ಗದ್ದಲ, ಪ್ರತಿಭಟನೆ ಮಧ್ಯೆಯೇ ಗೌರಿ ಲಂಕೇಶ್ ಭಾಷಣ
ಶಿವಮೊಗ್ಗ : ಎಬಿವಿಪಿ ಪ್ರತಿಭಟನೆಯ ನಡುವೆಯೇ ಕುವೆಂಪು ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ , ಪತ್ರಕರ್ತೆ ಗೌರಿ ಲಂಕೇಶ್ ಶನಿವಾರ ಮಧ್ಯಾಹ್ನ ಪಾಲ್ಗೊಂಡರು.
‘ಸಮೂಹ ಮಾಧ್ಯಮ-ಸಾಮಾಜಿಕ ಜವಾಬ್ದಾರಿ’ ವಿಷಯ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಗೋಷ್ಠಿ ನಡೆಯುತ್ತಿದ್ದ ವೇದಿಕೆಗೆ ನುಗ್ಗಲೆತ್ನಿಸಿದ, ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಗೌರಿ ಮತ್ತು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪಾಟೀಲರ ವಿರುದ್ಧ, ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ನಕ್ಸಲ್ ಪರ ನಿಂತವರಿಗೆ ಸಮ್ಮೇಳನದ ಗೋಷ್ಠಿಯಲ್ಲಿ ಅವಕಾಶ ಕಲ್ಪಿಸಿರುವುದನ್ನು ಖಂಡಿಸಿದರು. ಗೋಷ್ಠಿ ಮುಗಿದ ನಂತರ, ಪ್ರತಿಭಟನೆಯನ್ನು ಕಾರ್ಯಕರ್ತರು ವಾಪಸ್ ಪಡೆದರು.
ಗೌರಿ ಸಿಡಿಮಿಡಿ : ಎಬಿವಿಪಿ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಮ್ಮಕ್ಕು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಸಲ್ಲದು ಎಂದು ಪತ್ರಕರ್ತೆ ಗೌರಿ ಲಂಕೇಶ್, ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಇಂದು ತೆರೆ : ಶನಿವಾರ ಸಂಜೆ 6.30ಕ್ಕೆ 73ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿ ಪಾಲ್ಗೊಳ್ಳುವುದು ಖಚಿತವಾಗಿದೆ. 10 ಅಂಗೀಕಾರಗಳನ್ನು ಅಂಗೀಕರಿಸಲು ಕ.ಸಾ.ಪ. ನಿರ್ಧರಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications