ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಬಂಧುಗಳ ಮುಂದೆ ಅನಂತಮೂರ್ತಿ ಭಾಷಣ

By Staff
|
Google Oneindia Kannada News


S L Bhairappas Novel Avarana is Talk of the town ಭೈರಪ್ಪನವರಿಗಿಂತ ಆಡ್ವಾಣಿಯವರೇ ಹೆಚ್ಚು ಮುಕ್ತ ಮನಸ್ಸಿನವರೇನೊ? ಅವರು ನಿತ್ಯ ಜನಸಂಪರ್ಕದ ರಾಜಕಾರಣಿಯಾದ್ದರಿಂದ ಭೈರಪ್ಪನವರಿಗೆ ಸಾಧ್ಯವಿಲ್ಲದೇ ಇರುವುದು ಅವರಿಗೆ ಸಾಧ್ಯವಿದೆ. ಇದೊಂದು ಆಶ್ಚರ್ಯ. ಆಡ್ವಾಣಿಯವರು ಜಿನ್ನಾ ಬಗ್ಗೆ ಪಾಕಿಸ್ಥಾನದಲ್ಲಿ ಮಾತನಾಡಿದ್ದರು. ಪಾಕಿಸ್ಥಾನ ಆದ ಮೇಲೆ ‘ಇನ್ನು ಮುಂದೆ ಹಿಂದೂ ಮುಸ್ಲಿಂ ಅಂತೆಲ್ಲಾ ಮಾಡುವುದು ಬೇಡ ಇಲ್ಲಿ ಯಾರೂ ಮುಸ್ಲಿಮರಿಲ್ಲ, ಹಿಂದೂಗಳಿಲ್ಲ. ಇದು ಪಾಕಿಸ್ಥಾನ’ ಅಂತ ಜಿನ್ನಾ ಭಾಷಣ ಮಾಡಿದ್ದು ನಿಜ. ಇದನ್ನು ಹೇಳಬೇಕೆಂದು ಆಡ್ವಾಣಿಯವರಿಗೆ ಅನ್ನಿಸಿತು. ಅದನ್ನು ಹೇಳಿ ಅವರು ಬಹಳ ಟೀಕೆಗಳಿಗೆ ಗುರಿಯಾಗಿಬಿಟ್ಟರು. ಆಡ್ವಾಣಿಯವರಿಗೆ ತಮ್ಮ ರಾಜಕಾರಣದಲ್ಲೂ ತೆರೆಯಬಹುದಾದ ಒಂದು ಒಳನೋಟ ನಮ್ಮ ಭೈರಪ್ಪನವರಿಗೆ ಸಾಧ್ಯವಿಲ್ಲವಲ್ಲ ಇದು ಬಹಳ ದೊಡ್ಡ ದುರಂತ ಅಂತ ನನ್ನಗನ್ನಿಸುತ್ತೆ. ಕೆಟ್ಟ ರಾಜಕಾರಣ ಮಾಡುವವನೂ ಜನರ ಜತೆಯೇ ರಾಜಕಾರಣ ಮಾಡಬೇಕಾಗಿರುವುದರಿಂದ ಎಲ್ಲೋ ಒಂದು ಕಡೆ ತೆರೆದುಕೊಳ್ಳುತ್ತಾನೆ.

