ಗೌರಿ ಲಂಕೇಶ್‌ಗೆ ಚಂಪಾ ಕೋಟೆ : ಯಡಿಯೂರಪ್ಪ ಕಿಡಿ
ಶಿವಮೊಗ್ಗ : ಚಂಪಾರ ರಂಪ, ಸಮ್ಮೇಳನದಲ್ಲಿ ಮುಂದುವರೆದಿದೆ. ಈಗ ಅವರ ಮೊಣಚು ಮಾತಿಗೆ ಗುರಿಯಾದವರು; ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ನಕ್ಸಲ್‌ಪರರಿಗೆ ಗೋಷ್ಠಿಯಲ್ಲಿ ಶನಿವಾರ ಅವಕಾಶ ಕಲ್ಪಿಸಿರುವುದರಿಂದ, ಗಲಾಟೆಗಳಾಗುವ ಸಾಧ್ಯತೆಗಳಿವೆ. ಗೋಷ್ಠಿ ರದ್ದು ಮಾಡಿ ಎಂದು ಯಡಿಯೂರಪ್ಪ ನೀಡಿರುವ ಸಲಹೆಗೆ, ಚಂಪಾ ಸೊಪ್ಪು ಹಾಕಿಲ್ಲ.
ಈ ಬಗ್ಗೆ ಚಂಪಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕ.ಸಾ.ಪ ಸರ್ಕಾರದ ಅಂಗಸಂಸ್ಥೆಯಲ್ಲ. ಸರ್ಕಾರದ ಅನವಶ್ಯಕ ಅಜೆಂಡಾಗಳಿಗೆ ಇಲ್ಲಿ ಆಸ್ಪದವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಹೀಗಾಗಿ ಎಷ್ಟೇ ಒತ್ತಡ ಬಂದರೂ ಶನಿವಾರದ ಗೋಷ್ಠಿ ನಡೆದೇ ತೀರುತ್ತದೆ. ಈ ಗೋಷ್ಠಿಯಲ್ಲಿ ಗೌರಿ ಲಂಕೇಶ್ ಪಾಲ್ಗೊಳ್ಳುತ್ತಾರೆ ಎಂದಿದ್ದಾರೆ.
ಗೋಷ್ಠಿಗೆ ಅಡ್ಡಿ ಪಡಿಸುವ ಮತ್ತು ಪುಂಟಾಟಿಕೆ ನಡೆಸುವವರನ್ನು ಪೊಲೀಸರು ವಿಚಾರಿಸಿಕೊಳ್ಳುತ್ತಾರೆ. ಪರಿಷತ್ ಈವರೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ ಎಂದು ಚಂಪಾ ಅಭಿಪ್ರಾಯಪಟ್ಟಿದ್ದಾರೆ.
ಏನಿದು ಗದ್ದಲ? : ಸಮ್ಮೇಳನದ ಗೋಷ್ಠಿಗಳಲ್ಲಿ ನಕ್ಸಲ್ ಪರ ಮೆದು ಧೋರಣೆ ಹೊಂದಿರುವ ಪತ್ರಕರ್ತೆ ಗೌರಿ ಲಂಕೇಶ್, ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ ಅವರಿಗೆ ಅವಕಾಶ ನೀಡಿರುವುದು ವಿವಾದ ಹುಟ್ಟಿಸಿದೆ. ಈ ಬಗ್ಗೆ ಸಂಘ ಪರಿವಾರ ಮತ್ತು ಬಿಜೆಪಿ ಅಸಮಾಧಾನಗೊಂಡಿದೆ.
ಗುರುವಾರ ವಿಠಲ ಹೆಗಡೆ ಪಾಲ್ಗೊಂಡಿದ್ದ ಗೋಷ್ಠಿಗೆ ಅಡ್ಡಿಪಡಿಸಿದ ಸಂಘ ಪರಿವಾರ ಮತ್ತು ಎಬಿವಿಪಿ ಕಾರ್ಯಕರ್ತರು, ವೇದಿಕೆ ಮೇಲೆ ಗದ್ದಲ ಸೃಷ್ಟಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಶನಿವಾರದ ಗೋಷ್ಠಿಯಲ್ಲಿ ಗೌರಿ ಲಂಕೇಶ್ ಪಾಲ್ಗೊಳ್ಳುತ್ತಿರುವುದು, ವಿವಾದದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೀಗ ಬಂದ ಸುದ್ದಿ : ಗೌರಿ ಲಂಕೇಶ್‌ರ ಗೋಷ್ಠಿ ನಡೆಯಲಿರುವ ಕುವೆಂಪು ವೇದಿಕೆಯ ಬಳಿ ಶನಿವಾರ ಮಧ್ಯಾಹ್ನ ಎಬಿವಿಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಚಂಪಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಗೋಷ್ಠಿ ಮುಂದುವರೆದಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications