• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಷ್ಕರ ಹಾಗೂ ಅದರ ಸಾಧಕ-ಬಾಧಕಗಳು

By Staff
|

ಇಂದು ಬೆಳಗ್ಗೆ ಯಥಾ ಪ್ರಕಾರದಂತೆ ಮಗಳನ್ನು ಅಂಧೇರಿಯ ಟ್ಯೂಷನ್‌ ಕ್ಲಾಸಿಗೆ ಕಳುಹಿಸಲು ನಮ್ಮ ಕ್ವಾರ್ಟರ್ಸಿನ ಎದುರಿಗಿರುವ ಬಸ್‌ ನಿಲ್ದಾಣಕ್ಕೆ ಬಂದೆ. ಅಷ್ಟು ಹೊತ್ತಿಗೆ ಅವಳ ಇನ್ನು ಮೂವರು ಸ್ನೇಹಿತೆಯರೂ ಬಂದು ಅವಳೊಂದಿಗೆ ಸೇರಿಕೊಂಡರು. ಅವರಲ್ಲಿ ಒಬ್ಬ ಹುಡುಗಿ, ‘ಇವತ್ತು ಬಸ್ಸಿಲ್ಲವಂತೆ, ಸಿಬ್ಬಂದಿಯವರ ಅನಿರ್ದಿಷ್ಟ ಕಾಲದ ಮುಷ್ಕರ ಪ್ರಾರಂಭವಾಗಿದೆಯಂತೆ’, ಎಂದಿದ್ದಳು. ಅಲ್ಲಿಯೇ ಇದ್ದ ಒಂದು ಆಟೋವಿನಲ್ಲಿ ಈ ನಾಲ್ಕೂ ಹುಡುಗಿಯರನ್ನು ಸ್ಟೇಷನ್ನಿಗೆ ಕಳುಹಿಸಿದೆನು. ಆಟೋವಿನ ಚಾಲಕನಿಗೆ ಈ ಮುಷ್ಕರದ ಬಗ್ಗೆ ಗೊತ್ತಿರಲಿಲ್ಲ ಎನ್ನಿಸುತ್ತದೆ. ಸ್ವಲ್ಪ ಹೊತ್ತಿಗೆ ಮಗಳು ಮಾಡಿದ ಫೋನಿನಿಂದ ತಿಳಿದದ್ದು, ಅವನು ಸರಿಯಾದ ದರವನ್ನು ತೆಗೆದುಕೊಂಡಿದ್ದನಂತೆ ಹಾಗೆಯೇ ಕಾಲಕ್ಕೆ ಸರಿಯಾಗಿ ಅವಳು ಟ್ಯೂಷನ್‌ ಕ್ಲಾಸಿಗೆ ತಲುಪಿದ್ದಳು.

ಸ್ವಲ್ಪ ಹೊತ್ತಿಗೆ ಮಗನನ್ನು ಹತ್ತಿರದಲ್ಲೇ ಇರುವ ಶಾಲೆಗೆ ಬಿಟ್ಟು, ಬ್ಯಾಂಕಿಗೆ ಹೋಗಲು ಗೋರೆಗಾಂವ್‌ ಸ್ಟೇಷನ್ನಿನ ಕಡೆಗೆ ಹೊರಟೆ. ಎಲ್ಲಿಯೂ ಬಸ್ಸುಗಳ ಸುಳಿವೇ ಇರಲಿಲ್ಲ. ಮುಂಬಯಿಯ ಬಸ್ಸುಗಳ ಸೇವೆಯ ಸಂಸ್ಥೆಯ ಹೆಸರು ಬೆಸ್ಟ್‌ ಎಂದು (ಬಾಂಬೇ ಎಲೆಕ್ಟ್ರಿಕ್‌ ಸರ್ವೀಸ್‌ ಅಂಡ್‌ ಟ್ರಾನ್ಸ್‌ಪೋರ್ಟ್‌). ಸಾಮಾನ್ಯವಾಗಿ ಇವರ ಸೇವೆಯೂ (ವಿದ್ಯುತ್‌ ಮತ್ತು ಸಾರಿಗೆ) ಉತ್ತಮದ್ದು - ಬೆಸ್ಟ್‌. ಹತ್ತಿರ ಬಸ್ಸಿನ ಡಿಪೋವರೆವಿಗೆ ನಡೆದು ಹೋದೆ. ಡಿಪೋವಿನಲ್ಲಿ ದಸರಾ ಗೊಂಬೆಗಳನ್ನು ಜೋಡಿಸಿಟ್ಟಂತೆ ಒಪ್ಪವಾಗಿ ಬಸ್ಸುಗಳು ನಿಂತಿದ್ದವು. ಮುಖ್ಯ ದ್ವಾರಕ್ಕೆ ದೊಡ್ಡ ಬೀಗ ಜಡಿದಿದ್ದರು. ಆಡಳಿತ ಮಂಡಳಿಯ ಕಡೆಯ ಯಾರಾದರೂ ಕೆಲಸಗಾರರು ಕೆಲಸಕ್ಕೆ ಹಾಜರಾದಾರೂ ಎಂಬ ದೃಷ್ಟಿಯಿಂದ ದ್ವಾರದ ಮುಂಭಾಗದಲ್ಲಿ ಕೆಲವು ಜನಗಳು ದೊಣ್ಣೆಗಳನ್ನು ಹಿಡಿದು ನಿಂತಿದ್ದರು. ಅವರ ಅವತಾರ ನೋಡಿದರೇ, ಅವರುಗಳು ದಂಡನಾಯಕರುಗಳೆಂದು ಹೇಳಬಹುದಿತ್ತು.

ಬೆಳಗಿನ ವೃತ್ತಪತ್ರಿಕೆ ಇನ್ನೂ ಬಂದಿರಲಿಲ್ಲ. ಹಾಗಾಗಿ ಅಂದಿನ ಮುಷ್ಕರದ ಬಗ್ಗೆ ಹೆಚ್ಚಿನ ಜನಗಳಿಗೆ ಗೊತ್ತೇ ಇರಲಿಲ್ಲ. ಬೇರೆ ಯಾವುದಾದರೂ ಡಿಪೋವಿನಿಂದ ಬಸ್ಸುಗಳು ಬಂದಾವೆಂಬ ನಿರೀಕ್ಷೆಯಲ್ಲಿ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದರು. ಕಾಯ್ದು ಪ್ರಯೋಜನವಿಲ್ಲವೆಂದು ನಾನು ಒಂದು ಆಟೋವಿನಲ್ಲಿ ಸ್ಟೇಷನ್ನಿಗೆ ಹೊರಟೆ. ಅಲ್ಲಿಯೇ ನಿಂತಿದ್ದ ಇನ್ನಿಬ್ಬರು ನನ್ನೊಂದಿಗೆ ಬಂದರು. ಒಬ್ಬರಂತೂ ಮಾತನಾಡದೇ(ಮಾತನಾಡಿಸಿದರೆ ನಮಗೇ ಕಷ್ಟ - ಇಲ್ಲಿಯ ಹೆಚ್ಚಿನ ಜನಗಳ ಬಾಯಿಯಲ್ಲಿ ಹೊಗೆಸೊಪ್ಪಿನಿಂದ ಕೂಡಿದ ಎಲೆಯಡಿಕೆ ಇರುತ್ತದೆ. ಮಾತನಾಡಿದರೆ ನಮ್ಮ ಮುಂಭಾಗವೆಲ್ಲಾ ಕೆಂಪು ಬಣ್ಣವಾಗುವುದು), ನನ್ನ ಕೈಗೆ 5 ರೂಪಾಯಿ ಇಟ್ಟು, ಸ್ವಲ್ಪ ದೂರ ಪ್ರಯಾಣಿಸಿದ ನಂತರ ಇಳಿದಿದ್ದರು. ನಾನು ಮತ್ತು ಇನ್ನೊಬ್ಬರು ಸ್ಟೇಷನ್ನಿನವರೆವಿಗೆ ಹೋದ ಕೂಡಲೇ ಆ ಇನ್ನೊಬ್ಬರೂ ನನ್ನ ಕೈಗೆ 10 ರೂಪಾಯಿಗಳನ್ನಿತ್ತು, ಟ್ರೆೃನ್‌ ಹಿಡಿಯಲು ಓಡಿದ್ದರು. ಆಟೋ ಚಾಲಕನಿಗೆ ಕೊಡಬೇಕಿದ್ದ ಹಣವನ್ನಿತ್ತು, ದಿನದ ಗಳಿಕೆ ಚೆನ್ನಾಗಿ ಆಗಲಿ ಎಂದು ಹೇಳಿದೆ. ಅದಕ್ಕವನು, ಯಾಕೆ ಸಾರ್‌, ಇಂದೇನು ಸ್ಪೇಷಲ್‌ ಎಂದು ಕೇಳಿದ. ಇಂದು ಬಸ್ಸಿನ ಸಿಬ್ಬಂದಿಗಳ ಮುಷ್ಕರ, ಹೆಚ್ಚಿನ ಜನಗಳು ನಿಮ್ಮನ್ನೇ ನಂಬಿದ್ದಾರೆ ಎನ್ನುತ್ತಿದ್ದಂತೆಯೇ, ಹಾಗಂತ ಮೊದಲೇ ಹೇಳಿದ್ರೆ, ನಾನು ಮೀಟರ್‌ನಂತೆ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಹೆಚ್ಚಿನ ಆದಾಯ ಮಾಡಿಕೊಳ್ಳಬೇಕು, ಎಂದಿದ್ದ. ಒಬ್ಬರ ದೌರ್ಬಲ್ಯವನ್ನು ಉಪಯೋಗಿಸಿಕೊಂಡೇ ಜೀವಿಸಬೇಕೇ? ಇದು ಥರವೇ? ಇದೇ ಸುಲಭದಿ ಹಣ ಮಾಡುವ ದಾರಿ ಎಂದು ತಿಳಿಯುವುದು ಸರಿಯೇ?

ನೋಡಿ ಇದೇ ತರಹ ಇನ್ನೊಂದು ಕಡೆಯೂ ಕಾಣಬಹುದು. ರೈಲ್ವೇ ಹಳಿಗಳ ಪಕ್ಕದಲ್ಲಿ ಗುಡಿಸಲುವಾಸಿಗಳು, (ಅದರಲ್ಲೂ ಹೆಚ್ಚಿನದಾಗಿ ಯುವಕರು) ಬೀಡಿ ಸೇದಿಕೊಂಡು ಕುಳಿತಿರುತ್ತಾರೆ. ಮಾಡಲು ಏನೂ ಕೆಲಸವಿಲ್ಲದೇ ಕಾಲಹರಣ ಮಾಡುತ್ತಿರುತ್ತಾರೆ. ಹತ್ತಿರದಲ್ಲಿ ಎಲ್ಲಿಯಾದರೂ ಯಾರಾದರೂ ದುರಂತಕ್ಕೀಡಾದರೆ(ಓಡುತ್ತಿರುವ ಲೋಕಲ್‌ ಟ್ರೈನ್‌ ಆಕಸ್ಮಿಕಗಳು ಸಾಮಾನ್ಯವಾಗಿ ಕಂಡುಬರುವ ದೃಷ್ಯಗಳು), ಈ ಮಂದಿ ಓಡಿ ಹೋಗಿ, ಅವರನ್ನು ಎತ್ತಿ ಶುಶ್ರೂಷೆ ಮಾಡುವ ಬದಲು, ಆ ವ್ಯಕ್ತಿ ಬದುಕಿದ್ದಾನೋ ಸತ್ತಿದ್ದಾನೋ ಎಂಬುದನ್ನೂ ಗಮನಿಸದೆ, ಜೇಬುಗಳನ್ನು ತಡಕಾಡಿ ಕೈಗೆ ಸಿಕ್ಕಿದುದನ್ನು ಎತ್ತಿಕೊಂಡು ಓಡಿ ಹೋಗುವರು. ಈ ಲೋಕವೇ ಹಾಗೆ, ಒಬ್ಬರು ಇನ್ನೊಬ್ಬರಿಗೆ ಆಹಾರವಾಗುವರು- ಅದು ಮೋಸದಿಂದಲೇ ಇರಬಹುದು ಅಥವಾ ಇನ್ನೊಬ್ಬರ ದೌರ್ಬಲ್ಯವನ್ನು ತಮಗೆ ತಕ್ಕಂತೆ ಸದುಪಯೋಗ ಪಡಿಸಿಕೊಂಡು ಇರಬಹುದು.

