• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಸೋಷಿಯಲ್ ಮೇಷ್ಟ್ರು ರಾಮಕೃಷ್ಣ

By Staff
|

ಯಾರು ಕೆಟ್ಟರೂ ಶಿಕ್ಷಕ ಮತ್ತು ವೈದ್ಯ ಕೆಡಬಾರದು. ಅವರು ಕೆಟ್ಟರೆ ಒಂದು ನಾಗರೀಕತೆಯೇ ಹಾಳಾದಂತೆ. ನಮ್ಮಲ್ಲಿ ಇನ್ನೂ ಅಲ್ಪ ಸ್ಪಲ್ಪ ನಾಗರೀಕತೆ ಉಳಿದಿದ್ದರೆ ಅದು ನನ್ನ ಸೋಷಿಯಲ್‌ ಮೇಷ್ಟ್ರು ರಾಮಕೃಷ್ಣ ಅಂಥವರಿಂದ ಎಂದರೆ ಕಿಂಚಿತ್ತೂ ಉತ್ಪೇಕ್ಷೆಯಲ್ಲ. . ಈ ದಿನ ಶಿಕ್ಷಕರ ದಿನಾಚರಣೆ. ಇಂದು ಅವರ ಬಗ್ಗೆ ಬರೆಯುತ್ತೇನೆ. ಸ್ಪಲ್ಪ ದೀರ್ಘವೆನಿಸಿದರೂ ಬಿಡುವು ಆದಾಗ ನನ್ನ ಅನುಭವಗಳನ್ನು ಓದಿ. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳು ನಿಮಗೆ ನೆನಪಾದರೆ ನಾವೆಲ್ಲರೂ ಧನ್ಯ.


Shilpa Sreeharsha, Dommaluruಅವರ ಹೆಸರು ಎಸ್.ಜಿ.ರಾಮಕೃಷ್ಣ. ನಾನು ಓದುತ್ತಿದ್ದ ಬಿದನೂರು ನಗರ ಹೈಸ್ಕೂಲಿಗೆ, ಹೊಸತಾಗಿ ಅಧ್ಯಾಪಕರಾಗಿ ಬಂದಿದ್ದರು. ನಾವು ಮಿಡ್ಲ್ ಸ್ಕೂಲ್ ಮುಗಿಸಿ ಹೈಸ್ಕೂಲ್ ಸೇರಿದ್ದೆವು.

ಆಗಿನ್ನೂ ನಮಗೆ ಮಾಷ್ಟರರನ್ನು ಇನಿಷಿಯಲ್ಸ್‌ನಿಂದ ಕರೆಯುವುದು ಗೊತ್ತಿರಲಿಲ್ಲ. ಯಾರು ಯಾವ ವಿಷಯ ಹೇಳಿಕೊಡುತ್ತಾರೋ ಅವರನ್ನು ಆ ವಿಷಯದ ಮಾಷ್ಟ್ರು ಅಂತ ಕರೆಯುತ್ತಿದ್ದೆವು. ಹಾಗೇ ಇವರು ಸಮಾಜ ವಿಜ್ಞಾನ (social science) ಹೇಳಿಕೊಡುತ್ತಿದ್ದುದರಿಂದ ಸೋಷಿಯಲ್ ಮಾಷ್ಟ್ರು ಆದರು. ನಂತರದ ಹೈಸ್ಕೂಲ್ ದಿನಗಳಲ್ಲಿ, ಎಂ ಎಸ್ ಕೆ, ಎಸ್ ಎಂ ಎಸ್, ಎಂ ಎನ್ ಜೆ ಅಂತೆಲ್ಲಾ ಹೇಳುವುದು ಅಭ್ಯಾಸವಾದರೂ, ಈ ರಾಮಕೃಷ್ಣ ಮಾತ್ರ ಎಸ್ ಜಿ ಆರ್ ಆಗಲೇ ಇಲ್ಲ especially ನನ್ನ ಪಾಲಿಗೆ. ಈಗಲೂ ನಾನು ಅವರನ್ನು ನೆನೆಯುವಾಗ ಸೋಷಿಯಲ್ ಮಾಷ್ಟ್ರು ಅಂತಲೇ ನೆನೆಯುತ್ತೇನೆ.

