ದಿ ಮ್ಯಾಜಿಕ್‌ ಆಫ್‌ ಬೇಂದ್ರೆ! ಯವನಿಕಾದಲ್ಲಿ ನಾದಲೀಲೆ!


‘ರಾಷ್ಟ್ರಕವಿ’ ಗೌರವ ಸೇರಿದಂತೆ ಕುವೆಂಪು ಅವರಿಗೆ ಸಿಕ್ಕಷ್ಟು ಮಾನ್ಯತೆ ಮತ್ತು ಜನಪ್ರಿಯತೆ ಬೇಂದ್ರೆ ಅವರಿಗೆ ಸಿಕ್ಕಲಿಲ್ಲ. ಅದರಲ್ಲೂ ಬೇಂದ್ರೆ ರಾಜಧಾನಿ ನಗರದಲ್ಲಿ, ಕುವೆಂಪು ಹಿಂಬಾಲಕರ ಅಬ್ಬರದಲ್ಲಿ ಮರೆಯಾದರು ಎನ್ನುವ ಮಾತು ಸಾಹಿತ್ಯವಲಯದಲ್ಲಿದೆ. ಆದರೆ ಯವನಿಕಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮ ನೋಡಿದರೆ, ಈ ಮಾತನ್ನು ಒಪ್ಪುವುದು ಕಷ್ಟವಾಗುತ್ತದೆ.

Varakavi Bendre is not forgottenಬೆಂಗಳೂರು : ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ಅಂಬಿಕಾತನಯದತ್ತ)ಮತ್ತೆ ಪ್ರತ್ಯಕ್ಷವಾಗಿದ್ದರು! ಕಾವ್ಯ ವಾಚನ, ಸಾಕ್ಷ್ಯಚಿತ್ರ, ರೈಖಾಚಿತ್ರ ಹಾಗೂ ಭಾವಚಿತ್ರಗಳಲ್ಲಿ ಬೇಂದ್ರೆಯವರ ಸಾಕ್ಷಾತ್ಕಾರ. ಮನಕ್ಕೆ ಮುದನೀಡಿದ ಸಮಾರಂಭ ಮುಗಿಸಿ ಹೊರಬಂದ ಪ್ರೇಕ್ಷಕರ ಚಿತ್ತದಲ್ಲೂ ಬೇಂದ್ರೆ.

ಕ್ರಿಕೆಟ್‌ ಕಲಿ ವಿಜಯ್‌ ಭಾರದ್ವಾಜ್‌ ಹಿಡಿದ ಮೈಕ್‌ನಲ್ಲಿ, ಪತ್ರಕರ್ತ ರವಿ ಬೆಳಗೆರೆ ಗಂಟಲಲ್ಲಿ, ಅಂಕಣಕಾರ್ತಿ ಪ್ರತಿಭಾ ನಂದಕುಮಾರ್‌ ‘ಅಭಿನಯ’ ವಾಚನದಲ್ಲಿ ಎಲ್ಲೆಲ್ಲೂ ಬೇಂದ್ರೆ ಕಾಣಿಸಿಕೊಂಡರು.

ಅಷ್ಟದಿಕ್ಕು ಹಾಗೂ ದೇಶಕಾಲ ಸಂಸ್ಥೆಗಳು ಬೇಂದ್ರೆ ಸ್ಮರಣಾರ್ಥ ಯವನಿಕಾದಲ್ಲಿ ಆಯೋಜಿಸಿದ್ದ ‘ನಾದಲೀಲೆ’ ಕಾರ್ಯಕ್ರಮ ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆಯಿತು. ಕವಿ, ರಂಗಕರ್ಮಿ, ವಿಮರ್ಶಕ, ಸಾಹಿತಿ, ಪತ್ರಕರ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಕಲೆತು, ಬೆರೆತು ತಮ್ಮದೇ ಆದ ಧಾಟಿಸಲ್ಲಿ ಬೇಂದ್ರೆ ಕಾವ್ಯ ವಾಚಿಸಿದ ಗಣ್ಯರು ಕೆಲವೊಮ್ಮೆ ಅಭಿನಯಿಸುತ್ತಾ, ಹಾಡುತ್ತಾ, ನೇರವಾಗಿ ಓದಿ, ಕಾವ್ಯಕ್ಕೆ ಇನ್ನಷ್ಟು ಮೆರಗು ತಂದರು. ಗಾಯಕರು ತಮ್ಮ ಕಂಚಿನ ಕಂಠದ ಮೂಲಕ ಗೌರವ ಸೂಚಿಸಿದರೆ, ಸಾಹಿತಿಗಳು ತಮ್ಮದೇ ಆದ ಸಾಹಿತ್ಯಕ ಶೈಲಿಯಲ್ಲಿ ಸ್ಮರಿಸಿದರು. ಪತ್ರಕರ್ತರೂ ಭಿನ್ನವಾಗಿ ಕಾವ್ಯ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು.

ವಿದ್ವಾನ್‌ ಪರಮೇಶ್ವರ ಹೆಗಡೆ, ‘ದುಡಿದು ಬೇಸತ್ತಾಗ ; ದುಡಿದುಡಿದು ಸತ್ತಾಗ’ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಕರ್ಮಿ ಸಿ.ಆರ್‌.ಸಿಂಹ ವಿಶಿಷ್ಟ ಶೈಲಿಯಲ್ಲಿ ‘ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು...’ ಹಾಡನ್ನು ಹಾವಭಾವದ ಮೂಲಕ ಬಡತನದ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ನೀಡಿದರು. ಮೊದಲು ಹಾಡನ್ನು ಮೆಲುದನಿಯಲ್ಲಿ ಹಾಡಿದ ಸಿಂಹ ‘ಮುಗಿಲ ಮಾರಿಗೆ ರಾಗರತಿಯ...’ ಹಾಡನ್ನು ಅಷ್ಟೇ ಗಡಸು, ವೇಗವಾಗಿ ಹಾಡಿದರು.

ಗಾಯಕಿ ಬಿ.ಜಯಶ್ರೀ ವಾಚಿಸಿದ ‘ಬಂದಾದ ಸೂರ್ಯನ ಹೊಳಿ, ನಡಿ ಮೈತೊಳಿ...’ ಹಾಡು ಜನರನ್ನು ಮೆಚ್ಚಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಬೇಂದ್ರೆಯವರ ಜನಪ್ರಿಯ ಕಾವ್ಯಗಳಾದ ‘ಕುರುಡು ಕಾಂಚಾಣ ಕುಣಿಯುತಲಿತ್ತು...’, ‘ಒಂದೇ ಒಂದೇ ಕರ್ನಾಟಕ ಒಂದೇ...’ ಹಾಡನ್ನು ಹಾಡಿದರು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ರಾಜಕಾರಣಿಗಳನ್ನು ಲೇವಡಿ ಮಾಡುವ, ‘ದುಂಡು ಮೇಜಿನ ಸುತ್ತ ದುಂಡು ದುಂಡು ಮಂದಿ...’ ಕಾವ್ಯ ವಾಚಿಸಿದಾಗ ಜನ ಚಪ್ಪಾಳೆಯಿಂದ ಸುರಿಮಳೆ ಸುರಿಸಿದರು.

ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್‌ ನಾದಲೀಲೆಯ ಕವನವಾದ ‘ನಾನೊಂದು ನೆನೆದರ, ನೀನೊಂದ ನೆನೆಯುತಿ...’ ಹಾಗೂ 1940ರಲ್ಲಿ ಬೇಂದ್ರೆ ಅವರು ಗಂಗಾವತರಣದಲ್ಲಿ ಬರೆದಿದ್ದ ‘ತೇಲಾಡುವಾಗ ಮನಸು, ಮೇಲಾಡುತಾವ ಕನಸು, ತಾಕಾಡುವಾಗ ಇತ್ತ, ತೇಕಾಡುತಾವ ಚಿತ್ತ... ಕಾವ್ಯಗಳನ್ನು ಹಾಡಿದರು. ಚಿತ್ರ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ‘ಬೀದಿ ನಾಯಿ ರಾಧೆಗೆ ಹೊಟ್ಟೆ ತುಂಬ ಮೊಲೆಗಳು... ಬೀದಿ ನಾಯಿ ರಾಧೆಗೆ ಊರತುಂಬ ಗೆಳೆಯರು ಹಾಡನ್ನು ಹಾಡಿದಾಗ ಜನ ನಗುವಿನೊಂದಿಗೆ ಅರಿವನ್ನೂ ಸಂಪಾದಿಸಿದರು.

