• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನಗೂ ಇಲಿಗೂ ಅಂಟಿದ ನಂಟು...

By Staff
|

(ಮುಂದುವರೆದಿದೆ)

Sumangalaವಿಷ ಇಟ್ಟು, ಅದು ಎಲ್ಲೋ ಮೂಲೆಯಲ್ಲಿ ಹೋಗಿ ಸತ್ತರೆ ಅದನ್ನು ಹುಡುಕುವುದೇ ಒಂದು ದೊಡ್ಡ ರಗಳೆಯಾಗುತ್ತೆ ಬೇಡ ಎಂದು ವಿಷಯೋಚನೆಯನ್ನು ದೂರವಿಟ್ಟಿದ್ದಾಯ್ತು. ಒಂದು ಬೆಕ್ಕೇನೋ ಆಗೀಗ ಹಾಲು ಕದ್ದು ಕುಡಿಯಲು, ಮಗನಿಂದ ‘ಪಾಪ ಹಾಕಮ್ಮ’ ಎಂದು ಮೊಸರನ್ನ ಹಾಕಿಸಿಕೊಳ್ಳಲು ಬರುತ್ತಿತ್ತು, ಆದರೆ ಅದು ಸ್ವಲ್ಪ ಮೈಗಳ್ಳ ಬೆಕ್ಕೋ ಅಥವ ಅಹಿಂಸಾ ವೃತವನ್ನು ಪಾಲಿಸ್ತಾ ಇರೋ ಬೆಕ್ಕೋ ಗೊತ್ತಿಲ್ಲ .. ಈ ಇಲಿಗಳನ್ನು ಹಿಡಿಯಲು ಅಷ್ಟು ಆಸಕ್ತಿ ತೋರಿಸಲೇ ಇಲ್ಲ. ನಾನು ಮತ್ತೆ ಸಿಮೆಂಟ್‌ ಕಲೆಸಿ ಒಂದು ಗುದ್ದಿಗೆ ಮೆತ್ತುವಾಗ ಬಂದ ನನ್ನ ಪರಿಚಯದವರೊಬ್ಬರು ಮತ್ತೊಂದು ಉಚಿತ ಸಲಹೆ ಕೊಟ್ಟರು... ‘ಸಿಮೆಂಟ್‌ ಮೆತ್ತಿದ್ರ ಉಪಯೋಗಿಲ್ರೀ... ಗಾಜಿನ ಬಾಟಲಿ ಚೂರು ಮಾಡಿ ಗುದ್ದ ಒಳಗೆ ತುಂಬಸ್ರೀ’ಅಂತ. (ಅಂದ ಹಾಗೆ ನಾವೆಲ್ಲ ಇಂಥ ಉಚಿತ ಸಲಹೆ ಕೊಡುವುದರಲ್ಲಿ ಎಷ್ಟು ಪ್ರವೀಣರೆಂದರೆ ಉಚಿತ ಸಲಹೆಗಳಿಗೆ ಒಂದು ವೆಬ್‌ಸೈಟಿನ್ನು ಮಾಡಬಹುದುದು... ಎಲ್ಲರೂ ಉಚಿತವಾಗಿ ಭೇಟಿ ನೀಡಬಹುದು ಹಾಗೂ ಉಚಿತವಾಗಿಯೇ ತಮ್ಮೆಲ್ಲ ಸಲಹೆಗಳನ್ನೂ ದಾಖಲಿಸಬಹುದು!) ಕಲೆಸಿದ್ದ ಸಿಮೆಂಟ್‌ ಅಲ್ಲೇ ಬಿಟ್ಟವಳೇ ಬೇಡದ ಬಾಟಲಿಯನ್ನು ಹುಡುಕಿ ಸಣ್ಣಸಣ್ಣ ಚೂರು ಮಾಡಿ ಅವರು ಹೇಳಿದಂತೆ ಗುದ್ದಿನಲ್ಲಿ ಮತ್ತು ರಾಜಮಾರ್ಗದಲ್ಲಿ ತುಂಬಿಸಿದೆ. ತುಸು ದಿನ ಬಹುಶಃ ಇಲಿಗಳು ನಮ್ಮನೆಯತ್ತ ಬಾಲವಿಟ್ಟೂ ಮಲಗುವುದು ಬೇಡ ಅಂತ ನಿರ್ಧರಿಸಿರಬೇಕು.. ಎಂಥ ರಗಳೆ ಇರಲಿಲ್ಲ.

