ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊರೆ ತಪ್ಪಿಸಿಕೊಂಡ ಅಪೂರ್ವ ಅವಕಾಶ, ಅಯ್ಯಾಕುಮಾರ!

By Staff
|
Google Oneindia Kannada News


ಆಡಳಿತದಲ್ಲಿ ತಾತ್ಸಾರ, ರಾಜಕೀಯದಲ್ಲಿ ಜಾತಿ, ಭಾಷೆಯಲ್ಲಿ ಬೇಜವಾಬ್ದಾರಿತನ, ಸಾಹಿತ್ಯದಲ್ಲಿ ಅಸಾಹಿತ್ಯಿಕ ವಿಷಯ ಮತ್ತು ಮೊಸರಲ್ಲಿ ಕಲ್ಲನ್ನು ಹುಡುಕುವುದನ್ನು ನಿಲ್ಲಿಸಿದರೆ ನಮ್ಮ ನಾಡಿನಲ್ಲಿ ನಿತ್ಯೋತ್ಸವ ನಿತ್ಯ ಮೊಳಗುತ್ತದೆ. ನಿಸಾರ್‌ ಅಹಮದ್‌ ಅವರ ಕವನಗಳಿಗೆ ಅರ್ಥ ಬರುತ್ತದೆ.

Chief Minister H.D. Kumarswamy in conversation with Champaಸಾಹಿತ್ಯ ಸಮ್ಮೇಳನ ಇತರ ಮೇಳಗಳಂತಲ್ಲ. ಅಲ್ಲಿ ಅಕ್ಷರ ಪ್ರೀತಿ, ಸಾಹಿತ್ಯ ಪ್ರೇಮ, ಕವಿ-ಕತೆ- ಕಾವ್ಯ-ವಿಮರ್ಶೆ ಮತ್ತು ಭಾಷೆಯ ಏಳಿಗೆಗೆ ತಣ್ಣಗೆ ಕುಳಿತು ಚಿಂತಿಸುವ ಕ್ಷಣ. ಆದರೆ ಕನ್ನಡಿಗರು ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಳ್ಳುವ ತಮಾಷೆಯ ಜನ. ಲಾಗಾಯ್ತಿನಿಂದ ನೀವು ಗಮನಿಸಿರುವಂತೆ ಕನ್ನಡನಾಡಿನಲ್ಲಿ ಜರಗುವ ಐಟಿ-ಬಿಟಿ ಸಮ್ಮೇಳನಕ್ಕೂ, ದಸರಾ ವಸ್ತುಪ್ರದರ್ಶನಕ್ಕೂ, ಸವದತ್ತಿ ಎಲ್ಲಮ್ಮನ ಜಾತ್ರೆಗೂ ಇರಬೇಕಾದ ವ್ಯತ್ಯಾಸಗಳನ್ನು ಅವರು ಗುರುತಿಸುವುದಿಲ್ಲ.

ಯಾವ ವಿಷಯವನ್ನಾಗಲೀ ಒಂದು ಚರ್ಚಾಸ್ಪದ ವಿಷಯವನ್ನಾಗಿ ಮಾರ್ಪಡಿಸುವುದರಲ್ಲಿ ಕನ್ನಡಿಗರು ಚತುರರು. ಒಟ್ಟಿನಲ್ಲಿ ಇನ್ನೊಬ್ಬರ ಗರ್ವಭಂಗ ಮಾಡಿ, ತಮ್ಮ ಗರ್ವ ಮೆರೆಯುವ ಯಾವ ಆಪರ್‌ಚ್ಯುನಿಟಿಯನ್ನೂ ಅವರು ಮಿಸ್‌ ಮಾಡಿಕೊಳ್ಳುವುದಿಲ್ಲ. ವಿಚಿತ್ರ ಸ್ವಭಾವದ ಜನಸಮುದಾಯ. ಬೆಂಕಿ ಮಳೆ ಬೀಳುವಾಗ, ಬಾವಿ ತೋಡುವ ಮತ್ತು ಹೂಮಳೆ ಬೀಳುತ್ತಿರುವಾಗ ಹೊದ್ದು ಮಲಗುವ ಕರ್ನಾಟಕ ಪ್ರಜೆಗಳ ಪ್ರವೃತ್ತಿಯನ್ನು, ಯಾವುದಾದರೂ ವಿದೇಶೀ ವಿಶ್ವವಿದ್ಯಾಲಯ ಸಂಶೋಧನೆ ಮಾಡಬೇಕು!

ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮ್ಮೇಳನದ ಚಪ್ಪರದಿಂದ ಬರುತ್ತಿರುವ ವಾರ್ತೆಗಳಲ್ಲಿ ಸಾಹಿತ್ಯಕ್ಕಿಂತ ಅಸಾಹಿತ್ಯಕವಾದ ಸುದ್ದಿಗಳೇ ಹೆಚ್ಚಾಗಿವೆ. ಮುಖ್ಯಮಂತ್ರಿ ಕುಮಾರಣ್ಣ ಅವರನ್ನು ಆಹ್ವಾನಿಸಲಿಲ್ಲ ಎನ್ನುವುದು ಜೆಡಿಎಸ್‌ ಕಾರ್ಯಕರ್ತರ ಆಪಾದನೆ. ಒಪ್ಪೋಣಂತೆ. ಅವರ ಸ್ಥಾನಕ್ಕೆ ತಕ್ಕ ಮರ್ಯಾದೆ ಕೊಟ್ಟು , ಒಂದು ಇನ್‌ವಿಟೇಶನ್‌ ಕಾರ್ಡ್‌ ನ್ನು ಗೌರವದಿಂದ ಕೊಟ್ಟಿದ್ದರೆ ಚಂಪಾರವರ ಸ್ವಾಭಿಮಾನ ವೇನೂ ಕಮ್ಮಿಯಾಗುತ್ತಿರಲಿಲ್ಲ.

ಕುಮಾರಣ್ಣನವರೂ ಚಂಪಾರವರಿಗಿಂತ ಭಿನ್ನವಾಗಿ ವರ್ತಿಸಲಿಲ್ಲ ಎನ್ನುವುದು ಖೇದದ ಸಂಗತಿ. ಕೋಪದಲ್ಲಿ, ಅಹಂ ಪ್ರದರ್ಶನದಲ್ಲಿ ಇಬ್ಬರೂ ಒಂದೇ ಬಳ್ಳಿಯ ಹೂಗಳು. ಸಮಸ್ತ ಕನ್ನಡಿಗರೂ ಒಂದೇ ಒಕ್ಕಲ ಮಕ್ಕಳು ಎಂಬ ಭಾವನೆ ಇದ್ದವರು ಯಾರೂ ಈರೀತಿ ತಗಾದೆ ತೆಗೆಯುವುದಿಲ್ಲ. ಕನ್ನಡ ಭಾಷೆಯ ಪ್ರೀತಿ ಇದ್ದವರು ಯಾರು ಬೇಕಾದರೂ ಶಿವಮೊಗ್ಗಕ್ಕೆ ಹೋಗಬಹುದು.

ಕುಮಾರಣ್ಣ ಸುಮ್ಮನೆ ಶಿವಮೊಗ್ಗಕ್ಕೆ ಹೋಗಿ, ನೆಹರು ಕ್ರೀಡಾಂಗಣದ ಚಪ್ಪರದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿ ಊಟ ಮಾಡಿ ಬಂದಿದ್ದರೆ ದೊಡ್ಡವರಾಗುತ್ತಿದ್ದರು. ಹಳ್ಳಿಗಳಿಗೆ ಹೋಗಿ ರಾತ್ರಿ ತಂಗುವ ಅವರ ಉಮೇದು ಭಾಷೆಯ ವಿಷಯ ಬಂದಾಗ ಎಲ್ಲಿ ಮರೆಯಾಯಿತು? ಅವರ ಅಪ್ಪನೂ ಹೀಗೆ. ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವತ್ತೂ ಅವರಿಗೆ ಅಷ್ಟೇನೂ ಆಸಕ್ತಿಯಿಲ್ಲ. ಚುನಾವಣೆ, ಗಣಿಗಾರಿಕೆ, ರಿಯಲ್‌ ಎಸ್ಟೇಟ್‌ ವ್ಯವಹಾರ, ಪಾರ್ಟಿ ಪಾಲಿಟಿಕ್ಸ್‌ನಲ್ಲಿ ತೊಡಗಿಕೊಳ್ಳುವುದರಲ್ಲೇ ಅವರ ಉತ್ಸಾಹ ಮತ್ತು ಪ್ರೀತಿ ಕರಗಿರುತ್ತದೆ. ಪಾಪ.