ಕವಯಿತ್ರಿ ಹಾಗೂ ಅಂಕಣಕಾರ್ತಿ ಪ್ರತಿಭಾ ನಂದಕುಮಾರ್‌, ‘ಮರುಳ ಮಾಡಾಕ ಹೋಗಿ...’ ಕಾವ್ಯವನ್ನು ಅಕ್ಷರಶಃ ಅಭಿನಯಿಸುವ ಮೂಲಕ ಬೇಂದ್ರೆ ಕವನಕ್ಕೆ ಜೀವಂತಿಕೆ ತಂದರು. ವಿಮರ್ಶಕ ಕಿ.ರಂ.ನಾಗರಾಜ್‌ ‘ಲಯದ ಬನದ ಬಿಸಿಲಲ್ಲಿ... ’ ಹಾಗೂ ‘ಕಲ್ಪವೃಕ್ಷ ವೃಂದಾವನದಲಿ ಹೇಗೋ ಹೊಕ್ಕಿ ಬಂದೆ... ’ ಹಾಡನ್ನು ಹಾಡಿದರು. ನಿವೃತ್ತ ಐಎಎಸ್‌ ಅಧಿಕಾರಿ ಡಾ.ಚಿರಂಜೀವಿಸಿಂಗ್‌ ‘ಚನ್ನನ ಪದ್ಯ’ ವಾಚಿಸಿದರು.

ಬೇಂದ್ರೆ ಅವರ ‘ಹಕ್ಕಿ ಹಾರುತಿದೆ ನೋಡಿದಿರಾ...?’ ಕವನವನ್ನು ತಿರುಚಿ ವ್ಯಂಗ್ಯವಾಗಿ ಬರೆದ ‘ಬೆಕ್ಕು ಹಾರುತಿದೆ ನೋಡಿದಿರಾ...?’ ಹಾಡನ್ನು ಕಥೆಗಾರ ಅಶೋಕ್‌ ಹೆಗಡೆ ಹಾಡಿದರು. ರಂಗನಟ ಎಚ್‌.ಜಿ.ಸೋಮಶೇಖರರಾವ್‌, ‘ಸಚ್ಚಿದಾನಂದ, ಸಚ್ಚಿದಾನಂದ’,‘ಬೆಳದಿಂಗಳಾ ನೋಡು, ಬೆಳದಿಂಗಳಾ... ’ ಹಾಡಿದರು.

ಸಾಹಿತಿ ಜಯಂತ ಕಾಯ್ಕಿಣಿ ಅವರು ಬೇಂದ್ರೆ ಗದ್ಯ ಸಾಹಿತ್ಯವನ್ನು ಜನರಿಗೆ ಪರಿಚಯಿಸಿದರು. ಅದರ ಕೆಲ ತುಣುಕುಗಳು ಇಲ್ಲವೆ. ‘ಸತ್ಯ ಅಷ್ಟು ಸುಂದರವಾಗಿ ಕಾಣುವುದಿಲ್ಲ. ಏಕೆಂದರೆ ಅದು ಸತ್ಯವಾಗಿರುತ್ತದೆ. ಬೇಂದ್ರೆ ಬೇಂದ್ರೆಯೇ ಆಗಿದ್ದರೆ ಯಾರಿಗೂ ಏನೂ ಅನ್ನಿಸುವುದಿಲ್ಲ. ಪುಟ್ಟಪ್ಪನಾಗಿದ್ದರೆ ಓಹೋ ಇವನ್ಯಾರು ಅನ್ನುತ್ತಾರೆ.’

‘ಉಂಡೆಯನ್ನು ಯಾವ ಬಾಜುವಿನಿಂದ ಕಚ್ಚಿ ತಿಂದರೂ ಅದು ಸಿಹಿಯಾಗಿ ಇರುತ್ತದೆ’, ‘ಹಸಿದವನ ಮುಂದೆ ಪಾಕಶಾಸ್ತ್ರ ಇಡಬಾರದು, ಊಟ ಇಡಬೇಕು.’