ಕೆಲದಿನಗಳ ನಂತರ ಮತ್ತೆ ಶುರುವಾಯಿತು ನೋಡಿ... ನಾನೇನು ಕಡಿಮೆ... ಒಡೆದ ಬಾಟಲಿಯನ್ನು ಚೂರು ಮಾಡಿ ಅವುಗಳ ಹೊಸ ಗುದ್ದಿನಲ್ಲಿ ತುಂಬಿಸಿದೆ. ನಾನು ಅಷ್ಟರಲ್ಲಿ ಬಾಟಲಿಯನ್ನು ಕೈಗೆ ಚೂರೂ ಗಾಯ ಮಾಡಿಕೊಳ್ಳದೆ, ಕೆಳಗೆ ಒಂದು ಚಿಕ್ಕ ತುಂಡನ್ನೂ ಬೀಳಿಸದೇ ಹೇಗೆ ಗಾಜನ್ನು ಕುಟ್ಟಿ ಪುಡಿ ಮಾಡಬೇಕು ಎಂಬ ವಿಷಯದಲ್ಲಿ ಪ್ರವೀಣೆಯಾಗಿಬಿಟ್ಟಿದ್ದೆ.

ಆಮೇಲೊಮ್ಮೆ ಬೆಳಿಗ್ಗೆ ಡಬ್ಬಿ ಸಿದ್ಧಮಾಡುವ ಗಡಬಡೆಯಲ್ಲಿ ಪಲ್ಯ ಮಾಡಲೆಂದು ಬದನೇಕಾಯಿ ಹುಡುಕಿದರೆ ಸಿಗ್ತಾನೆ ಇಲ್ಲ... ಸಂಜೆ ಇಟ್ಟಿದ್ದ ಎರಡು ದೊಡ್ಡ ಬದನೇಕಾಯಿ ಎಲ್ಲಿ ಹೋಯ್ತು ಅಂತ ಹೆಚ್ಚು ತಲೆ ಕೆಡಿಸಿಕೊಳ್ಳಲು ಪುರಸೊತ್ತು ಇಲ್ಲದ್ದರಿಂದ ಅಂತೂ ಬೇರೆ ಏನೋ ಪಲ್ಯ ಮಾಡಿ ಮುಗಿಸಿದ್ದಾಯ್ತು. ಅದಾಗಿ ಮತ್ತೆ ಎರಡು ಮೂರುದಿನದ ನಂತರ ರಾತ್ರಿ ಕೊತ್ತುಂಬರಿ ಸೊಪ್ಪನ್ನು ಸೋಸಿ ಇಟ್ಟಿದ್ದು ಬೆಳಿಗ್ಗೆ ನೋಡಿದ್ರೆ ಬರೀ ದಂಟು ಕಾಣ್ತಿದೆ, ಸೊಪ್ಪಿನ ಒಂದೇ ಒಂದು ಕುರುಹೂ ಕಾಣ್ತಿಲ್ಲ. ತಟ್ಟನೆ ಜ್ಞಾನೋದಯವಾಯ್ತು.. ಇದು ಇಲಿಗಳದೇ ಕೆಲಸ ಎಂದು. ಇಷ್ಟು ಚೆನ್ನಾಗಿ ಸೊಪ್ಪು ತಿಂದು ನನಗೇ ಬರೀ ದಂಟು ಉಳಿಸಿದ ಅವುಗಳ ಬುದ್ಧಿವಂತಿಕೆಯ ಬಗ್ಗೆ, ತಮಗೆ ಬೇಕಾಗಿದ್ದನ್ನು ನೀಟಾಗಿ ತಿಂದು ‘ದಂಟು ಬೇಕಿದ್ರೆ ನೀನು ಒಗ್ಗರಣೆಗೆ ಹಾಕಿಕೋ’ ಎಂದು ಏನ್ನೂ ದಂಡ ಮಾಡದ ಅವುಗಳ ಉಳಿತಾಯ ಬುದ್ಧಿಗೆ ತುಂಬ ಮೆಚ್ಚಿಕೆಯಾಯಿತು. ಶತ್ರುಗಳೇ ಇರಲಿ.. ಅವರ ಬುದ್ಧಿವಂತಿಕೆಯನ್ನೂ ಮೆಚ್ಚಿಕೊಳ್ಳಲೇಬೇಕು ಎಂದು ಚಾಣಕ್ಯನೋ ಯಾರೋ ಹೇಳಿದ ಹಾಗಿದೆ.