ಪಾಕಿಸ್ಥಾನೀ ಬರೆಹಗಾರರು ಅನೇಕ ಕಥೆಗಳನ್ನು ಹೇಳುತ್ತಾರೆ. ಇವು ಅವರ ಮೌಖಿಕ ಜಾನಪದ. ಅಲ್ಲಾನ ಬಗ್ಗೆಯೇ ಒಂದು ಕತೆ ಇದೆ. ನಮಗೊಂದು ಮುಸ್ಲಿಂ ದೇಶ ಬೇಕು ಎಂದು ಭಾರತ ತೊರೆದು ಹೋದವರು ಅಲ್ಲಿ ಎರಡನೇ ದರ್ಜೆಯ ನಾಗರಿಕರಾದರು. ಅಲ್ಲೇ ಇದ್ದ ಪಂಜಾಬಿಗಳದೇ ಮೇಲುಗೈ ಆಯಿತು. ಉರ್ದು ಮಾತಾಡುವವರ ಕೊಲೆಗಳೂ ನಡೆಯ ತೊಡಗಿದವು. ಹೀಗೆ ಕೊಲೆಯಾದ ಒಬ್ಬ ಅಲ್ಲಾನ ಹತ್ತಿರ ಹೋಗುತ್ತಾನೆ. ಅಲ್ಲಿ ಅವನು ದೇವರನ್ನುದ್ದೇಶಿಸಿ ಉರ್ದುವಿನಲ್ಲಿ ‘ನಾನು ನಿನ್ನನ್ನು ನಂಬಿ ನಮಗೊಂದು ಪಾಕಿಸ್ಥಾನ ಬೇಕು ಎಂದು ಬಂದವನು. ಆದರೆ ನನ್ನನ್ನೇ ಕೊಂದುಬಿಟ್ಟರು ನಿನ್ನ ಜನ’ ಎಂದು ದೂರುತ್ತಾನೆ. ಆಗ ಅಲ್ಲಾ ಗೇಬ್ರಿಯಲ್‌ನನ್ನು ಕರೆದು ‘ಅವನೇನು ಹೇಳುತ್ತಿದ್ದಾನೆ?’ ಎಂದು ಪಂಜಾಬಿಯಲ್ಲಿ ಕೇಳಿದನಂತೆ!

ಇದು ಪಾಕಿಸ್ತಾನಿಗಳೇ ಹೇಳುವ ಕತೆ. ಇದರರ್ಥ ಎಲ್ಲರಿಗೂ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ ಒಳ ನೋಟ ಇರುತ್ತದೆ ಎಂದು. ಆದ್ದರಿಂದ ನನ್ನ ಬಹಳ ದೊಡ್ಡ ಆಸೆ ಏನಂದರೆ ನಾವು ಏನಾದರೂ ಮಾಡಿ ಪಾಕಿಸ್ಥಾನದ ಜತೆ ಸ್ನೇಹದಿಂದ ಇದ್ದು ಈ ಹಿಂದೂ ಮುಸ್ಲಿಂ ದ್ವೇಷವನ್ನು ಕೊನೆಗೊಳಿಸಬೇಕು. ನನಗೆ ಪಾಕಿಸ್ತಾನೀ ಲೇಖಕ ಸ್ನೇಹಿತರಿದ್ದಾರೆ. ಅವರೂ ನಮ್ಮ ಹಾಗಿನ ಮನುಷ್ಯರೇ. ಮನುಷ್ಯನನ್ನು ಒಟ್ಟಾರೆಯಾಗಿ ನೋಡಿ ಈ ಮನುಷ್ಯ ಇಷ್ಟೇ ಹೀಗೇ ಎಂದು ಹೇಳುವುದು, ಒಂದು ಧರ್ಮ ಇಷ್ಟೇ ಹೀಗೇ ಎಂದು ಹೇಳುವುದು, ಆ ಧರ್ಮ ಕಾಲಾನುಕ್ರಮದಲ್ಲಿ ಪಡೆಯುವ ರೂಪವನ್ನು ಗಮನಿಸದೇ ಇರುವುದು ದಡ್ಡತನ.

