ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಬೇಟೆಗಾರರಿಗೆ ಬಳಗದಿಂದ ಹಿಡಿ ಆತ್ಮವಿಶ್ವಾಸ!

By Staff
|
Google Oneindia Kannada News


ಕನ್ನಡ, ಕನ್ನಡಿಗ, ಕರ್ನಾಟಕದ ಅಭಿವೃಧ್ಧಿಗೆ ಪಣ ತೊಟ್ಟು ನಿಂತಿರುವ, ವೃತ್ತಿಪರ ಕನ್ನಡ ಸಂಘಟನೆಯಾದ ಬನವಾಸಿ ಬಳಗದ ವತಿಯಿಂದ 8ನೇ ವೃತ್ತಿ ಜೀವನ ಮಾರ್ಗದರ್ಶನ ಕಾರ್ಯಕ್ರಮವು, ನಮ್ಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಶಸ್ವಿಯಾಗಿ ನಡೆಯಿತು.

ಉದ್ಯೋಗವನ್ನು ಅರಸುತ್ತಿರುವ ನಮ್ಮ ಕನ್ನಡ ಯುವಕ/ಯುವತಿಯರಿಗೆ ನೆರವಾಗಲೆಂದೇ, ಹಾಗೂ ಈ ನಿಟ್ಟಿನಲ್ಲಿ, ಅವರಿಗೆ ಯಾವುದಾದರೂ ಗೊಂದಲಗಳು ಇದ್ದಲ್ಲಿ, ಅವನ್ನು ನಿವಾರಿಸಿ, ‘ನಿಮ್ಮ ಬೆನ್ನ ಹಿಂದೆ ನಾವು ಇದ್ದೇವೆ, ಇಡೀ ಕನ್ನಡ ಸಮೂಹವಿದೆ’ ಎಂದು ಅವರಲ್ಲಿ ಧೈರ್ಯ, ಸ್ಠೈರ್ಯ ತುಂಬಲು ಬನವಾಸಿ ಬಳಗ ಮುಂದಾಗಿದೆ. ಈ ನಿಟ್ಟಿನಲ್ಲಿ ಜೂ.18ರಂದು ಬಳಗ ಸಂಘಟಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ಬಹಳ ಪರಿಣಾಮಕಾರಿಯಾಗಿ ನಡೆಯಿತು ಎಂದು ತಿಳಿಸಲು ಸಂತೋಷವಾಗುತ್ತದೆ.

ಈ ಬಾರಿ ಹಿಂದಿನ ಕಾರ್ಯಕ್ರಮಗಳಿಗಿಂತ ಸ್ವಲ್ಪ ವಿಭಿನ್ನವಾಗಿ, ಕಾರ್ಯಕ್ರಮದಲ್ಲಿ ಒಂದು ಹೊಸ ಅಂಶವಿತ್ತು. ಅದೇನೆಂದರೆ, ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶವಿರುವ ವಿವಿಧ ತಂತ್ರಜ್ಞಾನಗಳು, ಮತ್ತು ಅವುಗಳ ಕಾರ್ಯಕ್ಷೇತ್ರಗಳು(domain), ಆ ಕ್ಷೇತ್ರಗಳಲ್ಲಿ ಕೆಲಸ ಲಭ್ಯವಿರುವ ಸಂಸ್ಥೆಗಳ ಬಗೆಗಿನ ಮಾಹಿತಿ, ಪ್ರತಿ ಕ್ಷೇತ್ರಕ್ಕೂ ಬೇಕಾದ ತಾಂತ್ರಿಕ ಜ್ಞಾನ, ಪರಿಣತಿ, ತರಬೇತಿ, ಇತರೆ ಕೌಶಲ್ಯಗಳು, ಮತ್ತು ಅವುಗಳನ್ನು ಅಭಿವೃಧ್ಧಿಪಡಿಸಿಕೊಳ್ಳಲು ನೆರವಾಗುವ ಪುಸ್ತಕಗಳು, ಅಂತರ್ಜಾಲ ತಾಣಗಳು, ತರಬೇತಿ ಕೇಂದ್ರಗಳ ಬಗೆಗಿನ ಮಾಹಿತಿ.... ಹೀಗೆ, ಒಟ್ಟಾರೆ, ವಿಶಾಲ ಐಟಿ ಕ್ಷೇತ್ರದಲ್ಲಿನ ವಿವಿಧ ಭಾಗಗಳು, ಅಲ್ಲಿಯ ಉದ್ಯೋಗಾವಕಾಶಗಳು, ಅವುಗಳನ್ನು ಪಡೆಯುವ ಬಗೆ, ಇತ್ಯಾದಿ ಎಲ್ಲ ಮಾಹಿತಿಯನ್ನು ಸವಿವರವಾಗಿ ನೀಡಲು ಪ್ರಯತ್ನ ಮಾಡಲಾಯಿತು. ಉದ್ಯೋಗ ಅರಸುತ್ತಿರುವ ಸುಮಾರು 50 ಕನ್ನಡ ಯುವಕ/ಯುವತಿಯರು ಇದರಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಪ್ರಯೋಜನ ಪಡೆದರು.

