ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ನಿಷ್ಟ್ರಯೋಜಕ ಪದವೀಧರರು ಬೇಕೆ?

By Staff
|
Google Oneindia Kannada News

;?
ನಮ್ಮ ಭಾರತೀಯ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ.75ರಷ್ಟು ಮಂದಿ, ನೌಕರಿಗೆ ಲಾಯಕ್ಕಿಲ್ಲ ಎಂಬುದು ವರದಿಯಾಂದರ ಸಾರಾಂಶ. ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ? ನಮ್ಮ ಎಂಜಿನಿಯರಿಂಗ್‌ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ ಎಲ್ಲಿ ಅಡಗಿದೆ? ಒಂದು ಚರ್ಚೆ.

ಪರಮಶಿವಂ ಈಗ ಪರರಾಜ್ಯದಲ್ಲಿ ಪರದೇಶಿಯಾಗಿದ್ದರು. ಅವರ ಪೆಟ್ಟಿಗೆಯ ಸಮೇತ ಎಲ್ಲವನ್ನೂ ಕಳ್ಳರು ಅಪಹರಿಸಿದ್ಡರು. ಈಗ ತೊಟ್ಟ ಬಟ್ಟೆಯಮೇಲೆ ಫುಟ್‌ಪಾತ್‌ ಮೇಲೆ ನಿಲ್ಲ ಬೇಕಾದ ಪರಿಸ್ಥಿತಿಗೆ ನೂಕಲಟ್ಟಿದ್ದರು! ಎರಡು ಕೈ ನೀಡಿ ಭಿಕ್ಷೆ ಕೇಳುತ್ತ ಸಹಾಯ ಯಾಚಿಸುತ್ತಿದ್ದರು. ಜನರೂ ಕೈಲಾದಷ್ಟು ನೀಡುತ್ತಲೇ ಇದ್ದರು. ಸಾಕ್ಷಾತ್‌ ಪರಮಶಿವನೇ ಭಿಕ್ಷೆ ಬೇಡಿದ್ದ ಎಂದಿರುವಾಗ ಈ ಪರಮಶಿವನದೇನು ಮಹಾ ಎಂದುಕೊಂಡಿರಬೇಕು.

ಆಗ ಅಲ್ಲಿಗೆ ಕೋಟ್ಯಾನುಕೋಟಿಗೆ ಒಡೆಯರಾದ ದಯಾಳು ಪುಟ್ಟವೀರಣ್ಣಗೌಡರವರ ಆಗಮನವಾಯಿತು. ಇವನ ಮೇಲೆ ಕನಿಕರ ಬಂದಿತು. ಮನಸ್ಸಿನಲ್ಲಿ ಅವನ ಸಲುವಾಗಿ ಏನಾದರೂ ಅನುಕೂಲ ಮಾಡಿಕೊಡಲೇಬೇಕೆಂಬ ಪ್ರೇರಣೆಯಾಯಿತು.

‘ಏನಪ್ಪಾ ಬರಿಕೈಯಲ್ಲಿ ಭಿಕ್ಷೆ ಬೇಡುತ್ತಿದ್ದೀಯಾ. ಇದನ್ನು ತೆಗೆದುಕೋ. ಸ್ಟೇನ್‌ಲೆಸ್‌ ಸ್ಟೀಲ್‌ ಭಿಕ್ಷಾಪಾತ್ರೆ. ಹಾಗೆಯೇ ಇದನ್ನೂ ತೆಗೆದುಕೋ. ಇದು ಒಂದು ಎಲೆಕ್ಟ್ರೋನಿಕ್‌ ಗ್ಯಾಜೆಟ್‌. ಒಬ್ಬೊಬ್ಬರೂ ಭಿಕ್ಷೆ ನೀಡುತ್ತಲೂ ಆ ಹಣದ ಮೊತ್ತವನ್ನು ಇದರಲ್ಲಿ ನಮೂದಿಸಿಕೊಳ್ಳಬಹುದು. ಒಟ್ಟು ಎಷ್ಟು ಹಣ ಶೇಖರಣೆ ಆಗಿದೆ ಎಂಬುದನ್ನು ಕ್ಷಣಾರ್ಧದಲ್ಲಿ ತಿಳಿಸಿಬಿಡುತ್ತದೆ. ಅದನ್ನು ನೋಡಿಕೊಂಡು ನಿನ್ನ ಮುಂದಿನ ಕಾರ್ಯಕ್ರಮವನ್ನು ನಿರ್ಧರಿಸಿಕೊಳ್ಳಲು ಸಹಾಯವಾಗುತ್ತದೆ’ ಎಂದು ಉಪದೇಶಮಾಡಿ, ಗ್ಯಾಜೆಟ್ಟನ್ನು ಕೊಟ್ಟು, ಸಾರ್ಥಕತೆಯ ಭಾವದಿಂದ ಮುಂದೆ ಸಾಗಿದರು.