ಇಸ್ಲಾಂ ಬೇರೆ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ವರ್ಣರಂಜಿತವಾಗಿಲ್ಲ. ಇಲ್ಲಿ ದೇಶೀ ಸಂಸ್ಕೃತಿಗಳ ಜತೆಗೆ ಒಡನಾಡಿ ಅದು ಪಡೆದುಕೊಂಡಿರುವ ಸ್ವರೂಪ ಭಿನ್ನವಾದುದು. ಒಬ್ಬ ಕಬೀರ್‌ ಹುಟ್ಟಿಗೂ ಇಸ್ಲಾಂ ಮತ್ತು ಅದ್ವೈತದ ನಡುವಿನ ಸಂವಾದ ಕಾರಣವಾಯಿತು. ಇಂಥ ಯಾವುದಕ್ಕೂ ಅವಕಾಶವಿಲ್ಲದಂತೆ ಇದೊಂದು ರೀತಿಯ ಶಾಪ ಎಂಬಂತೆ ಔರಂಗಜೇಬನನ್ನು ಎತ್ತಿಕೊಂಡು ಮಾತಾಡುವುದು, ಎರಡು ಮತಗಳಲ್ಲೂ ಹುಟ್ಟಿದ ಭಕ್ತಿಪಂಥವನ್ನು ಕಡೆಗಣಿಸುವುದು. ಕರ್ನಾಟಕವನ್ನು ಗುಜರಾತ್‌ ಗೊಳಿಸುವ ದ್ವೇಷದ ರಾಜಕಾರಣ. ಯಾರಾದರೂ ಚರಿತ್ರಕಾರರು ಈ ಕುರಿತು ಪ್ರತಿಕ್ರಿಯಿಸಬೇಕು. ಭೈರಪ್ಪನವರು ಔರಂಗಜೇಬ್‌ನನ್ನು ಬೈದರು ಅಂತ ನಾನು ಔರಂಗಜೇಬ್‌ನನ್ನು ಹೊಗಳುವುದಕ್ಕೆ ಆರಂಭಿಸಿದರೆ ನಾನೂ ಒಬ್ಬ ಡಿಬೇಟರ್‌ ಆಗಿಬಿಡುತ್ತೇನೆ ಅಷ್ಟೇ. ಅಕ್ಬರನ ಆಸ್ಥಾನದಲ್ಲಿ ಇದ್ದ ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆಯ ಹಿಂದೂಗಳು ಔರಂಗಜೇಬನ ಆಸ್ಥಾನದಲ್ಲಿದ್ದರು ಎಂದು ಹೇಳುವವರಿದ್ದಾರೆ. ಅವನು ಅಷ್ಟು ದೇವಸ್ಥಾನಗಳನ್ನು ಕೆಡವಿದ ಅಂದರೆ ಇನ್ನಾರೋ ಮತ್ತಷ್ಟು ದಾಖಲೆಗಳನ್ನು ತಂದು ಅವನು ಇಷ್ಟು ದೇವಸ್ಥಾನಗಳನ್ನು ಕಟ್ಟಿಸಿದ ಎನ್ನಲು ಸಾಧ್ಯವಿದೆ. ನನಗೇ ಗೊತ್ತಿರುವ ಹಾಗೆ ನಮ್ಮ ತೀರ್ಥಹಳ್ಳಿಯ ದೇವಸ್ಥಾನಗಳೆಲ್ಲವನ್ನೂ ಮತ್ತೆ ಕಟ್ಟಿಸಿದವರು ಮೀರ್ಜಾ ಇಸ್ಮಾಯಿಲ್‌ ಸಾಹೇಬರು.