8th Career Counselling by Banavasi Balagaಕಾರ್ಯಕ್ರಮವು ಬೆಳಗ್ಗೆ 9.30 ಕ್ಕೆ, ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ‘ಪಂಪ ಸಭಾಂಗಣ’ ದಲ್ಲಿ ಆರಂಭವಾಯಿತು. ಮೊದಲಿಗೆ, ನೆರೆದಿದ್ದ ಅಭ್ಯರ್ಥಿಗಳು ಪರಸ್ಪರ ಪರಿಚಯಿಸಿಕೊಂಡು, ಸುಲಭವಾಗಿ ಪ್ರತಿಕ್ರಯಿಸಲು ನೆರವಾಗುವಂತೆ ‘ಮೌನ ಮುರಿಯುವಿಕೆ’(ice-breaking session) ಕಲಾಪ ನಡೆಯಿತು. ಅದರಲ್ಲಿ ಜಯಪ್ರಕಾಶ ಮತ್ತು ಅರುಣ್‌ ಅವರು, ನೆರೆದಿದ್ದ ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಳ್ಳುವುದರ ಜೊತೆಗೆ, ನೆರೆದಿದ್ದ ಅಭ್ಯರ್ಥಿಗಳು ಈ ಕಾರ್ಯಕ್ರಮದಿಂದ ಏನನ್ನು ನಿರೀಕ್ಷಿಸುತಿದ್ದಾರೆ ಎಂದು ತಿಳಿದುಕೊಂಡರು. ಹಾಗೆಯೇ, ಅವರ ಕೆಲಸದ ಹುಡುಕಾಟದಲ್ಲಿ, ಅವರಿಗೆ ಆದ ಕೆಲ ಅನುಭವಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದರು.

ನಂತರ, ಈ ಮೇಲೆ ಹೇಳಿದಂತೆ, ಐಟಿ ಕ್ಷೇತ್ರದಲ್ಲಿನ, ಹೆಚ್ಚು ಉದ್ಯೋಗಾವಕಾಶಗಳಿರುವ ವಿವಿಧ ತಂತ್ರಜ್ಞಾನಗಳು ಮತ್ತು ಅವುಗಳ ಕಾರ್ಯಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಇದರಲ್ಲಿ ಜಾವ/ಜೆ2ಇಇ, ಡಾಟ್‌ನೆಟ್‌, ಎಂಬೆಡ್ಡಡ್‌ ತಂತ್ರಜ್ಞಾನ, ಎಸ್‌ಎಪಿ, ಟೆಸ್ಟಿಂಗ್‌ ಹಾಗೂ ಐಟಿ ಮೂಲಭೂತ ಸೌಕರ್ಯ ನಿರ್ವಹಣೆ (ಐಟಿ ಇನ್‌ಫ್ರಾಸ್ಟ್ರಕ್ಚರ್‌ ಮ್ಯಾನೇಜ್‌ಮೆಂಟ್‌) ಬಗೆಗಿನ ವಿಷಯಗಳನ್ನು ಆಯಾ ಕ್ಷೇತ್ರಗಳಲ್ಲಿ ಅನುಭವಿಗಳಾದ, ಉತ್ತಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿವಕುಮಾರ್‌, ಜಯಪ್ರಕಾಶ, ಸುಷ್ಮ, ಭಾಸ್ಕರ್‌, ಚಿನ್ನಯ್ಯ ಹಾಗೂ ರಾಘವೇಂದ್ರ ರವರು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದರು. ಪ್ರತಿ ಕ್ಷೇತ್ರದಲ್ಲೂ ಸಾಮಾನ್ಯವಾಗಿ ಕೇಳಲಾಗುವ ಕೆಲ ಪ್ರಶ್ನೆಗಳು, ಮುಖ್ಯ ಪರಿಕಲ್ಪನೆಗಳು, ಇತ್ಯಾದಿಗಳ ಬಗ್ಗೆ ವಿವರವಾಗಿ ಅಭ್ಯರ್ಥಿಗಳೊಡನೆ ಚರ್ಚಿಸಿದರು.

ಈ ಮಧ್ಯೆ, ನಮ್ಮ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಮಯ ಕೊಟ್ಟು, ಅತಿಥಿಯಾಗಿ ಆಗಮಿಸಿದ್ದ ನರಸಿಂಗರಾಯರು (ಜನರಲ್‌ ಮ್ಯಾನೇಜರ್‌, ವಿಪ್ರೋ) ನೆರೆದಿದ್ದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಬನವಾಸಿ ಬಳಗದ ಅಮೂಲ್ಯ ಕಾರ್ಯಕ್ರಮಗಳಾಲ್ಲಿ ಒಂದಾದ ಈ ವೃತ್ತಿ ಜೀವನ ಮಾರ್ಗದರ್ಶನದ ಬಗ್ಗೆ ತಮ್ಮ ಮೆಚ್ಚುಗೆ ಹಾಗೂ ಸಂತೋಷ ವ್ಯಕ್ತ ಪಡಿಸಿದರು. ಹಾಗೆಯೇ, ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಳ್ಳುವ ಕನ್ನಡಿಗರು, ಒಂದು ಒಳ್ಳೆಯ ಉದ್ಯೋಗ ಗಳಿಸಲೆಂದು ಹರಸಿದರು. ಜೊತೆಗೆ, ಉದ್ಯೋಗ ಸಿಕ್ಕ ನಂತರ, ತಮ್ಮ ಕನ್ನಡದ ನಂಟನ್ನು ಅಲ್ಲಿಗೇ ನಿಲ್ಲಿಸದೇ, ಮುಂದೆ ಬಂದು, ಇತರೆ ಕನ್ನಡಿಗರಿಗೆ ನೆರವಾಗಬೇಕೆಂದು, ಕನ್ನಡ ಪರ ಕೆಲಸಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಮಧ್ಯಾಹ್ನ 2.00 ಗಂಟೆಗೆ ಊಟದ ವಿರಾಮವಾದ ಬಳಿಕ ಎರಡನೆ ಕಲಾಪ (ಮಧ್ಯಾಹ್ನದ ಕಲಾಪ) ಆರಂಭವಾಯಿತು. ಇದರಲ್ಲಿ, ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯುವ ಪ್ರಕ್ರಿಯೆಯಲ್ಲಿ, ಕಡ್ಡಾಯವಾಗಿ ನಡೆಯುವ ಸುತ್ತುಗಳಾದ, ಸ್ವ-ವಿವರ ಪತ್ರದ ಪರಿಶೀಲನೆ, ಎಚ್‌. ಆರ್‌. ಸಂದರ್ಶನ, ಗುಂಪು ಚರ್ಚೆ, ಇತ್ಯಾದಿಗಳ ಬಗೆಗಿನ ಸವಿವರ, ಮುಂಜಾಗ್ರತಾ ಕ್ರಮಗಳು, ತಯಾರಿ ನಡೆಸುವ ಬಗೆ, ಹಾಗೂ, ಪ್ರಾಯೋಗಿಕವಾಗಿ ವಿವರಿಸಲು ಅಣುಕು ಗುಂಪು ಚರ್ಚೆಯನ್ನೂ ಸಹ ನಡೆಸಲಾಯಿತು. ಈ ಮೇಲಿನ ಎಲ್ಲ ಪ್ರಕ್ರಿಯೆಗಳನ್ನು, ಅನಿಲ್‌, ಅರ್ಚನ, ನರ್ಮದಾ, ಮತ್ತಿತರರು ಅತ್ಯಂತ ಅಚ್ಚುಕಟ್ಟಾಗಿ, ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.

