• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರದ್ಧಾ

By Staff
|

ನಟರಾಗಿ, ನಿರ್ದೇಶಕರಾಗಿ ವಿನಾಯಕ ಜೋಶಿ ಪ್ರಬುದ್ಧರಾಗುತ್ತಿದ್ದಾರೆ... ಪಕ್ವರಾಗುತ್ತಿದ್ದಾರೆ. ಈ ಮಾತಿಗೆ ನಿದರ್ಶನ . ಈ ನಾಟಕ ನೋಡಿದವರ ಎದೆಯಲ್ಲಿ ಅಪ್ಪ ಜೀವಂತ!

* ಮಲೆನಾಡಿಗ

ತಲಿ ಬೋಳಿಸಿಕೊಳ್ಳೊಕೆ ಹೇಳ್ರಿ ಎಂದು ಗರ್ಜಿಸುತ್ತಾ ಬಲಗೈಯಿಂದ ಎಡಬದಿ ಮೀಸೆ ತಿರುವುತ್ತಾ ತಿರುಗುವ, ಉಗ್ರನರಸಿಂಹನ ಅಪರಾವತಾರದಂಥ ಅಪ್ಪನ ಪಾತ್ರ ಪ್ರೇಕ್ಷಕರನ್ನು ಮತ್ತೆ ಮತ್ತೆ ಕಾಡದೇಬಿಡುವುದಿಲ್ಲ..

ಮಂಗ್ಯ ನನ್ನ್ಮಕ್ಕಳು ಎಂದು ಬೈಸಿಕೊಳ್ಳುವ ಈತನ ಪುತ್ರತ್ರಯರು ನಾಟಕದ ನಿರೂಪಣಾ ಜವಾಬ್ದಾರಿ ಹೊತ್ತವರು.

ಸಾಮಾನ್ಯ ಧಾಟಿಗಿಂತ ಕೊಂಚ ಭಿನ್ನವಾದ ನಿರೂಪಣೆ ಹಾಗೂ ಕಥಾನಕಕ್ಕೆ ಅಗತ್ಯವಾದ ಸಂಗೀತವನ್ನು ಒಪ್ಪವಾಗಿ ಸೇರಿಸಿ ಧಾರವಾಡ ಭಾಷೆಯ ಸೊಗಡನ್ನು ನಿಮ್ಮ ಮುಂದಿಡುತ್ತದೆ ಎಂಬ ನಾಟಕ.

ತಂದೆ ಮಕ್ಕಳ ಸಂಬಂಧದ ಮೇಲೆ ರೂಪಿತವಾದ ನಾಟಕ, 50ರ ದಶಕದ ಕಥೆ ಎಂದು ಪಾತ್ರಧಾರಿಯ ಮಾತಿನಿಂದತಿಳಿದರೂ, ಇಂದಿಗೂ ಪ್ರಸ್ತುತವಾದ ಕಥಾವಸ್ತುವನ್ನು ಹೊಂದಿದೆ.ಆರಂಭದಲ್ಲಿ ಮೂವರು ಮಕ್ಕಳು ತಮ್ಮ ತಂದೆಯ ಗುಣ, ಆಕಾರ ವರ್ಣನೆ ಮಾಡುವ ರೀತಿ ಮೋಜೆನಿಸುತ್ತದೆ.

ಉರಿವ ಗಣ್ಣು, ದಪ್ಪ ಮೀಸೆ ಅದನ್ನು ತೀಡುವ ರೀತಿ, ಗಂಭೀರ ನಡಿಗೆ, ಗಾಂಧಿ ತತ್ವ ಪಾಲನೆ, ಎಲ್ಲಕ್ಕಿಂತ ಮುಖ್ಯವಾಗಿಮಾತಿನಲ್ಲಿ common factor

ಆದ ತಲೆ ಬೋಳಿಸಿಕೊಳ್ರೊ ಅನ್ನೋ ಮಾತು ಬೈಗುಳವಾಗುವ ಬದಲು ರೂಢಿಯ ವಾಕ್ಯವಾಗಿ ನಿತ್ಯಜೀವನದಲ್ಲಿ ಬೆರೆತ ಬಗೆ, ಎಲ್ಲವನ್ನು ಮೂವರು

ಪುತ್ರರು ಸೊಗಸಾಗಿ ಹಾಡುತ್ತಾ, ಆಡುತ್ತಾ ನಿಮ್ಮ ಮುಂದಿಟ್ಟರು.

ಗಂಡುಮೆಟ್ಟಿನ ಭಾಷೆಯ ಸೊಗಡಿನಲ್ಲಿ , ಏರುದನಿಯಲ್ಲಿ ಆಗಾಗ ಸುಳಿವ ಗಾಯನ ಕಥೆಯ ಓಟಕ್ಕೆ ಪೂರಕವಾಗಿ ಹಿತಕರವಾಗಿದೆ. ತಬಲ, ಪಿಟೀಲು, ಕೀಬೋರ್ಡ್ ಮುಂತಾದ ಹಲವು ಪರಿಕರಗಳನ್ನು ಜೋಡಿಸಿಕೊಂಡು, ರಂಗಶಂಕರದ ಇಕ್ಕಟ್ಟಾದ ವೇದಿಕೆ ಮುಂಬದಿಯಲ್ಲಿ ಕೂತ 7-8 ಯುವಕಯುವತಿಯರ ತಂಡ ಸಂಗೀತ ಪ್ರತಿಭೆಯನ್ನು ಮೆರೆದರು.

ಶ್ರೀನಿವಾಸ ವೈದ್ಯ ರಚನೆಯ ಈ ನಾಟಕದಲ್ಲಿ ಮೊದಲಿಗೆ ಹಾಡುಗಳು ಇರಲಿಲ್ಲವಂತೆ, ನಂತರ ಅದರ ಅಗತ್ಯತೆಯನ್ನು ಕಂಡು ನಮ್ಮ ತಂಡದವರೆಲ್ಲಾ ಸೇರಿ ಹಾಡುಗಳನ್ನು ರಚಿಸಿ, ಟ್ಯೂನ್ ಹಾಕಿದೆವು ಎನ್ನುತ್ತಾರೆ ವಿನಾಯಕ ಜೋಶಿ. ಸಂಗೀತ ತಂಡದ ಸಾರಥ್ಯ ವನ್ನು ವಹಿಸಿದ್ದ ಪ್ರವೀಣ್ ಹಾಗೂ ರಾಜು ಹೊಸಕೋಟೆ ತಂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು

ಈ ನಾಟಕದಲ್ಲಿ ಗಮನಿಸಬಹುದಾದ ಅಂಶಗಳೆಂದರೆ : ಪಾತ್ರಧಾರಿಗಳ timing, ಸಂಗೀತದ ಸಾಥ್, ಬೆಳಕಿನ ವಿನ್ಯಾಸ ಹಾಗೂ theme presenting.

3 ಜನ ಮಕ್ಕಳ ಪಾತ್ರಧಾರಿಗಳಲ್ಲಿ ಇಬ್ಬರಿಗೆ ಫುಲ್ ಮಾರ್ಕ್ಸ್ ನೀಡಬಹುದು. ಮತ್ತೊಬ್ಬರಿಗೆ ಪಾಸ್ ಕ್ಲಾಸ್(ಒದೆ ತಿನ್ನೊ ದೃಶ್ಯ ಒಂದನ್ನು ಬಿಟ್ಟು).

ಪರೀಕ್ಷೆಯಲ್ಲಿ ಶೂನ್ಯ ಸಂಪಾದನೆ ಗಳಿಸಿದಪುತ್ರರತ್ನ ಪರಿಸ್ಥಿತಿಯನ್ನು ನಿಭಾಯಿಸುವುದು, ಚಿಕ್ಕವನಿದ್ದಾಗ ಆಟವಾಡುವಾಗ ಗಾಯಗೊಂಡಾಗಿನ ದೃಶ್ಯದಲ್ಲಿ

ಪುತ್ರರ ಅಭಿನಯ, ಅಪ್ಪನಿಗೆ ಹೆದರಿ ಬಚ್ಚಿಟ್ಟುಕೊಳ್ಳುವ ರೀತಿ ಮನಸ್ಸಿನಲ್ಲಿ ಉಳಿಯುತ್ತದೆ.

ತಾಯಿ ಪ್ರಾತ್ರಧಾರಿಣಿಗೆ ಅಭಿನಯದ ಅವಕಾಶ ಕಮ್ಮಿಯಿದ್ದರೂ ಅಚ್ಚುಕಟ್ಟಾಗಿ ಪಾತ್ರನಿರ್ವಹಣೆ ಮಾಡಿದ್ದಾರೆ. ಉಳಿದಂತೆಮನಸ್ಸಿನ ಭಾವನೆಗಳ

ಪ್ರತಿರೂಪದಂತೆ ಆಗಾಗ ಬರುವನೃತ್ಯಗಾರನ ಪಾತ್ರಧಾರಿಯ ನೃತ್ಯ ಸೊಗಸಾಗಿದೆ.

ಇಡೀನಾಟಕವನ್ನು ತಮ್ಮ ನಡೆ ನುಡಿಯಿಂದ ಹಿಡಿದಿಟ್ಟುಕೊಳ್ಳುತ್ತಾ ಮುಖ್ಯ ಪಾತ್ರವನ್ನು ನಿರ್ವಹಿಸಿದ ವಿನಾಯಕ ಜೋಶಿ ಅಭಿನಂದನಾರ್ಹರು.

ಬಾಲಕ ಜೋಶಿಯ ಮುಗ್ಧತನ, ನಂತರದ ದಿನಗಳಲ್ಲಿ ಹಾಸ್ಯಪಾತ್ರಗಳಲ್ಲಿ ಜೋಶಿಯನ್ನು ನೋಡಿದ್ದವರಿಗೆ ಪ್ರಸ್ತುತ ಪಾತ್ರ ನೋಡಿದಾಗ ನಿಜಕ್ಕೂ

ಕೊಂಚ ಅಚ್ಚರಿಯೆನಿಸುತ್ತದೆ. ತಮ್ಮ ಗಡಸುಧ್ವನಿಯಲ್ಲಿ ಮಕ್ಕಳನ್ನು ಅಬ್ಬರಿಸುವ ತಂದೆ ಪಾತ್ರದಲ್ಲಿ ಅವರು ಮುಳುಗಿಹೋಗಿದ್ದರು ಎಂದರೆ ತಪ್ಪಾಗಲಾರದು.

ಪಾತ್ರಕ್ಕೆ ತಕ್ಕಂಥ ಮ್ಯಾನರಿಸಂಗಳನ್ನು ರೂಢಿಸಿಕೊಂಡು ಪ್ರಬುದ್ಧ ಅಭಿನಯವನ್ನು ಜೋಶಿ ನೀಡಿದರು. ಒಡಹುಟ್ಟಿದವರ ಮೋಸದಿಂದ ಪರಿತಪಿಸುವುದು, ಬೈಗುಳವನ್ನುಬಳಸುವ ರೀತಿ,ಅಳುವ ಮಗನನ್ನು ಸಂತೈಸುವ ಪರಿ, ಕಡೆಗೆ ಬೆಳೆದ ಮಕ್ಕಳನ್ನು ತೊರೆಯಲಾಗದೆ ಒದ್ದಾಡುವ ದೃಶ್ಯಗಳಲ್ಲಿ ಜೋಶಿಯವರ ನಟನೆ ಅದ್ಭುತ.

ಭಾವನಾಪ್ರಧಾನ ವಸ್ತುವನ್ನು ಹೊಂದಿರುವುದುದರಿಂದ ನಾಟಕಕ್ಕೆ ಹಾಡುಗಳು ಕಳೆಕಟ್ಟಿವೆ. ದೇಸಿ ಸೊಗಡಿನ ಹಾಡುಗಳು ಭಾಷೆ ಬಳಕೆ ಆಪ್ತವೆನಿಸುತ್ತದೆ, ಹಾಸ್ಯ, ವಿಷಾದ

ಭಾವನಾತ್ಮಕ ಲೇಪದೊಂದಿದೆ ಬೆರೆತೆ 3-4 ಹಾಡುಗಳು ಆಗಾಗ ತೇಲಿಬಂದು ನಾಟಕವನ್ನು ಮುಂದುವರೆಸುತ್ತವೆ. ಎಲ್ಲೂ ನಿಮಗೆ ಬೋರ್ ಹೊಡೆಸವು.

ರಂಗಶಂಕರದಂಥ ಆಪ್ತರಂಗಮಂದಿರದಲ್ಲಿ (intimate theater) ನಾಟಕ ನೋಡಲು ಖುಷಿಯಾಗುವುದಕ್ಕೆ ಕಾರಣ, ಬೆಳಕಿನ ಸಮರ್ಪಕ ಬಳಕೆ. ದೊಡ್ಡ ವೇದಿಕೆಗಳಲ್ಲಿ ಬೆಳಕಿನ ಆಟ, ನಟರ ಹಾವಭಾವವನ್ನು ಕಂಡವರಿಗೆ ಇಲ್ಲಿನ ವೇದಿಕೆಯಲ್ಲಿ ಬೆಳಕಿನ ವಿನ್ಯಾಸದ ಇತಿಮಿತಿಗಳು ಅರಿವಾಗುತ್ತದೆ.

