• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಬಂಧುಗಳ ಮುಂದೆ ಅನಂತಮೂರ್ತಿ ಭಾಷಣ

By Staff
|

ಎಸ್‌.ಎಲ್‌.ಭೈರಪ್ಪನವರ ‘ಆವರಣ’ದ ಬಗ್ಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರು ಮಾಡಿದ ಭಾಷಣ, ವಿವಾದದ ಬಿರುಗಾಳಿ ಎಬ್ಬಿಸಿದೆ. ಭಾಷಣದ ಸಾರ ಸಂಗ್ರಹ ನಿಮ್ಮ ಮುಂದೆ.

Dr. U.R.Ananthmurthys Controversial speechನನಗೆ ಈ ಆವರಣವನ್ನು ಕುರಿತು ಒಂದು ಸಭೆ ಮಾಡುವುದೇ ಇಷ್ಟವಿರಲಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣ ಸಾಹಿತ್ಯ ಚರ್ಚೆಗೆ ಯೋಗ್ಯವಾದ ಒಳ್ಳೆಯ ಪುಸ್ತಕ ಇದು ಅಲ್ಲ ಎಂಬುದು. ಒಂದು ಕಾಲದಲ್ಲಿ ಭೈರಪ್ಪ ಮತ್ತು ನಾನು ಆಗೀಗ ಭೇಟಿಯಾಗುತ್ತಿದ್ದೆವು. ಚದುರಂಗರೂ ಇರುತ್ತಿದ್ದರು. ಆಗ ಅವರ ಪುಸ್ತಕಗಳನ್ನು ನಾನು ಓದುತ್ತಿದ್ದೆ. ಓದಿ ಚೆನ್ನಾಗಿಲ್ಲ ಅನ್ನಿಸಿದರೆ ಅದನ್ನು ಅವರಿಗೂ ಹೇಳುತ್ತಿದ್ದೆ. ಇಂಥ ಸಂದರ್ಭಗಳಲ್ಲಿ ಭೈರಪ್ಪನವರೂ ‘ನನಗೂ ಅಷ್ಟೊಂದು ಚೆನ್ನಾಗಿಲ್ಲ ಅನ್ನಿಸುತ್ತೆ’ ಎನ್ನುತ್ತಿದ್ದ ಸ್ನೇಹದ ಕಾಲ ಒಂದಿತ್ತು.

ನನಗೆ ‘ಗೃಹಭಂಗ’ ಒಂದೇ ಅವರ ಒಳ್ಳೆಯ ಕೃತಿ. (ಯಾಕೆಂದರೆ ಭೈರಪ್ಪನವರ ವಕೀಲಿಪ್ರಜ್ಞೆ ಇಲ್ಲ ಕೆಲಸ ಮಾಡಿಲ್ಲ) ಅದೆಷ್ಟು ಒಳ್ಳೆಯ ಕೃತಿ ಅನ್ನಿಸಿತ್ತು ಅಂದರೆ ನಾನು ನ್ಯಾಷನಲ್‌ ಬುಕ್‌ ಟ್ರಸ್ಟ್‌ನ ಸದಸ್ಯನಾದಾಗ-ಗೋಕಾಕ್‌ ಮತ್ತು ಹರಿದಾಸಭಟ್ಟರೂ ಸದಸ್ಯರಾಗಿದ್ದರು-ಕೆಲವು ಕೃತಿಗಳನ್ನು ಭಾರತದ ಎಲ್ಲಾ ಹದಿನಾಲ್ಕು ಭಾಷೆಗಳಿಗೂ ಅನುವಾದಿಸಬೇಕೆಂದು ತೀರ್ಮಾನಿಸಿದಾಗ ಹರಿದಾಸಭಟ್ಟರು ನನ್ನ ಪುಸ್ತಕದ ಹೆಸರು ಹೇಳಿದರು. ನಾವೇ ಸದಸ್ಯರಾಗಿದ್ದು ನಮ್ಮ ನಮ್ಮ ಪುಸ್ತಕಗಳನ್ನು ನಾವು ನ್ಯಾಷನಲ್‌ ಬುಕ್‌ ಟ್ರಸ್ಟ್‌ಗೆ ಕೊಡಬಾರದು. ಬೇರೆ ಪುಸ್ತಕಗಳನ್ನು ಕೊಡಬೇಕು ಎಂದು ಕೊಂಡು ಭೈರಪ್ಪನವರ ‘ಗೃಹಭಂಗ’ವನ್ನು ನಾನು ಸೂಚಿಸಿದೆ. ಹಾಗೆಯೇ ಮೊಕಾಶಿಯವರ ‘ಗಂಗವ್ವ ಗಂಗಾಮಾಯಿ’ಯನ್ನೂ ಶಾಂತಿನಾಥರ ಮುಕ್ತಿಯನ್ನೂ ಆರಿಸಿದೆವು.

