ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ : 74ರಲ್ಲೂ 20ರ ಉತ್ಸಾಹ, ಉಮೇದು

By Staff
|
Google Oneindia Kannada News

ಅನಂತಮೂರ್ತಿಯವರಿಗೆ ಡಿ. 21ರಂದು 74 ತುಂಬುತ್ತದೆ. ಈ ವಯಸ್ಸಿನಲ್ಲೂ ನಡು ಹರೆಯದವರಂತೆ ತೋರುವ ಅವರು 24ರ ಯೌವನದಲ್ಲಿ ಹೇಗಿದ್ದಿರಬಹುದು? ಆಗಷ್ಟೆ ಉಪನ್ಯಾಸಕರಾಗಿ ಸೇರಿದ್ದ ಇವರನ್ನು ಕಂಡು ವಿದ್ಯಾರ್ಥಿನಿಯಾಗಿದ್ದ ಎಸ್ತರ್‌ ಮರುಳಾದದ್ದರಲ್ಲಿ ಆಶ್ಚರ್ಯವೇನೂ ಇಲ್ಲ!

Jnanapeetha Award winner U.R.Ananthmurthy turns 74ಕೆಲವು ಸಾಹಿತಿಗಳು ತುಂಬಾ ಚೆನ್ನಾಗಿ ಬರೆಯುತ್ತಾರೆ. ಇನ್ನು ಕೆಲವರ ಬರವಣಿಗೆಗಿಂತ ಮಾತುಗಾರಿಕೆ ಹಿತವಾಗಿರುತ್ತದೆ. ಮತ್ತೆ ಕೆಲವರು ಕೇವಲ ಉಡುಗೆ, ಹಾವಭಾವಗಳ ಮೂಲಕ ನೋಡುವವರಿಗೆ ಈತ ಭಾರೀ ದೊಡ್ಡ ಸಾಹಿತಿ ಎನ್ನುವ ಭ್ರಮೆ ಹುಟ್ಟಿಸುತ್ತಾರೆ! ಒಳ್ಳೆಯ ಬರವಣಿಗೆ, ಉತ್ತಮ ಭಾಷಣ ಮತ್ತು ಆಕರ್ಷಕ ವೇಷಭೂಷಣ ಇವು ಮೂರೂ ಮುಪ್ಪುರಿಗೊಂಡ ಸಾಹಿತಿಗಳು ತೀರಾ ಅಪರೂಪ. ಕನ್ನಡದಲ್ಲಿ ಅಂಥ ಲೇಖಕರು ಯಾರಿದ್ದಾರೆ? ಅಂತ ಕೇಳಿದರೆ ನನಗೆ ಮೊದಲು ನೆನಪಾಗುವವರು ಡಾ. ಯು.ಆರ್‌. ಅನಂತಮೂರ್ತಿ.

ಅವರು ಬರೆದದ್ದನ್ನು, ಅದು ಕತೆ, ಕಾದಂಬರಿ, ವಿಮರ್ಶೆ, ಪ್ರಬಂಧ ಅಥವಾ ವಾಚಕರ ವಾಣಿಗೆ ಬರೆದ ಪತ್ರವಾಗಿರಬಹುದು ಓದತೊಡಗಿದರೆ ಅರ್ಧಕ್ಕೆ ನಿಲ್ಲಿಸುವುದು ಕಷ್ಟ. ಅವರ ಮಾತುಗಳನ್ನು ಕೇಳತೊಡಗಿದರೆ ಬದ್ಧ ವಿರೋಧಿಗಳೂ ಮೈಮರೆತು ಅಹುದೆನಬೇಕು. ಸದಾ ನಗು ಸೂಸುವ ಕಣ್ಣುಗಳು, ಉಡುಪುಗಳ ವಿಷಯದಲ್ಲಿ ಅವರು ವಹಿಸುವ ಶ್ರದ್ಧೆ ನೋಡಿದವರ ಮೆಚ್ಚುಗೆ ಗಳಿಸುತ್ತದೆ.

ಅನಂತಮೂರ್ತಿಯವರಿಗೆ ಡಿಸೆಂಬರ್‌ 21ರಂದು 74 ತುಂಬುತ್ತದೆ. ಈ ವಯಸ್ಸಿನಲ್ಲೂ ನಡು ಹರೆಯದವರಂತೆ ತೋರುವ ಅವರು 24ರ ಯೌವನದಲ್ಲಿ ಹೇಗಿದ್ದಿರಬಹುದು? ಆಗಷ್ಟೆ ಹಾಸನದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದ್ದ ಇವರನ್ನು ಕಂಡು ಪಿ.ಯು.ಸಿ. ವಿದ್ಯಾರ್ಥಿನಿಯಾಗಿದ್ದ ಎಸ್ತರ್‌ ಮರುಳಾದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಬೇಂದ್ರೆಯವರ ‘ಜನುಮದ ಜಾತ್ರಿ’ ಕವನದ ನಾಯಕಿ ಹೇಳುವಂತೆ:

ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗೆ
‘ಅಬ್ಬ ಎನಬೇಡ ನನ ಗೆಣತಿ ಸಾವಿರಕ
ಒಬ್ಬ ನೋಡವ್ವ ನನ ನಲ್ಲ

ಎನ್ನುತ್ತಾ ಎಸ್ತರ್‌ ತನ್ನ ಮಾಸ್ತರರನ್ನೇ ಪ್ರೀತಿಸತೊಡಗದಿರು! ಅವರನ್ನೇ ಮದುವೆಯಾಗಲು ನಿರ್ಧರಿಸಿದರು. ಅಕೆ ಕ್ರಿಶ್ಚಿಯನ್‌ ಆದದ್ದರಿಂದ ಸಹಜವಾಗಿಯೇ ಈ ಮದುವೆಗೆ ಚರ್ಚ್‌ನಿಂದ ವಿರೋಧವಿತ್ತು. ಅಗ್ರಹಾರದ ಮಡಿವಂತಿಕೆಯ ಮೂರ್ತಿಯವರ ಮನೆಯಲ್ಲೂ ಅವರ ಪ್ರೇಮಕ್ಕೆ ಪ್ರೋತ್ಸಾಹವನ್ನು ನಿರೀಕ್ಷಿಸುವಂತಿರಲಿಲ್ಲ. ಅಂತರ್‌ ಮತೀಯ ವಿವಾಹವೆಂದರೆ ಈಗಲೂ ಜನರು ‘ಆ್ಞ?’ ಎಂದು ಇಷ್ಟಗಲ ಬಾಯಿ ತೆರೆದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅಂಥದ್ದರಲ್ಲಿ 50 ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿದ್ದಿರಬಹುದು? ಆದರೂ ಯಾವ ಅಡೆತಡೆಗಳನ್ನೂ ಲೆಕ್ಕಿಸದೆ ಪ್ರೇಮಿಗಳು ಮುನ್ನಡೆದರು. ಬೇಂದ್ರೆಯವರೇ ಇನ್ನೊಂದು ಕವನದಲ್ಲಿ ಬರೆದಂತೆ -

ಪೋರಿ ನೀನು, ನಾನು ಪೋರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವ
ಬೇರೆ ಇಲ್ಲಾ ! ಇದ್ದರೆ ಶಿವನೆ ಬಲ್ಲಾ

ಎನ್ನುತ್ತಾ ಅನಂತ ಮೂರ್ತಿಯವರು 1961ರಲ್ಲಿ ಎಸ್ತರ್‌ ಅವರನ್ನು ರಿಜಿಸ್ಟರ್ಡ್‌ ವಿವಾಹವಾದರು. ಈ ಸುದ್ದಿಯನ್ನು ಕೇಳಿ ಅವರ ತಂದೆ ರಾಜಗೋಪಾಲಾಚಾರ್ಯರು ಮೊದಲು ಸಿಟ್ಟಿಗೆದ್ದರೂ, ಮೊಮ್ಮಗ ಶರತ್‌ನನ್ನು ನೋಡಿದ ನಂತರ ಕೋಪ ತಣ್ಣಗಾಯಿತಂತೆ. ಮದುವೆಯ ವಿಚಾರದಲ್ಲಷ್ಟೆ ಅಲ್ಲ, ಇತರ ಅನೇಕ ಸಂದರ್ಭಗಳಲ್ಲಿ ಅನಂತಮೂರ್ತಿಯವರು ರೂಢಿಗೆ ವಿರುದ್ಧವಾಗಿ ಸರಿ ಅನ್ನಿಸಿದ್ದನ್ನು ಮಾಡುತ್ತಾ ಬಂದಿದ್ದಾರೆ.

ಅವರು ತಮ್ಮನ್ನು ಪರಂಪರೆಯ ‘ಒಳ ವಿಮರ್ಶಕ’ ಎಂದು ಕರೆದುಕೊಂಡಿದ್ದಾರೆ. ಅವರು ಪರಂಪರೆಯ ವಿರುದ್ಧ ಜಗಳವಾಡುವುದು ಒಳಗಿನವರಾಗಿ. ಹೀಗಾಗಿ ಬಹಳಷ್ಟು ಸಲ ಇವರ ನಿಲುವನ್ನು ಸಂಪ್ರದಾಯವಾದಿಗಳು ಮತ್ತು ಪ್ರಗತಿಪರರು, ಇಬ್ಬರೂ ಟೀಕಿಸಿದ್ದುಂಟು ! ಅನಂತಮೂರ್ತಿಗಳು ಮಾತ್ರ ಯಾವ ‘ಟೀಕೆ-ಟಿಪ್ಪಣಿ’, ‘ಚಂಪಾದಕೀಯ’ಗಳಿಗೂ ಅಂಜದೆ ತಮ್ಮ ಮುಕ್ತ ಚಿಂತನೆಗಳನ್ನು ಮಾತು ಮತ್ತು ಬರಹಗಳಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಸಾಹಿತ್ಯದಲ್ಲಿ ‘ಬ್ರಾಹ್ಮಣ ಪ್ರಜ್ಞೆ ಮತ್ತು ಶೂದ್ರ ಪ್ರಜ್ಞೆ ’ ಎಂಬ ಅವರ ಚಿಂತನೆ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಿಕ್ಕು ತೋರಿಸಿದ್ದು ಸುಳ್ಳಲ್ಲ(ನಂತರ ಅದನ್ನು ಅವರ ಓರಗೆಯ ಸಾಹಿತಿಯಾಬ್ಬರು ಪ್ರಜ್ಞೆ ಮತ್ತೂ ‘ಶೂ ಪ್ರಜ್ಞೆ’ ಎಂದು ತಮಾಷೆ ಮಾಡಿದ್ದರು). ಅನೇಕ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾರತವನು ಪ್ರತಿನಿಧಿಸಿರುವ ಅನಂತಮೂರ್ತಿಯವರು ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಶ್ರೇಷ್ಠತೆಯನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಅವರು ತಮ್ಮ ಉಪನ್ಯಾಸ ಹಾಗೂ ಚರ್ಚೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವರ ಸೃಜನಶೀಲ ಬರವಣಿಗೆಯಷ್ಟೇ ಮುಖ್ಯವಾದದ್ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X