ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಕಾಲೀನ ಕರ್ನಾಟಕದ ಒಂದು ಸ್ಮರಣೀಯ ಅಧ್ಯಾಯ ಇಲ್ಲಿಗೆ ಸಮಾಪ್ತಿ?

By Staff
|
Google Oneindia Kannada News
  • ಚರಣ್‌ ಸಿ.ಎಸ್‌
ಲೋಕಾಯುಕ್ತ ಎಂದರೆ ಸಾಕು, ಕರ್ನಾಟಕದಲ್ಲಿನ ಭ್ರಷ್ಟ ಸರಕಾರಿ ಅಧಿಕಾರಿಗಳಲ್ಲಿ ಸಣ್ಣಗೆ ನಡುಕ ಶುರುವಾಗುತ್ತದೆ. ಇನ್ನು ಕೆಲವರು ಸಿಕ್‌ ಲೀವ್‌ ಹಾಕಿ, ಒಂದಷ್ಟು ದಿನ ದೂರ ಹೋಗೋಣ ಅಂತ ಲೆಕ್ಕ ಹಾಕುತ್ತಾರೆ. ಭಯದ ಪರಾಕಾಷ್ಠೆಗೆ ಸಿಲುಕಿದ ಕೆಲವು ಸರ್ಕಾರಿ ಸಿಬ್ಬಂದಿ ಸ್ವಯಂ ನಿವೃತ್ತಿ ತೆಗೆದುಕೋಳ್ಳುವುದೇ ಸರಿ ಎಂಬ ತೀರ್ಮಾನಕ್ಕೂ ಬಂದು ಬಿಟ್ಟಿದ್ದಾಗಿದೆ. ಒಟ್ಟಿನಲ್ಲಿ ‘ಸಂಕಟ ಬಂದಾಗ ವೆಂಕಟರಮಣ’ ಎಂಬುದು ಭ್ರಷ್ಟರ ಪಾಲಿಗೆ ಇದೀಗ ಸುಳ್ಳು. ಈ ವೆಂಕಟನನ್ನು ನೆನೆವುದೇ ಇವರಿಗೆ ಸಂಕಟವಾಗಿದೆಯಲ್ಲಾ ! ಜಸ್ಟಿಸ್‌ ಎನ್‌.ವೆಂಕಟಾಚಲ ಖದರೇ ಹಾಗಿದೆ.

ಲೋಕಾಯುಕ್ತ ಇಲಾಖೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ವೆಂಕಟಾಚಲ ಮನೆಮಾತು. ಭ್ರಷ್ಟಾಚಾರಿಗಳ ದೊಡ್ಡ ಕುಳಗಳ ಬುಡವನ್ನೇ ಅಲ್ಲಾಡಿಸುತ್ತಿರುವ ಹೀರೋ.

ಯಾರೀ ವೆಂಕಟಾಚಲ ?

Justice N. Venkatachalaಮಿಟ್ಟೂರಿನ ಪಟೇಲ ನಂಜುಂಡೇಗೌಡರ ಮಗ ವೆಂಕಟಾಚಲ. ಇತರರ ಗೌರವಾದರಗಳಿಗೆ ಭಾಜನರಾದ ಅಪ್ಪ ನಂಜೇಗೌಡರೇ ಮಗನಿಗೆ ಆದರ್ಶ. ರೈತ ಕುಟುಂಬದವರಾದರೂ, ಕಲಿತು ಏನನ್ನಾದರೂ ಸಾಧಿಸಬೇಕೆಂಬ ಛಲ. ಕೋಲಾರದ ಮುಳಬಾಗಿಲಿನ ಶಾಲೆಯಲ್ಲಿ ವಿದ್ಯಾಭ್ಯಾಸ. ನಂತರ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ವಿಜ್ಞಾನ ಪದವಿ. ಗೆಳೆಯರ ಸಲಹೆ ಮೇರೆಗೆ ಕಾನೂನು ಅಭ್ಯಾಸ.