ಗೆಳತಿಗೆ ಹೇಳಿದಾಗ ಅವಳೂ ತಮಾಶೆ ಮಾಡಿದಳು. ‘ಇನ್ನು ಮ್ಯಾಗೆ ತರಕಾರಿ ತಗಳೂ ಮುಂದೆ ಇಲಿಗಳಿಗೆ ಅಂತ ಕಾಲು ಕೆಜಿ ಹೆಚ್ಚಿಗನ ತಗೋರೀ’ ಅಂತ. ಆಮೇಲೆ ನೋಡಿ... ನಾನು ಇಲಿ ಪರಸ್ಪರ ಶಾಂತಿಯುತ ಸಹಬಾಳ್ವೆ ಶುರುಮಾಡಿಬಿಟ್ಟೆವು. ನಾನು ಅವುಗಳ ಬಿಲವನ್ನು ಮುಚ್ಚುವ ಗೋಜಿಗೂ ಹೋಗಲಿಲ್ಲ... ಅವುಗಳೂ ಅಷ್ಟೆ ಜೋಳ, ಗೋಧಿ ತಿನ್ನುವುದನ್ನು ಬಿಟ್ಟು (ಆಯ್ದ!) ತರಕಾರಿ ಹಣ್ಣು ಹಂಪಲುಗಳಂತಹ ಪುಷ್ಟಿಕರ, ಕ್ಯಾಲರಿ ಕಡಿಮೆ ಇರುವ, ಕೊಲೆಸ್ಟರಾಲ್‌ ಕಡಿಮೆ ಇರುವ ಆಹಾರವನ್ನು ತಿಂದುಕೊಂಡು ರಾತ್ರಿ ಹೆಚ್ಚು ಸದ್ದು ಮಾಡದೆ ಓಡಾಡಿಕೊಂಡಿದ್ದವು. (ಕುಟುಂಬಯೋಜನೆಯ ವಿಷಯದಲ್ಲಿ ಮಾತ್ರ ಅವುಗಳು ನನ್ನ ಮಾತನ್ನು ಪಾಲಿಸಲಿಲ್ಲ ಎಂಬ ವಿಷಾದ ಮಾತ್ರ ಇನ್ನೂ ಇದೆ!!)

ಅದಾದ ನಂತರ ಈ ಸಿಲಿಕಾನ್‌ ಸಿಟಿಗೆ ಬಂದ ಮೇಲೆ ಇನ್ನು ಈ ಮನೆಯಲ್ಲಿ ಇಲಿಗಳ ಕಾಟ ಇರಲ್ಲ ಎಂದೇ ಅಂದುಕೊಂಡಿದ್ದೆ. ಮಗ ಕೂಡ ‘ಅಬ್ಬಾ ಬಿಜಾಪುರದ ಹಾಗೆ ಇಲ್ಲಿ ಹಂದಿ ಇಲ್ಲಪ್ಪಾ’ ಅಂತ ಸಮಾಧಾನಿಸಿಕೊಂಡರೂ ‘ಏನಮ್ಮಾ ಬೆಂಗಳೂರು ಇಷ್ಟು ಮುಂದುವರಿದಿದೆ ಅಂತಾರೆ.. ಈ ನಮ್ಮನೆ ಹತ್ರ ಈ ರಸ್ತೆ ನೋಡು.. ಓನರ್‌ ಅಂಕಲ್‌ ಹೇಳ್ತಾ ಇದ್ರು ಅವರು ಬಂದಾಗಿಂದಲೂ ಇಪ್ಪತ್ತು ವರ್ಷದಿಂದಲೂ ಹೀಗೇ ಮಣ್ಣಿನ ರಸ್ತೇನೇ ಇದೆಯಂತೆ’ ಅಂತ ಹೊಸ ಗೊಣಗಾಟ ಶುರು ಮಾಡಿದ್ದ.

