ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹನೆ ಪರೀಕ್ಷಿಸ ಬೇಡಿ!

By Staff
|
Google Oneindia Kannada News

"I am growing patience in my garden of life. I cant wait to see what fruit it bears."

ನನ್ನ ಸ್ನೇಹಿತ ಹೇಳ್ತಿದ್ದಾ ‘ತಿಪ್ಪಾ ಯಾಕೊ ಏನೊ ಇತ್ತೀಚೆಗೆ ಪೇಷನ್ಸೆ ಇಲ್ಲಾ ಕಣೊ’. ಅಂದರೆ ಪೇಷನ್ಸ್‌ ಇಲ್ಲ, ಇರಬೇಕಾಗಿತ್ತು ಎಂಬುದೆರಡು ಅವನಿಗೆ ಗೊತ್ತಿದೆ ಎಂದಾಯ್ತು.

ಪೇಷನ್ಸ್‌ಗೆ ಸಮಾನ ಅರ್ಥಗಳು ಕನ್ನಡದಲ್ಲಿ ಸಹನೆ, ತಾಳ್ಮೆ, ಸೈರಣೆ. ಸಹನೆ ಇಲ್ಲದೇ ಇರುವುದು ಎಂದರೆ ಏನು ಎಂಬುದು ಮುಖ್ಯ. ನಾವೆಲ್ಲಾ ಕಂಡಿರುವ ಹಾಗೇ ಪೇಷನ್ಸ್‌ ಇಲ್ಲದವರ ನಡವಳಿಕೆಯೆಂದರೆ ಗಾಬರಿ, ವಿನಾಕಾರಣ ಉದ್ವೇಗ , ಆತುರ, ಸುಮ್‌ ಸುಮ್ಮನೆ ಆತಂಕಪಡುವುದು ಇತ್ಯಾದಿ.

ಸಹನಾಶೀಲಳು ಎಂಬ ಅನ್ವರ್ಥ ಹೊಂದಿರುವ ಸ್ತ್ರೀಯರಲ್ಲೂ ಸಹನೆಯ ಕೊರತೆ ಕಂಡುಬರುತ್ತದೆ. ಇದು ಸರ್ವಸಮ್ಮತವಾಗಿ ಎಲ್ಲಾ ವಿಭಾಗದಲ್ಲೂ ವಯಸ್ಸಿನ ವ್ಯತ್ಯಾಸವಿಲ್ಲದೇ ಕಾಡುವ ಸಮಸ್ಯೆ ಎಂದರೆ ತಪ್ಪಾಗಲಾರದು.

ಹಾಗಾದರೆ ಪೇಷನ್ಸ್‌ ಇರಲೇಬೇಕಾ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರವನ್ನು ನನ್ನಲ್ಲಿ ಪೇಷನ್ಸ್‌ ಇಲ್ಲ ಎನ್ನುವವರೇ, ಪೇಷನ್ಸ್‌ ಇರಬೇಕು ಸಾರ್‌ ಎಂದು ಘಂಟಾಘೋಷವಾಗಿ ಹೇಳುತ್ತಾರೆ.

ಇರಲಿ, ಪೇಷನ್ಸ್‌ ಇಲ್ಲದಿರುವುದು ಕಾಯಿಲೆನಾ? ನಿಜವಾಗಿಯೂ ಕಾಯಿಲೆ ಅಲ್ಲ. ವಂಶಪಾರಂಪಾರ್ಯವಾಗಿ ಬರುವ ರೋಗವು ಅಲ್ಲ, ಮತ್ತೆ ಯಾಕೆ ಪೇಷನ್ಸ್‌ ಇಲ್ಲಾ ಎಂಬ ಕೊರಗು? ಆದರೆ ಸಹನೆ ಇಲ್ಲದ ನಮ್ಮ ವರ್ತನೆಯಿಂದ ನಡೆಯುವ ಅವಘಡಗಳು ಮನಸ್ಸಿಗೆ ನೋವು ತರುತ್ತವೆ. ಎದುರಿನವ ಸಂಕಷ್ಟಕ್ಕೆ ಸಿಲುಕುತ್ತಾನೆ.