ವೃತ್ತಿ ಜೀವನದ ಮೊದಲ ಹತ್ತು ವರ್ಷ ಸರ್ಕಾರಿ ವಕೀಲರಾಗಿ ಕೆಲಸ ಮಾಡಿದ ವೆಂಕಟಾಚಲ, 1977 ರಲ್ಲಿ ಹೈಕೋರ್ಟ್‌ ಜಡ್ಜ್‌ ಆಗಿ ಕೆಲಸ ಮಾಡಿದರು. ಇದೇ ಸ್ಥಾನದಲ್ಲಿ ಹದಿನೈದು ವರ್ಷಗಳ ಸುದೀರ್ಘ ಅನುಭವಗಳಿಸಿದ ನಂತರ 1992ರಲ್ಲಿ ಮೂರು ವರ್ಷಗಳ ಅವಧಿಗೆ ಸುಪ್ರೀಂಕೋರ್ಟ್‌ ಜಡ್ಜ್‌ ಆಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಅದಾದ ಮೇಲೆ ರೈಲ್ವೆ ಇಲಾಖೆಯ ಅಪಘಾತಗಳ ವಿಚಾರಣಾ ಸಮಿತಿಯ ನೇತೃತ್ವ ವಹಿಸಿಕೊಂಡರು. ಈಗ ಸರ್ಕಾರದ ಬುಲಾವಿನ ಮೇರೆಗೆ ಜುಲೈ 2001ರಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಟೊಂಕ ಕಟ್ಟಿ, ಭ್ರಷ್ಟರ ಬೆಂಡೆತ್ತುತ್ತಿದ್ದಾರೆ.

‘ನೈಟ್‌ಮೇರ್‌ ವೆಂಕಟಾಚಲ’ ಅಂತಲೇ ಸದ್ದು ಮಾಡುತ್ತಿರುವ ಎನ್‌. ವೆಂಕಟಾಚಲ ಭ್ರಷ್ಟರ ಜಾಡು ಹಿಡಿದು ಅವಿರತ ಸಾಗುತ್ತಿರುವ ಈ ಹೊತ್ತಲ್ಲೂ ಅಲ್ಪಾವಧಿ ಬಿಡುವಿನಲ್ಲಿ ನಮ್ಮ ಜೊತೆ ಮಾತಿಗೆ ಸಿಕ್ಕರು....

ಎಷ್ಟೋ ವರ್ಷಗಳಿಂದ ಬೆಳೆದು ಬಂದಿರುವ ಭ್ರಷ್ಟತೆಯನ್ನು ಕೆಲವೇ ವರ್ಷಗಳಲ್ಲಿ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತೀರಿ. ಈ ನಿಟ್ಟಿನಲ್ಲಿ ಮೇಲಿಂದ ಮೇಲೆ ಸರ್ಕಾರಿ ಕಛೇರಿಗಳ ಮೇಲೆ ದಾಳಿ ಇಡುತ್ತಿದ್ದೀರಿ. ಹೀಗೆ ಒಮ್ಮಿಂದೊಮ್ಮೆಗೇ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡುವಾಗ ತಮ್ಮ ಕಾರ್ಯಕ್ಕೆ ವಿರೋಧ ವ್ಯಕ್ತವಾಗುತ್ತಿಲ್ಲವೇ? ಥ್ರೆಟ್‌ ಕೂಡ ಬರುತ್ತಿರಬಹುದಲ್ಲವೇ?

ಹೇಳಿ ಕೇಳಿ ನಾನು ಬದುಕಿರುವುದೇ ಈ ಬೆದರಿಕೆಗಳ ಮಧ್ಯೆ. ಜಡ್ಜ್‌ ಆಗಿ ಸುಮಾರು ವರ್ಷ ಕೆಲಸ ಮಾಡಿದವನಿಗೆ ಇವೆಲ್ಲಾ ಮಾಮೂಲು ಬಿಡಿ. ಆದರೂ ಈಗ ಮಾಡುತ್ತಿರುವ ಕೆಲಸದಲ್ಲಿ ಅಷ್ಟೇನೂ ಬೆದರಿಕೆಗಳಿಲ್ಲ.

ಲೋಕಾಯುಕ್ತ ಇಲಾಖೆಯ ಸದ್ಯದ ಕಾರ್ಯೋದ್ದೇಶಗಳೇನು? ಅದನ್ನು ಮುಗಿಸಲು ಗಡುವನ್ನೇನಾದರೂ ಹಾಕಿಕೊಂಡಿದ್ದೀರಾ?

ಸಮಾಜವನ್ನು ಆದಷ್ಟು ಬೇಗ ಭ್ರಷ್ಟರಿಂದ ಮುಕ್ತಿಗೊಳಿಸುವುದೇ ಸದ್ಯದ ಉದ್ದೇಶ. ಅದನ್ನು ಈಡೇರಿಸಲು ಗಡುವು ಅಂತ ಏನನ್ನೂ ಹಾಕಿಕೊಂಡಿಲ್ಲ. ಆದರೆ ನಮ್ಮ ಇಲಾಖೆಗೆ ನಿಗದಿ ಪಡಿಸಿರುವ ಐದು ವರ್ಷಗಳ ಕಾರ್ಯಾವಧಿಯಲ್ಲಿ ಖಂಡಿತವಾಗಿಯೂ ನಮ್ಮ ಉದ್ದೇಶಗಳು ಈಡೇರಿರುತ್ತದೆಂಬ ಭರವಸೆ ಇದೆ. ಈ ನಿಟ್ಟಿನಲ್ಲಿ ಕಳೆದ ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ ಅಂದುಕೊಂಡಿದ್ದೇವೆ. ಕ್ರಮಿಸಬೇಕಾದ ದೂರ ಇನ್ನೂ ಬಹಳ ಇದೆ ಅಂತಲೂ ಗೊತ್ತು.

ಯಾವ ಆಧಾರದ ಮೇಲೆ ತಾವು ಸರ್ಕಾರಿ ಕಛೇರಿಗಳ ಮೇಲೆ ದಾಳಿಯಿಡುತ್ತೀರಿ?

ಜನರ ದೂರುಗಳ ಆಧಾರದ ಮೇಲೆ. ಲೋಕಾಯುಕ್ತದಲ್ಲಿನ ದೂರು ಇಲಾಖೆ (Compliant Cell) ಜನರ ದೂರುಗಳನ್ನು ತೆಗೆದುಕೊಳ್ಳಲು ಸದಾ ಸಿದ್ಧವಾಗಿದೆ. ಇತ್ತೀಚೆಗೆ ದಿನಂಪ್ರತಿ ನೂರರಿಂದ ನೂರೈವತ್ತು ದೂರುಗಳು ದಾಖಲಾಗುತ್ತಿವೆ. ಈ ಮುಂಚೆ ದಿನವೊಂದಕ್ಕೆ ಕೇವಲ ಐದಾರು ದೂರುಗಳಷ್ಟೇ ದಾಖಲಾಗುತ್ತಿದ್ದವು. ಸಾರ್ವಜನಿಕರು ಯಾವುದೇ ಸಮಯದಲ್ಲಿ ನಿರ್ಭಯವಾಗಿ ದೂರುಗಳನ್ನು ಸಲ್ಲಿಸಬಹುದು. ಲೋಕಾಯುಕ್ತ ನಿಗದಿ ಪಡಿಸಿರುವ ಎರಡು ನಿರ್ದಿಷ್ಟ ಫಾರಂಗಳನ್ನು ತುಂಬಿದರೆ ನಾವು ಖಂಡಿತವಾಗಿಯೂ ಅವನ್ನು ನೋಡುತ್ತೇವೆ. ಇನ್ನು ಮುಂದೆ ಇ- ಮೇಲ್‌ ಮುಖಾಂತರವೂ ದೂರುಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಮಾಡುತ್ತಿದ್ದೇವೆ.

ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಲು ಲೋಕಾಯುಕ್ತದ ಕಾರ್ಯವ್ಯಾಪ್ತಿ ಎಷ್ಟರ ಮಟ್ಟಿಗೆ ಅವಕಾಶ ನೀಡುತ್ತದೆ? ಅದನ್ನು ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆಗಳೇನಾದರೂ ಇವೆಯೇ?

ನಮ್ಮ ಮುಖ್ಯ ಗುರಿ ಭ್ರಷ್ಟ ಅಧಿಕಾರಿಯನ್ನು ಕಾರ್ಯಕ್ಷೇತ್ರದಿಂದ ಹೊರಗಿಡುವುದು. ಅವರನ್ನು ಕೆಲಸದಲ್ಲಿ ಮುಂದುವರೆಯಲು ಬಿಟ್ಟರೆ ಅವರ ರೋಗ ಇತರರಿಗೂ ಹಬ್ಬಲು ಬಿಟ್ಟಂತೆ. ಅವರನ್ನು ಕೆಲಸದಿಂದ ಹೊರಗಟ್ಟಿದ ಮೇಲೆ ಶಿಕ್ಷೆಯ ಮಾತು ಬರುತ್ತದೆ.
ಕಳಂಕಿತ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಲು ಲೋಕಾಯುಕ್ತವು ಶಕ್ತವಾಗಿದೆ. ಕೆಲವು ಸಂದರ್ಭಗಳಲ್ಲಿ ಲೋಕಾಯುಕ್ತ ಕಳಂಕಿತ ಅಧಿಕಾರಿಗಳ ವಿರುದ್ಧ ದಾಳಿ ಮಾಡಿದ ಸ್ಥಳದಲ್ಲೇ ನಿರ್ಣಯ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಅಂಥಾ ಸಂದರ್ಭಗಳಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಲೋಕಾಯುಕ್ತಕ್ಕೆ ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಲು ಕೆಲವು ಕಾನೂನು ತೊಡಕುಗಳಿವೆ. ಅವನ್ನೆಲ್ಲಾ ಸರಿಪಡಿಸಲು ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಶೀಘ್ರವೇ ಅವನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿದೆ.