ನನ್ನ ಮನಃಪೂರ್ವಕ ಗೌರವವನ್ನು ಗಳಿಸಿಕೊಂಡ ಕೆಲವೇ ಕೆಲವು ಅಧ್ಯಾಪಕರುಗಳಲ್ಲಿ ಅವರೂ ಒಬ್ಬರು. ಹಾಗಂತ ಎಲ್ಲರೂ ನಿರೀಕ್ಷಿಸುವಂತೆ, ಎಲ್ಲರಿಗಿಂತ ಭಿನ್ನವಾದ ಅಥವಾ ಅತಿ ಗಂಭೀರವಾದ ವ್ಯಕ್ತಿತ್ವ ಅವರದಾಗಿರಲಿಲ್ಲ. ಅವರು ತಮ್ಮ ಊರು ಚಕ್ರಾನಗರದಿಂದ ಸುಮಾರು ಆರೇಳು ಕಿಲೋಮೀಟರ್ ದೂರದ ನಗರಕ್ಕೆ ದಿನಾಲೂ ವಿದ್ಯಾರ್ಥಿಗಳ ಜೊತೆಗೇ ಕೆಪಿಸಿ ಬಸ್ಸಿನಲ್ಲಿ ಬರುತ್ತಿದ್ದರು. ಅವರು ನನ್ನ ಮೆಚ್ಚಿನ ಮಾಷ್ಟರಾಗುವುದಕ್ಕೆ ಕಾರಣಗಳು ಬಹಳಷ್ಟು. ಅವರ ಬುದ್ಧಿವಂತಿಕೆ, ಆಳವಾದ ವಿಷಯದ ಬಗೆಗಿನ ಜ್ಞಾನ, ಅದಕ್ಕೂ ಮಿಗಿಲಾಗಿ ಅದನ್ನು ಮಕ್ಕಳಿಗೆ ವಿವರಿಸುವ ರೀತಿ ನನಗೆ ಅವರ ಬಗ್ಗೆ ಗೌರವ ಇಮ್ಮಡಿಸಲು ಕಾರಣವಾಯಿತು. ಆದರೆ ಬಹುಶಃ ಅವರ ವೃತ್ತಿಜೀವನದಲ್ಲಿ ಅವರು ಮೊದಲ ಬಾರಿಗೆ ಒಬ್ಬ ವಿದ್ಯಾರ್ಥಿ/ನಿಯ ಮೇಲೆ ಸಿಟ್ಟು ಮಾಡಿಕೊಂಡಿದ್ದೆಂದರೆ ಅದು ನನ್ನ ಮೇಲೇ!! ಅದು ನಡೆದದ್ದು ಹೀಗೆ:

ಹೈಸ್ಕೂಲಿನ ಕ್ಲಾಸುಗಳು ಆಗಿನ್ನೂ ಪ್ರಾರಂಭವಾಗಿದ್ದವು. ಜೂನ್ ತಿಂಗಳ ನಗರದ ಮಳೆಗಾಲ. ನಗರದ ಮಳೆಗಾಲವೆಂದು ಏಕೆ ಹೇಳಿದೆನೆಂದರೆ ಅದೆಂಥ ಭಯಂಕರ ಮಳೆಗಾಲವೆಂಬುದು ಅಲ್ಲಿ ವಾಸಿಸುವವರಿಗೆ ಮಾತ್ರ ಗೊತ್ತು. ಆಕಾಶವೇ ತೂತುತೂತಾಗಿಬಿಟ್ಟಿದೆಯೇನೋ ಎಂಬಂತೆ ಅಲ್ಲಿ ಮಳೆ ಸುರಿಯುತ್ತದೆ. ಅಂಥ ಮಳೆಗಾಲದಲ್ಲಿ ನೆಗಡಿಯಾಗುವುದು ಸರ್ವೇಸಾಮಾನ್ಯ. ಅಂದು ನನಗೂ ನೆಗಡಿಯಾಗಿತ್ತು. ನಾನು ನನಗೇ ಹಾಕಿಕೊಂಡ- ಯಾವುದೇ ಕಾರಣಕ್ಕೂ ಕ್ಲಾಸ್ ತಪ್ಪಿಸಬಾರದೆಂಬ- ಅಲಿಖಿತ ನಿಯಮದ ಪ್ರಕಾರ, ನಾನು ಶಾಲೆಗೆ ಹೋಗಿದ್ದೆ.

ಅವರು ಆಗಿನ್ನೂ ಬಿಎಡ್ ಮುಗಿಸಿ ಶಿಕ್ಷಕರಾಗಿ ಸೇರಿದ್ದರು. ಅಂದು ನಮಗೆ ಅವರ ಮೊದಲ ಕ್ಲಾಸ್. ಹೊಸದರಲ್ಲಿ ವಿದ್ಯಾರ್ಥಿಸಮೂಹದ ಮುಂದೆ ನಿಂತು ಮಾತಾಡಲು ಎಲ್ಲರಂತೆಯೇ ಅವರಿಗೂ ಸ್ವಲ್ಪ ಅಳುಕು ಇದ್ದಿತ್ತೇನೋ. ಹೊರಗೆ ಮಳೆಯ ಅಬ್ಬರ. ಒಳಗೆ ಸುಮಾರು 60ವಿದ್ಯಾರ್ಥಿಗಳ ಸಾಗರ. ಅವರು ಪಾಠ ಮಾಡುತ್ತಿದ್ದರು. ಎಲ್ಲರೂ ಗಂಭೀರವಾಗಿ ಆಲಿಸುತ್ತಿರಬೇಕಾದರೆ ನನಗೆ ಸೀನು ಬಂದು ಅರ್ಧಕ್ಕೇ ನಿಂತುಬಿಟ್ಟಿತು. ಆದರೆ ಆ ಹೊತ್ತಿಗಾಗಲೇ ಒಂದು ರೀತಿಯ ಹಕ್ ಎಂಬಂಥ ಶಬ್ದ ಬಂದುಬಿಟ್ಟಿತ್ತು.

ಮಾಷ್ಟರಿಗೆ ಅದೇನೆಂದು ಗೊತ್ತಾಗಲಿಲ್ಲ. ಒಮ್ಮೆಲೇ ಕೋಪ ಬಂದು ಕಣ್ಣು ಕೆಂಪಾಯಿತು. ಏನದು ಸದ್ದು? ಗಂಭೀರವಾದ ಸಿಟ್ಟು ಬೆರೆತ ಧ್ವನಿಯಲ್ಲಿ ಕೇಳಿದರು. ನನಗೆ ಹೆದರಿಕೆಯಾಯಿತು. ಮೊದಲೇ ಹೊಸ ಮಾಷ್ಟ್ರು, ಸಿಟ್ಟು ಜಾಸ್ತಿಯೆಂದು ಅವರ ಊರಿನಿಂದ ಬರುವ ವಿದ್ಯಾರ್ಥಿಗಳು ಹೇಳಿದ ನೆನಪು, ಆ ಹೈಸ್ಕೂಲಿನ ನೀತಿನಿಯಮಗಳು ಕಠಿಣವಾಗಿರುತ್ತದೆಯೆಂದು ಕೇಳಿದ ನೆನಪು.... ಎಲ್ಲಾ ಯೋಚನೆಗಳೂ ಒಮ್ಮೆಲೇ ಬಂದು ಮುತ್ತಲು ನಾನು ನಡುಗಿಹೋದೆ. ಎದ್ದು ನಿಂತರೆ ಕೆಟ್ಟೆನೆಂದು ಸುಮ್ಮನೇ ಕುಳಿತೆ.