ಸ್ಟೇಷನ್ನಿನಲ್ಲಿ ಇಂದು ಎಂದಿನಂತೆ ಜನಸಂದಣಿ ಇರಲಿಲ್ಲ. ಇವತ್ಯಾಕೋ ಲೋಕಲ್‌ ಟ್ರೆೃನ್‌ಗಳು ಮಂಕಾಗಿದ್ದಂತೆ ತೋರಿತು. 6.52ರ ಫಾಸ್ಟ್‌ ಗಾಡಿ ಸಿಕ್ಕಿತ್ತು ಹಾಗೂ ಅದರಲ್ಲಿ ಕುಳಿತುಕೊಳ್ಳಲೂ ಸ್ಥಳ ಸಿಕ್ಕಿತ್ತು. 7.45ರ ಹೊತ್ತಿಗೆ ಚರ್ಚ್‌ಗೇಟ್‌ ತಲುಪಿದ್ದೆ. ಅಲ್ಲಿಯೂ ಒಂದೂ ಬಸ್ಸುಗಳ ಸುಳಿವೇ ಇರಲಿಲ್ಲ. ದಿನ ಕಾಯುತ್ತಾ ನಿಂತಿರುವ ಖಾಲೀ ಟ್ಯಾಕ್ಸಿಗಳು ಇಂದು ಮಾಯವಾಗಿದ್ದವು. ರಸ್ತೆಯಲ್ಲಿ ಬರುವ ಟ್ಯಾಕ್ಸಿಗಳೆಲ್ಲವೂ ಜನಗಳನ್ನು ತುಂಬಿಕೊಂಡೇ ನನ್ನನ್ನು ಅಣಕಿಸುತ್ತಲೇ ಮುಂದಕ್ಕೆ ಹೋಗುತ್ತಿದ್ದವು. ಇನ್ನು ಅಲ್ಲೇ ನಿಂತಿದ್ದರೆ ಕಾಲು ನೋವು ಹೆಚ್ಚಾಗುವುದೇ ಹೊರತು ಬ್ಯಾಂಕಿಗೆ ತಲುಪಲಾಗುವುದಿಲ್ಲವೆಂದು 3 ಕಿಲೋಮೀಟರ್‌ ದೂರದ ಕಫ್‌ ಪೆರೇಡಿಗೆ ನಡೆದೇ ಹೊರಟೆ. ಆಗಲೇ ವಿಪರೀತ ಬಿಸಿಲು ಏರಿತ್ತು. ಕಳೆದ ವರ್ಷದ ಮಳೆಗಾಲದಲ್ಲಿ ರಸ್ತೆಗಳೆಲ್ಲವೂ ಹಾಳಾಗಿದ್ದು, ಈ ಸಲ ಹಾಗಾಗದಂತೆ ನೋಡಿಕೊಳ್ಳಲು ಎಲ್ಲ ಮುಖ್ಯ ರಸ್ತೆಗಳನ್ನೂ ಕಾಂಕ್ರೀಟ್‌ ರಸ್ತೆಗಳನ್ನಾಗಿ ಮಾಡಲು ಅರ್ಧ ಭಾಗವನ್ನು ಮುಚ್ಚಿದ್ದಾರೆ. ಹಾಗಾಗಿ ಉಳಿದ ಅರ್ಧ ರಸ್ತೆಯಲ್ಲೇ ಎರಡು ಮುಖಗಳಲ್ಲಿ ವಾಹನಗಳು ಹೋಗಬೇಕು. ಇದರಿಂದಾಗಿ ಟ್ರಾಫಿಕ್‌ ಜಾಮ್‌ ಆಗುವುದು ಸರ್ವೇ ಸಾಮಾನ್ಯವಾಗಿದೆ. ಪಾದಚಾರಿಗಳ ರಸ್ತೆಯೂ ಜನನಿಬಿಡವಾಗಿರುತ್ತದೆ. ಆ ಉರಿ ಬಿಸಿಲಿನಲ್ಲಿ ಆಗಾಗ ಬೆವರನ್ನು