ಬ್ರಿಟಿಷರು ಇಲ್ಲಿ ಬಂದರು; ನಮ್ಮನ್ನು ಆಳಿದರು; ಇದು ನಮ್ಮ ದೇಶ ಅಲ್ಲ ಅಂತ ಬಿಟ್ಟು ಹೋದರು. ಆದರೆ ಈಗ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಮರು ಬಂದರು, ಆಳಿದರು ಇಲ್ಲೇ ಬದುಕಿದರು. ಇದು ನಮ್ಮ ದೇಶವೇ ಅಂದು ಕೊಂಡರು. ನಮ್ಮ ಸಂಸ್ಕೃತಿ ಜತೆಗೆ ಬೆರೆತರು. ಗಾಂಧೀಜಿಯನ್ನು ಒಬ್ಬ ಅಮೆರಿಕನ್‌ ಬಂದು ನಿನ್ನ ಅಜೆಂಡಾ ಏನು ಎಂದು ಕೇಳಿದಾಗ ಅವರು ಮೂರು ವಿಷಯಗಳನ್ನು ಹೇಳಿದರು. ಆ ಅಮೇರಿಕನ್‌ ಬ್ರಿಟಿಷರನ್ನು ಓಡಿಸುವುದು ನನ್ನ ಅಜೆಂಡಾ ಎಂದು ಗಾಂಧಿ ಹೇಳುತ್ತಾರೆಂದು ಭಾವಿಸಿದ್ದ. ಆದರೆ ಗಾಂಧೀ ಹೇಳಿದ್ದು ಒಂದು: ಅಸ್ಪೃಶ್ಯತೆಯ ನಿವಾರಣೆ, ಎರಡು: ಹಿಂದೂ ಮುಸ್ಲಿಂ ಸ್ನೇಹ, ಮೂರನೆಯ ಅಜೆಂಡಾ ಖಾದಿ. ಇದರಲ್ಲಿ ಎಷ್ಟು ಸ್ವಾರಸ್ಯ ಇದೆ ಎಂದರೆ ಈ ಮೂರು ಅಜೆಂಡಾ ಕಾರ್ಯರೂಪಕ್ಕೆ ಬಂದರೆ ಬ್ರಿಟಿಷರು ಹೋಗಬೇಕು ಅಂತ ಹೇಳಲೇ ಬೇಕಾಗಿರಲಿಲ್ಲ. ಅವರಿಗಿಲ್ಲಿ ಇರುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ.

ರಾಜರನ್ನು ಅವರ ಅಧಿಕಾರ ದಾಹವನ್ನೂ ಕುರಿತು ಬರೆಯುವುದರ ಬಗ್ಗೆ ಒಂದು ಮಾತು. ಅಂತಾ ಕೊಲೆಗಡುಕನಾದ ಮ್ಯಾಕ್‌ಬೆತ್‌ನನ್ನು ಷೇಕ್ಸ್‌ಪಿಯರ್‌ ಒಬ್ಬ ಮನುಷ್ಯನನ್ನಾಗಿ ನೋಡುತ್ತಾನೆ. ಟಾಲ್‌ಸ್ಟಾಯ್‌ ನೆಪೋಲಿಯನ್‌ ಮೇಲೆ ಬರೀತಾ ಅಂತಾ ದೊಡ್ಡ ನೆಪೋಲಿಯನ್‌ಗೆ-ಇಡೀ ಯೂರೋಪನ್ನು ನಡುಗಿಸಿದ ನೆಪೋಲಿಯನ್‌ಗೆ- ಒಂದು ದಿನ ತನಗೆ ಪ್ರಿಯವಾದ ನಶ್ಯ ಸಿಗದೆ ಯುದ್ಧವೇ ಕೆಟ್ಟು ಹೋಗುವ ಸ್ಥಿತಿಯನ್ನು ವರ್ಣಿಸುತ್ತಾನೆ. ನೆಪೋಲಿಯನ್‌ ನಂತಹವನನ್ನೂ ಕೇವಲ ಮನುಷ್ಯನನ್ನಾಗಿ ನೋಡಲು ಟಾಲ್‌ಸ್ಟಾಯ್‌ಗೆ ಸಾಧ್ಯವಾಯಿತು.