ಕಾವ್ಯಲೋಕದಲ್ಲಿ ಗಂಭೀರತೆಯನ್ನು ಸೃಷ್ಟಿಸಿದ್ದ ವಾತಾವರಣವನ್ನು ತಿಳಿಗೊಳಿಸಿ ಎಲ್ಲರ ಬಾಯಲ್ಲೂ ವಾಹ್‌, ವಾಹ್‌ ಗಿಟ್ಟಿಸಿದವರು ಪತ್ರಕರ್ತ ರವಿ ಬೆಳಗೆರೆ. ‘ಗುಬ್ಬಿ ಗುಬ್ಬಿ ನಿನ್ನ ಗಂಡ ಏನು ಮಾಡ್ತಾನಾ? ಹಾಸಿಗೇಲಿ ಹೇತುಕೊಂಡು ಮೂಸಿ ನೋಡ್ತಾನಾ...’ ಹಾಡಿಗೆ ಜನ ನಕ್ಕುನಕ್ಕು ಸುಸ್ತಾದರು. ‘ಇತ್ತೀಚೆಗೆ ಬೇಂದ್ರೆ ಮಾಸ್ತರ್‌ ಏನ್‌ ಮಾಡ್ತಾರಾ?’ ಹಾಡು ಮತ್ತು ಬೆಳಗೆರೆ ಜಾನಕಮ್ಮನ ಕುರಿತು ಬರೆದ ‘ತಂಗಿ ಜಾನಕಿ ನಿನ್ನ...’ ಹಾಡುಗಳಿಗೆ ಬೆಳಗೆರೆ ಪ್ರೇಕ್ಷಕರ ಮೆಚ್ಚುಗೆಗೆ ಭಾಜನರಾದರು.

ಕ್ರಿಕೆಟ್‌ ಪಟು ವಿಜಯ್‌ ಭಾರದ್ವಾಜ್‌ ಬ್ಯಾಟ್‌ ಬದಲು ಮೈಕ್‌ ಹಿಡಿದು ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ ನನ್ನ’ ಹಾಗೂ ‘ಇಳಿದು ಬಾ ತಾಯೇ ಇಳಿದು ಬಾ’ ಹಾಡು ಮೆಚ್ಚುಗೆ ಗಳಿಸಿತು.

ಕವಿ ಸಿದ್ಧಲಿಂಗ ಪಟ್ಟ ಹಾಡಿದ ‘ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ...’ ,‘ಕುಣಿಯೋಣು ಬಾರಾ’ ಗೀತೆಗಳು ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ನಟಿ ಪವಿತ್ರಾ ಲೋಕೇಶ್‌ ‘ಕಥೆಯಾದಳು ಹುಡುಗಿ’ ಹಾಗೂ ‘ಒಲವೆಂಬ ಹೊತ್ತಿಗೆ’ ಹಾಡನ್ನು ಹಾಡಿದರು.

ಕವಿ ಕೆ.ಎಚ್‌.ಶ್ರೀನಿವಾಸ್‌, ಕಲಾವಿದ ಕೆ.ಕೆ.ಹೆಬ್ಬಾರ್‌ ಅವರ ಪುತ್ರಿ ರೇಖಾ ಹೆಬ್ಬಾರ್‌, ರಂಗ ನಿರ್ದೇಶಕ ರಘುನಂದನ, ಕಥೆಗಾರ ಎಸ್‌.ದಿವಾಕರ್‌ ಹಾಡಿದರು. ಅಂತಿಮವಾಗಿ ಅಧ್ಯಕ್ಷೀಯ ಕಾವ್ಯವಾಚನ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರದ್ದಾಗಿತ್ತು. ಬೇಂದ್ರೆಯವರು ಭೂಮಿಯ ಕುರಿತು ಬರೆದ ಮೊದಲಗಿತ್ತಿ ಪದ್ಯ ವಾಚಿಸಿದರು. ಇದು ಮಂತ್ರ ಹಾಗೂ ಮಗಳ ಅಗಲುವಿಕೆಯಲ್ಲಿ ಬರೆದ ಕನಸಿನ ಕಥೆಯನ್ನು ವಿವರಿಸಿದರು.

ಈ ಎಲ್ಲ ದಿಗ್ಗಜರ ನಡುವೆ ಮಿಂಚಿದವರು ಖುದ್ದು ದ.ರಾ.ಬೇಂದ್ರೆ. ಅವರೇ ಹಾಡಿದ ಹಾಡು, ಭಾಷಣ, ಕವಿವಾಣಿ ಬಿತ್ತರಗೊಂಡು ರಂಜಿಸಿದವು. ಬೇಂದ್ರೆಯವರ 50ಕ್ಕೂ ಹೆಚ್ಚು ಅಪರೂಪದ ಭಾವಚಿತ್ರ, ರೇಖಾಚಿತ್ರಗಳು ಪ್ರದರ್ಶನಗೊಂಡವು. ಕೊನೆಯಲ್ಲಿ 19ನಿಮಿಷದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.

(ಸ್ನೇಹ ಸೇತು : ವಿಜಯ ಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+