ಒರೆಸಿಕೊಂಡು ನನ್ನ ಎರಡು ಕರ್ಚೀಫುಗಳೂ ತೊಯ್ದು ಹೋಗಿದ್ದವು. ಎಷ್ಟು ಬೇಗ ಬ್ಯಾಂಕು ಸೇರುವೆನೋ, ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಳ್ಳುವೆನೋ ಎನ್ನುವಂತಾಗಿತ್ತು. 35 ನಿಮಿಷಗಳ ನಡಿಗೆಯಲ್ಲಿ ಬ್ಯಾಂಕ್‌ ತಲುಪಿದೆ. ಅಲ್ಲಿ ನೋಡಿದರೆ, ಕಸಗುಡಿಸುವವನೂ ಬಾರದೇ ನಿನ್ನೆಯ ಕಸವೆಲ್ಲ ಅಲ್ಲಲ್ಲಿಯೇ ಬಿದ್ದಿತ್ತು. ವಿದ್ಯುತ್‌ ಕಡಿತ ಇರುವ ಕಾರಣ ಹವಾನಿಯಂತ್ರಿತವನ್ನು ಇನ್ನೂ ಚಾಲ್ತಿ ಮಾಡಿರಲಿಲ್ಲ. ನನ್ನ ಹಾಗೆ ಇನ್ಯಾವ ಬೆಪ್ಪ ಇಷ್ಟು ಬೇಗ ಬರುತ್ತಾನೆ. ನನಗೊಬ್ಬನಿಗೇ ಹವಾನಿಯಂತ್ರಿತ ಚಾಲೂ ಮಾಡಲಾಗುವುದೇ. ಇಷ್ಟು ದಿನಗಳು ಉಪಯೋಗಿಸದ ಧೂಳು ಹಿಡಿಯುತ್ತಿದ್ದ ಫ್ಯಾನಿನ ಮುಂದೆ ಕುಳಿತು ಸ್ವಲ್ಪ ದಣಿವಾರಿಸಿಕೊಂಡಿದ್ದೆ.

ಸಂಜೆ ಮರಳಿ ಬರುವಾಗ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಬೇಕಾಯ್ತು. ಆಗ ನನ್ನ ಮನದಲ್ಲಿ ಹೊಳೆದ ಚಿಂತನೆ ಹೀಗಿದೆ.

ಈ ಮುಷ್ಕರವನ್ನು ಏಕೆ ಮಾಡುತ್ತಾರೆ? ಮುಷ್ಕರವನ್ನು ಆಗಾಗ ಅಂದರೆ ವರುಷಕ್ಕೊಮ್ಮೆಯಾದರೂ ಮಾಡುತ್ತಲೇ ಇದ್ದರೂ ಏಕೆ ಪರಿಸ್ಥಿತಿ ಸರಿ ಹೋಗಿಲ್ಲ?ಈ ಮುಷ್ಕರದಲ್ಲಿ ಪಾಲುದಾರರು ಯಾರ್ಯಾರು ಮತ್ತು ಯಾರಲ್ಲಿ ನ್ಯೂನತೆ ಇರಬಹುದು?ಈ ಮುಷ್ಕರದಿಂದ ಹೆಚ್ಚಿನ ನಷ್ಟವಾಗುವುದು ಯಾರಿಗೆ? ನ್ಯಾಯಾಲಯದ ಮೊರೆ ಹೊಕ್ಕರೆ ಸಮಸ್ಯೆಗಳನ್ನು ಬಗೆಹರಿಸಲಾಗುವುದಿಲ್ಲವೇ?