ಅಷ್ಟರಲ್ಲೇ ಮತ್ತೆ ಕೇಳಿದರು ಯಾರದು ನಕ್ಕಿದ್ದು? ಈಗ ಮತ್ತೂ ಕುಪಿತಗೊಂಡಿದ್ದ ಅವರ ನುಡಿ ಕೇಳಿ ನಾನು ಕುಗ್ಗಿ ಹೋದೆ. ಏಕೆಂದರೆ ನಾನು ಸೀನಿದ್ದು ಅವರಿಗೆ ನಕ್ಕಂತೆ ಕೇಳಿಸಿತ್ತು!! ಏನು ಮಾಡುವುದು, ಆದದ್ದಾಗಲಿ ಎಂದು ನಿಧಾನಕ್ಕೆ ಎದ್ದು ನಿಂತು, sir, ಸದ್ದು ಮಾಡಿದ್ದು ನಾನೇ; ಆದರೆ ಅದು ನಕ್ಕಿದ್ದಲ್ಲ ಎಂದೆ. ನಾನು ಮುಂದುವರಿಸುವುದರೊಳಗಾಗಿ ಮತ್ತೇನು? ಎಂಬ ಪ್ರಶ್ನೆ ಹೊರಬಿದ್ದಿತ್ತು. ನಾನು ನಡುಗುವ ಧ್ವನಿಯಿಂದಲೇ ಹೇಳಿದೆ ಸೀನು ಬಂದು ಅರ್ಧಕ್ಕೇ ನಿಂತುಬಿಟ್ಟಿತು ಅಂತ. ಹುಡುಗರೆಲ್ಲಾ ಮುಸಿಮುಸಿ ನಗತೊಡಗಿದರು. ಆಗ ಅವರಿಗೆ ನನ್ನ ಪರಿಸ್ಥಿತಿ ನೋಡಿ ಕನಿಕರ ಬಂತೋ ಅಥವಾ ಸುಳ್ಳು ಹೇಳುತ್ತಿದ್ದಾಳೆಂಬ ಭಾವನೆ ಬಂತೋ ನಾನರಿಯೆ. ಆದರೆ ಅಸಮಾಧಾನದಿಂದಲೇ ಸರಿ ಕೂತ್ಕೋ ಎಂದು ಪಾಠ ಮುಂದುವರಿಸಿದರು.

ಸಂಜೆ ಬಿಡುವಿನ ವೇಳೆಯಲ್ಲಿ ಯಾವುದೋ ಅಧ್ಯಾಪಕರ ಬಳಿ ಸಮಸ್ಯೆಯೊಂದರ ಪರಿಹಾರಕ್ಕಾಗಿ ಹೋಗಿದ್ದಾಗ ಮತ್ತೆ ಕರೆದು ಕೇಳಿದರು. ನೀನೇ ಅಲ್ವಾ ನಕ್ಕಿದ್ದು ಕ್ಲಾಸ್‌ನಲ್ಲಿ?ಅಂತ. ನನಗೆ ಅಳು ಬಂದೇಬಿಟ್ಟಿತು. ಮತ್ತೊಮ್ಮೆ ಹೇಳಿದೆ - ಹೀಗಾಯ್ತು ನಕ್ಕಿದ್ದಲ್ಲ - ಅಂತ. ಕೊನೆಗೆ ಹೆಸರೇನು, ಯಾವ ಊರು, ಯಾವ ಶಾಲೆಯಲ್ಲಿ ಮುಂಚೆ ಓದಿದ್ದು ಎಂದೆಲ್ಲಾ ವಿಚಾರಿಸಿ ಕಳುಹಿಸಿದರು. ಆ ದಿನ ನನಗೂ ಅವರ ಮೇಲೆ ಸಿಟ್ಟು ಬಂದಿತ್ತು-ಸುಳ್ಳಿ ಎಂದು ಅನುಮಾನಿಸಿದ್ದಕ್ಕಾಗಿ.

