ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಪ್ರಶಸ್ತಿಗಳು ಬೇಕಿಲ್ಲ - ಶಾಂತರಸ

By Staff
|
Google Oneindia Kannada News
  • ಸಂದರ್ಶನ : ಕೆ.ರಾಜಕುಮಾರ್‌
ಸಾಹಿತ್ಯ ಸಮ್ಮೇಳನವನ್ನು ಜಾತ್ರೆ-ಪರಿಷೆ ಎಂದು ಬುದ್ಧಿಜೀವಿಗಳು, ಮಾಧ್ಯಮಗಳು ಟೀಕಿಸುತ್ತವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಾಹಿತ್ಯ ಸಮ್ಮೇಳನ ಜಾತ್ರೆಯೂ ಹೌದು, ಸಾಹಿತ್ಯ ಸಮಾರಾಧನೆಯೂ ಹೌದು. ಸಾಹಿತ್ಯದ ನೆಪದಲ್ಲಿ ಹೆಚ್ಚು ಜನ ಒಂದೆಡೆ ಸೇರುವುದನ್ನು ನೇತ್ಯಾತ್ಮಕವಾಗಿ ತೆಗೆದುಕೊಳ್ಳಬಾರದು. ಅದನ್ನು ಇತ್ಯಾತ್ಮಕವಾಗಿ ತೆಗೆದುಕೊಳ್ಳುವ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು. ವರ್ಷಕ್ಕೊಮ್ಮೆ ಕರ್ನಾಟಕದ ಎಲ್ಲ ಭಾಗಗಳ ಜನ ಒಂದೆಡೆ ಸೇರಿದಾಗ ಕರ್ನಾಟಕ ಅಖಂಡವಾಗಿ ಉಳಿಯಲು ನೆರವಾಗುತ್ತದೆ. ಈ ಭೇಟಿಯಿಂದಾಗಿ ಅಂತಃಕರಣ ಬೆಳೆಯುತ್ತದೆ. ಕನ್ನಡಿಗರ ನಡುವೆ ಪರಸ್ಪರ ಪ್ರೀತಿ- ಅಭಿಮಾನ ವೃದ್ಧಿಸುತ್ತದೆ. ಇಂತಹ ಸಮ್ಮೇಳನಗಳ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.

ಬೀದರ್‌ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ನೀವು ಮುಖ್ಯವಾಗಿ ಯಾವ ವಿಚಾರಗಳಿಗೆ ಒತ್ತು ಕೊಡುವಿರಿ?

Shantarasa, President, Kannada Sahitya Sammelanaಕನ್ನಡ ಎಂದರೆ ಬದುಕು. ಕನ್ನಡ ಉಳಿದರೆ ಬದುಕು ಉಳಿಯುತ್ತದೆ. ಹಾಗಾಗಿ ಕನ್ನಡವನ್ನು ಬಳಸುವ, ಉಳಿಸುವ ಕಡೆಗೆ ನಾವು ಗಮನ ಹರಿಸಬೇಕಾಗಿದೆ. ನನ್ನ ಭಾಷಣದಲ್ಲಿ ಸ್ತ್ರೀ ಭ್ರೂಣ ಹತ್ಯೆಯನ್ನು ವಿರೋಧಿಸಿ ಮಾತನಾಡುತ್ತೇನೆ. ಕರ್ನಾಟಕದ ನೆಲ-ಜಲ-ಗಡಿ ಮತ್ತು ಬೀದರ್‌ನ ಸಾಂಸ್ಕೃತಿಕ ಮಹತ್ವದ ಬಗೆಗೆ ಪ್ರಸ್ತಾಪಿಸುತ್ತೇನೆ. ಯುವ ಜನಾಂಗದಲ್ಲಿ ಮೌಲ್ಯಗಳ ಕುರಿತು ಕಾಳಜಿ ಇಲ್ಲ. ನಮ್ಮ ನಾಯಕರಿಗಿಂತ ಸಾಮಾನ್ಯ ಜನರೇ ಆದರ್ಶಪ್ರಾಯರಾಗಿದ್ದಾರೆ. ಇಂದು ಎಲ್ಲರೂ ಹಣದ, ಅಧಿಕಾರದ ಹಿಂದೆ ಓಡುತ್ತಿದ್ದಾರೆ. ನಮ್ಮ ಹಳ್ಳಿಗಳು ಸುಧಾರಿಸಬೇಕು. ಇಂದು ವಿಕೇಂದ್ರಿಕರಣದ ನೆಪದಲ್ಲಿ ಸ್ವಕೇಂದ್ರೀಕರಣ ಆಗುತ್ತಿದೆ.

