• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸ್ತ್ರೀಯ ಭಾಷೆ : ಅರಿವು ಮತ್ತು ಎಚ್ಚರ

By Staff
|

ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದುಕೊಳ್ಳಲು ನಡೆಸಿರುವ ಪ್ರಯತ್ನ-ಹೋರಾಟಗಳನ್ನು ಕನ್ನಡದಲ್ಲಿ ಅತ್ಯಾಧುನಿಕ ಚಿಂತನೆ-ತಿಳಿವಳಿಕೆಗಳನ್ನು ರೂಪಿಸಿಕೊಳ್ಳಲು ಬಳಸಿಕೊಂಡರೆ ತುಂಬಾ ಸೂಕ್ತವೆಂದು ಕಾಣುತ್ತದೆ. ಕನ್ನಡ ಭಾಷೆಯ ಇವತ್ತಿನ ಅಗತ್ಯತೆಗಳಿಗೆ ಮತ್ತು ಸವಾಲುಗಳಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಕನ್ನಡದ ಅಸ್ತಿತ್ವವನ್ನು ಗಟ್ಟಿಗೊಳಿಸಬಹುದು.

  • ಮೇಟಿ ಮಲ್ಲಿಕಾರ್ಜುನ

ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

meti.mallikarjun@gmail.com

Meti Mallikarjunಭಾಷೆ ಯಾಕೆ ಯಾವಾಗಲೂ ಒಂದು ಸಮಸ್ಯೆಯಾಗುತ್ತದೆ ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ಸಿಗಲಾರದು ಎಂಬ ಅಂಶ ನಿಚ್ಚಳವಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಮೂಲಭೂತವಾದಿಗಳು ಭಾಷೆಯನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂದುಕೊಂಡು ಅದನ್ನು ಗುತ್ತಿಗೆ ಹಿಡಿದ ಕಂಟ್ರಾಕ್ಟರುಗಳ ಹಾಗೆ ವರ್ತಿಸುವುದು ಇದಕ್ಕೆ ಸಾಕ್ಷಿಯಾಗಿದೆ.

ಚರಿತ್ರೆಯುದ್ದಕ್ಕೂ ಭಾಷೆಯ ಸ್ಥಿತಿ-ಗತಿಯನ್ನು ನೋಡುತ್ತಾ ಹೋದರೆ ಅದು ಕೆಲವೇ ಜನರ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅಂದರೆ ಯಾವುದೇ ಒಂದು ಪಂಡಿತ ವರ್ಗ ಅಥವಾ ಧರ್ಮದ ಜನರ ಯಜಮಾನ್ಯ-ಪ್ರಾಬಲ್ಯಗಳಿಂದ ಭಾಷಿಕ ಒಲವು ಮತ್ತು ಧೋರಣೆಗಳು ನಿರ್ಧಾರವಾಗುತ್ತವೆ. ಈ ಕಾರಣಗಳಿಂದ ಭಾಷೆಗೆ ಆಪತ್ತುಗಳು ಎದುರಾಗುತ್ತವೆ. ಯಾವ ಭಾಷೆಯೂ ಶ್ರೇಷ್ಠವೂ ಅಲ್ಲ ಕನಿಷ್ಠವೂ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆಯೂ ನಮ್ಮಲ್ಲಿಲ್ಲ.

ಈ ಬಿಕ್ಕಟ್ಟುಗಳ ನಡುವೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬೇಕೆಂಬ ಹೊಸ ರಾಜಕಾರಣ ಎರಡು ವರ್ಷಗಳಿಂದ ಆರಂಭವಾಗಿದೆ. ಇದಕ್ಕೆ ಪ್ರೇರಣೆ ದೊರೆತದ್ದು ತಮಿಳಿಗೆ ಈ ಪಟ್ಟ ದಕ್ಕಿದ ಕಾರಣದಿಂದ. ತಮಿಳಿಗೆ ಈ ಮನ್ನಣೆ ಸಿಗುವ ಮುಂಚೆ ಈ ಯೋಚನೆ ಯಾರಿಗೂ ಹೊಳೆದಿರಲು ಸಾಧ್ಯವಿಲ್ಲ. ಭಾರತದಂಥ ಬಹುಭಾಷಾ ದೇಶದಲ್ಲಿ ಕೆಲವೇ ಭಾಷೆಗಳಿಗೆ ವಿಶೇಷ ಮಾನ್ಯತೆ-ಸವಲತ್ತುಗಳು ಸಿಗುವುದು ಎಷ್ಟು ಸೂಕ್ತ?