‘ಈ ಕತೆ ಇಲ್ಲಿಗೇ ಮುಕ್ತಾಯವಾಯಿತು’ ಎಂದು ಹೇಳಿದರೆ ನಿಮ್ಮ ಭಾವನೆಗಳು ಯಾವ ರೀತಿ ಇರಬಹುದು! ಊಹಿಸುವದು ಕಷ್ಟವೇನಲ್ಲ. ‘ಯಾವನೋ ಕೆಲಸಗೇಡಿಯಾಬ್ಬನು ಸೃಷ್ಟಿಸಿದ ಕಟ್ಟುಕತೆ. ಇದನ್ನು ಓದುವದರಲ್ಲಿ ಸಮಯಕಳೆದ ನಾವು ಮೂರ್ಖರು!’ ಎಂದುಕೊಳ್ಳುವವರೇ ಬಹಳ ಜನ.

ನೀವು ಮೂರ್ಖರು ಹೇಗಾಗುತ್ತೀರಿ ಸ್ವಾಮಿ? ನೀವು ನೋಡುತ್ತಿರುವದು ಕಂಪ್ಯೂಟರ್‌ ಸ್ಕಿೃೕನನ್ನು, ಟಿವಿ ಪೆಟ್ಟಿಗೆಯ ಸ್ಕಿೃೕನನ್ನಲ್ಲವಲ್ಲ! ಅದರಲ್ಲಿ ನಿಮ್ಮ ಮೆಚ್ಚಿನ ಅಂಕಣವನ್ನು ನೋಡುತ್ತಿದ್ದೀರಿ.

ಮೇಲೆ ಕೊಟ್ಟದ್ದು ಕತೆಯಲ್ಲ; ಒಂದು ಬಗೆಯ ‘ಉಪಮಾ.’

ನೀವೆಲ್ಲ ‘ಕಾಳಿದಾಸಸ್ಯ ಉಪಮಾ’ ಸವಿದಿರಬೇಕು. ಶ್ರೀವತ್ಸ ಅವರ ‘ವಿಚಿತ್ರಾನ್ನ’ವನ್ನಂತೂ ಸವಿದೇ ಸವಿದಿರುತ್ತೀರಿ. ಇದೂ ‘ಉಪಮಾ’ದ ತರಹವೇ! ‘ಖಾರಾ ಬಾತ್‌’ ಎಂದು ಹೆಸರು ಕೊಡಬಹುದು. (‘ಭಾತ್‌’ ಅಲ್ಲ ‘ಬಾತ್‌’ ಎಂಬ ವಿಷಯವನ್ನು ನಿಮ್ಮ ಗಮನಕ್ಕೆ ತಂದರೆ ಓಹೋ ಹಾಗಾದರೆ ಇದು ‘ಖಾರ’ವಾಗಿರುವ ‘ಮಾತು’ ಗಳನ್ನೊಳಗೊಂಡ ‘ಉಪಮಾ’ದ ಒಂದು ರೂಪ ಎಂಬುದನ್ನು ಸರಿಯಾಗಿ ಊಹಿಸಿಕೊಂಡುಬಿಡುತ್ತೀರಿ)

ನಮ್ಮ ಭಾರತೀಯ ವಿಶ್ವವಿದ್ಯಾಲಯಗಳು ಹೊರತರುತ್ತಿರುವ ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ. ಎಪ್ಪತ್ತೈದು ಜನ ನೌಕರಿಗೆ ಲಾಯಕ್ಕಿಲ್ಲ ಎಂಬುದು ಮೆಕಿನ್ಸಿ ವರದಿಯ ಸಾರಾಂಶ ಎಂದು ಇನ್ಫೋಸಿಸ್‌ ನಾರಾಯಣ ಮೂರ್ತಿಗಳು ಮೈಸೂರಿನಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಹೇಳಿದರು.