ಆಮೇಲೆ ಅವರ ‘ಪರ್ವ’ ಬಂತು. ಅದನ್ನು ಓದಿದಾಗ ನನಗೆ ಏನನ್ನಿಸಿತು ಅಂದರೆ-‘ನೋಡಿ ವೇದವ್ಯಾಸರ ಭಾರತವನ್ನು ಅವರು ರಿಯಲಿಸ್ಟಿಕ್‌ ಮಾಡಿ ಬರೆದಿದ್ದಾರೆ. ಈ ಭೈರಪ್ಪನವರ ಭಾರತ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದೆ ನಡೆದಿರಬಹುದೋ ಏನೋ.. ಆದರೆ ವೇದವ್ಯಾಸರ ಭಾರತ ಇವತ್ತೂ ನಡಿಯುತ್ತಿದೆ’ ಎಂದೆ. ಯಾಕೆಂದರೆ ಯಾವುದು ಪುರಾಣವಾಗಿ ಹೇಳಿದೆಯೋ ಅದು ಇವತ್ತೂ ನಡೆಯುತ್ತಿದೆ.

ಯಾವುದನ್ನು ವಾಸ್ತವವೆಂಬಂತೆ ಬರೆದಿದ್ದಾರೋ ಅದು ಚಾರಿತ್ರಿಕವಾದ ಯಾವೊತ್ತೋ ಒಂದು ಕಾಲಮಾತ್ರದ ಕೃತಿಯಾಗಿದೆ. ಇದರಿಂದ ನನ್ನ ಸ್ನೇಹಿತರೂ ಆದ ಅವರ ಕೆಲ ಪ್ರಜ್ಞಾವಂತ ಅಭಿಮಾನಿಗಳಿಗೆ ನನ್ನ ಮೇಲೆ ಸಿಟ್ಟೂ ಬಂದಿತ್ತು.

ನಾನು ಕೆಲವು ವೈಯಕ್ತಿಕ ವಿಷಯಗಳನ್ನು ಇಲ್ಲಿ ಹೇಳಲೇಬೇಕು; ಇಲ್ಲದಿದ್ದರೆ ಬೇರೆಯವರು ಇದನ್ನು ಎಳೆದು ತಂದೇ ತರುತ್ತಾರೆ. ನಾನು ಸಾಹಿತ್ಯ ಅಕಾಡೆಮಿಯ ಚುನಾವಣೆಗೆ ನಿಂತೆ. ಆಗ ಭೈರಪ್ಪ ದಿಟ್ಟವಾಗಿಯೇ ವಿಮಾನದಲ್ಲಿ ಸಂಚರಿಸಿ ನನ್ನ ವಿರುದ್ಧ ಪ್ರಚಾರ ಮಾಡಿದರು. ಹೀಗೆ ಮಾಡುವುದಕ್ಕೆ ಅವರಿಗೆ ಎಲ್ಲಾ ಹಕ್ಕೂ ಇತ್ತು. ಕನ್ನಡದವರು ನನ್ನ ವಿರುದ್ಧ ಓಟು ಹಾಕಿದರು. ಮರಾಠಿ ಲೇಖಕರೊಬ್ಬರು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಮರಾಠಿ ಲೇಖಕರು ನನಗೆ ಓಟು ಹಾಕಿದರು. . ಇದರಿಂದ ನನ್ನಲ್ಲಿ ಯಾವ ಕಹಿಯೂ ಉಂಟಾಗಲಿಲ್ಲ. ಇದು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದ ಕ್ರಮ ಎಂದೇ ನಾನು ಈಗಲೂ ತಿಳಿದಿದ್ದೇನೆ.

ನಾನು ಕೇಳಿದಂತೆ ಅವರ ಆತ್ಮ ಚರಿತ್ರೆಯಲ್ಲಿ ಏನೋ ಹೇಳಿಕೊಂಡಿದ್ದಾರಂತೆ:. ಅವರು ದಾಟು ಬರೆದಾಗ ದಲಿತರು ಅವರ ಮನೆ ಮೇಲೆ ಕಲ್ಲುಹೊಡೆದರಂತೆ. ಅದರ ಹಿಂದೆ ನನ್ನ ಮಾತನ್ನು ಕೇಳುತ್ತಿದ್ದ ಆಲನಹಳ್ಳಿ ಕೃಷ್ಣ ಮತ್ತು ನನ್ನ ಕೈವಾಡ ಇತ್ತುಎಂದು ಗುಮಾನಿಯಾಗುವಂತೆ ಅವರು ಬರೆದಿದ್ದಾರೆ ಎಂದು ಕೇಳಿದ್ದೇನೆ. ಇದನ್ನವರು ಬರೆಯಬಾರದಿತ್ತು. ಏಕೆಂದರೆ ಇದು ಸುಳ್ಳು. ಎಷ್ಟು ಸುಳ್ಳು ಎಂದರೆ ಇದು ಅಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದರೆ, ಇರಬಹುದೇನೋ ಎಂಬ ಅನುಮಾನ ಶುರುವಾಗಿಬಿಡುತ್ತೆ. ಆದ್ದರಿಂದ ಈ ವರೆಗೆ ಈ ಬಗ್ಗೆ ನಾನು ಏನೂ ಹೇಳಿಲ್ಲ.

ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ. ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ,ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ, ಕುವೆಂಪುಅಲ್ಲ, ಬೇಂದ್ರೆ ಅಲ್ಲ, ನಾವ್ಯಾರೂ ಅಲ್ಲ.ಎಷ್ಟು ಪ್ರಸಿದ್ಧರು ಹೇಳುವೆ: ಮೊನ್ನೆ ನಾನು ಕೊಲ್ಕತ್ತಾಕ್ಕೆ ಹೋಗುತ್ತಿದ್ದೆ. ನನ್ನ ಪಕ್ಕ ಮಲ್ಟಿನ್ಯಾಷನಲ್‌ ಕಂಪೆನಿಯಲ್ಲಿ ಕೆಲಸ ಮಾಡುವ ಕನ್ನಡ ಬರುವ ಒಬ್ಬರಿದ್ದರು. ನನ್ನ ಹತ್ತಿರ ಮಾತನಾಡುತ್ತಾ ಅವರು ಬಹುಮೆಚ್ಚುಗೆಯಲ್ಲಿ ಹೀಗೆ ಹೇಳಿದರು: ‘ನಾನು ಮತ್ತು ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರು ಒಟ್ಟಿಗೇನ್ಯೂಯಾರ್ಕ್‌ಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ ‘ಆವರಣ’ ಓದಲಿಕ್ಕೆ ಶುರಮಾಡಿದ ನಾರಾಯಣಮೂರ್ತಿಯವರು ನ್ಯೂಯಾರ್ಕ್‌ನಲ್ಲಿ ಅದನ್ನು ಮುಗಿಸಿದರು’. ನಾರಾಯಣ ಮೂರ್ತಿಗಳಿಗೆ ಭೈರಪ್ಪನವರ ‘ಆವರಣ’ ಇಷ್ಟ ಆಗಿದ್ದೂ ಕೂಡಾ ನನಗೊಂದು ಮೆಟಫರ್‌. ಅಂದರೆ ಯಾವ ಶಕ್ತಿಯ ವಿರುದ್ಧ ನಾವು ಇವತ್ತು ನಿಲ್ಲಬೇಕೋ ಆ ಶಕ್ತಿಗಳು ಹೀಗೆ ಸಂಘಟಿತಗೊಂಡು ಮೆಟಫರ್‌ಗಳಾಗಿ ನನಗೆ ಕಾಣುತ್ತವೆ.

ಕರ್ನಾಟಕ ಗುಜರಾತಿನಂತೆ ಆಗಬೇಕೆಂಬುದು ಆವರಣದ ಹಿಂದಿರುವ ಸಂಸ್ಕೃತಿ ರಾಜಕೀಯ. ಗುಜರಾತು ಈಗ ಬಂಡವಾಳಹೂಡಿ ಬೆಳೆಸುವವರ ಸ್ವರ್ಗ; ಬಡ ಮುಸ್ಲಿಮರ ನರಕ.