ಇಂದಿನ ಪರಿಸ್ಥಿತಿಯನ್ನೇ ಉದಾಹರಣೆಗೆ ತೆಗೆದುಕೊಳ್ಳುವೆ. ಬೆಸ್ಟ್‌ ಸಂಸ್ಥೆಯ ನೌಕರರು ಅವರ ವೇತನ ಪರಿಷ್ಕರಣೆಯ ಕುರಿತಾಗಿ ಆಡಳಿತ ಮಂಡಳಿಯೊಂದಿಗೆ ಏಕಮತವಿರದ ಕಾರಣ ಇಂದಿನ ಈ ಮುಷ್ಕರ. ವೇತನ ಪರಿಷ್ಕರಣೆಯ ಸಂಬಂಧದ ಆಡಳಿತದ ನಿಲುವು ಮತ್ತು ನೌಕರ ನಿಲುವು ಎಲ್ಲರಿಗೂ ಮೊದಲಿನಿಂದಲೂ ಗೊತ್ತಿದ್ದುದೇ. ಇದರ ಬಗ್ಗೆ ನೌಕರರ ಸಂಘಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿರಬೇಕು. ಆ ಸಮಾಲೋಚನೆ ನೌಕರರ ಪರವಾಗಿ ಫಲಪ್ರದವಾಗಿರದಿರಬಹುದು. ಇಲ್ಲಿಯವರೆವಿಗೆ ಇದು ಏಕೆ ಫಲಕಾರಿಯಾಗಿರಲಿಲ್ಲವೆಂದರೆ, ನೌಕರರ ಸಂಘಟನೆ ಬಲಯುತವಾಗಿದ್ದಿರಬಹುದು. ಒಂದು ಸಂಸ್ಥೆಯಲ್ಲಿ ಒಂದು ನೌಕರರ ಸಂಘಟನೆ ಇದ್ದರೆ ಬಲಯುತವಾಗಿರುವುದು. ಒಂದಕ್ಕಿಂತ ಹೆಚ್ಚು ಸಂಘಟನೆಗಳಿದ್ದರೆ ಅವರವರುಗಳಲ್ಲೇ ಒಮ್ಮತವಿರದ ಸಾಧ್ಯತೆ ಹೆಚ್ಚಾಗಿ ಬಲ ಕಡಿಮೆಯಾಗುವುದು. ಇನ್ನು ಹೆಚ್ಚಿನದಾಗಿ ನೌಕರರ ಸಂಘಟನೆಗಳು ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿರುತ್ತವೆ. ಹಾಗಾಗಿ ರಾಜಕೀಯ ಪಕ್ಷದಲ್ಲಿ ನಡೆಯುವ ಚಿಂತನೆಗಳ ಪ್ರಭಾವ ನೌಕರರ ಸಂಘಟನೆಗಳ ಮೇಲೂ ಬೀಳುತ್ತದೆ. ಈ ಸಂಸ್ಥೆಯಲ್ಲಿ 2-3ಕ್ಕಿಂತ ಹೆಚ್ಚು ನೌಕರರ ಸಂಘಟನೆಗಳಿದ್ದರೂ ಈ ಬಾರಿ ಅವರೆಲ್ಲರೂ ಒಂದೇ ದಿಕ್ಕಿನಲ್ಲಿ ಆಡಳಿತದೊಂದಿಗೆ ಹಣಿಸುತ್ತಿದ್ದಾರೆ. ಇಂದಿನ ಮುಷ್ಕರದಿಂದ ತೊಂದರೆಗೀಡಾದ ಸಾರ್ವಜನಿಕ ಪ್ರಯಾಣಿಕರು 45 ಲಕ್ಷವೆಂದರೆ ಕಡಿಮೆಯೇನಲ್ಲ. ಇವರುಗಳ ಒಳಿತನ್ನು ಗಮನಿಸಬೇಕಾದುದು ಸರಕಾರದ ಕರ್ತವ್ಯ. ಇದೇ 45 ಲಕ್ಷ ಜನಗಳು ಒಂದುಗೂಡಿ ಸರಕಾರದ ವಿರುದ್ಧ ತಿರುಗಿ ಬಿದ್ದರೆ ಹೇಗಿರಬಹುದು, ಊಹಿಸಲಾದೀತೇ? ಅಂತಹ ದಿನಗಳು ಹತ್ತಿರ ಬರುವುದೇ?