ಔರಂಗಜೇಬ್‌ ಸಾಯುವಾಗ ಬಹಳ ಪಾಪ ಭಾವದಿಂದ ಇದ್ದನಂತೆ. ಅವನು ತಮ್ಮಂದಿರನ್ನು ಕೊಂದ; ಏನೇನೋ ಮಾಡಿದ. ಇದೆಲ್ಲಾ ಅವನನ್ನು ಇಳಿವಯಸ್ಸಿನಲ್ಲಿ ಕಾಡಿರಬಹುದೇನೋ. ಭೈರಪ್ಪನವರಿಗೆ ಅರ್ಥವಾಗದೇ ಇರುವ ಒಂದು ವಿಷಯವಿದೆ. ಈ ದೇಶದಲ್ಲಿ ಜನಗಳು ಒಂದು ಬಲವಾದ ಯಾವ ಸರಕಾರವಿದ್ದರೂ ಒಪ್ಪಿಕೊಂಡೇ ಬಂದಿದ್ದಾರೆ. ನಾನು ಹಿಂದೆ ಈ ಬಗ್ಗೆ ಬರೆದಿದ್ದೇನೆ ‘ರಾಜ ಭೀತಿ, ರಾಜನಿಲ್ಲದ ಭೀತಿ’ ಎನ್ನು ನನ್ನ ಒಂದು ಪ್ರಬಂಧದಲ್ಲಿ. ದೆಹಲಿಯಲ್ಲಿ ಯಾರೋ ಒಬ್ಬ ಅಧಿಕಾರದ ಜಾಗದಲ್ಲಿ ಬಂದು ಕೂತ ಅಂದರೆ ಜನ ನಿಟ್ಟುಸಿರುಡುತ್ತಾರೆ-ಒಬ್ಬ ಇದಾನಲ್ಲ ಅಲ್ಲಿ, ಬೀದಿ ಪುಂಡರ ಕಾಟವಾದರೂ ತಪ್ಪಬಹುದಲ್ಲ ಎಂದು.

ಮೊಗಲರು ಇಂಥಾ ಕಾಲದಲ್ಲಿ ರಾಜತ್ವವನ್ನು ನಡೆಸಿದರು. ನಡೆಸಿದಾಗ ತಪ್ಪು ಮಾಡಿದರು, ದುಷ್ಟತನ ಮಾಡಿದರು, ಒಳ್ಳೆಯದು ಮಾಡಿದರು,. ನಮ್ಮ ದೇವೇಗೌಡರು, ನಮ್ಮ ಇಂದಿರಾಗಾಂಧಿ ಎಲ್ಲರಿದ್ದ ಹಾಗೇನೇ ಅವರು. ಜನಸಾಮಾನ್ಯರಿಗೆ ಸ್ಕೂಲಿಗೆ ಹೋದ ಹುಡುಗ ಹಿಂದಕ್ಕೆ ಬಂದರೆ ಸಾಕು. ಬಸ್‌ ಓಡಾಡಿದರೆ ಸಾಕು, ರೈಲು ಚಲಿಸಿದರೆ ಸಾಕು. ಹಾಗೆಯೇ ಜನರು ಮೊಗಲರನ್ನೂ ಒಪ್ಪಿಕೊಂಡಿದ್ದರು. ಇದರ ಬಗ್ಗೆ ಬರೆಯುವುದಕ್ಕೆ ಎಂಥಾ ವಿಷನ್‌ ಇರಬೇಕು! ಯಾಕೆ ಒಂದು ವ್ಯವಸ್ಥೆಯನ್ನು ಜನ ಒಪ್ಪಿಕೊಳ್ಳುತ್ತಾರೆ? ಔರಂಗಜೇಬನಂಥವನು ಬಹಳ ನಿಷ್ಠುರವಾಗಿ ಒಂದು ವ್ಯವಸ್ಥೆಯನ್ನು ತರುವುದಕ್ಕೆ ನೋಡಿದಾಗಲೂ ಅದನ್ನು ಯಾಕೆ ಬಹುಮಂದಿ ಹಿಂದೂಗಳೂ ಒಪ್ಪಿಕೊಂಡಿರಬಹುದು? ಎಲ್ಲ ಪ್ರಭುತ್ವದ ಹಿಂದಿರುವ ದುರಂತ ಸತ್ಯ ಇದು. ಮರಾಠರೇನು ಕಡಿಮೆ ದುಷ್ಟರೆ? ದೇವಸ್ಥಾನಗಳನ್ನು ಕೆಡಹುವುದು ಅಂದರೆ... ನನಗೆ ಯಾರೋ ಹೇಳಿದ್ದರು ಉಡುಪಿಯಲ್ಲಿ ನಮ್ಮ ಮಠದ ಎದುರುಗಡೆ ಇರುವ ದೇವಸ್ಥಾನ ಜೈನರದ್ದಾಗಿದ್ದಂತೆ.

