• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಪಿ ಸಂಸ್ಕೃತಿಯ ಸರ್ವನಾಶಕ್ಕೆ ಸುಪಾರಿ!!

By Staff
|
  • ವಸುಂಧರಾ ಫಿಲಿಯೋಜಾ

filliozat@dataone.in

Vasundhara Filliozatಫ್ರಾನ್ಸ್‌ ದೇಶದಿಂದ ಹಂಪಿಯನ್ನು ನೋಡಲು ಬರುವ ಪ್ರವಾಸಿಗಳಿಗೆ ಮಾರ್ಗದರ್ಶಿಯಾಗುವ ಹೊಣೆ ಕಳೆದ ಹಲವಾರು ವರುಷಗಳಿಂದ ನನ್ನ ಪಾಲಿಗೆ ಬರುತ್ತಿದೆ. ಅದರಲ್ಲಿ ನನಗೆ ಸಂತೋಷ ತೃಪ್ತಿ ಎರಡೂ ಸಿಕ್ಕುತ್ತಿವೆ.

ಪ್ರವಾಸಿ ತಂಡದ ಸದಸ್ಯರು ಕೇವಲ ‘ಮಜಾ ಮಾಡುವ’ ಉದ್ದೇಶದಿಂದ ಬಂದವರಲ್ಲ. ಅವರೆಲ್ಲ ಇತಿಹಾಸದ ವಿದ್ಯಾರ್ಥಿಗಳು, ಸಂಶೋಧನೆಯಲ್ಲಿ ಆಸಕ್ತಿಯುಳ್ಳವರು ; ನನ್ನ ಸಂಶೋಧನೆಯ ವಿಷಯವೂ ವಿಜಯನಗರ ಸಾಮ್ರಾಜ್ಯದ ಬಗೆಗೇ ಆಗಿದ್ದರಿಂದ ಅವರ ಒಡನಾಟದಲ್ಲಿ ನನಗೆ ತೃಪ್ತಿ!

ನನ್ನ ಕೆಲಸಕ್ಕೆ ಸಂಭಾವನೆಗೆಂದು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರಕಾರದ ಮುಂದೆ ಕೈನೀಡಬೇಕಾಗಿಲ್ಲ ಎಂಬುದು ಸಂತೋಷ ! ಅಲ್ಲಿಯ ಲೋಪ ದೋಷಗಳನ್ನು ಆಡಳಿತದವರ ಗಮನಕ್ಕೆ ತರುವಾಗ ಯಾವುದೇ ತರಹದ ದಾಕ್ಷಿಣ್ಯಕ್ಕೆ ಒಳಗಾಗಬೇಕಿರಲಿಲ್ಲ. ಒಂದು ವರುಷ ಬಂದು ಹೋದ ತಂಡದವರು ತಮ್ಮ ಅನುಭವವನ್ನು ವರ್ಣಿಸಿದ್ದನ್ನು ಕೇಳಿದ ಪರಿಣಾಮವಾಗಿ ಮುಂದಿನ ವರುಷದ ತಂಡದಲ್ಲಿ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ, ಅವರ ಉತ್ಸಾಹದಲ್ಲಿಯೂ ಹೆಚ್ಚಳ! ಇದನ್ನೆಲ್ಲ ನೋಡಿ ನನಗೂ ಅಭಿಮಾನವೆನಿಸುತ್ತಿತ್ತು.

ಆದರೆ 1998ರಲ್ಲಿ ನಮ್ಮ ತಂಡ ಹಂಪಿಯನ್ನು ಸಂದರ್ಶಿಸಿದಾಗ ದೊಡ್ಡ ಆಘಾತವನ್ನೇ ಅನುಭವಿಸಿತು. ‘ಪ್ರವಾಸೋದ್ಯಮದ ಅಭಿವೃದ್ಧಿ’ ಎಂಬ ನೆಪದಲ್ಲಿ ಒಂದು ತೂಗು ಸೇತುವೆ, ‘ರೆಜಾರ್ಟ್‌’ ಎಂಬ ಪ್ರವಾಸಿಗಳ ತಂಗುದಾಣಗಳ ಸಂಕೀರ್ಣದ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ‘ಪ್ರಾಚ್ಯ ಸಂಸ್ಕೃತಿಯ ಕ್ಷೇತ್ರದಲ್ಲಿ ಈ ಅಧ್ವಾನ ಬರಬಾರದಿತ್ತಲ್ಲವೇ ಮೇಡಂ’ ಎಂದು ನನ್ನ ತಂಡದ ಹಲವಾರು ಸದಸ್ಯರು ಪ್ರಶ್ನೆ ಮಾಡಿದಾಗ ನನಗಾದ ಮುಜಗರವನ್ನು ಹೇಗೆ ಹೇಳಿಕೊಳ್ಳಲಿ!

ನಮ್ಮ ಭಾರತದ ಸಂಸ್ಕೃತಿ, ನಮ್ಮ ಕರ್ನಾಟಕದ ಸಂಸ್ಕೃತಿ ಮುಂತಾದವುಗಳ ಬಗೆಗೆ ಭಾಷಣ ಬಿಗಿಯುತ್ತ, ಉನ್ನತಮಟ್ಟದ ಕಲ್ಪನೆಯನ್ನು ಬಿಂಬಿಸುತ್ತ ಬಂದ ನನಗೆ ಇಂತಹದೊಂದು ಆವಾಂತರ ಎದುರಾದಾಗ ಆದ ಆಘಾತ ಅಷ್ಟಿಷ್ಟಲ್ಲ. ಹಣಕ್ಕಾಗಿ ತಮ್ಮ ಸಂಸ್ಕೃತಿಯನ್ನೂ ಮಾರಿಕೊಳ್ಳಲಿಕ್ಕೆ ಹೇಸದ ಕೆಲವು ಸಮಯಸಾಧಕರು ಅಭಿವೃದ್ಧಿಯ ಹೆಸರಿನ ಗವಾಕ್ಷಿಯ ಮೂಲಕ ‘ವ್ಯಾಪಾರೀಕರಣದ ಪಿಶಾಚಿ’ಯನ್ನು ಬರಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬುದು ನಿಚ್ಚಳವಾಗಿತ್ತು. ಇಂತಹ ಕ್ರಮಕ್ಕೆ ಅನುಮತಿ ಕೊಟ್ಟರೆ ಸಂಸ್ಕೃತಿಯ ಸರ್ವನಾಶಕ್ಕೆ ಸುಪಾರಿ ನೀಡಿದಂತೆ !

ಇದರ ವಿರುದ್ಧ ಧ್ವನಿ ಎತ್ತಲೇಬೇಕು, ಏಕಾಂಗಿಯಾದರೂ ಸರಿ, ಹೋರಾಡಲೇಬೇಕೆಂದು ನಿಶ್ಚಯಿಸಿದೆ. ಪರಿಸ್ಥಿತಿಯನ್ನು ಗ್ರಹಿಸಿದವಳೇ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತಳಾಗಿ, ಏಕಾಂಗಿಯಾಗಿ ಹೋರಾಡಿದ ಚಿತ್ರದುರ್ಗದ ಓಬವ್ವ ನನ್ನ ಮನಃಪಟಲದ ಮೇಲೆ ಮೂಡುತ್ತಿದ್ದಳು. ‘ಹಾಗಲ್ಲ ಓಬವ್ವಾ, ನೀನು ಹತ್ತಿರದ ಆರಕ್ಷಕ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸುವುದು ನ್ಯಾಯಬದ್ಧವಾದ ಕ್ರಮ. ಅದರ ಬದಲು ಕಾನೂನನ್ನು ನಿನ್ನ ಕೈಗೆ ತೆಗೆದು ಕೊಳ್ಳುವುದು ... ... ... ’ ಎಂದೇನಾದರೂ ಒಬ್ಬ ಕಾನೂನು ಪಂಡಿತ ಉಪದೇಶ ಮಾಡುವುದಕ್ಕೆ ಬಂದಿದ್ದರೆ ಒಣಕೆಯಿಂದ ಮೊದಲು ಅವನ ತಲೆಯನ್ನು ಒಡೆದು ಆ ಮೇಲೆ ಹೈದರನ ಸೈನಿಕರ ಕಡೆಗೆ ಸಾಗುತ್ತಿದ್ದಳೋ ಏನೋ! ಇಂದಿನ ನಾಗರಿಕ ಸಮಾಜದಲ್ಲಿರುವ ನಾವು, ಎಷ್ಟು ಧೈರ್ಯವಿದ್ದರೂ, ಆ ಕ್ರಮದಲ್ಲಿ ಮುಂದುವರಿಯುವಂತಿಲ್ಲ. ಒಣಕೆಯ ಬದಲು ಲೆಕ್ಕಣಿಕೆಯನ್ನೇ ಆಯುಧವನ್ನಾಗಿ ಬಳಸಿಕೊಳ್ಳಬೇಕಾಗಿದೆ.

‘ಆದರೆ ದಪ್ಪಚರ್ಮದ ವರ್ತನೆ’ಗೆ ಹೆಸರಾಗಿರುವ ನಮ್ಮ ಸರ್ಕಾರವನ್ನು ಎಚ್ಚರಿಸಬೇಕಾದರೆ ಒಂದು ಲೆಕ್ಕಣಿಕೆ ಸಾಲದು. ಹಲವಾರು ಲೆಕ್ಕಣಿಕೆಗಳು ಬೇಕು ; ಹರಿತವಾದ ಲೆಕ್ಕಣಿಕೆಗಳು ಬೇಕು ; ಅದರಲ್ಲೂ ಎನ್‌ಆರ್‌ಆಯ್‌ ಲೆಕ್ಕಣಿಕೆಗಳಾದರೆ ಇನ್ನೂ ಪರಿಣಾಮಕಾರಿ ! ಸದ್ಯ NRI ಆಗಿದ್ದುಕೊಂಡು, ತಮ್ಮ ಬಹುಮೂಲ್ಯ ವೇಳೆಯಲ್ಲಿಯೂ ಸ್ವಲ್ಪ ಬಿಡುವು ಮಾಡಿಕೊಂಡು, ತಮ್ಮ ನಾಡು ಸಂಸ್ಕೃತಿಗಳ ಬಗೆಗೆ ಸೇವೆ ಸಲ್ಲಿಸುವ ಪ್ರಯತ್ನ ಮಾಡುವ ಈ ಅಂತರ್ಜಾಲದ ಓದುಗರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಬಿನ್ನಹಮಾಡಿಕೊಳ್ಳುತ್ತಿದ್ದೇನೆ.

ಇಲ್ಲಿಯವರೆಗೆ ನಡೆದ ಕತೆಯ ಸಂಕ್ಷಿಪ್ತ ಆವೃತ್ತಿಯನ್ನು ನಿಮ್ಮೆದುರಿಗೆ ಇರಿಸುತ್ತಿದ್ದೇನೆ :

1. ಪ್ರತಿ ವರುಷ ಯುನೆಸ್ಕೋದಲ್ಲಿ ಎಲ್ಲ ದೇಶಗಳ ಸಾಂಸ್ಕೃತಿಕ ವಿಭಾಗದ ಮಂತ್ರಿ ಅಥವಾ ಅವರ ಪ್ರತಿನಿಧಿಗಳು ಸಭೆ ಸೇರುತ್ತಾರೆ. ತಮ್ಮ ತಮ್ಮ ದೇಶದಲ್ಲಿಯ ಐತಿಹಾಸಿಕ ಅಥವಾ ಬೇರೆ ರೀತಿಯಲ್ಲಿ ಮಹತ್ವದವೆಂದು ಕಂಡುಬಂದ ಸ್ಥಳಗಳ ಬಗೆಗೆ ಹೇಳುತ್ತಾರೆ. ಚರ್ಚೆಯ ನಂತರ ಕೆಲವು ಸ್ಥಳಗಳನ್ನು ಸಾಂಸ್ಕೃತಿಕ ಪರಂಪರೆಯ ಸ್ಥಳಗಳ ಪಟ್ಟಿಯಲ್ಲಿ ಸೇರಿಸುತ್ತಾರೆ. ಅದರ ಪ್ರಕಾರ 1986ರಲ್ಲಿ ಹಂಪಿ ಐತಿಹಾಸಿಕ ಪರಂಪರೆಯ ಪ್ರಸಿದ್ಧ ಸ್ಥಾನಗಳಲ್ಲಿ ಸೇರಿಸಲ್ಪಟ್ಟಿತು. ಹಂಪೆಯಲ್ಲಿರುವ ನೈಸರ್ಗಿಕ ಸೌಂದರ್ಯ ಮತ್ತು ಅಲ್ಲಿರುವ ಸ್ಮಾರಕಗಳನ್ನು ಇದ್ದಕ್ಕಿದ್ದಂತೆ ಉಳಿಸಿಕೊಂಡು ಬರಬೇಕೆಂದಾಗ ಎದುರಿಸಬೇಕಾದ ಅಡಚಣೆಗಳನ್ನು ದಿಟ್ಟ ಸವಾಲಿನಂತೆ ಸ್ವೀಕರಿಸಬೇಕೆಂಬ ಸಲಹೆಯಾಂದಿಗೆ ಹಂಪಿಯನ್ನು ಪರಂಪರೆಯ ಯಾದಿಯಲ್ಲಿ ಸೇರಿಸಿದರು. ಆಗ ಭಾರತ ಸರ್ಕಾರ ‘ ಕೆಲವೊಂದು ಸ್ಮಾರಕಗಳ’ ಹೆಸರುಗಳನ್ನು ಮಾತ್ರ ಕೊಟ್ಟಿತ್ತು.