ನೀವು ಪ್ರಖರ ವೈಚಾರಿಕ ಪ್ರಜ್ಞೆಯುಳ್ಳವರು, ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಯಾರು?

ನಾನು ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದೆ. ಆಗ ಕನ್ನಡ ಶಿಕ್ಷಕರಾದ ಸೂಗವೀರಶರ್ಮ ಅವರು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದರು. ಅವರು ಸ್ವಾಭಿಮಾನಿಯಾಗಿದ್ದರು. ಅವರ ಈ ಗುಣದಿಂದ ನಾನು ಬಹಳ ಪ್ರಭಾವಿತನಾದೆ. ಅಂತೆಯೇ ಮಾನ್ವಿ ನರಸಿಂಗರಾಯರು, ಭಾಲ್ಕಿಯ ಚನ್ನಬಸವ ಪಟ್ಟದೇವರು ನನ್ನ ಮೇಲೆ ಪ್ರಭಾವ ಬೀರಿದರು. ನಮ್ಮ ಮನೆತನದಲ್ಲಿ ಎಲ್ಲರೂ ಸ್ವಾಭಿಮಾನಿಗಳಾಗಿದ್ದರು. ಹಾಗಾಗಿ ಸ್ವಾಭಿಮಾನ ನನ್ನ ರಕ್ತದಲ್ಲೇ ಬಂದಿದೆ. ವೈಚಾರಿಕತೆ ನನ್ನ ವ್ಯಕ್ತಿತ್ವದ ಭಾಗವಾಗಿದೆ.

ಹಿಂದೆ ಕನ್ನಡದ ಬಗೆಗಿನ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಿರಿ. ಸರ್ಕಾರ ಈಗ ನಿಮಗೆ ಈ ಪ್ರಶಸ್ತಿಯನ್ನು ನೀಡಿದರೆ ಸ್ವೀಕರಿಸಲು ಸಮ್ಮತಿಸುವಿರಾ?

ನಾನು ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಲು ಸರ್ಕಾರದ ಕನ್ನಡ ವಿರೋಧಿ ಧೋರಣೆಯೇ ಕಾರಣ. ವಿಧಾನಸೌಧದ ಕನ್ನಡೀಕರಣ, ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಮಹಿಷಿ ವರದಿಯ ಜಾರಿಗಾಗಿ ಒತ್ತಾಯಿಸಿ ನಾನು ಆ ಪ್ರಶಸ್ತಿಯನ್ನು ಪಡೆಯಲು ನಿರಾಕರಿಸಿದ್ದೆ. ಈಗಲೂ ಆ ಎರಡು ಹಕ್ಕೋತ್ತಾಯಗಳು ಈಡೇರಿಲ್ಲ. ಹಾಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಂದೆಯೂ ಸ್ವೀಕರಿಸುವುದಿಲ್ಲ. ಅದು ನನಗೆ ಬೇಡ. ಸರ್ಕಾರ ಕೊಡುವ ನಿವೇಶನವೂ ನನಗೆ ಬೇಕಾಗಿಲ್ಲ. ಕನ್ನಡ ಜಾರಿಯಾದರೆ ಅಷ್ಟೇ ಸಾಕು.

