿತನವಾಗಬಹುದೆಂದೂ, ಅಥವಾ ಅವರು ನಂತರ ನನ್ನನ್ನು ಬೈಯ್ಯಬಹುದೆಂದೂ ನಾನು ಬೇಡವೆಂದೆ. ಅದಕ್ಕವರು ನೀನೇ ಮತ್ತೊಮ್ಮೆ ಕೇಳಿ ನೋಡು ಎಂದು ಹೇಳಿ ಕಳುಹಿಸಿದರು. ಮನೆಯಲ್ಲಿ ಮತ್ತೊಮ್ಮೆ ಕೇಳಿದಾಗ-ಬೇಡ, ಬೇರೆ ಕೆಲಸ ಇದೆಯೆಂದು ನಿನಗೇ ಗೊತ್ತಿದೆ. ಇನ್ನು ಮೇಲೆ ನಿನ್ನಿಷ್ಟ ಎಂದುಬಿಟ್ಟರು.

ನಾನು ಪ್ರವಾಸ ಹೋಗುವ ಆಸೆಯನ್ನೇ ಕೈಬಿಟ್ಟೆ. ಆದರೂ ಮನದಾಳದಲ್ಲೆಲ್ಲೋ ಆಸೆಯ ತುಣುಕೊಂದು ಉಳಿದಿತ್ತು. ಮತ್ತೊಮ್ಮೆ ಸೋಷಿಯಲ್ ಮಾಷ್ಟ್ರು ಕರೆಸಿ ಕೇಳಿದರು. ನಾನು ಮನೆಯಲ್ಲಿ ಹೇಳಿದ್ದನ್ನೇ ಹೇಳಿದೆ. ಅದಕ್ಕವರು ನಾನೇ ದುಡ್ಡು ಕೊಟ್ಟಿರುತ್ತೇನೆ, ಹೋಗಿಬರುತ್ತೇನೆಂದು ಮನೆಯಲ್ಲಿ ಹೇಳು, ಬಂದ ಮೇಲೆ ಹಣ ಹಿಂದಿರುಗಿಸಿದರಾಯಿತು ಎಂದರು.

ನನಗೆ ಎಲ್ಲೋ ಒಂದು ಕಡೆ ಇವರು ಹೇಳಿದಂತೆ ಕೇಳಿದರೆ ಗೆಳತಿಯರ ಜೊತೆ ಬೆಂಗಳೂರು ನೋಡಬಹುದೆನ್ನಿಸಿದರೂ ಇನ್ನೊಂದು ಕಡೆ ಇವರು ನನ್ನ ತಂದೆ ದುಡ್ಡಿಗಾಗಿ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದುಕೊಂಡು ಅವರಿಗೆ ಅವಮಾನಿಸುತ್ತಿದ್ದಾರೆಂದು ಅನ್ನಿಸಿ ಒಮ್ಮೆಲೇ ಬೇಸರವಾಯಿತು. ಆ ಕ್ಷಣ ಉದ್ವೇಗಗೊಂಡು ಇಲ್ಲ ಸರ್, ನಾ ಬರಲ್ಲ. ದುಡ್ಡಿನ ಪ್ರಶ್ನೆ ಅಲ್ಲ, ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ, ಅದಕ್ಕೇ ಬರಲ್ಲ ಅಂತ ಹೇಳಿದೆ. ಕಣ್ಣೀರು ಬಳಬಳನೆ ಉದುರುತ್ತಿತ್ತು. ಅಲ್ಲಿ ನಿಲ್ಲಲಾಗದೇ ಕ್ಲಾಸ್‌ರೂಮಿಗೆ ಬಂದು ಅಳುತ್ತಾ ಕುಳಿತೆ. ಆಟದ ಅವಧಿಯಾಗಿದ್ದರಿಂದ ಯಾರೂ ಒಳಗಿರಲಿಲ್ಲ. ನೀರು ಕುಡಿಯಲು ಬಂದ ನನ್ನ ಗೆಳತಿಯೋರ್ವಳು ನಾನು ಅಳುತ್ತಿರುವುದನ್ನು ಕಂಡು ಯಾಕೆ ಅಳುತ್ತಿದ್ದೀಯಾ ಎಂದು ರಮಿಸಲು ಬಂದಳು. ಆದರೂ ನಾನು ಸುಮ್ಮನಾಗದ್ದನ್ನು ನೋಡಿ ಸ್ಟಾಫ್ ರೂಮಿಗೆ ಹೋಗಿ ಹೇಳಿದಳು. ಅಲ್ಲಿ ಸೋಷಿಯಲ್ ಮಾಷ್ಟ್ರು ಮಾತ್ರ ಇದ್ದಿದ್ದು, ಅವರು ಬಹುಶಃ ನಾನು ನೋಡುತ್ತೇನೆ, ನೀನು ಹೋಗಿ ಆಟವಾಡು ಎಂದಿರಬೇಕು, ಅವಳು ಆಮೇಲೆ ಬರಲಿಲ್ಲ.

ಆದರೆ ಸೋಷಿಯಲ್ ಮಾಷ್ಟ್ರು ಏನಂದುಕೊಂಡರೋ ಏನೋ, ಅವರು ನಂತರ ಎರಡು ಮೂರು ದಿನ ಮುಖ ನೋಡಿದರೂ, ವಿಷ್ ಮಾಡಿದರೂ ಯಾಂತ್ರಿಕವಾಗಿ ಸ್ವೀಕರಿಸಿ ಮುಂದೆ ಹೋಗುತ್ತಿದ್ದರು. ಮುಂಚಿನಂತೆ ಮುಗುಳ್ನಗು, ಮಾತು ಏನೂ ಇರಲಿಲ್ಲ. ನಾನು ಒಂದೆರಡು ಬಾರಿ ನಕ್ಕೆನಾದರೂ, ಅವರು ನಗದ ಕಾರಣ ನಾನೂ ಸುಮ್ಮನಾದೆ. ಈ ಮಧ್ಯೆ ನಾನೂ ಹೊರಡಬೇಕೆಂದು ಬೇರೆ ಶಿಕ್ಷಕರ-ಸ್ನೇಹಿತರ ಒತ್ತಾಯವೂ ಮುಂದುವರಿದಿತ್ತು. ಅಷ್ಟರಲ್ಲಿ ಪ್ರವಾಸ ಹೊರಡುವ ದಿನ ಬಂತು.

ರಾತ್ರಿ ಸುಮಾರು ಒಂಭತ್ತು ಘಂಟೆಯ ವೇಳೆಗೆ ನಮ್ಮ ಶಾಲೆಯಿಂದಲೇ ಹೊರಡುವುದೆಂದೂ, ಎಲ್ಲರೂ ಅಲ್ಲಿಗೇ ಬರಬೇಕೆಂದೂ ಹೇಳಿದ್ದರು. ನಾನು ನನ್ನ ಸ್ನೇಹಿತೆಯರನ್ನು ಬೀಳ್ಕೊಡಲು ಅಲ್ಲಿಗೆ ಹೋದೆ. ಕೆಲವರು ಇನ್ನೂ ಬಂದಿರಲಿಲ್ಲವಾದ್ದರಿಂದ ಬಸ್ ಹೊರಟಿರಲಿಲ್ಲ. ಎಲ್ಲ ಅಧ್ಯಾಪಕರೂ ಅವರೇ ಹಂಚಿಕೊಂಡ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಅಲ್ಲಲ್ಲಿ ನಿಂತಿದ್ದರು. ನಾನು ನನ್ನ ಸ್ನೇಹಿತೆಯೊಡನೆ ಮಾತನಾಡುತ್ತಿರುವಾಗ ಅವಳನ್ನು ಏನೋ ಕೇಳುತ್ತಾ ಬಳಿ ಬಂದ ಸೋಷಿಯಲ್ ಮಾಷ್ಟ್ರು ನಾನು ನಿಂತಿದ್ದು ನೋಡಿ ಓ ನೀನಾ? ಬರುವುದಿಲ್ಲವೆಂದಿದ್ದೆ.... ಹೊರಟಿದ್ದೀಯಲ್ಲ? ಎಂದು ಕೇಳಿದರು.

ನನಗೆ ಇಷ್ಟು ದಿನ ಸಿಟ್ಟು ಮಾಡಿಕೊಂಡಿದ್ದ ಮಾಷ್ಟ್ರು ಈಗ ಮಾತಾಡಿಸುತ್ತಿದ್ದಾರಲ್ಲಾ (ಅದೂ ತಾವಾಗೇ!!) ಎಂಬ ಸಂತೋಷ ಒಂದು ಕಡೆಗಾದರೆ ಪ್ರವಾಸ ಹೋಗುತ್ತಿಲ್ಲವಲ್ಲಾ.... ಎಂಬ ದುಃಖ ಒತ್ತರಿಸಿ ಬಂದು ಕಣ್ಣಾಲಿಗಳು ತುಂಬಿದವು. ಇಲ್ಲವೆಂಬಂತೆ ತಲೆ ಅಲ್ಲಾಡಿಸಿದೆ. ಇಬ್ಬರಿಗೂ ಪರಿಸ್ಥಿತಿ ಅರ್ಥವಾದಾಗ ಹೋಗಲಿ ಬಿಡು, ಆದರೂ ಬರ್ತೀಯೇನೋ ಅಂದ್ಕೊಂಡಿದ್ದೆ ಎಂದು ಹೇಳಿ ಅಳಬೇಡ, ಖುಷಿಯಿಂದ ಎಲ್ಲರನ್ನೂ ಕಳಿಸಿಕೊಡು. ಹೇಗೂ ಮೂರೇ ದಿನ. ಹೋಗಿಬಂದ ಮೇಲೆ ಆರು ದಿನ ನಿನ್ನ ಕಿವಿಗೆ ಪುರುಸೊತ್ತಿರಲ್ಲ ನೋಡ್ತಾ ಇರು ಎಂದು ನನ್ನ ಮಾತಿನ ಮಲ್ಲಿ ಸ್ನೇಹಿತೆಯನ್ನು ಛೇಡಿಸಿ ಬೇರೇನೋ ಕೆಲೆಸ ನೆನಪಿಸಿಕೊಂಡು ಹೋದರು. ಅವರು ಹೇಳಿದ ಮಾತು ನಿಜವಾಯಿತೆಂದು ಬೇರೆ ಹೇಳಬೇಕಿಲ್ಲ ತಾನೆ?