ಭಾರತದಲ್ಲಿ ಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ. ಅದರಲ್ಲಿ ಕೇವಲ ಇಪ್ಪತ್ತೆರಡು ಭಾಷೆಗಳು ಮಾತ್ರ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಗುರುತಿಸಲ್ಪಟ್ಟು ‘ಆಧುನಿಕ ರಾಷ್ಟ್ರೀಯ ಭಾಷೆಗಳಾಗಿ’ ಮಾನ್ಯತೆ ಪಡೆದುಕೊಂಡಿವೆ. ಉಳಿದ ಹಲವು ಭಾಷೆಗಳು ಅವಸಾನದ ಅಂಚಿನಲ್ಲಿವೆ ಎಂಬ ಕೂಗು ಕೇಳಿ ಬರುತ್ತಿದೆ. ಹೀಗಿದ್ದರೂ ನಮ್ಮ ಪಂಡಿತ ವರ್ಗ ಈ ಭಾಷೆಗಳ ಅಳಿವು ಉಳಿವಿನ ಬಗ್ಗೆ ಯೋಚಿಸಿಲ್ಲ. ಬದಲಾಗಿ ತಮ್ಮ ಭಾಷೆಯೇ ಶ್ರೇಷ್ಠ, ಅದಕ್ಕೆ ಅಪಾರ ಸಾಹಿತ್ಯ-ವ್ಯಾಕರಣ ಪರಂಪರೆ ಇದೆ ಎನ್ನುತ್ತ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬೇಕೆಂಬ ಸರಳ ನಿರ್ಧಾರಗಳನ್ನು ಮುಂದಿಟ್ಟಿದ್ದಾರೆ. ಇದರ ಪರಿಣಾಮವೇನೆಂಬ ಅರಿವಿಲ್ಲದೆ ಅವರು ಇಂಥ ಪಕ್ಕಾ ರಾಜಕಾರಣಕ್ಕೆ ಇಳಿದಿದ್ದಾರೆ.ಇದಕ್ಕೆ ಸಂವಿಧಾನದ ಕುಮ್ಮಕ್ಕು ಸಿಕ್ಕಿರುವುದು ಚಾರಿತ್ರಿಕ ವಿಪರ್ಯಾಸವೇ ಸರಿ. ಹಾಗಾಗಿಯೇ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಒಂದು ಭಾಷೆಗೆ ವಿಶೇಷ ಗೌರವ ಸಿಗುವ ಬಗ್ಗೆ ತಕರಾರುಗಳೆದ್ದಿವೆ.

ತಮಿಳರಿಂದ ಪ್ರಾರಂಭ : ಈ ಬೇಡಿಕೆ ಶುರುವಾದದ್ದು ಸುಮಾರು 150 ವರ್ಷಗಳಿಗಿಂತ ಮುಂಚೆ. ಇದಕ್ಕೆ ಮುಖ್ಯ ಕಾರಣ ವಸಾಹತುಶಾಹಿ ಸಂದರ್ಭದಲ್ಲಿ ಸಂಸ್ಕೃತ,ಪರ್ಶಿಯನ್‌,ಮತ್ತು ಅರೇಬಿಕ್‌ ಭಾಷೆಗಳಿಗೆ ವಿಶೇಷ ಸವಲತ್ತು ನೀಡಿದ್ದೇ ಆಗಿದೆ. ತಮಿಳು ಭಾಷೆ-ಪರಂಪರೆಯ ಬಗ್ಗೆ ಅಭಿಮಾನವಿಟ್ಟುಕೊಂಡ ವಿದ್ವಾಂಸರು ತಮ್ಮ ಭಾಷೆಗೆ ಈ ಮನ್ನಣೆ ಬೇಕೆಂಬ ಬೇಡಿಕೆಯನ್ನು ಒಡ್ಡುತ್ತಾ ಬಂದರು. ಜೊತೆಗೆ ಆ ಭಾಷಿಕರು ತಮ್ಮ ಭಾಷೆಗೆ ಈ ಎಲ್ಲಾ ಅರ್ಹತೆಯಿದೆ ಎಂಬ ಅರ್ಹತಾ ಪಟ್ಟಿಯನ್ನು ಕೊಡಲು ಮರೆಯಲಿಲ್ಲ.

ಅವರು ತಮಿಳಿಗೆ ಸ್ವತಂತ್ರ ವ್ಯಾಕರಣ,ಲಿಪಿ,ಅಭಿಜಾತ ಸಾಹಿತ್ಯ ಪರಂಪರೆ,ಛಿದ್ರವಿರದ ಇತಿಹಾಸವಿದೆ. ಎಲ್ಲಕ್ಕಿಂತ ಹೆಚ್ಚಾಗಿ 2000 ವರ್ಷಗಳಿಂದ ಜನಸಾಮಾನ್ಯರ ಆಡುಭಾಷೆಯಾಗಿದೆ ಎಂಬ ವಾದವನ್ನು ಮುಂದಿಟ್ಟರು. ಭಾಷೆಗೆ ನಿರ್ದಿಷ್ಟ ಚೌಕಟ್ಟು ಹಾಕಿ ಅದರ ಅರ್ಹತೆಯನ್ನು ನಿರ್ಧರಿಸುವ ಕ್ರಮ ಸಂಕುಚಿತ ಹಾಗೂ ಅಪಾಯಕಾರಿಯೆಂಬ ಎಚ್ಚರ ಯಾರಿಗೂ ಮೂಡಲಿಲ್ಲ. ಒಂದು ಭಾಷೆಗೆ ಕ್ಲಾಸಿಕಲ್‌ ಸ್ಥಾನ ನೀಡುವ ಮೂಲಕ ಇತರ ಭಾಷೆ/ಸಂಸ್ಕೃತಿಗೆ ಅವಮಾನ ಮಾಡಿದಂತಾಗುತ್ತದೆ ಎಂಬ ಅರಿವು ಇಲ್ಲದಾಯಿತು. ಇಂಥ ರಾಜಕಾರಣಕ್ಕೆ ಧಿಕ್ಕಾರ! ಆದರೆ ಈ ರಾಜಕಾರಣಿಗಳಿಗೆ ಇಂಥ ಸಾಂಸ್ಕೃತಿಕ ಸೂಕ್ಷ್ಮಗಳ ಬಗ್ಗೆ ಅರಿವು ಮೂಡಿಸುವ ಜರೂರತ್ತು ಇದೆಯೆಂಬುದನ್ನು ನಮ್ಮ ಪಂಡಿತ ವರ್ಗ ಮರೆಯಿತು. ತಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಬೇಕೆಂಬ ತಮಿಳರ ಬೇಡಿಕೆ ಹಿಂದಿಗೆ ಸಿಕ್ಕಿರುವ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಪಕ್ಕಾ ರಾಜಕಾರಣವೆಂಬುದು ಅವರಿಗೆ ಅರ್ಥವಾಗಲಿಲ್ಲ.

ನಿಜ, ತಮಿಳಿಗೆ ಈ ಸ್ಥಾನಮಾನ ಪಡೆಯಲು ಎಲ್ಲ ಅರ್ಹತೆಗಳು ಇವೆ(ಕೇಂದ್ರ ಸರ್ಕಾರ ನಿರ್ಧರಿಸಿ ಪಟ್ಟಿ ಮಾಡಿದಂತೆ). ಅದಕ್ಕೆ ಕ್ರಿಸ್ತಪೂರ್ವದ ಅಭಿಜಾತ ಸಾಹಿತ್ಯಕ-ಸಾಂಸ್ಕೃತಿಕ ಪರಂಪರೆ, ವ್ಯಾಕರಣ, ಸಾಹಿತ್ಯ ಪ್ರಕಾರಗಳಲ್ಲಿ ಯಾವುದೇ ಭಾಷೆಯಿಂದ ಎರವಲು ಪಡೆಯದ ಇತಿಹಾಸ ಎಲ್ಲವೂ ಇದೆ. ಪುರುನಾನೂರು,ಅಗನಾನೂರು ಮತ್ತು ತಿರುಕ್ಕುರುಳ್‌ ಎನ್ನುವ ಸಾಹಿತ್ಯ ಪ್ರಕಾರಗಳು ಈ ಭಾಷೆಯಲ್ಲಿವೆ. ಇದಲ್ಲದೆ ಕ್ರಿ.ಪೂ.250ರಲ್ಲಿ ಬರೆದದ್ದೆಂದು ಹೇಳಲಾಗುವ ತೋಲ್ಕಾಪಿಯಮ್‌ ಎಂಬ ಸ್ವತಂತ್ರ ವ್ಯಾಕರಣ ಗ್ರಂಥವಿದೆ. ಸಂಗಮ್‌ ಸಾಹಿತ್ಯವೆಂಬ ಮಾಹಾಸಾಹಿತ್ಯ ಯುಗದಲ್ಲಿ ರಚಿತವಾದ ಪತ್ತುಪಾಟು, ಎಟ್ಟುತೊಗೈ ಮತ್ತು ಪದಿನೆಣ್‌ಕೀಳ್‌ಕಣಕ್‌ ಎಂಬ ವಿಶಿಷ್ಟ ಸಾಹಿತ್ಯ ಪ್ರಕಾರಗಳಿವೆ.

ಈ ಅಂಶಗಳನ್ನು ಅಧಾರವಾಗಿಟ್ಟುಕೊಂಡು ಒಂದು ಭಾಷೆಗೆ ಶಾಸ್ತ್ರೀಯ ಪಟ್ಟವನ್ನು ನೀಡಬೇಕೆಂಬ ತೀರ್ಮಾನದ ಮೇಲೆ ತಮಿಳಿಗೆ ಶಾಸ್ತ್ರೀಯ ಸ್ಥಾನ ದೊರಕಿದೆ. ಆದರೆ ಈ ಎಲ್ಲಾ ಕಾರಣಗಳಿಂದ ಒಂದು ಭಾಷೆ ಹೇಗೆ ಕ್ಲಾಸಿಕಲ್‌ ಭಾಷೆಯಾಗುತ್ತದೆ ಎಂಬುದೇ ಒಂದು ಪ್ರಶ್ನೆ. ಅದಕ್ಕಾಗಿ ಭಾಷಾವಿಜ್ಙಾನಿಗಳು -ತತ್ವಜ್ಞಾನಿಗಳಲ್ಲಿ ಕ್ಲಾಸಿಕಲ್‌ ಭಾಷೆ ಎಂದರೆ ಮೃತ ಭಾಷೆ, ಅದಕ್ಕೆ ಅದರದೇ ಆದ ಜನಸಮೂಹವಿರುವುದಿಲ್ಲವೆಂಬ ಅಭಿಮತವಿದೆ. ಒಂದು ಭಾಷೆಗೆ ಜೀವ ಬರುವುದು ಅದು ಜನಸಾಮಾನ್ಯರ ಮಾತು ಅಥವಾ ಭಾಷೆಯಾದಾಗ ಮಾತ್ರ.

ಒಂದು ಚೈತನ್ಯಶೀಲವಾದ ಭಾಷೆ ಕ್ಲಾಸಿಕಲ್‌ ಭಾಷೆಯಲ್ಲವೆಂಬುದೇ ವಾಸ್ತವ. ಹಾಗಾಗಿ ಎನ್‌.ಡಿ.ಎ ಸರಕಾರದಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಡಾ।।ಮುರಳಿ ಮನೋಹರ ಜೋಷಿಯವರು ಜೀವಂತ ಭಾಷೆಯನ್ನು ಹೇಗೆ ಕ್ಲಾಸಿಕಲ್‌ ಭಾಷೆಯೆಂದು ಘೋಷಣೆ ಮಾಡುವುದು ಹೇಗೆ ಎಂದಿದ್ದರು. ಕ್ಲಾಸಿಕಲ್‌ ಭಾಷೆಗೆ ಅದರದೆ ಆದ ಜನಸಮೂಹವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಅದಕ್ಕಾಗಿ ಬುದ್ದಿವಂತ ತಮಿಳರು ಚೀನಾ ಗಣರಾಜ್ಯದ ಉದಾಹರಣೆಯನ್ನು ಮುಂದೊಡ್ಡಿದ್ದಾರೆ. ಅಂದರೆ ಕ್ಲಾಸಿಕಲ್‌ ಚೈನೀಸ್‌ ಮತ್ತು ವರ್ನಾಕ್ಯುಲರ್‌ ಚೈನೀಸ್‌ ಎಂಬ ವರ್ಗೀಕರಣದ ಪ್ರಕಾರ ಕ್ಲಾಸಿಕಲ್‌ ತಮಿಳು (ಚೆಮ್ಮುಳಿ ) ಮತ್ತು ವರ್ನಾಕ್ಯುಲರ್‌ ತಮಿಳು ಎಂಬ ವರ್ಗೀಕರಣದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಭಗವದ್ಗೀತೆಯ ಹಾಗೆ ತಿರಕ್ಕುರಳಿನಲ್ಲಿಯೂ ಭಾರತದ ಜನ ಸಾಮಾನ್ಯರ ಸಂಸ್ಕೃತಿ ಪರಂಪರೆ ಇದೆ

(ಭಗವದ್ಗೀತದಲ್ಲಿ ಎಷ್ಟರ ಮಟ್ಟಿಗೆ ಜನಸಾಮಾನ್ಯರ ಸಂಸ್ಕೃತಿ ಪರಂಪರೆಯ ಉಲ್ಲೇಖಗಳಿವೆ ಎಂಬುದೇ ಒಂದು ಸಂದೇಹದ ಪ್ರಶ್ನೆ) ಎಂದು ತೀರ್ಮಾನಿಸಿರುವುದು ಇನ್ನೊಂದು ಪ್ರಮುಖ ಕಾರಣ. ಒಂದು ಕಾಲಘಟ್ಟದಲ್ಲಿ ಒಟ್ಟೊಟ್ಟಿಗೆ ಜೀವನ ಮಾಡುವ ವಿವಿಧ ಸಂಸ್ಕೃತಿ-ಭಾಷಿಕ ಸಮುದಾಯಗಳ ಮೇಲೆ ಪರಸ್ಪರ ಪ್ರಭಾವ ಪ್ರೇರಣೆ ಆಗುವುದು ಸಹಜ. ಜೊತೆಗೆ ಒಂದು ಪರಂಪರೆಗೆ ಹಲವು ಧರ್ಮ, ಭಾಷೆ, ಮತ್ತು ವ್ಯಕ್ತಿಗಳ ಕೊಡುಗೆ ಅಪಾರವಾಗಿರುವುದು ಎಲ್ಲಾ ಭಾಷೆಗಳ ಸಂದರ್ಭದಲ್ಲಿಯೂ ಸತ್ಯ ಎಂಬ ಅರಿವು ಪ್ರತಿಯಾಬ್ಬ ಭಾಷಿಕನಿಗಿರಬೇಕಾರುವುದು ಅಗತ್ಯವಾಗಿದೆ.

ಎಷ್ಟು ಪ್ರಸ್ತುತ? : ಸ್ವತಂತ್ರ್ಯ ಭಾರತದಲ್ಲಿ ಭಾಷಾನೀತಿ ಮತ್ತು ಯೋಜನೆಯನ್ನು ಕುರಿತು ತಾರತಮ್ಯ ನಡೆಯುತ್ತಲೇ ಇದೆ.ಇದಕ್ಕೆ ಸಂಬಂಧಪಟ್ಟ ಭಾಷಿಕರು ಹೊಣೆಗಾರರಾಗದೆ ಇರಲಾರರು. ತಮಿಳಿಗೆ ಶಾಸ್ತ್ರೀಯ ಸ್ಥಾನ ಸಲ್ಲದು ಎಂಬ ಸಂದರ್ಭದಲ್ಲಿಯೇ ಕನ್ನಡಕ್ಕೊ, ತೆಲುಗಿಗೊ ಶಾಸ್ತ್ರೀಯ ಸ್ಥಾನ ಮಾನ ಬೇಕು ಎನ್ನುವ ಬೇಡಿಕೆ ಎಷ್ಟು ಪ್ರಸ್ತುತ ಎಂಬ ಸತ್ಯದ ಅರಿವು ಆಗದೆ ಇರುವುದು ವಿಪರ್ಯಾಸವೇ ಸರಿ. ಮೇಲಿನ ಅಂಶಗಳ ಬಗ್ಗೆ ಯೋಚಿಸುವುದಾದರೆ ಶಾಸ್ತ್ರೀಯ ಸ್ಥಾನಮಾನದಂತಹ ವಿಶೇಷ ಮಾನ್ಯತೆಗಳು ಲಿಖಿತ ಭಾಷೆಗಳ ಪರವಾಗಿರುವುದು ಸ್ಪಷ್ಟವಾಗಿದೆ.