ಭಾವನೆಗಳನ್ನು ಪ್ರತಿಬಿಂಬಿಸುವಾಗ, ರೈಲಿನಲ್ಲಿ ಪಯಣಿಸುವಾಗ, ಕೊನೆಯ ದೃಶ್ಯದಲ್ಲಿ ನೆರಳು- ಬೆಳಕಿನಾಟ ಪಾತ್ರಧಾರಿಗಳ ಮೇಲೆ ಸರಿಯಾಗಿ focus ಆಗಿ ನೋಡಲು ಹಿತವೆನಿಸುತ್ತದೆ.

ಆಗಾಗ ಸುಳಿವ ನೃತ್ಯಗಾರರ ಬಳಕೆ ಹೊಸತನದಿಂದ ಕೂಡಿದ್ದರೂ, ಕೆಲವೊಮ್ಮೆ ಸಾಮಾನ್ಯ ಪ್ರೇಕ್ಷಕರಿಗೆ ಭಾವನಾತ್ಮಕ ನೃತ್ಯದ ಒಳಹೊಕ್ಕು ನೋಡುವುದು

ಸಾಧ್ಯವೆನಿಸದೆ ನೃತ್ಯ ಏಕೆ ಎಂಬ ಪ್ರಶ್ನೆ ಬರುತ್ತದೆ.

ಮೊದಲಿಗೆ ಹಾಸ್ಯ ತುಸು ಹೆಚ್ಚೆನಿಸಿದರೂ, ಪೂರಕವಾಗಿದೆ. ಇನ್ನಷ್ಟು ಭಾವನಾತ್ಮಕ ದೃಶ್ಯಗಳನ್ನು

ಸೇರಿಸಬಹುದಾಗಿದ್ದರೂ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುವ ಸಾಹಸ ಏತಕ್ಕೆ ಎಂದು ಆ ಯೋಚನೆ ಕೈ ಬಿಟ್ಟಂತೆ ತೋರುತ್ತದೆ.

ಕಥೆಯ theme ಕೊನೆಯಲ್ಲಿ ಸ್ವಲ್ಪ elaborate ಮಾಡಬಹುದಿತ್ತು. ಆರಂಭದ ಹಿನ್ನೆಲೆ ಧ್ವನಿಯಲ್ಲಿ ಕೇಳಿದ ಪ್ರಸ್ತಾವನೆ ಸಮನಾಗಿ ಕೊನೆಯ ದೃಶ್ಯಗಳನ್ನು ರೂಪಿಸಿದ್ದರೆ ಚೆನ್ನಿತ್ತು. ಏಕೆಂದರೆ ಕೊನೆಯ ದೃಶ್ಯದ ಹೊತ್ತಿಗೆ ಪ್ರೇಕ್ಷಕರ ಅನುಕಂಪದ ಅಲೆಯಲ್ಲಿ ತೇಲುತ್ತಿರುವಾಗ ಇನ್ನಷ್ಟು ಪಂಚಿಂಗ್ ಡೈಲಾಗ್ಸ್ ತುರುಕಬಹುದಿತ್ತು.

ಬಹುವಿಸ್ತಾರವಾದ ಹಾಗೂ ಚರ್ಚಿತವಾದ ವಿಷಯವನ್ನು ಈ ನಾಟಕ ಒಳಗೊಂಡಿದೆ ಎಂದು ಹೇಳಬಹುದು. ತಾಯಿ ಮಗನ ಸಂಬಂಧದ ಬಗ್ಗೆ ನಾನಾ ಕಥಾನಕಗಳನ್ನು ಕಂಡವರಿಗೆ, ತಂದೆ ಮಕ್ಕಳ ಬೆಸುಗೆಯ ಕಥಾ ಹಂದರ ಹೊಸತನವೆನಿಸುತ್ತದೆ.

ಕುಟುಂಬಕ್ಕೆ ರಕ್ಷಣೆ ನೀಡುತ್ತಾ, ಮಕ್ಕಳನ್ನು ತಿದ್ದಿ ತೀಡುತ್ತಾ ಸಮಾಜದ ಕೊಳಕನ್ನು ತೊಳೆಯುವ ಕಾಯಕದಲ್ಲಿ ನಿರತನಾದ, ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳಾಗಿ ರೂಪಿಸುವತ್ತ ಶ್ರಮಿಸುವಲ್ಲಿ ತಂದೆಯ ಪಾತ್ರ ಹಿರಿದಾದದು. ಆದರೆ ಚಿಕ್ಕಂದಿನಿಂದ ಬಹುಪಾಲು ತಂದೆ ಮಕ್ಕಳ ನಡುವಿನ ಸಂಬಂಧ ಏನೋ ಬಿಗುಮಾನ, ಹಿಂಜರಿಕೆ, ಭಯದಿಂದ ಭಕ್ತಿ ಪೂರಕವಾಗಿ ಒಂದು

ರೀತಿಯ ಅಂತರವೇರ್ಪಟ್ಟಿರುತ್ತದೆ. ಆದರೆ ಈ ಅಂತರ ಮುಂದೆ ಕಂದರವಾಗದಂತೆ ನೋಡಿಕೊಂಡು ತಂದೆಯ ಮಾತನ್ನು ಪುರಸ್ಕರಿಸುತ್ತಾ ನಡೆಯಬೇಕಾದ್ದು

ಮಕ್ಕಳ ಕರ್ತವ್ಯ ಎಂಬುದನ್ನು ಮರೆಯುತ್ತೇವೆ.

ಇದ್ದಾಗ ತಂದೆ -ತಾಯಿಯನ್ನು ಚೆನ್ನಾಗಿ ಕಾಣದೆ ಅವರುಗಳು ತೀರಿದ ಬಳಿಕ ಮಾಡುವ ಶ್ರಾದ್ಧ ಕರ್ಮಾದಿಗಳಲ್ಲಿ ಯಾವ ಅರ್ಥವಿಲ್ಲ ಎಂಬುದನ್ನು ಕೊನೆಗೆ ಈ ನಾಟಕ ಸಾರುತ್ತದೆ.

ಮಕ್ಕಳ ಅಗಲಿಕೆ ತಾಯಿಗೆ ಹೇಗೆ ನೋವು ನೀಡುತ್ತದೆಯೋ ಹಾಗೆ ತಂದೆಗೆ ಕೂಡ ನೋವು ನೀಡಬಲ್ಲದು ಎಂಬುದನ್ನು ಕಾಣುತ್ತೇವೆ. ಹೊರಗೆ ಬೆಂಕಿ ನವಾಬನಾದರೂ ಒಳಗೆ ಮಂಜುಗಡ್ಡೆಯ ಪ್ರತಿರೂಪವಾದ ಎಲ್ಲಾ ತಂದೆಯರ ಮನಸ್ಥಿತಿಯ ಅರ್ಥ ಮಾಡಿಕೊಳ್ಳುವುದರಲ್ಲಿ ಇಂದಿನ ಮಕ್ಕಳು ಸೋಲುತ್ತಿರುವುದು ಖೇದಕರ ಸಂಗತಿ.

ಕೊನೆಯಲ್ಲಿ ಜಗತ್ತಿನ ಅಪ್ಪಂದಿರಿಗೆ ನಮ್ಮ ಈ ನಾಟಕ ಅರ್ಪಿತ ಎನ್ನುವುದು ಹಿತವೆನಿಸುತ್ತದೆ.

ಒಟ್ಟಿನಲ್ಲಿ ನಿರೂಪಣೆಯನ್ನು ಅಚ್ಚುಕಟ್ಟಾಗಿ ಸೀಮಿತವಾಗಿ ನೀಡಿದ ಕೀರ್ತಿ ಪಂಚಮುಖೀ ನಟರ ಸಮೂಹಕ್ಕೆ ಸಲ್ಲುತ್ತದೆ. ಯುವಪ್ರತಿಭೆಗಳ ಸಾಮರ್ಥ್ಯವನ್ನು ಸರಿಯಾಗಿ ದುಡಿಸಿಕೊಂಡು ಒಳ್ಳೆಯ ನಾಟಕವನ್ನು ರಂಗಕ್ಕೆ ನೀಡಿದ ವಿನಾಯಕ ಜೋಶಿ ಅವರ ಪರಿಶ್ರಮ ಸಾರ್ಥಕವಾಗಿದೆ.

ವಿನಾಯಕ ಜೋಶಿ ಅವರ ತಂದೆ ವಾಸುದೇವ ಜೋಶಿಯವರ ಅಗಲಿಕೆಯ ನೋವಿನಲ್ಲಿ, ಅವರ ಸವಿನೆನಪಿನಲ್ಲಿ ಮೂಡಿ ಬಂದ ಈ ನಾಟಕ, ನಿಜವಾದ ಂಜಲಿ.

ನಾಟಕ ಮುಗಿಸಿ ಹೊರಡುವಮುನ್ನ ಒಮ್ಮೆಯಾದರೂ ಎಲ್ಲರ ಮನಸ್ಸಿನಲ್ಲಿ ಅವರ ಅಪ್ಪನ ಆಕಾರ ಸುಳಿಯದೆ ಹೋಗದಿದ್ದರೇ ಕೇಳಿ....

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more