ಅಮೆರಿಕಾದ ಬಾಲ್ಟಿಮೋರ್‌ನಲ್ಲಿ ನಡೆದ ಕನ್ನಡ ಸಮ್ಮೇಳನಕ್ಕೆ ಕುಮಾರಣ್ಣನಿಗೆ ಆಹ್ವಾನವಿತ್ತು. ಏನೋ ಸಬೂಬು ಹೇಳಿ ತಪ್ಪಿಸಿಕೊಂಡರು. ಶಿವಮೊಗ್ಗಕ್ಕೆ ಒಬ್ಬ ಕನ್ನಡಿಗನಾಗಿ, ಕರ್ನಾಟಕದ ಪ್ರಜೆಯಾಗಿ ನಡೆದುಕೊಂಡು ಹೋಗಿ ಎಲ್ಲರೊಳಗೊಂದಾಗುವ ಅವಕಾಶವನ್ನು ತಾವೇ ಹಾಳುಮಾಡಿಕೊಂಡರು. ಅಯ್ಯೋ ಕುಮಾರಣ್ಣ. ನಿಮಗೆ ಒಳ್ಳೆ ಪಿಆರ್‌ಒ ಇಲ್ಲವಾ?

ಚಂಪಾರವರು ಮುಖ್ಯಮಂತ್ರಿ ಕುರಿತು ಮಾಡಿರುವ ಲೇವಡಿ ಚೆನ್ನಾಗಿದೆ. ‘ಸಮ್ಮೇಳನ ನಮ್ಮ ಮನೆಯ ಮದುವೆಯೂ ಅಲ್ಲ, ಸತ್ಯನಾರಾಯಣ ಪೂಜಾ ಕಾರ್ಯಕ್ರಮವೂ ಅಲ್ಲ, ಯಾರು ಬೇಕಾದರೂ ಬರಬಹುದು’ ಎನ್ನುವ ಅವರ ಪ್ರತಿಕ್ರಿಯೆ ಸಮಂಜಸವಾಗಿದೆ. ತೇಜಸ್ವಿ ಅವರ ಅನಿಸಿಕೆಗಳೂ ಈ ಬಗೆಯಲ್ಲೇ ಇದೆ. ‘ಕುಂಕುಮ ಅರಿಶಿನ ಕೊಟ್ಟು ಕರೆಯುವುದಕ್ಕೆ ಶಿವಮೊಗ್ಗ ಸಮ್ಮೇಳನ ಶ್ರಾವಣ ಮಂಗಳವಾರದ ಕಾರ್ಯಕ್ರಮವಲ್ಲ’ ಎನ್ನುವ ಕಟಕಿ ಒಪ್ಪತಕ್ಕದ್ದೇ.

ಆದರೆ, ಫ್ಲಾರಿಡಾದಲ್ಲಿ ಜರುಗಿದ ಅಕ್ಕ ಸಮ್ಮೇಳನಕ್ಕೆ ತಮ್ಮನ್ನು ಆಹ್ವಾನಿಸಲಿಲ್ಲ. ಆದು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡಿದ ಅವಮರ್ಯಾದೆ ಎಂದು ಇದೇ ಚಂಪಾ ಹೊಟ್ಟೆ ಕಿವುಚಿಕೊಂಡಿದ್ದನ್ನು ಕನ್ನಡಿಗರು ಮರೆತಿಲ್ಲ.

ಇದ್ಯಾವುದನ್ನೂ ಗಮನಿಸಿದ ಕನ್ನಡ ಭಾಷೆಯ ಭಕ್ತರು, ರಾಜ್ಯದ ಮೂಲೆಮೂಲೆಗಳಿಂದ ಶಿವಮೊಗ್ಗಕ್ಕೆ ಬಂದು ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದಾರೆ. ಹೋಗುವಾಗ ಹಾಗೇ ಜೋಗದಸಿರಿಕಂಡು ತಮ್ಮತಮ್ಮ ಊರುಗಳನ್ನು ತಲುಪಿಕೊಳ್ಳುತ್ತಾರೆ.. ಮೇಷ್ಟ್ರು ನಿಂತುಕೊಂಡು ಉಚ್ಚೆ ಹೊಯ್ದರೆ ಮಕ್ಕಳು ಕುಣಿದುಕೊಂಡು ಉಚ್ಚೆ ಹೊಯ್ಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳಾಗಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X