ಅಲಿಖಿತ ಭಾಷೆಗಳು ಕೂಡ ಸಾವಿರಾರು ವರ್ಷದಿಂದ ಮೌಖಿಕವಾಗಿ ತಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬ ಎಚ್ಚರ ಇದರ ಪರವಾಗಿರುವವರಿಗೆ ಇಲ್ಲ. ಈ ಪರಂಪರೆಗಳಿಗೆ ಮಾನ್ಯತೆ ನೀಡುವ ಬಗ್ಗೆ ಯಾವ ಪಂಡಿತವರ್ಗವೂ ಯೋಚಿಸಿಲ್ಲ. ಒಂದು ಬಹುಭಾಷಿಕ ಮತ್ತು ಬಹುಸಾಂಸ್ಕೃತಿಕ ಸಂದರ್ಭದಲ್ಲಿ ಯಾವುದೋ ಒಂದು ಭಾಷೆಗೆ ವಿಶೇಷ ಮಾನ್ಯತೆ ನೀಡುವುದು ಅವೈಜ್ಞಾನಿಕವಾದ ತೀರ್ಮಾನವೇ ಸರಿ. ಸಂವಿಧಾನಾತ್ಮಕವಾಗಿ ಎಲ್ಲಾ ಭಾಷೆ, ಜನ, ಧರ್ಮಗಳಿಗೆ ಸಮಾನ ಅವಕಾಶ ಮತ್ತು ನೆರವು ನೀಡುವುದು ಪ್ರಜಾಪ್ರಭುತ್ವದ ಆಶಯವಾಗಿರಬೇಕು.

ಪ್ರಸ್ತ್ತುತ ಸಂದರ್ಭದ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಭಾಷಾನೀತಿ ಮತ್ತು ಯೋಜನೆಯನ್ನು ರೂಪಿಸಬಹುದು.ಇಂದಿನ ಜಾಗತಿಕ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು, ಅದರ ಅಸ್ತಿತ್ವವನ್ನು ಗುರುತಿಸುವ ಪ್ರಯತ್ನ ನಡೆಯಬೇಕಾದ ಜರೂರತ್ತು ಇದೆ. ಇಂಥ ಪ್ರಯತ್ನಗಳ ಮುಖಾಂತರ ಇಂಗ್ಲಿಷ್‌ ಭಾಷೆಯ ಪಾಳೆಗಾರಿಕೆಯನ್ನು ತಡೆಯಬಹುದು . ಹೊಸ ಕಾಲಮಾನದ ಸವಾಲುಗಳನ್ನು ಎದುರಿಸಲು ಕನ್ನಡ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬ ಪ್ರಶ್ನೆ ಯಾಕೆ ನಮ್ಮ ಪಂಡಿತರನ್ನು ಕಾಡುತ್ತಿಲ್ಲ ? ಕೇವಲ ಚಾಲಾಕಿನ ಮಾತುಗಾರಿಕೆಯಿಂದ ರಾಷ್ಟೀಯ ಐಕ್ಯತೆಯ ಹುಸಿ ಘೋಷಣೆಗಳನ್ನು ಕೂಗುವುದಕ್ಕೆ ಇವರ ವಾದ ಸೀಮಿತವಾಗಿದೆ.

ನಮ್ಮ ಆದ್ಯತೆ : ಶಾಸ್ತೀಯ ಭಾಷೆಯ ಸ್ಥಾನಮಾನ ಪಡೆದುಕೊಳ್ಳಲು ನಡೆಸಿರುವ ಪ್ರಯತ್ನ-ಹೋರಾಟಗಳನ್ನು ಕನ್ನಡದಲ್ಲಿ ಅತ್ಯಾಧುನಿಕ ಚಿಂತನೆ-ತಿಳುವಳಿಕೆಗಳನ್ನು ರೂಪಿಸಿಕೊಳ್ಳಲು ಬಳಸಿಕೊಂಡರೆ ತುಂಬಾ ಸೂಕ್ತವೆಂದು ಕಾಣುತ್ತದೆ. ಕನ್ನಡ ಭಾಷೆಯ ಇವತ್ತಿನ ಅಗತ್ಯತೆಗಳಿಗೆ ಮತ್ತು ಸವಾಲುಗಳಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಕನ್ನಡದ ಅಸ್ತಿತ್ವವನ್ನು ಗಟ್ಟಿಗೊಳಿಸಬಹುದು.