ಇದನ್ನೆಲ್ಲಾ ಸಿಟ್ಟಿನಲ್ಲಿ ನೋಡಬಾರದು. ನಮ್ಮ ಕಾಲದಲ್ಲೇ ನೋಡಿ. ಒಂದು ಆನೆ ಗಣಪತಿಯಾಗಿಬಿಟ್ಟಿತು. ಉತ್ತರ ಪ್ರದೇಶದಲ್ಲಿ ಆನೆ ಗಣಪತಿಯಾಯಿತು. ಯಾಕೆಂದರೆ ಅದು ಆನೆಯ ಒಳಗೇ ಇರುವ ಶಕ್ತಿ-ಗಣಪತಿಯಾಗುವ ಶಕ್ತಿ. ನಾನು ಗಣಹೋಮ ಮಾಡುವುದನ್ನು ನೋಡಿದ್ದೀನಿ. ಗಣಹೋಮ ಮಾಡುವಾಗ ಅವನಿಗೆ ಕಬ್ಬಿನ ಜಲ್ಲೆಯನ್ನೇ ಕೊಡಬೇಕಂತೆ. ಯಾಕೆಂದರೆ ಅವನು ಗಣಪತಿಯೂ ಹೌದು. ಆನೆಯೂ ಹೌದು. ಆನೆಯಾಗಿದ್ದೇ ಗಣಪತಿ. ಹಾಗೆಯೇ ಅಡುಗೆ ಮನೆಯ ಬೆಂಕಿಯಾಗಿದ್ದೇ ಅವನು ಅಗ್ನಿ. ಭೈರಪ್ಪನವರಿಗೆ ಹಿಂದೂ ಧರ್ಮದ ಈ ಒಳಗೊಳ್ಳುವ ಗುಣ ಗೊತ್ತಿರುವಂತೆ ಕಾಣುವುದಿಲ್ಲ. ಅವರಿಗೆ ಕಾದಂಬರಿಯಲ್ಲಿ ‘ಅದೃಷ್ಟ’ವಾದದ್ದಕ್ಕೆ, ಅಯೋಜಿತವಾದದಕ್ಕೆ ಎದುರಾಗೋದು ಗೊತ್ತಿಲ್ಲ. ಅಥವಾ ಬೇಕಿಲ್ಲ. ಸುಮ್ಮನೇ ಕಟ್ಟುತ್ತಾ ಕಟ್ಟುತ್ತಾ ಹೋಗುತ್ತಾರೆ.