ಒಂದಿನ ಬೆಳಿಗ್ಗೆ ಎದ್ದು ಅಡಿಗೆ ಮನೆ ಲೈಟ್‌ ಹಾಕ್ತಿದ್ದ ಹಾಗೆ ಅಚಾನಕ್‌ ಅಡಿಗೆ ಮನೆಯಿಂದ ಹಾಲ್‌ಗೆ ಓಡಿದ್ದು ಏನು ...ಅರೆ ನನ್ನ ಅಷ್ಟೆಲ್ಲ ಪರಿಚಯದ ಇಲಿ... ದೇವ್ರೇ... ಅಲ್ಲಿಯ ಇಲಿಗಳು ಇಲ್ಲಿಯ ಇಲಿಗಳಿಗೆ ನನ್ನ ವಿಳಾಸವನ್ನೇನಾದ್ರೂ ಕೊಟ್ಟುಬಿಟ್ಟವೇ ಅಂತ...! ಹಾಲ್‌ನ ಮೂಲೆಯಲ್ಲಿ ನನ್ನ ದಿಟ್ಟಿಸಿ ನೋಡಿ ನಂತರ ಬೆಡ್‌ರೂಂನ ಮಂಚದ ಕೆಳಗೆ ಸೇರಿತು. ಈ ಪುಟ್ಟ ಇಲಿ ತುಂಬಾನೆ ಮುದ್ದಾಗಿತ್ತು... ಅದರ ಕಣ್ಣು ಕೂಡ ಅಷ್ಟೇ ಛಂದವಿತ್ತು. ಒಂಥರ ಲಕ್ಷಣವಾಗಿದ್ದ ಪುಟ್ಟ ಮುಖದ ಪುಟಾಣಿ ಇಲಿ... ಹಾಗಂತ ಇಲಿಯನ್ನು ಪೆಟ್‌ ಅನಿಮಲ್‌ ಪಟ್ಟಿಯಲ್ಲಿ ಸೇರಿಸುವುದುಂಟೆ. ಈ ಪುಟಾಣಿ ಇಲಿ ಕ್ರಮೇಣ ನನ್ನ ನಿದ್ದೆಕೆಡಿಸತೊಡಗಿತು. ಓನರ್‌ ಆಂಟಿ ‘ವಿಷದ ಕೇಕ್‌ ಇಲ್ಲಿಯೇ ಮೆಡಿಕಲ್‌ ಶಾಪ್‌ನಲ್ಲಿ ಸಿಗುತ್ತೆ, ತಂದು ಇಡಮ್ಮ’ ಎಂದ್ರು. ಈ ಸಲ ಬೋಂಡ ಮಾಡುವ ಉತ್ಸಾಹ ನನ್ನಲ್ಲಿಯೂ ಇರಲಿಲ್ಲ. ಸರಿ ಎಂದು ಆ ರೆಡಿಮೇಡ್‌ ಕೇಕ್‌ ತಂದು ಅದರಲ್ಲಿ ಸೂಚನೆ ಕೊಟ್ಟಂತೆ ತುಂಡು ಮಾಡಿ ಅದು ಓಡಾಡುವ ಜಾಗದಲ್ಲಿ ಇರಿಸಿದೆ. ಮರುದಿನ ಬೆಳಿಗ್ಗೆ ಎದ್ದವಳೇ ಮುಖವನ್ನೂ ತೊಳೆಯದೇ ಕೇಕನ್ನು ತಿಂದಿದೆಯಾ ಅಂತ ನೋಡಿದೆ.. ಎರಡು ಕಡೆ ಇಟ್ಟಿದ್ದು ಹಾಗೇ ಇತ್ತು, ಮೂರನೇ ಜಾಗದಲ್ಲಿದ್ದದ್ದು ಚೂರು ರುಚಿ ನೋಡಿದ ಹಾಗಿತ್ತು. ಆ ದಿನ ರಾತ್ರಿ ನೋಡಿದರೆ ಆ ಪುಟಾಣಿ ಇಲಿ ಮತ್ತೆ ಅಡಿಗೆ ಮನೆಯಿಂದ ಹಾಲ್‌ಗೆ ಜಿಗಿಯಿತು... ಸ್ವಲ್ಪ ಬಸವಳಿದ ಹಾಗಿತ್ತು.. ಪಾಪ ಅನ್ನಿಸಿತು. ಅದರ ಮರುದಿನ ಮಗ ಹುಯಿಲೆಬ್ಬಿಸಿದ ‘ಅಮ್ಮಾ ಅದು ಸತ್ತಿದೆ ಕಾಣುತ್ತೆ’