ಇದಾಗಿ ಹತ್ತು-ಹದಿನೈದು ದಿನಗಳ ನಂತರ ಒಂದು ದಿನ ಒಬ್ಬ ಅಧ್ಯಾಪಕರು ಬಂದಿರಲಿಲ್ಲ. ಆ ಒಂದು ಅವಧಿಯ ಬಿಡುವಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಏಳನೇ ತರಗತಿಯ ಅಂಕಪಟ್ಟಿಯನ್ನು ತರಲು ಮುಂಚೆ ಓದುತ್ತಿದ್ದ ಶಾಲೆಗೆ ಹೋಗಿದ್ದೆ. ಓರ್ವ ಗೆಳತಿಯೂ ನನ್ನ ಜೊತೆಗಿದ್ದಳು. ಸ್ವಾರಸ್ಯಕರ ವಿಷಯವೆಂದರೆ ನಗರದಲ್ಲಿ ನಮ್ಮ ಮನೆಯಿಂದ ಎಡಬದಿಗೆ ಎರಡು-ಮೂರು ನಿಮಿಷದ ಕಾಲ್ನಡಿಗೆಯ ದಾರಿ ನನ್ನ ಮಾಧ್ಯಮಿಕ ಶಾಲೆಗೆ. ಮನೆಯಿಂದ ಬಲಬದಿಗೆ ಎರಡು-ಮೂರು ನಿಮಿಷದ ಕಾಲ್ನಡಿಗೆಯ ದಾರಿ ನನ್ನ ಪ್ರೌಢಶಾಲೆಗೆ.

ನಾನು ಹೊರಟಾಗ ಅಧ್ಯಾಪಕರಾರೂ ತರಗತಿಯಲ್ಲಿರಲಿಲ್ಲ. ಆದರೆ ಹತ್ತು ನಿಮಿಷಗಳೊಳಗೇ ಹಿಂತಿರುಗಿ ಬಂದಾಗ ನಮ್ಮ ತರಗತಿಯೊಳಗೆ ಸೋಷಿಯಲ್ ಮಾಷ್ಟ್ರು ನಿಂತಿದ್ದಾರೆ!! ಯಾವುದೋ ಯೋಚನೆಯಲ್ಲಿದ್ದ ನಾನು ಅವರನ್ನು ಗಮನಿಸದೇ ಸೀದಾ ಒಳಗೆ ಹೋಗಿಬಿಟ್ಟೆ. ಆದರೆ ತಕ್ಷಣ ಹೊಳೆಯಿತು, ಕ್ಲಾಸ್ ಇಷ್ಟು ನಿಶ್ಶಬ್ದವಾಗಿದೆಯೆಂದರೆ ಯಾರೋ ಅಧ್ಯಾಪಕರು ಇದ್ದಾರೆ ಎಂದು. ಸುತ್ತಲೂ ನೋಡಿದರೆ ಕ್ಲಾಸಿನ ಮಧ್ಯ ಮಾಷ್ಟ್ರು ನಿಂತು ನನ್ನನ್ನೇ ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ!! ನನ್ನ ಜೊತೆ ಬಂದಿದ್ದ ಗೆಳತಿ ಹೊರಗೆ ನಿಂತು ಒಳಗೆ ಬರಬಹುದೆ ಸರ್? ಎಂದು ವಿನಂತಿಸುತ್ತಿದ್ದಾಳೆ!