2. 1986ರಲ್ಲಿ ಫ್ರಾನ್ಸ್‌ ನಲ್ಲಿ India Festival ನಡೆಯುತ್ತಿತ್ತು. ನಮ್ಮ ಕೊಡುಗೆಯಾಗಿ ಫೋಟೋ ಮತ್ತು ರೇಖಾಚಿತ್ರಗಳ ಪ್ರದರ್ಶನವನ್ನು ICOMOSನಲ್ಲಿ ಏರ್ಪಡಿಸಿದ್ದೆವು. ಪರಂಪರೆಯ ಯಾದಿಯನ್ನು ತಯಾರಿಸುವವರು ICOMOSನ ಜನರೇ. ನಮ್ಮ ಪ್ರದರ್ಶಿತ ಚಿತ್ರಗಳಿಂದ ಪ್ರಭಾವಿತರಾದ ಅವರು, ‘ಬರಿ ಸ್ಮಾರಕಗಳ ಗುಂಪು’ ಎಂದು ಬೇಡ, ‘ಪೂರಾ ಹಂಪಿ, ಕಮಲಾಪುರ ಹಾಗೂ ಆನೇಗೊಂದಿಗಳನ್ನು ಸಹ ಸೇರಿಸೋಣ, ಹಂಪಿಯನ್ನು intensive conservation zone ಎಂದೂ, ಕಮಲಾಪುರ ಆನೇಗೊಂದಿಗಳನ್ನು buffer zone ಎಂದೂ ನಮೂದಿಸೋಣ’ ಎಂಬ ನಿರ್ಣಯ ಕೈಗೊಂಡರು.

ಯುನೆಸ್ಕೋದವರು ಈ ರೀತಿ ನಿರ್ಣಯ ಕೈಗೊಂಡಿದ್ದರೂ ನಮ್ಮ ಭಾರತದ ಘನ ಸರ್ಕಾರದ ಕಡತದಲ್ಲಿ ಮತ್ತೂ ‘ಕೆಲವು ಸ್ಮಾರಕಗಳು’ ಎಂದೇ ನಮೂದಿಸಲ್ಪಟ್ಟಿದೆ. Archeological Survey of Indiaದವರ ದಾಖಲೆಯಲ್ಲಿಯೂ ಇದೇ ತಪ್ಪು ಸೇರಿಕೊಂಡಿದೆ. ಅಷ್ಟು ಲೂಪ್‌ ಹೋಲ್‌ ಸಾಕಾಯಿತು ಸಮಾಜ ವಿರೋಧಿ ಹಣಹದ್ದುಗಳಿಗೆ ! ಗೋವಾದಿಂದ ಒದ್ದೋಡಿಸಲ್ಪಟ್ಟ ಹಿಪ್ಪಿ ತಂಡಗಳಿಗೆ ಆನೇಗೊಂದಿಯಲ್ಲಿ ಕೆಂಪು ಕಂಬಳಿ ಸ್ವಾಗತ !

ಅವರಿಗಾಗಿ ರೆಜಾರ್ಟ್‌ಗಳ ಸಮುಚ್ಚಯವೇ ನಿರ್ಮಾಣಗೊಂಡಿದೆ. ಇದೇ ಉದ್ದೇಶಕ್ಕಗಿ ಎರಡು ಸೇತುವೆಗಳ ನಿರ್ಮಾಣವೂ ಪ್ರಾರಂಭವಾಯಿತು. ತುಂಗಭದ್ರೆ ಟಿಸಿಲೊಡೆದು ನಿರ್ಮಿತವಾದ ವಿರೂಪಾಕ್ಷಪುರ ಎಂಬ ನಡುಗಡ್ಡೆ , ಅಂದು ನಿರ್ಜನವಾಗಿದ್ದದ್ದು ಇಂದು ಕಾಲಿಡಲಿಕ್ಕೂ ಜಾಗವಿಲ್ಲದಷ್ಟು ರೆಜಾರ್ಟ್‌ ಗಳಿಂದ ತುಂಬಿ ಹೋಗಿದೆ. ಅವುಗಳ ಹಿತಕ್ಕೆಂದೇ ಈ ಎರಡನೆಯ ಸೇತುವೆ !