ವಾಸನೆ ಎಲ್ಲಿ ಅಂತ ಪತ್ತೆಯಾಗಲಿಲ್ಲ. ಅದು ಸತ್ತಿತೋ ಇಲ್ಲವೋ ಎಂದೂ ಗೊತ್ತಾಗಲಿಲ್ಲ. ಇದಾದ ನಂತರವೂ ಮತ್ತೆ ಒಂದು ಇಲಿ ಕಾಣಿಸಿಕೊಂಡಿತು. ನಾನು ಛಲ ಬಿಡದ ತ್ರಿವಿಕ್ರಮನಂತೆ ಇಟ್ಟಿದ್ದ ವಿಷದ ಕೇಕ್‌ಗಳು ಹಾಗೆ ಇದ್ದವು. ನಾನು ಶಾಂತಿಯುತ ಸಹಬಾಳ್ವೆ ಶುರುಮಾಡಲಾ ಅಂದು ವಿಚಾರ ಮಾಡುವಷ್ಟರಲ್ಲಿ ಅದು ತಾನಾಗಿಯೇ ಮನೆ ಬಿಟ್ಟು ಹೋಗಿತ್ತು. ಆದರೂ ಬಸವಳಿದಂತಿದ್ದ ಆ ಪುಟಾಣಿ ಇಲಿ ಮಾತ್ರ ತುಂಬ ಮುದ್ದಾಗಿತ್ತು, ಅದರ ಕಣ್ಣು ಕೂಡ ಆಗೀಗ ನೆನಸಿಕೊಳ್ಳುವಂತೆ. ಯಾಕೋ ಈ ಇಲಿಗೂ ನನಗೂ ಅಷ್ಟು ಸಂಬಂಧ ಕುದುರಲೇ ಇಲ್ಲವಲ್ಲ ಎಂದೆನ್ನಿಸಿ ಖೇದವೂ ಆಯ್ತು.

ಇದಾದ ನಂತರ ಒಮ್ಮೆ ನಾನು ಮಗರಾಯ ದೂರದ ಗುಜರಾತ್‌ಗೆ ಹೋಗಿದ್ದೆವು.... ನಮಗೆ ಕೊಟ್ಟಿದ್ದ ಟೆಂಟ್‌ನಲ್ಲಿ (ಅಲ್ಲಿನವರ ಭಾಷೆಯಲ್ಲಿ ಭೊಂಗಾ ಎನ್ನುತ್ತಾರೆ) ಒಂದು ಮಧ್ಯಾಹ್ನ ಹೋಗಿ ಇಳಿದುಕೊಂಡಿದ್ದಾಯ್ತು. ಅದರ ಮರುದಿನ ಬೆಳಿಗ್ಗೆ ಸ್ನಾನ ಮಾಡುವ ಅಂತ ಸೋಪ್‌ ಬಾಕ್ಸ್‌ ನೋಡಿದರೆ ಅಲ್ಲೇನಿದೆ.. ಪಿಯರ್ಸ್‌ನ ಕುರುಹೂ ಇಲ್ಲ, ಖಾಲಿ. ಮುಚ್ಚಳ ಕೆಳಗೆ ಬಿದ್ದಿದೆ. ಸೋಪು ಕೆಳಗೆ ಬಿದ್ದಿದ್ದೆಯಾ ಅಂತ ಹುಡುಕುವಾಗ ತಟ್ಟನೆ ನನಗೆ ಹೊಳೆಯಿತು ಇದು ಮತ್ತೇನಲ್ಲ, ಇಲಿಯ ಕೆಲಸ ಅಂತ. ಸರಿ ಅಲ್ಲೆಲ್ಲಾದರೂ ಬೀಳಿಸಿ ಹೋಗಿದೆಯಾ ಅಂತ ಹುಡುಕಿದರೆ ಎಲ್ಲಿಯೂ ಕಾಣಿಸ್ತಿಲ್ಲ. ‘ಅದೂ ಸ್ನಾನ ಮಾಡಲು ತಗೊಂಡು ಹೋಗಿರಬೇಕು ಬಿಡು’ ಎಂದು ಮಗ ನಿರಾಳವಾದ. ಅದರ ಸ್ನಾನದ ನೆವದಲ್ಲಿ ತಾನು ಸ್ನಾನ ಬಿಡಬಹುದು ಎಂಬುದು ಅವನ ಲೆಕ್ಕಾಚಾರ. ಟೇಬಲ್‌ ಮೇಲಿಟ್ಟಿದ್ದ ಬಿಸ್ಕೆಟ್ಸ್‌ ಮತ್ತಿತರ ತಿಂಡಿತಿನಿಸುಗಳು ಹಾಗೆಯೇ ಇದ್ದವು... ಇಲಿಯ ನೈರ್ಮಲ್ಯಪ್ರಜ್ಞೆ, ಸೌಂದರ್ಯಪ್ರಜ್ಞೆ ಎರಡನ್ನೂ ಮೆಚ್ಚಿಕೊಳ್ಳುತ್ತ, ಮುಖಕ್ಕೆ ಹಚ್ಚಲು ಇಟ್ಟುಕೊಂಡಿದ್ದ ಊಟ್‌ಮೀಲ್‌, ಫೇಸ್‌ವಾಶ್‌ಗಲ್ಲಿ ಭಾರೀ ನಾಜೂಕಾಗಿ ಸ್ನಾನ ಮುಗಿಸದೆ ಬೇರೆ ವಿಧಿಯಿರಲಿಲ್ಲ. ಯಾಕೆಂದರೆ ಅಲ್ಲಿ ಸುತ್ತಮುತ್ತ ಅಂಗಡಿಗಿಂಗಡಿ ಏನೂ ಇರಲಿಲ್ಲ. ಎರಡು ದಿನ ಹಾಗೇ ಸ್ನಾನ ಮಾಡಿದ್ದಾಯ್ತು.