ಒಂದು ಕ್ಷಣ ನನ್ನ ಬುದ್ಧಿಗೆ ಮಂಕು ಕವಿಯಿತು. ಏನು ಮಾಡಬೇಕೆಂದೇ ತೋಚದಾಯಿತು. ತಕ್ಷಣ ಬಾಗಿಲ ಬಳಿ ಓಡಿ ಅಲ್ಲೇ ನಿಂತು Sorry sir, ನೋಡಲಿಲ್ಲ ಒಳಗೆ ಬರಬಹುದೇ ಸರ್? ಎಂದು ವಿನಂತಿಸಿಕೊಂಡೆ. ಹುಡುಗರೆಲ್ಲಾ ನಗಲಾರಂಭಿಸಿದರು. ಒಂದು ಕಡೆ ಒಂದೇ ಛತ್ರಿ ಇಬ್ಬರನ್ನು ಮಳೆಯಿಂದ ರಕ್ಷಿಸಲು ವಿಫಲವಾದ ಪರಿಣಾಮ ಬಟ್ಟೆ ಒದ್ದೆಯಾಗಿ ಛಳಿಯಿಂದ ನಡುಗುತ್ತಿದ್ದೆವು. ಇನ್ನೊಂದು ಕಡೆ ಅಪಮಾನದ ಉರಿ. ಮತ್ತೊಂದು ಕಡೆ ಮೊದಲೇ ನನ್ನ ಮೇಲೆ ಕೋಪಿಸಿಕೊಂಡ ಸೋಷಿಯಲ್ ಮಾಷ್ಟ್ರು ಹುಡುಗರ ಮುಂದೆ ಏನಾದರೂ ಬೈದುಬಿಟ್ಟರೆ ಏನು ಗತಿ? ಎಂಬ ಭಯಎಲ್ಲಾ ಭಾವನೆಗಳೂ ನನ್ನ ಮುಖದಲ್ಲಿ ಉಕ್ಕಲಾರಂಭಿಸಿತು. ಇವಿಷ್ಟೂ ಆದದ್ದು ಕೆಲವೇ ಸೆಕೆಂಡುಗಳಲ್ಲಿ. ಅಷ್ಟರಲ್ಲಿ ಅವರೂ ನಕ್ಕು ಎಲ್ಲಿಗೆ ಹೋಗಿದ್ದಿರಿ ಶಾಲಾ ಅವಧಿಯಲ್ಲಿ? ಎಂದು ಪ್ರಶ್ನಿಸಿದರು. ನನ್ನ ಗೆಳತಿ-ನಾನು ಮುಖ ಮುಖ ನೋಡಿಕೊಂಡೆವು.

ನಂತರ ನಾನೇ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ, ಮುಂಚೆ ಓದುತ್ತಿದ್ದ ಸ್ಕೂಲಿಗೆ ಹೋಗಿದ್ವಿ ಸರ್ ಎಂದೆ. ನಾನು ಮಾತು ಮುಗಿಸುವುದರೊಳಗಾಗಿ ಯಾರನ್ನು ಕೇಳಿ ಹೋಗಿದ್ದಿರಿ? ಎಂಬ ಪ್ರಶ್ನೆ ಎದುರಿಗೆ ನಿಂತಿತ್ತು. ಅಂಜುತ್ತಲೇ ಹೆಡ್ ಮಾಷ್ಟ್ರನ್ನ ಕೇಳಿಕೊಂಡು ಹೋಗಿದ್ವಿ ಸರ್ ಎಂದುಸುರಿದೆ. ಸರಿ ಬನ್ನಿ ಅಂತ ಕರೆದು ಎಂತಕೆ ಹೋಗಿದ್ರಿ? ಅಂತ ಕೇಳ್ತಾ ನನ್ನ ಕೈಲಿದ್ದ ಒದ್ದೆಯಾಗಿದ್ದ laminated marks cardನೋಡಿ ಕೊಡಿಲ್ಲಿ ಅಂದರು.