‘ಸಣ್ಣ ಗೌಡಸಾನಿ’ಯಂತಹ ಶ್ರೇಷ್ಠ ಕಾದಂಬರಿಯ ನಂತರ ನೀವು ಮತ್ತೆ ಕಾದಂಬರಿಯನ್ನು ರಚಿಸಲಿಲ್ಲ. ನಿಮ್ಮ ಮುಂದಿನ ಸಾಹಿತ್ಯ ಕೃಷಿಯ ಬಗ್ಗೆ ತಿಳಿಸಿ.

ನಮ್ಮ ಊರಿನಲ್ಲಿ ತತ್ವಪದಗಳನ್ನು ಹಾಡುತ್ತಿದ್ದರು. ನಮ್ಮ ತಂದೆ ಅನುಭಾವಿಯಾಗಿದ್ದರು. ಇಪ್ಪತ್ತೆೈದು ಮೂವತ್ತು ತತ್ವ ಪದಕಾರರ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ತತ್ವಪದಕಾರರ ಆನೇಕ ಕೃತಿಗಳನ್ನು ಪ್ರಕಟಿಸಿದೆ. ಮುಂದೆ ನಾನು ಚಿಕ್ಕಂದಿನ ಜೀವನವನ್ನು ಕುರಿತು ವಿಶಿಷ್ಟ ಆತ್ಮಕಥನವನ್ನು ಬರೆಯುವ ಆಸಕ್ತಿ ಇದೆ. ಅಮೃತಾ ಪ್ರೀತಂ ಅವರ ಏಳು ಕಥೆಗಳ ಅನುವಾದ ‘ಕಾಡಿನ ಬೇರು’ ಕೃತಿ ಸಮ್ಮೇಳನದ ಹೊತ್ತಿಗೆ ಬಿಡುಗಡೆಯಾಗಲಿದೆ. ಸಣ್ಣ ಗೌಡಸಾನಿಯ ಆನಂತರ ಬೇರೆ ಕಾದಂಬರಿಯನ್ನು ಬರೆಯಲಾಗಿಲ್ಲ.

ಉರ್ದು ಭಾಷೆಯ ವಿಶಿಷ್ಟ ಕಾವ್ಯ ಪ್ರಕಾರವಾದ ಗಜಲ್‌ಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದವರು ನೀವು. ಕನ್ನಡದಲ್ಲಿ ಗಜಲ್‌ಗಳ ಕೃಷಿ ಕುರಿತು ಏನು ಹೇಳುವಿರಿ?

ವಾಸ್ತವವಾಗಿ ಗಜಲ್‌ ತನ್ನದೇ ಆದ ಚರಿತ್ರೆಯಿದೆ. ಚೌಕಟ್ಟಿದೆ. ಕನ್ನಡದಲ್ಲಿ ಕೆಟ್ಟ ಪ್ರೇಮಗೀತೆಗಳನ್ನು ಬರೆದು ಗಜಲ್‌ ಎಂದರು. ಇದನ್ನು ಓದಿ ನಾನೇ ಏಕೆ ಗಜಲ್‌ಗಳನ್ನು ಬರೆಯಬಾರದು ಎನಿಸಿತು. 40ಪುಸ್ತಕಗಳನ್ನು ತರಿಸಿ ಎರಡು ವರ್ಷ ಅಭ್ಯಾಸ ಮಾಡಿದೆ. ಗಜಲ್‌ ಪ್ರಾಸ, ವೈಶಿಷ್ಟ್ಯ ಮತ್ತು ಅದರ ವಿಧಿ ವಿಧಾನಗಳನ್ನು ಅರಗಿಸಿಕೊಳ್ಳಲು ಎರಡು ವರ್ಷ ಬೇಕಾಯಿತು. ಕಡೆಗೆ ನನ್ನ ಗಜಲ್‌ಗಳ ಸಂಕಲನವನ್ನು ಪ್ರಕಟಿಸಿದೆ. ಜಂಬಣ್ಣ ಅಮರಚಿಂತ, ಚಿದಾನಂದ ಸಾಲಿ ಅವರು ಒಳ್ಳೆಯ ಗಜಲ್‌ಗಳನ್ನು ಬರೆಯುತ್ತಿದ್ದಾರೆ.