ಕಾನೂನಾತ್ಮಕ ಬಲವರ್ಧನೆ ಹೊರತು ಪಡಿಸಿ ತಮ್ಮ ಇತರೆ ಬೇಡಿಕೆಗಳೇನ್ನೇನಾದರೂ ಸರ್ಕಾರದ ಮುಂದಿಟ್ಟಿದ್ದಿರಾ?

ಸದ್ಯದ ಬೇಡಿಕೆಗಳಲ್ಲಿ ನಮ್ಮ ತಂಡದಲ್ಲಿನ ಪೋಲೀಸ್‌ ಸಬ್‌-ಇನ್ಸ್‌ಪೆಕ್ಟರುಗಳ ಸಂಖ್ಯೆಯನ್ನು 26 ಕ್ಕೆ ಏರಿಸಲು ಕೇಳಿಕೊಂಡಿದ್ದೇವೆ. ನಾವು ಕೇಳಿಕೊಂಡ ಹಾಗೆ ಸರ್ಕಾರ ಇನ್ನೂ 8 ಎಸ್ಪಿಗಳನ್ನು ತಂಡಕ್ಕೆ ಸೇರಿಸಿದರೆ ಪ್ರತಿ ಜಿಲ್ಲೆಗೊಬ್ಬರಂತಾಗಿ, ಕೆಲಸಗಳು ಸುಸೂತ್ರವಾಗುತ್ತವೆ. ಈಗಿನ 18 ಎಸ್ಪಿಗಳನ್ನು ಹೊರತು ಪಡಿಸಿದರೆ ನಮ್ಮ ತಂಡದಲ್ಲಿ ಒಬ್ಬ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಹಾಗೂ ಒಬ್ಬ ಅಸಿಸ್ಟೆಂಟ್‌ ಡೈರೆಕ್ಟರ್‌ ಜನರಲ್‌ ಇದ್ದಾರೆ.

ಲೋಕಾಯುಕ್ತಕ್ಕೆ ಸೇರುವ ಮುಂಚೆ ಪೋಲೀಸರಿಗೆ ವಿಶೇಷ ತರಬೇತಿ ನೀಡಲು ವ್ಯವಸ್ಥೆಯಿದೆಯೇ?

ಲೋಕಾಯುಕ್ತಕ್ಕೆ ಸೇರುವ ಮುಂಚೆ ಅಂತಹ ವಿಶೇಷ ತರಬೇತಿ ಖಂಡಿತ ಇಲ್ಲ. ಅಗತ್ಯಕ್ಕೆ ತಕ್ಕಂತಹ ತರಬೇತಿಯನ್ನು ನಾವುಗಳೇ ಪೋಲೀಸರಿಗೆ ನೀಡುತ್ತೇವೆ.

ಭ್ರಷ್ಟರಿಂದ ವಶಪಡಿಸಿಕೊಂಡ ಹಣ/ಆಸ್ತಿ ನಂತರ ಯಾರ ಸುಪರ್ದಿಯಲ್ಲಿರುತ್ತದೆ?

ವಶ ಪಡಿಸಿಕೊಂಡ ನಂತರ ಹಣವನ್ನು ಸರ್ಕಾರಕ್ಕೆ ಹಸ್ತಾಂತರಿಸುತ್ತೇವೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನೂ ಸಹ ಸರ್ಕಾರಕ್ಕೆ ನೀಡುತ್ತೇವೆ. ಪ್ರಕರಣಗಳಿಗೆ ಅನುಗುಣವಾಗಿ ನ್ಯಾಯಾಲಯಗಳು ಹಣ, ಆಸ್ತಿ ಯಾರಿಗೆ ಸೇರಬೇಕೆಂದು ನಿರ್ಧರಿಸುತ್ತವೆ. ಆದರೆ ಇವೆಲ್ಲವನ್ನೂ ನಿರ್ಧರಿಸುವ ಅಧಿಕಾರವು ಲೋಕಾಯುಕ್ತದ ಪರಿಧಿಯಲ್ಲಿದ್ದರೆ ನಾವೇ ಅದನ್ನು ನಿರ್ಧರಿಸಿ ಹಣ ಯಾರಿಗೆ ಸಲ್ಲಬೇಕೋ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ.

ಲಂಚವನ್ನು ಕೊಡುವ ಕೈಗಳಿರುವ ತನಕ ಅದನ್ನು ತೆಗೆದುಕೊಳ್ಳುವ ಕೈಗಳಿದ್ದೇ ಇರುತ್ತವೆ. ಎರಡೂ ಕೈ ಸೇರಿದರೇ ಚಪ್ಪಾಳೆ ಅಲ್ಲವೇ? ಲಂಚ ಕೊಡುವ ಕೈಗಳನ್ನು ತಡೆಯಲು ಲೋಕಾಯುಕ್ತದ ಕ್ರಮವೇನು?

ಕೆಲವು ಶ್ರೀಮಂತ ಕೈಗಳನ್ನು ಬಿಟ್ಟರೆ ಯಾವ ಕೈಗಳೂ ಸಹ ಲಂಚ ನೀಡುವುದಿಲ್ಲ. ಯಾರೂ ಕೇಳದೆಯೇ ಇದ್ದಾಗ ತಾವಾಗಿಯೇ ಲಂಚಕೊಡುವಷ್ಟು ತಾಕತ್ತು ನಮ್ಮಲ್ಲಿ ಯಾರಿಗೂ ಇಲ್ಲ.

ಆದರೆ ಈಗ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಒಂದು ವೇಳೆ ಯಾವ ಅಧಿಕಾರಿಯಾದರೂ ಲಂಚ ಕೇಳಿದನೆಂದರೆ ‘ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ’ ಅಂತ ಹೇಳಿದರೆ ಸಾಕು. ಸುಸೂತ್ರವಾಗಿ ಕೆಲಸ ಆಗದಿದ್ದರೆ ಕೇಳಿ. ಒಂದು ವೇಳೆ ಹಾಗೆ ಆಗದಿದ್ದರೆ ಅವರು ನಮ್ಮ ಬಳಿ ದೂರು ಕೊಟ್ಟರೆ ಸಂಬಂಧ ಪಟ್ಟ ಅಧಿಕಾರಿಯನ್ನು ಖಂಡಿತವಾಗಿಯೂ ವಿಚಾರಿಸಿಕೊಳ್ಳುತ್ತೇವೆ.

ಸರಕಾರ ತಮ್ಮನ್ನೇ ಲೋಕಾಯುಕ್ತ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿರುವುದೇಕೆ?

ನನ್ನನ್ನೇ ಈ ಸ್ಥಾನಕ್ಕೆ ಆಯ್ಕೆಮಾಡಿರುವುದರ ಔಚಿತ್ಯ ಸರಕಾರಕ್ಕಷ್ಟೇ ಗೊತ್ತು. ಮೊದಲಿಗೆ ನಾನು ಈ ಸ್ಧಾನಕ್ಕೆ ಬರಲು ಒಪ್ಪುತ್ತೇನೆಯೋ ಇಲ್ಲವೋ ಅಂತ ಸರಕಾರಕ್ಕೂ ಅನುಮಾನವಿತ್ತಂತೆ. ಆದರೆ ಇದನ್ನು ನಾನು ಸಂತೋಷವಾಗಿಯೇ ಒಪ್ಪಿಕೊಂಡೆ.
ವಕೀಲನಾಗಿ, ಜಡ್ಜ್‌ ಆಗಿ ಕೇವಲ ವ್ಯಕ್ತಿಗತವಾದ ಕೇಸುಗಳನ್ನಷ್ಟೇ ನೋಡಿದ ನನಗೆ ಈಗ ವಹಿಸಿರುವ ಕೆಲಸದ ಮೂಲಕ ಸಮಾಜ ಸೇವೆ ಮಾಡುವಂತಹ ಅವಕಾಶವಿದೆ ಅನ್ನಿಸಿತು. ಸಾರ್ವಜನಿಕರ ಕರೆಗಳಿಗೆ ಸ್ಪಂದಿಸುತ್ತಾ ಸಾರ್ಥಕವಾದ ಕೆಲಸ ಮಾಡುತ್ತಿರುವ ತೃಪ್ತಿ ಇದೆ.

ಜನರಿಗೆ ನಿಮ್ಮ ಕಿವಿ ಮಾತೇನು?

ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದು ಕೊಂಡರೆ ಯಾವುದೇ ರೀತಿಯ ಒತ್ತಡಗಳಿರುವುದಿಲ್ಲ. ಒತ್ತಡಗಳಿಲ್ಲದಾಗ ತಂತಾನೇ ಒಳ್ಳೆಯ ನಿದ್ರೆಬರುತ್ತದೆ !

ವೆಂಕಟಾಚಲರ ಬಗ್ಗೆ ನಿಮಗೇನನ್ನಿಸುತ್ತದೆ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X