ಒಂದು ರಾಷ್ಟ್ರದ ಏಳಿಗೆಗೆ, ಅದರ ಆರ್ಥಿಕ ಪ್ರಗತಿಗೆ, ಎಂಜಿನಿಯರುಗಳ ಕೊಡುಗೆ ಎಷ್ಟೆಂಬುದು ಎಲ್ಲರಿಗೂ ತಿಳಿದ ವಿಚಾರ. ಅಂತಹ ಎಂಜಿನಿಯರುಗಳನ್ನು ತಯಾರುಮಾಡುವಲ್ಲಿ ಸೂಕ್ತವಾದ ಪಠ್ಯಕ್ರಮ ನಿರೂಪಿಸಿ, ತರಬೇತಿ ನೀಡುವದು ಅಗತ್ಯ. ಅದರಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ಮೆಕೆನ್ಸಿ ವರದಿ ಸೂಚಿಸುತ್ತದೆ. ಇದು ಏಕೆ ಹೀಗಾಯಿತು ಎಂಬುದನ್ನು ವಿಶ್ಲೇಷಿಸಿ ಸರಿಪಡಿಸುವ ಪ್ರಯತ್ನ ನಡೆಯಬೇಕಾಗಿತ್ತು. ಆದರೆ ಎಂಜಿನಿಯರಿಂಗ್‌ ಕಲಿಯುವ ವಿದ್ಯಾರ್ಥಿಗಳಿಂದಾಗಲೀ, ತಮ್ಮ ಯೋಗ್ಯತೆ ಮೀರಿ ಹಣವನ್ನು ವೆಚ್ಚ ಮಾಡಿ ಅವರನ್ನು ಓದಿಸುತ್ತಿರುವ ಪಾಲಕರಿಂದಾಗಲೀ ಯಾವದೇ ತರಹದ ತೀವ್ರ ಪ್ರತಿಕ್ರಿಯೆ ಕಂಡು ಬರಲಿಲ್ಲ ಎಂಬುದು ಬಲು ದೊಡ್ಡ ವಿಷಾದದ ಸಂಗತಿ.