ಈ ರೀತಿಯ ಉತ್ತಮ ವಾತಾವರಣದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ನಾನು ಪದವಿಪೂರ್ವ ಕಾಲೇಜಿಗೆ ಬೇರೆ ಊರಿನಲ್ಲಿ ಸೇರಿದೆ. ಆಗಾಗ ನನ್ನ ಗೆಳತಿಯೊಬ್ಬಳಿಂದ ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದ ನಾನು ಸೋಷಿಯಲ್ ಮಾಷ್ಟ್ರು ಆ ಶಾಲೆ ಬಿಟ್ಟು ಬೇರೆ ಶಾಲೆಗೆ ಸೇರಿದ್ದಾಗಿ ಕೇಳಿ ಬೇಸರಗೊಂಡೆ. ನನ್ನ ಗೆಳತಿಗೆ ಒಂದೆರಡು ಬಾರಿ ಅವರು ಸಿಕ್ಕಿದ್ದರಂತೆ. ನನ್ನನ್ನು ಮತ್ತೆ ಕೆಲವು ಗೆಳತಿಯರನ್ನು ಹೆಸರಿಸಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದೆಲ್ಲಾ ವಿಚಾರಿಸಿದರಂತೆ. ಎಷ್ಟು ಮಂದಿ ಸಿಗುತ್ತಾರೆ ಇಂಥವರು?

ಎಲ್ಲರೂ ಹೇಳುತ್ತಾರೆ Student life is golden life ಅಂತ. ಅಂಥ student life ನಲ್ಲಿ ಯಾವುದು ಇಷ್ಟವೆಂದು ಕೇಳಿದರೆ college life ಅಂತನೇ ಹೆಚ್ಚಿನ ವಿದ್ಯಾರ್ಥಿಗಳ ಉತ್ತರ. high school ಹೆಚ್ಚಿನವರಿಗೆ ಅತಿ ಕಷ್ಟಕರವಾದ ಅವಧಿ. ಏಕೆಂದರೆ ಇಲ್ಲಿ ಎಲ್ಲ strict. ಅದೂ ಅಲ್ಲದೇ ಸಣ್ಣವರ ಸಾಲಿಗೂ ಸೇರದ, ದೊಡ್ಡವರ ಸಾಲಿಗೂ ಸೇರದ ಅನಿಶ್ಚಿತತೆಯ ಅವಧಿ. ಕಾಲೇಜಿನಲ್ಲಾದರೆ ಕ್ಲಾಸಿಗೆ ಚಕ್ಕರ್ ಹೊಡೆದು ಸಿನಿಮಾ ನೋಡಬಹುದು, ಪೇಟೆ ಸುತ್ತಬಹುದು. ಆದರೆ ಹೈಸ್ಕೂಲಿನಲ್ಲಿ ಹಾಗಲ್ಲ. ಜೊತೆಗೇ ಹೆಣ್ಣಿನ ಅಥವಾ ಗಂಡಿನ ಶಾರೀರಿಕ-ಮಾನಸಿಕ ಬದಲಾವಣೆಗಳ ಪರ್ವಕಾಲ. ಹೀಗಾಗಿ ಭಾವನೆಗಳ ಸಂಘರ್ಷದಿಂದ-ಭವಿಷ್ಯದ ಅನಿಶ್ಚಿತತೆಗಳ ತೊಳಲಾಟದಿಂದ ಬೇಯುವ, ಬಹುತೇಕರು ಇಷ್ಟಪಡದ ಕಾಲ.

ಆದರೆ ನನಗೆ ಮಾತ್ರ ಹೈಸ್ಕೂಲಿನ ದಿನಗಳು ಮತ್ತೆ ಬರಬಾರದೇ? ಎಂದು ಆರ್ತಳಾಗಿ ಕೋರುವಷ್ಟು ಇಷ್ಟವಾಗುವ ಕಾಲ. ಜೀವನದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತವಾಗಿರುವ ಸೊಗಸಾದ ನವಿರಾದ ರಸಕವನ. ಈ ಕವನದ ಒಂದು ಸುಂದರ ಚರಣವಾಗಿರುವ, ನಾನು ಸದಾ ಹಸನ್ಮುಖಿಯಾಗಿ ಗೌರವದೊಂದಿಗೆ ಸ್ಮರಿಸುವ ನನ್ನ ಸೋಷಿಯಲ್ ಮಾಷ್ಟರಿಗೆ.....

ನನ್ನ ನಮನಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more