ಯಾವ ಸಂಸ್ಥೆಗಳೂ ಲಾಭವಿಲ್ಲದೆಯೇ ಕೆಲಸ ಮಾಡುವುದಿಲ್ಲ. ಕೆಲಸಗಾರರಿಗೆ 10 ರೂಪಾಯಿ ಕೊಟ್ಟು ಕೆಲಸ ಮಾಡಿಕೊಂಡರೆ ಕೆಲಸ ಮಾಡಿಸಿಕೊಳ್ಳುವವರಿಗೆ ಅದಕ್ಕಿಂತ ಹೆಚ್ಚಿನ ವರಮಾನ ಆಗುವಂತಿರಬೇಕು. ಇಂತಹ ಸಂದರ್ಭಗಳಲ್ಲಿ ನೌಕರರ ಒಳಿತನ್ನು ಗಮನಿಸದೇ ಇರುವ ಪರಿಸ್ಥಿತಿಯೂ ಇರುತ್ತದೆ. ಕೆಲವು ವೇಳೆ ನೌಕರಿಗೆ ವಿರುದ್ಧವಾದ ನಿರ್ಧಾರವನ್ನೂ ತೆಗೆದುಕೊಳ್ಳಬೇಕಾಗಬಹುದು. ಅಂತಹ ನಿರ್ಧಾರಗಳನ್ನು ನೌಕರರು ಪ್ರತಿಭಟಿಸಬೇಕು. ಇಲ್ಲದಿದ್ದರೆ ಬಂಡವಾಳಶಾಹಿಗಳದ್ದೇ ಮೇಲುಗೈ ಆಗುತ್ತದೆ. ಇದರ ಬಗ್ಗೆ 1884ರ ಮೇ 1 ರಂದು ಚಿಕಾಗೋವಿನಲ್ಲಿ ಆದ ಕ್ರಾಂತಿ ಎಲ್ಲರಿಗೂ ತಿಳಿದೇ ಇದೆ. ನೌಕರರು ಸಂಘಟಿತರಾದರೆ ಏನನ್ನೂ ಸಾಧಿಸಬಹುದು. ಆದರೆ ಸಂಘಟಿತ ನೌಕರರ ನಾಯಕರುಗಳು ಸರಿಯಾದ ಹಾದಿಯಲ್ಲಿ ಆಡಳಿತದ ವಿರುದ್ಧ ಪ್ರತಿರೋಧಿಸಬೇಕು ಅಲ್ಲದೇ ಸಂಸ್ಥೆಯ ಏಳಿಗೆಗಾಗಿ ದುಡಿಯಲು ಪ್ರೋತ್ಸಾಹಿಸಬೇಕು.