ಕರ್ನಾಟಕ ಏಕೀಕರಣವಾಗಿ 49ವರ್ಷ ಸಂದಿದೆ. ಈ ಅವಧಿಯಲ್ಲಿ ಹೈದರಾಬಾದ್‌ ಕರ್ನಾಟಕದಲ್ಲಿ ಕನ್ನಡೀಕರಣ ಪ್ರಕ್ರಿಯೆ ಪ್ರಗತಿ ಸಾಧಿಸಿದೆಯೇ?

ಕನ್ನಡೀಕರಣ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ನಮ್ಮ ಗಡಿ ಪ್ರದೇಶದಲ್ಲಿ ಕನ್ನಡದ ಪರಿಸ್ಥಿತಿ ಸುಧಾರಿಸಬೇಕು. ಜೊತೆಗೆ ನಮ್ಮ ಗಡಿಯಾಚೆಗಿನ ಪರಿಸ್ಥಿತಿಯೂ ಸುಧಾರಿಸಬೇಕು. ರಾಯಚೂರಿನ ಗಡಿ ಪ್ರದೇಶದಲ್ಲಿನ ಹತ್ತು ಹಲವು ಕನ್ನಡ ಶಾಲೆಗಳು ಮುಚ್ಚಿವೆ. ಬೀದರ್‌ನ ಔರಾದ್‌ ತಾಲೂಕಿನಲ್ಲಿ 154 ಕನ್ನಡ ಶಾಲೆಗಳು ಮುಚ್ಚಿವೆ. ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ಬೋಧಿಸಲು ಮರಾಠಿ ಭಾಷಿಕ ಶಿಕ್ಷಕರನ್ನು ಸರ್ಕಾರ ನೇಮಿಸುತ್ತಿದೆ! ಮರಾಠಿಗರು ಸರ್ಕಾರದ ಮೇಲೆ ಒತ್ತಡ ಹೇರಿ ಕನ್ನಡವನ್ನು ಕೊಲ್ಲುವ ಕೆಲಸದಲ್ಲಿ ನಿರತರಾಗಿದ್ದಾರೆ. ಸರ್ಕಾರ ಕಣ್ಣು ತೆರೆಯಬೇಕಾಗಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಕಲ್ಪುರ್ಗಿ ಕರ್ನಾಟಕ ಎಂದು ಕರೆಯಲು ಸರ್ಕಾರ ಯೋಚಿಸುತ್ತಿದೆ. ಈ ಬದಲಾವಣೆಗೆ ನಿಮ್ಮ ಸಮ್ಮತಿ ಇದೆಯೇ?

ಕಲ್ಬುರ್ಗಿ ಕರ್ನಾಟಕ ಎಂದು ಕರೆಯಲು ನನ್ನ ಸ್ಪಷ್ಟ ವಿರೋಧವಿದೆ. ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಂಶೋಧಕ ಚಿದಾನಂದಮೂರ್ತಿಯವರು ಸಹ ಕಲ್ಯಾಣ ಕರ್ನಾಟಕ ಹೆಸರು ಸೂಕ್ತ ಎಂದು ಅಬಿಪ್ರಾಯಪಟ್ಟಿದ್ದಾರೆ. ಕಲ್ಪುರ್ಗಿ ಕರ್ನಾಟಕ ಎಂಬ ಹೆಸರಿಗೆ ಇತಿಹಾಸ ಇಲ್ಲ. ಅರ್ಥ ಇಲ್ಲ. ಸರ್ಕಾರ ಕಲ್ಪುರ್ಗಿ ಕರ್ನಾಟಕ ಎಂದು ಕರೆದರೆ ಹೋರಾಟ ಮಾಡುತ್ತೇವೆ. ಮುಂಬೈ ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಕರೆಯಬೇಕು. ಸುವರ್ಣ ಕರ್ನಾಟಕ ವರ್ಷಾಚರಣೆಯ ಸಂದರ್ಭದಲ್ಲಿ ಈ ಬದಲಾವಣೆ ಜಾರಿಗೆ ಬರಬೇಕು.