ನಾನು ಕರ್ಚೀಫ್‌ನಿಂದ ಒರೆಸಿ ಅವರಿಗೆ ಕೊಟ್ಟು ನನ್ನ ಜಾಗದಲ್ಲಿ ಕುಳಿತೆ. ಅವರು ಅಂಕಗಳನ್ನು ನೋಡಿದರು. ಮೊದಲಿನಿಂದಲೂ ನಾನು ಓದುವುದರಲ್ಲಿಮುಂದಿದ್ದೆ. ಆ ಹಳ್ಳಿಯಲ್ಲಿ ಯಾವುದೇ ರೀತಿಯ ಟ್ಯೂಷನ್ ಕೂಡಾ ಇರಲಿಲ್ಲ. ಆದರೂ ಅದೇ ವರ್ಷ ಪ್ರಾರಂಭವಾಗಿದ್ದ ಪಬ್ಲಿಕ್ ಪರೀಕ್ಷೆಯಲ್ಲಿ, ಒಳ್ಳೆಯ ಅಂಕಗಳು ಬಂದಿತ್ತು. ನಾನು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದೆ. ಅಬ್ಬಾ ಚನ್ನಾಗಿ ತೆಗೆದಿದ್ದೀಯ! ಅಂತ ಹೇಳಿ ಪ್ರತಿ ವಿಷಯದ ಅಂಕಗಳನ್ನೂ ಗಟ್ಟಿಯಾಗಿ ಓದಿದರು. ಯಾರಿಗಾದರೂ ಹೆಚ್ಚಿಗೆ ಅಂಕಗಳು ಬಂದಿವೆಯೇ?ಅಂತ ಕ್ಲಾಸಿನಲ್ಲಿ ಕೇಳಿದರು. ಯಾರೂ ಇರಲಿಲ್ಲ. ನನಗೂ ನಾನೇ ಹೆಚ್ಚಿಗೆ ಮಾರ್ಕ್ಸ್ ತೆಗೆದವಳೆಂಬುದು ಗೊತ್ತಿರಲಿಲ್ಲವಾದ್ದರಿಂದ ಸಂತೋಷದ ಜೊತೆಗೆ ನಾಚಿಕೆಯೂ ಆಯಿತು. ಅಂದಿನಿಂದ ಅವರಿಗೆ ನನ್ನ ಬಗೆಗಿದ್ದ ಅಸಮಾಧಾನ ದೂರವಾಯಿತು.

ಅಲ್ಲಿ ಬೇರೆ ಅಧ್ಯಾಪಕರೆಲ್ಲರೂ ನೋಟ್ಸ್ ಕೊಡುತ್ತಿದ್ದರು. ಆದರೆ ಇವರು ಕೊಡುತ್ತಿರಲಿಲ್ಲ. ಪಠ್ಯಪುಸ್ತಕದಲ್ಲಿ ಏನಿತ್ತೋ ಅದಕ್ಕಿಂತ ಹೆಚ್ಚಿಗೆ ವಿಷಯಗಳನ್ನು ಓದಿಕೊಂಡು ಬಂದು ಹೇಳುತ್ತಿದ್ದರು. ಮುಖ್ಯ ವಿಷಯಗಳನ್ನು ಹೈಲೈಟ್ ಮಾಡಿ ಹೇಳುತ್ತಿದ್ದರು. ಹಾಗಾಗಿ ಅವರ ಕ್ಲಾಸ್ ಹಲವರಿಗೆ ಬೋರ್ ಹೊಡೆಸುತ್ತಿತ್ತು. ಆದರೆ ಅವರು ವಿವರಿಸುವ ವಿಷಯಗಳ ಬಗ್ಗೆ ಆಸ್ಥೆ ಇದ್ದುದರಿಂದ ನನಗೆ ಮತ್ತು ಕೆಲ ಸಹಪಾಠಿಗಳಿಗೆ ಇವರ ಕ್ಲಾಸ್ ರಸದೌತಣ ನೀಡುತ್ತಿತ್ತು. ಇವರ ಇತಿಹಾಸದ ಕ್ಲಾಸುಗಳನ್ನು ಕೇಳುವುದೇ ಒಂದು ಹಬ್ಬ. ಈಗಲೂ ಸುಮಾರು 7-8 ವರ್ಷಗಳ ನಂತರವೂ ಅವರ ಪಾಠ ಕೇಳಿದ್ದು, ನಿನ್ನೆ-ಮೊನ್ನೆಯೇನೋ ಎಂಬಂತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more