ಗ್ಲೋಬಲೈಸ್‌ ಮಾಡುವ ಮೂಲಕ ದೇಶೀಯವಾದ ಭಾರತೀಯ ಸಂಸ್ಕೃತಿ ಅಂತ ನಾವೇನನ್ನು ಗುರುತಿಸುತ್ತೇವೋ ಅದನ್ನು ಸರ್ವನಾಶ ಮಾಡುವುದು ಇದರ ಹಿಂದಿರುವ ಹುನ್ನಾರ. ಹಾಗೆ ಸರ್ವನಾಶ ಮಾಡುತ್ತಿರುವವರ ಮುಸ್ಲಿಮರ ವಿರೋಧ ಯಾವ ಸಾಂಸ್ಕೃತಿಕ ಕಾರಣಕ್ಕಾಗಿ ಎಂಬುದು ನನಗೆ ಅರ್ಥವೇ ಆಗುವುದಿಲ್ಲ. ಆವರಣದ ಹಿಂದಿರುವ ಪ್ರೇರಣೆಗಳನ್ನು ಮೆಚ್ಚುವ ಉದ್ಯಮಿಗಳ ಹಿಂದುತ್ವರಾಜಕೀಯ ಕೂಡ ಇಸ್ಲಾಂ ವಿರುದ್ಧ ಕ್ರೂಸೇಡ್‌ ಸಾರಿದ ಬುಷ್‌ ಜೊತೆಗಿನ ಒಳ ಒಪ್ಪಂದವಿದ್ದೀತು ಎನ್ನಬಹುದೆ? ಟಾಟಾ ಮತ್ತು ನಾರಾಯಣ ಮೂರ್ತಿಗಳು ಗುಜರಾತಿನ ಮೋದಿಗೆ ಎಷ್ಟು ಪ್ರಿಯರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಟೆಲಿವಿಷನ್‌ ಛಾನೆಲ್‌ ಗಳು ತೋರಿಸಿವೆ.

ಭೈರಪ್ಪನವರ ಬಗ್ಗೆ ನಿಷ್ಠರವಾದ ಮಾತಿನ ವಿಮರ್ಶೆಗೆ ತೊಡಗಿರುವ ನನಗೆ ಮತ್ತೊಂದು ವಿಷಯ ನೆನಪಾಗುತ್ತಿದೆ. ಭೈರಪ್ಪನವರೂ ನಾನು ಒಡನಾಡುತ್ತ ಇದ್ದ ಮೈಸೂರಿನ ದಿನಗಳಲ್ಲಿ ಕುಮಾರ ಗಂಧರ್ವರ ಸಂಗೀತವನ್ನು ನನಗೆ ಪರಿಚಯ ಮಾಡಿಕೊಟ್ಟ ಮೊದಲಿಗರು ಭೈರಪ್ಪನವರು. ನಾನು ಬೆನ್ನು ನೋವಿನಿಂದ ಹಾಸಿಗೆ ಹಿಡಿದಿದ್ದಾಗ ಅದನ್ನು ಬಲ್ಲವರಾದ ಭೈರಪ್ಪನವರು ಅದಕ್ಕೇನು ಚಿಕಿತ್ಸೆ ಮಾಡಬೇಕು ಎಂದು ಮನೆಗೇ ಬಂದು ಹೇಳುತ್ತಿದ್ದರು. ನನ್ನ ಹಳ್ಳಿಗೆ ಹೋದರೆ ಅಲ್ಲಿ ಪುಟ್ಟಣ್ಣಯ್ಯ ಅಂತ ಇದ್ದರು. ಅವರ ಜೊತೆ ನಮ್ಮ ತಾಯಿಯನ್ನು ಭೇಟಿ ಮಾಡಿ ಕಾಫಿ ಕುಡಿದು ಬರುತ್ತಿದ್ದರು. ನಾನು ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡುತ್ತೇನೆ. ಯಾಕೆಂದರೆ ನನಗೆ ಗೋವಿಂದಯ್ಯನ ತರಹ ಭೈರಪ್ಪನವರ ಬಗ್ಗೆ ಕೇವಲ ಕೋಪದಲ್ಲಿ ಮಾತನಾಡಲಿಕ್ಕೆ ಆಗುವುದಿಲ್ಲ.

ಭೈರಪ್ಪ ನನ್ನ ಜತೆಯ ಬರೆಹಗಾರ. ಆದರೆ ನನಗೆ ಸಾಹಿತ್ಯ ಲೋಕದಲ್ಲಿ ಮುಖ್ಯ ಅನ್ನಿಸಿದವರು ಅವರಲ್ಲ. ಅವರೆಷ್ಟೇ ಜನಪ್ರಿಯ ಆಗಿರಲಿ, ಅವರೊಬ್ಬರು ಡಿಬೇಟರ್‌. ಜನರ ಮೆಚ್ಚುಗೆಗೆ ಬರುವ ಹಾಗೆಯೇ ಅವರು ಕಾದಂಬರಿಗಳನ್ನು ಬರೆಯುವುದು. ಒಬ್ಬ ಒಳ್ಳೆಯ ಲೇಖಕ ಬರೀತಾ ಇದ್ದಾಗ ತನ್ನ ಅಭಿಪ್ರಾಯಗಳಿಗೆ ವಿರೋಧವಾಗಿ ಹೋಗುವ ಮುಕ್ತಮನಸ್ಸು ಅವನಿಗಿದ್ದರೆ ಮಾತ್ರ ಅವನು ನನ್ನ ಪಾಲಿಗೆ ಸೃಜನಶೀಲ ಲೇಖಕ.

ಒಬ್ಬ ಸಾಮಾನ್ಯ ಲೇಖಕ ಜನಪ್ರಿಯವಾಗಲೆಂದು ಅವನೇನು ನಂಬಿದ್ದಾನೋ ಅದನ್ನು ಜನರೂ ಒಪ್ಪುವ ಹಾಗೆ-ಆಕ್ರಮಣ ಮಾಡುವ ಹಾಗೆ- ಬರೆಯುತ್ತಾನೆ. ಭೈರಪ್ಪನವರು ಹಿಂದೂ ಸಂಸ್ಕೃತಿಯನ್ನು ಪ್ರಶ್ನೆ ಮಾಡುವಂಥ ಪುಸ್ತಕಗಳನ್ನೂ ಬರೆದಿದ್ದಾರೆ. ನಿಜ. ಅವರದ್ದೊಂದು ಕೃತಿ ಇದೆಯಲ್ಲಾ ‘ವಂಶವೃಕ್ಷ’ ಅಂತಹ ಬರವಣಿಗೆಗೆ ಒಳ್ಳೆಯ ಉದಾಹರಣೆ. ಅವರು ಇಂತಹವನ್ನು ಬರೆಯುವಾಗ ಹೇಗೆ ಬರೆಯುತ್ತಾರೆಂದರೆ ಪ್ರಶ್ನೆಗಳನ್ನು ಎತ್ತಬೇಕು; ಆದರೆ ಅವರ ಮನಸ್ಸಿನಲ್ಲಿ ಅವರಿಗೇ ಇಷ್ಟವಿರುವ ಉತ್ತರ ಸಿಗುವ ಹಾಗೆ ಅದಕ್ಕೊಂದು ಬೆಳವಣಿಗೆಯನ್ನು ಕಟ್ಟಬೇಕು- ಹಾಗೆ. ಡಿಬೇಟರ್‌ ಕಟ್ಟುವ ಹಾಗೆ. ತನ್ನ ವಿರೋಧಿಯ ವಾದವನ್ನು ಡಿಬೇಟರ್‌ ಸ್ವೀಕರಿಸಿದಂತೆ ತೋರುವಹಾಗೆ. ಪ್ರಶ್ನೆಗಳನ್ನು ಎತ್ತಿದಹಾಗೆ ಕಾಣಬೇಕು; ಆದರೆ ನಮಗೆ ನೆಮ್ಮದಿಯಾಗುವ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಉತ್ತರ ಸಿಗಬೇಕು. ಮಾಂಸದ ರುಚಿಯೂ ಬೇಕು; ಮಡಿಯೂ ಉಳಿಯಬೇಕು ಎನ್ನುವವರು ವೆಜಿಟಬಲ್‌ ಬಿರಿಯಾನಿ ತಿನ್ನುವ ಹಾಗೆ. ಮಾತುಗಳಿಗೆಲ್ಲ ವಿನಾಯಿತಿಯೆಂದರೆ ಓದುಗರಿಗೆ ಮುಖಮಾಡದೆ ಸಾಗುವ ಅವರ ಗೃಹಭಂಗ ಮಾತ್ರ.

