ಅನಂತಮೂರ್ತಿ : 74ರಲ್ಲೂ 20ರ ಉತ್ಸಾಹ, ಉಮೇದು
ಅನಂತಮೂರ್ತಿಗಳು ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಟ್ಟಿದ್ದು ಅವರ ಕಾದಂಬರಿ, ಕತೆ, ವಿಮರ್ಶೆ ಹಾಗೂ ಚಿಂತನಶೀಲ ಲೇಖನಗಳ ಮೂಲಕ. ಆದರೆ ಅವರು ‘ಈಗಲೂ ಮೊದಲ ಒಲವು ಕಾವ್ಯ ಮತ್ತು ನನ್ನ ಆಯ್ಕೆಯ ಶ್ರೇಷ್ಠ ಕವಿ ಅಡಿಗ’ ಅನ್ನುತ್ತಾರೆ. ಅನಂತಮೂರ್ತಿಗಳು ನಾಲ್ಕು ಕವನ ಸಂಕಲನ ಪ್ರಕಟಿಸಿರುವುದು ಅನೇಕರಿಗೆ ತಿಳಿದಿರಲಾರದು. ಗದ್ಯದಲ್ಲಿ ಕಂಡು ಬರುವ ಕಾವ್ಯ ಗುಣವನ್ನು ಕೊಂಡಾಡಿರುವ ನಮ್ಮ ವಿಮರ್ಶಕರು, ಅವರ ಕಾವ್ಯದಲ್ಲಿ ಎದ್ದು ತೋರುವ ಗದ್ಯ ಲಯವನ್ನು ಮೆಚ್ಚಿದಂತೆ ತೋರುವುದಿಲ್ಲ.
ಅನಂತಮೂರ್ತಿಯವರ ಸಾಹಿತ್ಯ ಸೇವೆಗೆ ಸಂದ ಗೌರವಗಳಿಗೆ ಲೆಕ್ಕವಿಲ್ಲ. ಕನ್ನಡಕ್ಕೆ ಆರನೇ ಜ್ಞಾನಪೀಠ ತಂದುಕೊಟ್ಟ ಹಿರಿಮೆ ಅವರದ್ದು. ಅವರಿಗೆ ಜ್ಞಾನಪೀಠ ಬಂದ ಸಂದರ್ಭದಲ್ಲಿ ಹಿರಿಯ ಕವಿ ಎನ್.ಎಸ್. ಲಕ್ಷ್ಮೀನಾ ಭಟ್ಟರು ಒಂದು ಸೊಗಸಾದ ಕವಿತೆ ಬರೆದಿದ್ದರು.
ರೀ ಅನಂತ ಮೂರ್ತಿ
ನೀವು ಅದೆಷ್ಟು ಸ್ವಾರ್ಥಿ !
ಯಾರಿಗೂ ಬಿಡದೆ ಒಬ್ಬರೇ
ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ !
ಎಂದು ಆರಂಭವಾಗುವ ಆ ಕವನದಲ್ಲಿ ಭಟ್ಟರು ಅನಂತಮೂರ್ತಿಯವರ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಕವಿತೆಯ ಕೊನೆಯಲ್ಲಿ ಅವರು ಹೀಗೆ ಬರೆದಿದ್ದಾರೆ-
ಇದೆ ನಿಮ್ಮ ತೆಕ್ಕೆಯಲ್ಲಿ ಘನವಾದದ್ದೆಲ್ಲ :
ಅಡಿಗರ ಪದ್ಯ, ಲಂಕೇಶರ ಗದ್ಯ
ಕುವೆಂಪು ಕಥಾ ಲೋಕ .....
ಸಡಿಲಿಸಿ ಕೊಂಚ ತೋಳು,
ಒಳಕ್ಕೆ ನುಸುಳಲಿ ಈ ಭಟ್ಟನದೂ
ಒಂದೆರಡು ಸಾಲು !
ಅನಂತಮೂರ್ತಿಯಂಥವರಿಂದ ಬೆನ್ನು ತಟ್ಟಿಸಿಕೊಳ್ಳಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ? ನಾನೂ ಅವರಿಗೆ ನನ್ನ ಆರಂಭದ ಕವನ ಸಂಕಲನಗಳನ್ನು ಕಳಿಸಿ ಪ್ರತಿಕ್ರಿಯೆಗಾಗಿ ಕಾದಿದ್ದೆ. ಅವರಿಂದ ಉತ್ತರ ಬರಲಿಲ್ಲ. ಗಂಭೀರ ಚಿಂತಕರಾದ ಅನಂತಮೂರ್ತಿಯವರಿಗೆ ನನ್ನ ಲಘು ಧಾಟಿ, ತುಂಟಾಟ ಬಹುಶ: ಇಷ್ಟವಾಗಿಲ್ಲ ಅಂತ ಭಾವಿಸಿ, ಅವರಿಗೆ ಪತ್ರ ಬರೆಯುವ, ಫೋನ್ ಮಾಡುವ, ಭೇಟಿಯಾಗಿ ಸ್ನೇಹ ಸಂಪಾದಿಸುವ ಪ್ರಯತ್ನ ಮಾಡಲಿಲ್ಲ.
ಮಂಗಳವಾರದಂದು ನಾನು ನನ್ನ ಮೈಲ್ ಬಾಕ್ಸ್ ಅನ್ನು ತುಂಬಾ ಕುತೂಹಲದಿಂದ ತೆರೆಯುತ್ತೇನೆ. ಅಂದು ‘ಮಾತು-ಕ(ವಿ)ತೆ’ ಬಗ್ಗೆ ಒಂದಿಷ್ಟು ಪ್ರತಿಕ್ರಿಯೆಗಳು ಬಂದಿರುತ್ತವೆ. ಅವುಗಳಿಗೆ ಉತ್ತರಿಸುವುದು ನನಗೆ ಪ್ರಿಯವಾದ ಕೆಲಸ. ಒಮ್ಮೆ ಚೆಕ್ ಮಾಡುತ್ತಿದ್ದಾಗ, ಯು.ಆರ್. ಅನಂತಮೂರ್ತಿ ಹೆಸರು ನೋಡಿ ಶಾಕ್ ಆಯಿತು. ಕನ್ನಡಕ ತೆಗೆದು ಸ್ವಚ್ಛಗೊಳಿಸಿ ಇನ್ನೊಮ್ಮೆ ಓದಿದೆ.
ಹೌದು. ಅನಂತಮೂರ್ತಿಯವರು ಮಳೆಗಾಲದ ಬಗ್ಗೆ ನಾನು ಬರೆದ ಅಂಕಣವನ್ನು ಮೆಚ್ಚಿ ಇ-ಮೇಲ್ ಕಳಿಸಿದ್ದರು. Your writing always makes me happy. You handle kannada as a master and you can play with words and make us sensitive to language.. . only you make me free from some of my obsessions... ಎಂದೆಲ್ಲ ನನ್ನ ಬರವಣಿಗೆಯನ್ನು ಮುಕ್ತವಾಗಿ ಪ್ರಶಂಸಿಸಿ, ಬೆಂಗಳೂರಿಗೆ ಬಂದಾಗ ನೀವು ನನ್ನನ್ನು ಭೇಟಿಯಾದರೆ, ತುಂಬಾ ಸಂತೋಷ ಪಡುತ್ತೇನೆ ಅಂತಲೂ ತಿಳಿಸಿದ್ದರು.
‘ಬೆರಳು ತೋರಿಸಿದರೆ ಹಸ್ತ ನುಂಗುವುದು’ ಅಂತಾರಲ್ಲ ಹಾಗೇ ಮಾಡಿದೆ. ಅನಂತಮೂರ್ತಿಯವರ ಇ-ಮೈಲ್‌ಗೆ ಕೃತಜ್ಞತೆ ಸಲ್ಲಿಸುತ್ತಾ, ನನ್ನ ಅಂಕಣ ಬರಹಗಳ ಎರಡನೆ ಸಂಪುಟ ‘ಮಾತು-ಕ(ವಿ)ತೆ’ಯನ್ನು ನೀವೇ ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡೆ. ಅವರು ತಕ್ಷಣ ಒಪ್ಪಿಕೊಂಡರು.
ಸಮಾರಂಭದ ಹಿಂದಿನ ದಿನ ಅವರಿಗೆ ದಿಲ್ಲಿಗೆ ಹೋಗಬೇಕಾಗಿ ಬಂತು. ಅದರೂ ನನಗೋಸ್ಕರ ಮರುದಿನವೇ ಬೆಳಗಿನ ವಿಮಾನದಲ್ಲಿ ಮರಳಿದರು. ಪ್ರಯಾಣದ ಆಯಾಸವನ್ನು ಲೆಕ್ಕಿಸದೆ, ಸಮಯಕ್ಕೆ ಸರಿಯಾಗಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದರು. ಎಂದಿನಂತೆ ತಮ್ಮ ಮಾತುಗಳಿಂದ ಕೇಳುಗರ ಮನ ಸೂರೆಗೊಂಡರು.
ಇತ್ತೀಚೆಗೆ ಅನಂತಮೂರ್ತಿಗಳು ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ. ಇದು ನಮ್ಮ ಸಾಹಿತ್ಯಲೋಕದ ದುರಂತ. ರಾಜ್ಯಸಭೆ ಚುನಾವಣೆಯಲ್ಲಿ ಅವರು ಸೋತರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅವರ ಕಣ್ಣುಗಳಲ್ಲಿನ ಬೆರಗು, ಮುಖದಲ್ಲಿನ ತುಂಟ ನಗು ಹಾಗೇ ಇರುವುದನ್ನು ನೋಡುವಾಗ ‘ದಲೈಲಾಮ ಮತ್ತು ಚರಿತ್ರೆ’ ಎಂಬ ಅವರ ಕವನದ ಸಾಲುಗಳು ನೆನಪಾಗುತ್ತವೆ-
ಚರಿತ್ರೇಲಿ ಸದ್ಯ ಚೀನಿಯರೇ ಗೆದ್ದಿರೋ ಹಾಗೆ ಕಂಡರೂ
ದಲೈಲಾಮ ಹೀಗೆ ಕಾದಿದಾನೆ -
ಕಾಲದ ಅಪಾರ ಕ್ಷಣಿಕತೆಯಲ್ಲಿ
ಅನಂತತೆಯಲ್ಲಿ ಸತ್ಯ ಗೆಲ್ಲಲಿಕ್ಕೆ,
ಅಂತ.
(ಸ್ನೇಹ ಸೇತು : ವಿಜಯ ಕರ್ನಾಟಕ)











Click it and Unblock the Notifications