ಅಲ್ಲಿಗೆ ಹೋಗುವುದಕ್ಕಿಂತ ಮುಂಚೆ ನಾವು ಒಂದು ಹೋಟೆಲ್‌ನಲ್ಲಿಳಿದುಕೊಂಡಿದ್ದೆವು. ಹೋಟೆಲ್‌ನವರು ಕೊಟ್ಟಿದ್ದ ಎರಡು (ಉಚಿತ) ಚಿಕ್ಕ ಮೆಡಿಮಿಕ್ಸ್‌ಗಳಲ್ಲಿ ಒಂದಾದರೂ ತಗೊಂಡುಹೋಗೋಣ ಅಂತ ಮಗ. ನಾನು ಪಕ್ಕಾ ಬಿಜಾಪುರದ ಭಾಷೆಯಲ್ಲಿ ‘ಶ್ಯೀ.. ಎಷ್ಟರ ಹಮೇಶಿಗೇಡಿತನ ಮಾಡ್ತೀಯಪ್ಪ... ಅವರು ಏನು ಅಂದ್ಕೋತಾರೆ.. ಎಂದಾರ ಇವ್ರು ಹೋಟೆಲ್ಲಿಗೆ ಬಂದಾರಿಲ್ಲೋ ಅಂತ.. ’ (ಹಮೇಶಿಗೇಡಿತನ ಎಂದರೆ ಯಾವುದಾದ್ರೂ ವಸ್ತುವನ್ನು/ಸಂಗತಿಯನ್ನು ಎಂದೂ ಕಾಣದಿದ್ದ ಹಾಗೆ ಮಾಡುವುದು) ಚೀಲಕ್ಕೆ ಹಾಕಲಿದ್ದವನನ್ನು ತಡೆದಿದ್ದೆ. ಮಗ ಅದನ್ನು ನೆನಪು ಮಾಡಿಕೊಳ್ಳುತ್ತ ’’ಅದನ್ನು ತಗೊಳೋಣ ಅಂದ್ರೆ ಮಹಾ ಸೊಫೆಸ್ಟಿಕೇಟೆಡ್‌ ಥರಾ ಬೇಡ ಬೇಡ ಅಂದೆ, ಈಗ ನೋಡು’’ ಅಂತ ಇಡೀ ದಿನ ಗೊಣಗೊಣ ರಾಗ ಹಾಡ್ತಲೇ ಇದ್ದ.

ನನ್ನ ಮಗನಿಗೆ ಭಾರೀ ಇಷ್ಟವಾಗುವ ಸಂಗತಿಯಾಂದಿದೆ, ಅದೆಂದರೆ ಹೊರಗಡೆ ಕಕ್ಕಸ್ಸಿಗೆ ಹೋಗೋದು, ಸಾಗರದ ಅಜ್ಜಿ ಮನೆಗೆ ಹೋದಾಗಲೆಲ್ಲ ಮನೆ ಹಿಂದಿನ ಕಾಡಿನಲ್ಲಿ ಚೆಂಬು ಹಿಡಿದು ಹೋಗುವುದೆಂದರೆ ಅವನಿಗೆ ಇನ್ನಿಲ್ಲದ ಖುಷಿ. ನಾವು ಇದ್ದ ಟೆಂಟಿನ ಸುತ್ತಮುತ್ತ ಮತ್ತೇನೂ ಇಲ್ಲದ್ದರಿಂದ ಅಲ್ಲಿಯೂ ಹಾಗೆ ಚೆಂಬು ತಗೊಂಡು ಹೋಗ್ತೇನೆ ಅಂತ ಎರಡು ದಿನದ ನಂತರ ಶುರು ಮಾಡಿಕೊಂಡ.