ನಮ್ಮಲ್ಲಿ ಒಂದು ಮಾತಿದೆ ‘ಬೆರಳು ತೋರಿಸಿ ಅಂಗೈ ನುಂಗು’ ಅಂತ. ಒಳ್ಳೆಯ ಅರ್ಥದಲ್ಲಿ ಈ ಮಾತನ್ನು ಗ್ರಹಿಸುವುದಾದರೆ, ಮರಳಿನ ಕಣದಲ್ಲಿ ಇಡೀ ವಿಶ್ವವನ್ನು ಕಾಣುವ ಕಾವ್ಯದ ಧ್ವನಿ ಶಕ್ತಿ ಇದು ನನಗೊಂದು ಭರವಸೆ ಇದೆ. ಆವರಣದ ಪ್ರಚಾರಕ್ಕೆಂದು ನಮ್ಮ ಕೆಲವು ಮಾಧ್ಯಮಗಳು ಸಂಘಟಣೆಗಳು ಏನೇ ಮಾಡಲಿ. ಉತ್ತರ ಪ್ರದೇಶದಲ್ಲಿ ಹೇಗೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೋ ಹಾಗೆ ಇಲ್ಲಿಯೂ ಕೈಬಿಟ್ಟರೆ....ಅದು ಭರವಸೆ. ನಾನು ಯಾರೋ ಕೇಳಿದಾಗ ಹೇಳಿದೆ. ‘ಈ ಪೇಟೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೆ ನನಗೆ ಅದೇನು ಆಶ್ಚರ್ಯ ಹುಟ್ಟಿಸುವುದಿಲ್ಲ. ಅದು ಅನುಕೂಲದ ರಾಜಕೀಯ. ಆದರೆ ಹಳ್ಳಿ ಬ್ರಾಹ್ಮಣರು ಜಾತಿ ಗರ್ವವನ್ನು ಕಳೆದುಕೊಂಡು ಒಬ್ಬ ದಲಿತ ಮಹಿಳೆಯನ್ನು ತಮ್ಮ ನಾಯಕಿ ಎಂದು ಭಾವಿಸಿಕೊಂಡರೆ ಆಗ ಹಿಂದೂ ಧರ್ಮ ಚೈತನ್ಯ ಶಾಲಿಯಾಯಿತು ಎಂದೇ ತಿಳಿಯುತ್ತೇನೆ..

ಪಾಕಿಸ್ತಾನದಲ್ಲಿ ಇನ್ನೊಂದು ಜಾನಪದ ಕಥೆಯಿದೆ. ಆ ಕತೆ ಹೀಗಿದೆ: ಜಿನ್ನಾ ನೆಹರೂಗೆ ಒಂದು ಕಾಗದ ಬರೆದನಂತೆ. ಬೊಂಬಾಯಿಯಲ್ಲಿ ನನ್ನದೊಂದು ಮನೆ ಇದೆ. ಅದನ್ನು ಯಾರಿಗೋ ಕೊಟ್ಟುಬಿಡುತ್ತೀರಿ ಅಂತ ಕೇಳಿದೆ. ಕೆಡವುತ್ತೀರಿ ಅಂತ ಕೇಳಿದೆ. ಡಿಯರ್‌ ಜವಹರ್‌ ಡೋಂಟ್‌ ಡು ಇಟ್‌. ಬಿಕಾಸ್‌ ವೆನ್‌ ಐ ರಿಟೈರ್‌ ಐ ವಾಂಟ್‌ ಟು ಕಮ್‌ ಅಂಡ್‌ ಸ್ಟೇ ದೇರ್‌. (ಪ್ರ್ರಿಯ ಜವಾಹರ್‌ ನನ್ನ ಮುಂಬಯಿ ಮನೆ ಮಾರಬೇಡ; ನಿವೃತ್ತನಾದಮೇಲೆ ನಾನು ಆ ಮನೆಯಲ್ಲಿ ವಾಸ ಮಾಡಬೇಕೆಂದಿದ್ದೇನೆ.) ಅದು ನನ್ನ ಒಂದು ರೂಪಕ. ಪಾಕಿಸ್ತಾನಿ ಜಿನ್ನಾಗಳು ದಣಿದು ನಿವೃತ್ತವಾಗಿ ಮುಂಬೈಯಲ್ಲಿ ಬಂದು ಉಳಿದ ಕಾಲವನ್ನು ಕಳೆಯುವುದು. ಅದರ ಮೂಲಕ ನಾವೆಲ್ಲಾ ಒಂದು ನಾಗರೀಕತೆಯಾಗುವುದು. ಎಂದೆಂದಿಗೂ ಆಗಿದ್ದಂತೆ; ಈಗಲೂ ಆಗಬಹುದಾಗುವಂತೆ..