ಹೌದು, ಅತಿ ಚಿಕ್ಕಚಿಕ್ಕ ವಿಷಯಗಳಿಗೋಸ್ಕರ ಪೇಷನ್ಸ್‌ ಕಳೆದುಕೊಂಡು ಅನಂತರ ಪಶ್ಚಾತ್ತಾಪ ಪಟ್ಟಿರುವವರನ್ನು ನಾವು ನೋಡಿದ್ದೇವೆ. ಆತುರಗಾರನಿಗೆ ಬುದ್ದಿ ಮಟ್ಟ ಎಂಬ ರೀತಿಯಲ್ಲಿ ವರ್ತಿಸಿ, ಸುತ್ತಲಿನವರ ಬಾಯಿಂದ ಈ ಗಾದೆಯನ್ನು ಶೇ.100ರಷ್ಟು ಜನ ಕೇಳಿಸಿಕೊಂಡಿದ್ದಾರೆ. ಪೇಷನ್ಸ್‌ ಇಲ್ಲದೆ ಬಿಪಿ ರೈಸ್‌ ಮಾಡಿಕೊಂಡು ಎಗರಾಡಿ ಒದ್ದಾಡಿಕೊಂಡಿರುವವರನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ.

ಹಾಗೆಯೇ, ಇದರ ಅನುಭವವನ್ನು ನಾವು ದಿನನಿತ್ಯ, ಮುಖ್ಯವಾಗಿ ನಗರ ಸಾರಿಗೆಯಲ್ಲಿ ಪ್ರಯಾಣಿಸುವಾಗ ಕಾಣುತ್ತೇವೆ. ಹಿಂದಿನವರು ಸ್ವಲ್ಪ ಕಾಲು ತುಳಿದರೆ ಅಥವಾ ಮೈ ಮೇಲೆ ಬಿದ್ದರೆ, ನಮ್ಮೆಲ್ಲರ ಪ್ರತಿಕ್ರಿಯೆಗೆ ಆ ವ್ಯಕ್ತಿ ನಿಜವಾಗಿಯೂ ಕಸಿವಿಸಿಗೊಳ್ಳುತ್ತಾನೆ. ಸ್ವಲ್ಪನೂ ವ್ಯವಧಾನವಾಗಿ ಯೋಚಿಸಲು ಹೋಗುವುದಿಲ್ಲ, ಆ ರೀತಿ ಬೇರೆಯವರ ಮೇಲೆ ಮುಗಿ ಬೀಳುತ್ತೇವೆ. ಇಲ್ಲೂ ಸಹ ಸಹನೆಯ ಕಟ್ಟೆ ಚೂರಾಗುತ್ತದೆ.

ಹಿಂದೆ ನಮ್ಮ ಪುರಾಣ ಪುಣ್ಯ ಕತೆಗಳಲ್ಲಿ ಬರುವ ಋಷಿ ಮುನಿಗಳು, ಪಾಮರರ ಮತ್ತು ರಾಜರುಗಳ ತಪ್ಪಿಗೆ ಸಹನೆಯನ್ನು ಮೀರಿ ಶಾಪವನ್ನು ಕೊಟ್ಟು ಬಿಡುತ್ತಿದ್ದರು. ಅನಂತರ ಋಷಿಗಳಿಗೆ ಅವರ ಶಾಪದ ಬಗ್ಗೆ ವಿಷಾದವಾಗಿ, ಶಾಪ ವಿಮೋಚನೆಯನ್ನು ಸಹನೆಯಿಂದ ನೀಡುತ್ತಿದ್ದರು.

ಆದ್ದರಿಂದ, ಇದು ಸರ್ವಸಂಗ ಪರಿತ್ಯಾಗಿಗಳನ್ನೇ ಬಿಟ್ಟಿಲ್ಲವೆಂದರೆ ನಮ್ಮ ನಿಮ್ಮಲ್ಲಿ ಇದನ್ನು ಕಾಣುವುದು ಏನು ಅತಿಶಯವಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಯೋಚಿಸಿ ವರ್ತಿಸುವುದು.