ಬೆಳಗಾವಿ ಮಹಾನಗರಪಾಲಿಕೆಯ ಆಗಿನ ಮೇಯರ್‌ ಮುಖಕ್ಕೆ ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆಯ ಕ್ರಮವನ್ನು ನೀವು ಬೆಂಬಲಿಸುವಿರಾ?

ಮಸಿ ಬಳಿದದ್ದು ತಪ್ಪು. ಇದನ್ನು ನಾನು ಒಪ್ಪುವುದಿಲ್ಲ. ಆದರೆ ಇದರ ಹಿಂದಿನ ಭಾವನೆಯನ್ನು ಮೆಚ್ಚುತ್ತೇನೆ. ಹಿಂದೆ ಮೂರು ಸಲ ಬೆಳಗಾವಿ ಮಹಾನಗರಪಾಲಿಕೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಿರ್ಣಯ ಕೈಗೊಂಡಿತ್ತು. ಆಗ ಸರ್ಕಾರ ಮಹಾನಗರ ಪಾಲಿಕೆಯನ್ನು ವಜಾ ಮಾಡದೆ ಅಲಕ್ಷ್ಯ ಮಾಡಿತ್ತು. ಆಗ ಕನ್ನಡಿಗರಲ್ಲಿ ಎಚ್ಚರ ಇರಲಿಲ್ಲ ಮಸಿ ಪ್ರಕರಣದಿಂದ ಕನ್ನಡಿಗರಲ್ಲಿ ಜಾಗೃತಿ ಮೂಡಿತು. ಇದರಿಂದಾಗಿ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ವಜಾ ಮಾಡಿತು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟಕ್ಕೆ ನಿಮ್ಮ ಬೆಂಬಲವಿದೆಯೇ?

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯಾಗುವ ಎಲ್ಲ ಅರ್ಹತೆಗಳೂ ಇವೆ. ರಾಜಕೀಯ ಒತ್ತಡದಿಂದಾಗಿ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭ್ಯವಾಯಿತು. ಕನ್ನಡಕ್ಕೂ ಇದು ದಕ್ಕಬೇಕು. ಡಾ.ದೇಜಗೌ ನೇತೃತ್ವದ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಬಾರದು.

ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೆ?

ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ನನ್ನ ವಿರೋಧವಿದೆ. ಶಾಲೆಗಳಲ್ಲಿ ಮೊದಲು ಎರಡು ವರ್ಷಗಳ ಕಾಲ ಮಾತೃಭಾಷೆಯನ್ನು ಹೊರತುಪಡಿಸಿ ಬೇರೇನನ್ನೂ ಬೋಧಿಸಬಾರದು. ಮೂರನೆಯ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್‌ ಇರಲಿ. ಕನ್ನಡದ ವಿಚಾರದಲ್ಲಿ ಜಾತಿಯ ಪ್ರಶ್ನೆ ತಂದಿದ್ದಾರೆ. ಇದು ವಿಷಾದಕರ. ನಮ್ಮಲ್ಲಿ ಇಂಗ್ಲಿಷ್‌ ಕಲಿತ ದಲಿತರು ಎಷ್ಟು ಜನ ಇದ್ದಾರೆ? ಇರುವ 50000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಕಲಿಸುವ ಶಿಕ್ಷಕರು ಇದ್ದಾರಾ? ಕನ್ನಡ ಶಾಲೆಗಳಲ್ಲೇ ಕನ್ನಡ ಶಿಕ್ಷಕರಿಲ್ಲ. ಸರ್ಕಾರ ಮೊದಲು ಕನ್ನಡ ಶಾಲೆಗಳನ್ನು ಉದ್ಧಾರ ಮಾಡಲಿ. ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಮಾಧ್ಯಮ ಕಡ್ಡಾಯವಾಗಲಿ.

(ಸೌಜನ್ಯ : ಕನ್ನಡನುಡಿ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X