ಇವೆಲ್ಲ ಕಲಾಪಗಳಿಗೂ ಪೂರಕವಾಗಿ, ನಮ್ಮ ಬಳಗದ ಹೆಮ್ಮೆಯ ಸದಸ್ಯರಲ್ಲಿ ಒಬ್ಬರಾದ ಬಾ.ರಾ. ಕಿರಣ ರವರು ನೆರೆದಿದ್ದ ಅಭ್ಯರ್ಥಿಗಳಿಗೆ, ಉದ್ಯೋಗ ಹುಡುಕಾಟದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ, ಮೂಲಭೂತ ಕಾರಣಗಳೇನು, ನಮ್ಮ ಕನ್ನಡದ ಸಮಸ್ಯೆಗಳಿಗೆ ಕಾರಣಗಳೇನು ಎಂಬುದನ್ನು ಬಹಳ ಚೆನ್ನಾಗಿ ಮನದಟ್ಟು ಮಾಡಿಸಿದರು. ಹಾಗೆಯೇ, ಈ ಸಮಸ್ಯೆ ನಿವಾರಣೆಯ ಬಗೆ ಹೇಗೆ, ನಮ್ಮ ಕನ್ನಡ/ಕನ್ನಡಿಗ/ಕರ್ನಾಟಕದ ಉಳಿವು, ಬೆಳೆವುನೆಡೆಗೆ ಕನ್ನಡಿಗರಾದ ನಮ್ಮ ಪಾತ್ರ ಏನು, ಹಾಗೂ ಈ ನಿಟ್ಟಿನಲ್ಲಿ, ನಮ್ಮ ಬನವಾಸಿ ಬಳಗ ಕಂಡಿರುವ ಸುಂದರ ಕರ್ನಾಟಕ, ಸುವರ್ಣ ಯುಗದ ಕನಸು, ಹಾಗೂ ಅದನ್ನು ನನಸಾಗುವಲ್ಲಿ ನಮ್ಮ ಜವಾಬ್ದಾರಿ ಏನು, ಎಂಬ ಗಂಭೀರ ವಿಷಯಗಳನ್ನು ಮನ ಮುಟ್ಟುವಂತೆ ಚರ್ಚಿಸಿದರು. ನೆರೆದಿದ್ದವರಲ್ಲಿ ಕನ್ನಡ ಜಾಗೃತಿಯ ದೀಪವನ್ನು ಹಚ್ಚಿದರು.

ಸಂಜೆ ಸುಮಾರು 5.00ರ ಹೊತ್ತಿಗೆ, ಅಭ್ಯರ್ಥಿಗಳಿಂದ, ಕಾರ್ಯಕ್ರಮದ ಬಗೆಗಿನ ತಮ್ಮ ಅನಿಸಿಕೆ, ಮುಂದಿನ ನಿರೀಕ್ಷೆಗಳು, ಕಾರ್ಯಕ್ರಮದ ಗುಣಮಟ್ಟದ ಬಗೆಗಿನ ಮೌಲ್ಯಮಾಪನ, ಇತ್ಯಾದಿ ವಿವರಗಳನ್ನು ಪದೆಯುವದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕೊನೆಯಲ್ಲಿ, ಕೆಲ ಸಂಸ್ಥೆಗಳಲ್ಲಿ, ಸದ್ಯದಲ್ಲೇ ನಡೆಯುವ ಉದ್ಯೋಗ ಆಯ್ಕೆ ಕಾರ್ಯಕ್ರಮಗಳ ಬಗೆಗೂ ಮಾಹಿತಿಯನ್ನು ನೀಡಲಾಯಿತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X