ಆದರೆ ಬೈರಪ್ಪನವರ ರೀತಿಯೇ ಯೋಚಿಸುವವರು ಮಸ್ಲಿಮರಲ್ಲೂ ಹಿಂದೂಗಳಲ್ಲೂ ಹೆಚ್ಚಾದರೆ ಈ ಬಗೆಯ ಕನಸು ಕಾಣುವುದೂ ಸಾಧ್ಯವಿಲ್ಲ. ಆ ರೀತಿ ಯೋಚನೆ ಮಾಡುವವರು ಜನಪ್ರಿಯ ಆದಾಗ ಸ್ವಲ್ಪ ಭಯವಾಗುತ್ತೆ. ಕನಸುಗಳೇ ಇಲ್ಲದ ಸಮಾಜ ಒಂದು ನರಕವೇ ಸರಿ. ಆವರಣದ ರಚನೆಯ ಹಿಂದಿರುವ ಒಂದು ತಮಾಷೆ ಏನೆಂದರೆ ಭೈರಪ್ಪನವರು ಬಳಸುವ ಡಿಬೇಟರ್‌ ತಂತ್ರ. ಇದನ್ನೆಲ್ಲಾ ಹೇಳುವುದಕ್ಕೆ ಒಬ್ಬ ಒಕ್ಕಲಿಗರ ಹುಡುಗಿಯೇ ಆಗಬೇಕು.

ಇಲ್ಲಿರುವ ರಾಜಕಾರಣದ ಭರವಸೆ ಏನಪ್ಪಾ ಅಂದರೆ ಒಕ್ಕಲಿಗರು, ಲಿಂಗಾಯತರು. ಬ್ರಾಹ್ಮಣರು ಎಲ್ಲಾ ಒಟ್ಟಾಗುತ್ತಾರೆ ಅಂತ. ಅದು ಬಜೆಪಿ ವರ್ಸೆಸ್‌ ಸೆಕ್ಯುಲರ್‌ ಜೆಡಿ ಹೋಪ್‌; ಅಥವಾ ಬಿಜೆಪಿ ಪ್ಲಸ್‌ ಸೆಕ್ಯುಲರ್‌ ಜೆಡಿ ಹೋಪ್‌. ನನಗೆ ಬಹಳ ತಮಾಷೆ ಅನ್ನಿಸಿದ್ದನ್ನು ಹೇಳುತ್ತೇನೆ. ಗಂಡ-ಹೆಂಡತಿ ಬಹಳ ದಿವಸದ ನಂತರ ಆವರಣದಲ್ಲಿ ಅಕ್ಕ-ಪಕ್ಕ ಮಲಗಿದಾಗ ಮಾತಾಡ್ತಾರೆ. ಒಕ್ಕಲಿಗ ಹೆಂಡತಿ ಮುಸ್ಲಿಂ ಗಂಡನಿಗೆ ಎಷ್ಟು ದೇವಸ್ಥಾನಗಳನ್ನು ಮುಸ್ಲಿಮರು ಒಡೆಸಿದರು ಅಂತ ಸುಮಾರು 30 ಹೆಸರುಗಳನ್ನು ಇರಬಹುದು- ನನ್ನ ಎಣಿಕೆಯಲ್ಲಿ ತಪ್ಪಿದ್ದರೆ ಕ್ಷಮಿಸಿ- ಹೇಳುತ್ತಾಳೆ. ಗಂಡನ ಪಕ್ಕದಲ್ಲಿ ಮಲಗಿಕೊಂಡು ಅವಳು ಮಾತಾಡುವುದು ಇದು. ಟಿಪ್ಪಣಿ ಸಹಿತ. ಇದು ಭೈರಪ್ಪನವರ ಕಾದಂಬರಿಯಲ್ಲಿ ಮಾತ್ರ ಸಾಧ್ಯ. ಯಾವ ಹಾಸಿಗೆಯ ಮೇಲೂ ಇದು ನಡೆಯಲ್ಲ ಅಂತ ಹೇಳಿ ನನ್ನ ಮಾತು ಮುಗಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X