3. ಈ ರೆಜಾರ್ಟ್‌ಗಳಲ್ಲಿ ‘ಪರದೇಶದವರಿಗೆ ಮಾತ್ರ ಪ್ರವೇಶ ಮೀಸಲು’. ‘ಭಾರತೀಯರಿಗೆ ಪ್ರವೇಶ ನಿಷಿದ್ಧ’. ‘NRIಗಳಾಗಿದ್ದಲ್ಲಿ ಅವರಿಗೆ ರಿಯಾಯತಿ ಉಂಟು’ ಎಂಬ ಉದ್ಧಟತನ ಸೂಸುವ ಬೋರ್ಡುಗಳು !

4. ಈ ಎಲ್ಲ ರಾಕ್ಷಸೀ ಅವ್ಯವಹಾರವನ್ನು ಆಧಾರ ಸಮೇತ ಯುನೆಸ್ಕೋಗೆ ನಾನು ವರದಿ ಮಾಡಿದ ಪರಿಣಾಮವಾಗಿ ಸೇತುವೆ ನಿರ್ಮಾಣ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ಅಲ್ಲಿಂದ ತಡೆಯಾಜ್ಞೆ ಬಂದಿತು. ನಿಲ್ಲಿಸದಿದ್ದರೆ ಹಂಪಿಯ ಹೆಸರನ್ನು ಪರಂಪರೆಯ ಪಟ್ಟಿಯಿಂದಲೇ ಕಿತ್ತು ಹಾಕುವುದಾಗಿ ಬೆದರಿಕೆ ಹಾಕಿತು. ಸೇತುವೆ ಕಾರ್ಯ ನಿರ್ಮಾಣ ಕಾರ್ಯ ಅಲ್ಲಿಗೇ ನಿಂತಿತು. ತೂಗುಸೇತುವೆಗೆಂದು ನೆಟ್ಟಿದ್ದ ಕಂಬಗಳನ್ನೂ ಸಹ ಕಿತ್ತು ಹಾಕಿದರು.

5. ಆನೆಗೊಂದಿಯ ಕೆಲವು ಪ್ರಭಾವೀ ಕದೀಮರು ಯುನೆಸ್ಕೋದ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ‘ಅಲ್ಲಿರುವ ಬಡವರ ಏಳಿಗೆಗಾಗಿ’ ಮನೆಗಳನ್ನು ಕಟ್ಟುವುದಾಗಿ ಹೇಳಿಕೊಂಡು ಪರವಾನಗಿ ಪಡೆದು, ಅವುಗಳನ್ನು ರೆಜಾರ್ಟ್‌ಗಳಾಗಿ ಪರಿವರ್ತಿಸಿ, ತಮ್ಮ ಕಾಯಕಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ. ಅವರ ಈ ಹುನ್ನಾರ ಯಶಸ್ವಿ ಪಥದಲ್ಲಿ ಸಾಗಿದರೆ ತಿರುಪತಿಗೆ ‘ಏಡುಕೊಂಡಲವಾಡ’ ಎಂದು ಹೆಸರಿದ್ದಂತೆ ಹಂಪಿಯನ್ನು ‘ಏಡ್ಸು ಕೊಂಡವಾಡ’ ಎಂಬ ಹೆಸರಿನಲ್ಲಿ (ಕು)ಪ್ರಸಿದ್ಧವಾಗಿಸುತ್ತಾರೆ.

6. ಯುನೆಸ್ಕೋದಿಂದ ಶ್ರೀಮತಿ ಮಿಂಜಾ ಯಂಗ್‌ ಎಂಬುವರು ತ್ರಿರಾಷ್ಟ್ರ ವಿಭಾಗ (ಭಾರತ, ಭೂತಾನ್‌ ಮತ್ತು ಸಿಲೋನ್‌) ಕ್ಕೆ ಪ್ರತಿನಿಧಿಯಾಗಿ ನಿಯುಕ್ತರಾಗಿದ್ದರು. ಇಲ್ಲಿ ನಡೆಯುವ ಅವ್ಯವಹಾರಗಳನ್ನು ನಾನು ಅವರಿಗೆ ವರದಿ ಮಾಡಿದೆ. ಆದರೆ ಸ್ಥಳೀಯ ‘ಗಣ್ಯರು’ ಕೊಟ್ಟ ‘ಬಡವರ ಉದ್ಧಾರ’ದ ಚಿತ್ರವನ್ನೇ ಅವರು ಹೆಚ್ಚು ನಂಬಿದಂತಿತ್ತು. ಅದಕ್ಕಾಗಿ ಧನಸಹಾಯವನ್ನೂ ಮಂಜೂರು ಮಾಡಿದ್ದರು. ಮುಂದೆ ಒಂದುತಿಂಗಳ ಹಿಂದೆ ಅವರು ಹಂಪಿಯಲ್ಲಿಯೇ ನಡೆಯುತ್ತಿದ್ದ heritage ಪ್ರದೇಶಗಳ ಮೀಟಿಂಗ್‌ಗಾಗಿ ಬಂದಾಗ ಸ್ಥಳೀಯನೊಬ್ಬ (ಅವರಾರೆಂದು ತಿಳಿಯದೆ) ವಿದೇಶೀ ಹೆಣ್ಣುಮಗಳು ಎಂದು ತಿಳಿದು, ಅವರಿಗೆ ಡ್ರಗ್‌ ‘ಬೇಕಾ ಮೇಡಂ’ ಎಂದು ಕೇಳುತ್ತ ಕಾಡಿದನಂತೆ. ಅದರಿಂದ ಕನಲಿದ ಆ ಮೇಡಂ ತನ್ನ ಭಾಷಣದಲ್ಲಿ ಸವಿಸ್ತಾರವಾಗಿ ಇದರ ಉಲ್ಲೇಖ ಮಾಡಿದಳಂತೆ. ನಾನು ಈ ಮೊದಲು ಮಾಡಿದ ವರದಿಯನ್ನು ಹುಡುಕಿ ತೆಗೆದು ಪುನಃ ಪರಿಶೀಲಿಸುವ ಅಗತ್ಯ ಅವರಿಗೆ ಕಂಡಿರಬಹುದೋ ಇಲ್ಲವೋ ಗೊತ್ತಿಲ್ಲ. ಅದನ್ನೇ ನಂಬಿ ಕೂಡುವುದು ಬೇಡ.

7. ಕನ್ನಡನಾಡಿನ ಹೆಮ್ಮೆಯ ತಾಣವಾಗಿರುವ ಹಂಪಿಯನ್ನು ಈ ರೀತಿ ಅಧೋಗತಿಗೆ ನೂಕುವುದನ್ನು ತಪ್ಪಿಸಲೇಬೆಕು. NRI ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಪತ್ರಗಳನ್ನು ಯುನೆಸ್ಕೋ ಆಡಳಿತ ವರ್ಗಕ್ಕೆ, ಕರ್ನಾಟಕದ ಮುಖ್ಯಮಂತ್ರಿಗಳಿಗೆ, ರಾಷ್ಟ್ರಪತಿಯವರಿಗೆ ಮತ್ತು ಪ್ರಧಾನ ಮಂತ್ರಿಗಳವರಿಗೆ ಬರೆದು ನಮ್ಮ ಚೆಲುವಕನ್ನಡನಾಡಿಗೆ ಒಂದು ಉಪಕಾರ ಮಾಡಬೇಕೆಂದು, ಮುಂದಿನ ಪೀಳಿಗೆಗೆ ಹಂಪಿಯನ್ನು ಉಳಿಸಿಕೊಡಬೇಕೆಂದು ಕಳಕಳಿಯಿಂದ ಬಿನ್ನವಿಸಿಕೊಳ್ಳುತ್ತೇನೆ.

ನಿಮ್ಮ ಪತ್ರಗಳ ಒಂದೊಂದು ಪ್ರತಿ ನನ್ನ ವಿಳಾಸಕ್ಕೂ ಬರುವಂತಾದರೆ ಈ ಓಬವ್ವನಿಗೆ ಇನ್ನಷ್ಟು ಒಣಕೆಗಳು ದಕ್ಕಿದಂತಾಗುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more