ಜನಪ್ರಿಯರಾದ ಭೈರಪ್ಪ ತನ್ನನ್ನು ತಾನೇ ಮೀರಬಲ್ಲ ಲೇಖಕ ಅಲ್ಲ ಎಂದು ನಾನು ತಿಳಿದಿರುವುದಕ್ಕೆ ಕಾರಣ ಹೇಳುತ್ತೇನೆ. ಅವರಲ್ಲಿ ಕಾವ್ಯ ಅನ್ನೋದು ಏನೂ ಇಲ್ಲ. ಈ ಮಹಾದೇವನದ್ದು ಬರೇ ಪೊಯೆಟ್ರಿ. ನನಗೆ ಇಷ್ಟವಾದ ಲೇಖಕರನ್ನು(ಇವರಲ್ಲಿ ಕೆಲವರು ನನ್ನನ್ನು ಟೀಕಿಸುತ್ತ ಇದ್ದವರು) ನೆನಪಿಸಿಕೊಳ್ಳುತ್ತೇನೆ. ಉದಾಹರಣೆಗೆ ಲಂಕೇಶರು. ಅವರು ತಮ್ಮ್ನ ಎಲ್ಲಾ ಅಭಿಪ್ರಾಯಗಳನ್ನು ಇಟ್ಟುಕೊಂಡು ಕೆಲವು ಕಥೆಗಳಲ್ಲಿ ತಮ್ಮ್ನ ಅಭಿಪ್ರಾಯಗಳನ್ನೇ ತಾವೇ ಮೀರಿ ತಮ್ಮ ಸಂದಿಗ್ಧಗಳಿಗೆ ಉತ್ತರವೇ ಇಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ತೇಜಸ್ವಿ, ಕಂಬಾರ, ಮಹದೇವ, ಯಶವಂತ ಚಿತ್ತಾಲ, ಆಲನಹಳ್ಳಿ, ರಾವ್‌ ಬಹದ್ದೂರ್‌, ಚದುರಂಗ, ನನ್ನ ಹತ್ತಿರ ಸತತವಾಗಿ ಜಗಳವಾಡಿದ ಶಂಕರ ಮೊಕಾಶಿ ಪುಣೇಕರ- ಎಲ್ಲರೂ. ಮೊಕಾಶಿ ಟ್ರೆಡಿಷನಲಿಸ್ಟ್‌ ಸನಾತನಿ ಅಂತಾನೆ ನಮ್ಮ ಜಗಳ. ಆದರೆ ನನಗೆ ನನ್ನ ಬಗ್ಗೆ ಅನುಮಾನ ಹುಟ್ಟಿಸುತ್ತಿದ್ದವರು ಅವರು. ಕಾರಂತ, ಮಾಸ್ತಿ, ಕುವೆಂಪು, ಗೊರೂರು- ಇವರೆಲ್ಲಾ ಬಿಡಿ, ಬಹಳ ದೊಡ್ಡ ಲೇಖಕರು.

ಅವರೆಲ್ಲರಲ್ಲೂ ಕಾವ್ಯ ಇದೆ. ಕನ್ನಡದ ಚಂಪೂ ಸಂಪ್ರದಾಯ ಹೊಸ ಬಗೆಯಲ್ಲಿ ಮುಂದುವರಿದಂತೆ ಕಾಣುತ್ತದೆ. ಆದರೆ ಭೈರಪ್ಪನವರಲ್ಲಿ ಅದಿಲ್ಲ. ಕೆಲವು ಕಾದಂಬರಿಗಳು ಕಂಡದ್ದನ್ನು ಎದುರಾಗುವ ಯಾತ್ರೆ; ಹಲವು ಜನಪ್ರಿಯ ಕಾದಂಬರಿಗಳು ಪೂರ್ವ ನಿಶ್ಚಿತವಾದ ಪ್ರೀಪೈಡ್‌ ಟೂರ್‌. ಗೃಹಭಂಗ ಹೊರತಾಗಿ ಭೈರಪ್ಪನವರ ಇತರ ಕೃತಿಗಳು ಎರಡನೇ ಬಗೆಯ ಬರವಣಿಗೆಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more