ಕಾಯಿಲೆಯಲ್ಲದಿದ್ದರೂ, ಸಹನೆಯ ಕೊರತೆಯಿಂದ ಅನೇಕ ಅಪಾಯಗಳು ಸಂಭವಿಸುತ್ತವೆ. ನಮ್ಮ ಸುತ್ತಮುತ್ತಲಿನ ಒಬ್ಬರಿಗೆ ಪೇಷನ್ಸ್‌ ಇಲ್ಲವಾದರೆ, ಜಗಳ ತಪ್ಪಿದ್ದಲ್ಲ. ಅನಗತ್ಯ ಕಿರಿಕಿರಿಯೂ ಉಂಟಾಗುತ್ತದೆ.

ಕೆಲವು ಸಲ ಪೇಷನ್ಸ್‌ ಕಳೆದು ಹೋಗಲು, ಎದುರಿನ ವ್ಯಕ್ತಿಯೂ ಕಾರಣವಾಗುತ್ತಾನೆ. ವ್ಯಕ್ತಿ ಗಾಬರಿಯಿಂದ ಅಥವಾ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಸಹನೆ ಕಳೆದುಕೊಳ್ಳುತ್ತಾನೆ. ಒಂದೇ ಒಂದು ನಿಮಿಷ ಸಮಾಧಾನದಿಂದ ಯೋಚಿಸಿದರೆ ಶಾಂತ ಸನ್ನಿವೇಶವನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಹಾಗೆ ಮಾಡುವಷ್ಟ ಸಹನೆ ನಮ್ಮ ಕೈಯಲ್ಲಿರುತ್ತೇನು ಅನ್ನಬಹುದು ನೀವು. ಆದರೆ ನಾವೇ ನಮ್ಮ ಬುದ್ದಿಯ ಕೈಹಿಡಿಯಬೇಕು. ಸ್ವಲ್ಪ ಸಮಾಧಾನದಿಂದ ಸನ್ನಿವೇಶದ ನಾನಾ ಕೋನಗಳನ್ನು ಗಮನಿಸಿ ಮುಂದುವರೆದರೆ, ಪೇಷನ್ಸ್‌ ಇಲ್ಲ ಎಂಬ ಮಾತೇ ಇರುವುದಿಲ್ಲ.

ನನಗೆ ಪೇಷನ್ಸ್‌ ಹೊಯ್ತೇಂದರೆ ನಾನೇನ್‌ ಮಾಡ್ತೀನೋ ನನಗೆ ಗೊತ್ತಿಲ್ಲ ಎಂಬ ಮಾತು ನೀವು ಕೇಳಿರಬಹುದು. ಆತನಿಗೆ ತನ್ನ ಬಗ್ಗೆ ಹೇಳಿಕೊಂಡು, ವ್ಯಕ್ತಿತ್ವಕ್ಕೆ ಮೆರಗು ನೀಡುವ ಆಸೆ. ಅವನಿಗೆ ಸ್ವಲ್ಪನೂ ತಾಳ್ಮೆನೇ ಇಲ್ಲ ಕಣ್ರಿ ಎಂಬ ಪಕ್ಕದ ಮನೆಯ ತಾಯಿಯ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು. ಆ ತಾಯಿಗೆ ತನ್ನ ಮಗನ ಗುಣದ ಬಗ್ಗೆ ಚಿಂತೆ, ಆತಂಕ.

ತಾಳಿದವನು ಬಾಳಿಯಾನು ಎಂಬಂತೆ ತಾಳ್ಮೆಯಿಂದ ಯಾವುದೇ ಕೆಲಸವನ್ನಾಗಲಿ, ಸನ್ನಿವೇಶವನ್ನಾಗಲಿ ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದು. ಸಹನೆಯ ಮೂರ್ತಿಯಾಗದಿದ್ದರೂ ಪರವಾಗಿಲ್ಲ , ಸರಿಯಾಗಿ ಅರಿತು ನಡೆದರೆ ನಮಗೂ, ನಮ್ಮ ಸುತ್ತ ಇರುವವರಿಗೂ ಸಹ ಕ್ಷೇಮ.

ಇದನ್ನೆಲ್ಲಾ ಸಹನೆಯಿಂದ ಓದಿದ್ದಿರೆಂದು ಭಾವಿಸಲಾ?

ಮುಖಪುಟ

/ ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X