ಒಂದು ಸಂಸ್ಥೆ ನೌಕರರಿಗೆ ಆಡಳಿತ ಮಂಡಳಿಯಿಂದ ಅನ್ಯಾಯವಾಗುವಂತಹ ಪರಿಸ್ಥಿತಿ ಬಂದಾಗ ಅದನ್ನು ಸಂಘಗಳು ಪ್ರತಿರೋಧಿಸಬೇಕಾಗುವುದು. ನೌಕರರು ಅಂತಹ ಪರಿಸ್ಥಿತಿಯನ್ನು ಪ್ರತಿರೋಧಿಸದೇ ಇದ್ದರೆ ಆಡಳಿತ ಮಂಡಳಿ ನೌಕರರ ರಕ್ತವನ್ನು ಹೀರುತ್ತದೆ. ಹೀಗೆ ಪ್ರತಿರೋಧಿಸುವಾಗ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಈ ದೃಷ್ಟಿಯಲ್ಲಿ ಮುಷ್ಕರಕ್ಕೆ ಮೊದಲು ಕಾರ್ಮಿಕ ನ್ಯಾಯಾಲಯಗಳ ಮೊರೆ ಹೋಗುವುದು ಒಳಿತು. ನಾವುಗಳು ಕಾಣುತ್ತಿರುವಂತೆ ಅಲ್ಲಿ ದಾಖಲಾಗುವ ಕೇಸುಗಳು ತ್ವರಿತಗತಿಯಲ್ಲಿ ನಿರ್ಧರಿತವಾಗುತ್ತಿಲ್ಲ. ಭಾರತದಲ್ಲಿ ನ್ಯಾಯಾಂಗ ಮಂದಗತಿಯಲ್ಲಿ ಸಾಗುತ್ತಿರುವುದೊಂದು ಶೋಚನೀಯ ಸಂಗತಿ. ಅದಕ್ಕಾಗಿಯೇ ಇರಬೇಕೇನೋ, ಕೊಲೆ ಸುಲಿಗೆಗಳು ವಿಪರೀತವಾಗುತ್ತಿರುವುದು.

ಯಾವುದೇ ಕೇಸಿದ್ದರೂ, ಇಟ್‌ ಶುಡ್‌ ಬಿ ಪ್ರೂವ್ಡ್‌ ಬಿಯಾಂಡ್‌ ಡೌಟ್‌ ಎನ್ನುವುದು ನ್ಯಾಯಾಂಗದ ನಿಲುವು. ಎಲ್ಲ ಸನ್ನಿವೇಶಗಳಲ್ಲೂ ಆಧಾರ ಬೇಕು ಎಂದರೆ ಎಲ್ಲರ ಸಮಕ್ಷಮದಲ್ಲಿ ಕಳ್ಳತನ, ಸುಲಿಗೆ, ಕೊಲೆ ಆಗಬೇಕು. ಹಾಗೆ ಆಗುವಂತಿದ್ದರೆ ದೋಷಿಯನ್ನು ಹಿಡಿದು ತಂದು ನ್ಯಾಯಾಲಯದ ಮುಂದೆ ಏಕೆ ನಿಲ್ಲಿಸಬೇಕು. ಅಲ್ಲಿಯೇ ಅವನಿಗೊದು ಗತಿ ಕಾಣಿಸಬಹುದಲ್ಲವೇ?ಒಬ್ಬನನ್ನು ಕೊಂದರೆ ಅದನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ಕೇಸುಗಳು ಬಿದ್ದು ಹೋಗುತ್ತವೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕರಿಗೆ ತೊಂದರೆಯಾದಾಗ ಮುಷ್ಕರಗಳನ್ನು ಮಾಡಲಾಗುವುದಿಲ್ಲವೇ? ಹಾಗೆ ಮಾಡುವಂತಿದ್ದರೆ ಏನು ಮಾಡಬೇಕು? ಈಗಂತೂ ಗಾಂಧಿ ತತ್ವ, ಸತ್ಯಾಗ್ರಹದಿಂದ ಏನೇನೂ ಮಾಡಲಾಗುವುದಿಲ್ಲ. ಆ ಹೆಣ್ಣುಮಗಳು ಮೇಧಾ ಪಾಟ್ಕರ್‌ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದರೂ ನ್ಯಾಯ ದೊರಕುತ್ತಿದೆಯೇ? ಇದರ ಬಗ್ಗೆ ಸಲಹೆಯನ್ನು ತಿಳಿಸುವಿರಾ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more