‘ಅಮ್ಮಾ ಪ್ಲೀಸ್‌.. ನೀನು ಅಲ್ಲಿವರೆಗೆ ನನ್ನ ಬಿಡಲಿಕ್ಕೆ ಬಾ, ಯಾರಾದ್ರೂ ಬರ್ತಿದ್ದಾರಾ ಇಲ್ಲವಾ ಅಂತ ನೋಡ್ತಿರು, ನಾನು ಆ ಪೊದೆಗಳ ಹಿಂದೆ ಹೋಗ್ತೀನಿ ಅಂತ... ’. ಅವನ ವರಾತ ತಾಳಲಾರದೆ ‘ಆದರೆ ಆ ಚೆಂಬು ನೀನೇ ಹಿಡ್ಕೋ.. ’ ಎಂದು ಹೋದೆ. ಅವನನ್ನು ಒಂದು ಕಡೆ ಪೊದೆ ಹಿಂದೆ ಕೂಡಿಸಿ, ಚಡ್ಡಿಯನ್ನು ಮತ್ತೊಂದು ಚಿಕ್ಕ ಪೊದೆ ಮೇಲಿಟ್ಟು ನಾನು ಕಾಯ್ತಾ ನಿಲ್ತೇನೆ ಎಂದವಳು ವಾಪಾಸು ಟೆಂಟಿನ ಬಳಿ ಹೊರೆಟೆ. ಹಾಗೆ ಬರುವಾಗ ನೆಲದ ಮೇಲೆ ಧೂಳುಮಣ್ಣಿನ ಏನೋ ನಸು ಹಸಿರಾಗಿ ಹೊಳೆದ ಹಾಗೆ... ಅರೆ.. ಅದು ನಮ್ಮ ಪಿಯರ್ಸ್‌ ಸೋಪು... ಆಹಾ... ನಾನು ಬಿಡ್ತೇನೆಯೇ.. ಹೇಗೂ ಆ ಇಲಿ ಎರಡು ದಿನ ಸ್ನಾನ ಮಾಡಿ ಅಗದಿ ಸ್ವಚ್ಛವಾಗಿತ್ತಲ್ಲ.. ಇನ್ನು ಸ್ವಚ್ಛವಾಗುವುದು ನಮ್ಮ ಸರದಿ! ಆ ಸೋಪನ್ನು ತಂದು ಅದಕ್ಕಂಟಿದ್ದ ಮರಳು, ಕಸಕಟ್ಟಿ ಎಲ್ಲ ತೆಗೆದು, ಚೂರು ತೊಳೆದು ಎರಡು ದಿನ ಉಪಯೋಗಿಸಿದ್ದಾಯ್ತು. ಬಿಸ್ಕೆಟ್ಸ್‌ ಮತ್ತಿತರ ತಿಂಡಿಗಳನ್ನು ಹಾಗೇ ತೆರೆದಿಟ್ಟರೂ ಇದನ್ನು ಮಾತ್ರ ಜೋಪಾನವಾಗಿ ಚೀಲದಲ್ಲಿಟ್ಟು ಜಿಪ್‌ ಹಾಕಿಟ್ಟಾದ್ದಾಯ್ತು.

ನಂಬಿಬಿಡಿ... ಇಲಿ ಆ ತಿಂಡಿತಿನಿಸುಗಳನ್ನು ಮೂಸಿಯೂ ನೋಡಲಿಲ್ಲ. ಅಲ್ಲಿಂದ ಹೊರಡುವ ಹಿಂದಿನ ರಾತ್ರಿ ಮಗರಾಯ ಸೋಪನ್ನು ಚೀಲದೊಳಗೆ ಇಡುವುದು ಮರೆತ. ಇವನು ಮರೆತದ್ದು ನನಗೆ ತಿಳಿಯದಿದ್ದರೂ ಇಲಿಗೆ ಮಾತ್ರ ಮಾತ್ರ ತಟ್ಟನೆ ಗೊತ್ತಾಗಿದೆ... ಮರುದಿನ ಬೆಳಿಗ್ಗೆ ನೋಡಿದ್ರೆ ಮತ್ತೆ ಸೋಪು ಮಾಯ... ಅಂದಹಾಗೆ ಈ ಇಲಿಗಳಿಗೆ ಆರನೇ ಇಂದ್ರಿಯವೇನಾದ್ರೂ ಇದೆಯಾ ಅಂತ ಸಂಶೋಧನೆ ಮಾಡಿದ್ರೆ ಖಂಡಿತಾ ನೋಬಲ್‌ ಅಲ್ಲದಿದ್ರೆ ಇಗ್ನೋಬಲ್‌ ಆದ್ರೂ ಬಂದೀತು ಎಂಬ ಮತ್ತೊಂದು ಯೋಚನೆಯೂ ಆ ಕ್ಷಣದಲ್ಲಿ ಸುಳಿದು ಹೋಯಿತು. (ಅದನ್ನು ಹೊರಗಿಟ್ಟಿದ್ದು ನಾನಲ್ಲ ನೀನು... ಹಂಗೆಲ್ಲ ಮರೆಯೋದು ನೀನು ಎಂದು ಅವನಿಗೂ ನನಗೂ ಘನಘೋರ ವಾಗ್ವಾದವೂ ಆಯ್ತು ಎನ್ನಿ!!). ಆದರೆ ಅದು ಯೋಚಿಸುವ ಸಮಯ ಅಲ್ಲ.. ಹುಡುಕುವ ಸಮಯ... ನಾವಿಬ್ಬರೂ ಟೆಂಟ್‌ನ ಸುತ್ತ ಮುತ್ತ ಹುಡುಕಿದೆವು... ಈ ಬಾರಿ ಇಲಿ ಖರೇ ಖರೇ ಶಾಣ್ಯಾ ಆಗಿತ್ತು.... ಅದು ಅಲ್ಲೆಲ್ಲಿಯೂ ಬೀಳಿಸಿರಲಿಲ್ಲ.... ನಮಗೆ ಮತ್ತೆ ಆ ದಿನ ಊಟ್‌ಮೀಲ್‌, ಫೇಸ್‌ವಾಶ್‌ಗಳಿಂದ ಮಜ್ಜನ. ಈ ಬಾರಿ ಆ ಇಲಿಯ ಬುದ್ಧವಂತಿಕೆ ಮಗನಿಗೆ ಭಾರೀ ಇಷ್ಟವಾಗಿಬಿಟ್ಟಿತು.

‘ಆ ಇಲಿ ಈ ಸೋಪು ತಗೊಂಡ್ಹೋಗಿ ಗಸಗಸ ಹಚ್ಚಿಕೊಂಡು ಸ್ನಾನ ಮಾಡಿದ್ದೇ ಭಾರೀ ಬೆಳ್ಳಗೆ ಆಗಿರಬೇಕು.. ಎಲ್ಲ ಕರೀ ಇಲಿಗಳ ನಡುವೆ ಇದೊಂದೇ ಬಿಳೀ ಇಲಿ...’ ಎಂದ. ‘ಹೌದು... ಪಿಯರ್ಸ್‌ ಸೋಪು ಜಾಹೀರಾತಿಗೆ ಈ ಇಲಿಯನ್ನೇ ತಗೋಬಹುದು’ ಎಂದೆ. ‘ಆದರೆ ಆಮೇಲೆ ಅದರ ಫ್ರೆಂಡ್ಸ್‌ ಕರೀ ಇಲಿಗಳೆಲ್ಲ ಇದನ್ನ ಆಟಕ್ಕೇ ಸೇರಿಸಿಕೊಳ್ಳೋದಿಲ್ಲಲ್ಲಮ್ಮಾ’ ಅಂತ ಮತ್ತೆ ಅಲವತ್ತುಕೊಂಡ ಮಗ ಮತ್ತೊಂದು ಕಲ್ಪನೆಗೆ ಹಾರಿದ ‘ಬಹುಶಃ ಈಗ ಆ ಇಲಿಗಳ ಸೌಂದರ್ಯಸ್ಪರ್ಧೆ ಇರಬೇಕು, ಇದು ಅದರಲ್ಲಿ ಭಾಗವಹಿಸುತ್ತೇನೋ.. ಅದಕ್ಕೇ ಈ ಸೋಪು ತಗೊಂಡುಹೋಗಿ, ಸ್ನಾನ ಮಾಡಿ ಭಾರೀ ಸುಂದರವಾಗಿ ಇದೇ ಮೊದಲ ಬಹುಮಾನ ತಗೊಂಡಿರುತ್ತೆ’ .

ನಿಜ ಹೇಳ್ತೇನೆ... ಸೋಪು ತೆಗೆದುಕೊಂಡು ಹೋದ ಇಲಿ ಬಗ್ಗೆ ನಂಗೆ ಸಿಟ್ಟಾಗಲು ಸಾಧ್ಯವೇ ಆಗಲಿಲ್ಲ. ಇಲಿಗೆ ನನಗೆ ಅಂಟಿದ ನಂಟು ಹೀಗೆ ಗುಜರಾತ್‌ನಲ್ಲಿಯೂ ಮುಂದುವರೆದಿದ್ದಕ್ಕೆ, ಅವುಗಳ ಬುದ್ಧಿವಂತಿಕೆ ಕುರಿತು ಮತ್ತೊಂದು ಸಾಕ್ಷ್ಯ ಸಿಕ್ಕಂತೆನ್ನಿಸಿದ್ದಕ್ಕೆ ಮನಸ್ಸಿಗೆ ಒಂಥರ ಮುದವಾಯಿತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more