ಕಳೆದ ಒಂದುವರೆ ಶತಮಾನದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯ ಭಾಷೆಗಳಾದ ತಮಿಳು, ಬಂಗಾಲಿ ಹಾಗೂ ಹಿಂದಿ ಭಾಷೆಗಳು ತಮ್ಮ ಎಲ್ಲಾ ವಿಶಿಷ್ಟತೆಗಳ ನೇಳಲು-ನೇಸಲುಗಳನ್ನು ವ್ಯಕ್ತಪಡಿಸಬಲ್ಲ ಖಚಿತಾರ್ಥ ಶಬ್ದಕೋಶಗಳನ್ನು ನಿರ್ಮಿಸಿಕೊಂಡಿವೆ. ಅದೇ ರೀತಿ ಕನ್ನಡಕ್ಕೆ ತನ್ನದೇ ಆದ ಸ್ವತಂತ್ರ ವ್ಯಾಕರಣ ( ಸಂಸ್ಕೃತದ ಪ್ರಭಾವವಿಲ್ಲದ) ಪರಂಪರೆಯಿಲ್ಲ.

ಒಂದು ವ್ಯವಸ್ಥಿತವಾದ ಕನ್ನಡದ ಶಬ್ದಕೋಶ (ಕಿಟೆಲ್‌ ಕೋಶವನ್ನು ಹೊರತುಪಡಿಸಿ)ವಿಲ್ಲ. ಆದರೆ ಇತ್ತೀಚೆಗೆ ಡಿ.ಎನ್‌. ಶಂಕರಭಟ್ಟರು ಕನ್ನಡದ್ದೆ ಆದ ವ್ಯಾಕರಣವನ್ನು ಕುರಿತು ಹಲವು ಪುಸ್ತಕಗಳನ್ನು ಹೊರತಂದಿರುವುದು ಸಮಾಧಾನಕರ ಸಂಗತಿ. ನಿಜ , ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಆದರೆ ಅಷ್ಟಕ್ಕೆ ಭಾಷೆಯ ಎಲ್ಲಾ ಕಾರ್ಯಗಳು ಸಾಕಾರಗೊಳ್ಳಲಾರವು.

ಒಂದು ಭಾಷೆ ವ್ಯವಸ್ಥಿತ ವಾಗಿ ಎಲ್ಲಾ ಕ್ರಿಯಾತ್ಮಕ ರಂಗಗಳಲ್ಲಿ ಬಳಕೆಗೊಂಡರೆ ಅದರ ಸಾರ್ಥಕತೆ ಮತ್ತು ಚೈತನ್ಯಶೀಲತೆ ಸಾಕಾರವಾಗುತ್ತದೆ. ಹಾಗಾಗಿ ಇಂಗ್ಲಿಷ್‌ ಭಾಷೆಗೆ ಯಾವುದೇ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಅವಶ್ಯಕತೆಯಿಲ್ಲ.್ಲ ಅದರ ಚೈತನ್ಯ ಶೀಲತೆ ಎಲ್ಲ ಕ್ರಿಯಾತ್ಮಕ ರಂಗಗಳಲ್ಲಿ ವ್ಯಕ್ತವಾಗಿರುವುದರಿಂದ ಈ ಭಾಷೆಗೆ ಜಾಗತಿಕವಾಗಿ ಹೆಚ್ಚು ಪ್ರಾಮುಖ್ಯತೆ ದೊರಕಿದೆ. ಅದ್ದರಿಂದ ಒಂದು ಭಾಷೆಯ ಜೀವಂತಿಕೆ ಅದನ್ನು ಬಳಸುವ ಜನರ ಅಗತ್ಯತೆಗಳನ್ನು ಪೂರೈಸುವುದರ ಆಧಾರದ ಮೇಲೆ ನಿಂತಿರುತ್ತದೆಯೇ ಹೊರತು ಅದಕ್ಕೆ ಸಂವಿಧಾನಾತ್ಮಕವಾಗಿ ಸಿಗುವ ವಿಶೇಷ ಸ್ಥಾನಮಾನ ಮತ್ತು ಗೌರವಗಳಿಂದ ಮಾತ್ರ ಅಲ್ಲ ಎಂಬ ಅಂಶವನ್ನು ನಾವು ಮರೆಯುವ ಹಾಗಿಲ್ಲ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X