ಎಂಜಿನಿಯರಿಂಗ್‌ನಲ್ಲಿ ಈಗ ಹಲವಾರು ವಿಭಾಗಗಳನ್ನು ಕಾಣುತ್ತೇವೆ. ಪ್ರಾರಂಭದಲ್ಲಿ ಇದ್ದದ್ದು ಮೂರು ಮಾತ್ರ: ಸಿವಿಲ್‌, ಇಲೆಕ್ಟಿಕಲ್‌ ಮತ್ತು ಮೆಕ್ಯಾನಿಕಲ್‌ ಎಂದು. ಈ ವಿಭಾಗೀಕರಣ ತಂತ್ರಜ್ಞಾನದಲ್ಲಿ ರಿಸರ್ಚ್‌ ಮುಂತಾದ ಶೋಧ ಕಾರ್ಯಗಳ ಅನುಕೂಲಕ್ಕೆಂದು ಸೃಷ್ಟಿಸಿದ್ದು, ಇದು ಕೇವಲ ಮಾನವ ನಿರ್ಮಿತ; ವಾಸ್ತವ ಪ್ರಪಂಚದಲ್ಲಿ ಈ ವಿಭಾಗೀಕರಣ ಅಪ್ರಸ್ತುತ. ಸಿವಿಲ್‌ ಕೆಲಸದಲ್ಲಿ ಮೆಕ್ಯಾನಿಕಲ್‌ ಉಪಕರಣಗಳು ಬೇಕೇ ಬೇಕು. ಅವು ಕೆಲಸ ಮಾಡುವದಕ್ಕೆ ವಿದ್ಯುತ್‌ ಕರಂಟ್‌ ಬೇಕು. ಅದೇ ರೀತಿ ಇಲೆಕ್ಟಿಕ್‌ ಸಪ್ಲೈ ಕಂಪನಿಗೆ ಸಿವಿಲ್‌ನವರು ಟವರ್‌ ನಿರ್ಮಿಸಬೇಕು, ಅದಕ್ಕೆ ಮೆಕ್ಯಾನಿಕಲ್‌ನವರು ವೆಲ್ಡಿಂಗ್‌ ಮಾಡಬೇಕು. ಈ ರೀತಿ ಎಲ್ಲವೂ ಸಮ್ಮಿಶ್ರ ರೂಪದಲ್ಲಿ ಇರುವದರಿಂದಲೇ ಒಂದು ವಿಭಾಗದ ಎಂಜಿನಿಯರುಗಳಿಗೆ ಇತರ ಎಲ್ಲ ವಿಭಾಗದ ತಂತ್ರಜ್ಞಾನದ ಬಗೆಗೆ ಸ್ಥೂಲ ಪರಿಚಯ ಇರಲೇ ಬೇಕಾದದ್ದು ಅಗತ್ಯವೆನಿಸುತ್ತದೆ. ಅದಕ್ಕೆಂದೇ ಕಾಲೇಜುಗಳಲ್ಲಿLet them learn somethimg of everything before they commence learning everything of something in later semesters ಎಂಬ ಉದ್ದೇಶದಿಂದ ಮೊದಲನೆಯ ವರುಷದ ಪಠ್ಯಕ್ರಮವನ್ನು ಎಲ್ಲ ವಿಭಾಗದವರಿಗೂ ಸಾಮಾನ್ಯವಾಗಿರಿಸಿದರು. ಇಲ್ಲಿ ಎಲ್ಲ ವಿಭಾಗದ ಶಿಕ್ಷಕರೂ ಸೇರಿ, ಸಮಗ್ರ ತಂಡದ ಮನೋಭಾವದಿಂದ, ಭಾವೀ ಎಂಜಿನಿಯರುಗಳ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ನಮ್ಮ ಈಗಿನ ಶಿಕ್ಷಣ ಕ್ರಮವನ್ನು ನಿರೂಪಿಸಿದವರು ಆಂಗ್ಲ ಪ್ರಭುಗಳು! ಅದರಲ್ಲಿ ಅವರು ತಮ್ಮ ವೈಶಿಷ್ಟ್ಯವಾದ ಒಡೆದು ಆಳುವ ನೀತಿಯ ವಿಷವನ್ನು ಬೆರೆಸಿದ್ದರು. ಅದನ್ನು ನಿಷ್ಕಿೃಯಗೊಳಿಸುವ ಪ್ರಯತ್ನ ನಾವು ಮಾಡಲೇ ಇಲ್ಲ. ಅದರ ಪ್ರಭಾವ ದಿನದಿನಕ್ಕೆ ಹೆಚ್ಚುತ್ತಲೇ ಇದೆ. ವಿಭಾಗ ವಿಭಾಗಗಳ ನಡುವೆ ದಾಯಾದಿ ಮತ್ಸರ ಅನೂಚಾನವಾಗಿ ಮುಂದುವರಿಯುತ್ತಲೇ ಇದೆ.

ಇಲೆಕ್ಟ್ರಾನಿಕ್ಸ್‌ ಅಥವಾ ಐಟಿ ವಿದ್ಯಾರ್ಥಿಗಳು ಮೆಕ್ಯಾನಿಕಲ್‌ ವಿಷಯದ ಕ್ಲಾಸನ್ನು ಮುಗಿಸಿಬಂದರೆ ಅವರ ಮೇಲೆ ನೀರು ಚಿಮುಕಿಸಿ ಒಳಗೆ ಬರಮಾಡಿಕೊಳ್ಳುವಷ್ಟರ ಮಟ್ಟಕ್ಕೆ ಬಂದಿಲ್ಲವಾದರೂ ಮಾನಸಿಕವಾಗಿ ಮಾತ್ರ ಅದೇ ರೀತಿಯ ಧೋರಣೆ ಇದೆ. ಇದರಿಂದ ಉದ್ಭವಿಸಿದ ಒಂದು ದುರಂತದ ಚಿತ್ರಣವನ್ನು ಈಗ ನಿಮಗೆ ನೀಡಲಿದ್ದೇನೆ:

ಪಠ್ಯಕ್ರಮ ನಿರೂಪಿಸುವದಕ್ಕೆಂದು ಕೂಡಿದ ಮೀಟಿಂಗುಗಳಲ್ಲಿ ಒಂದು ವಿಭಾಗದವರು ತಾವು ಕಲಿಸಬೇಕೆನ್ನುವ ವಿಷಯಗಳನ್ನು ಮುಂದಿಟ್ಟರೆ, ಇದು ಮೆಕ್ಯಾನಿಕಲ್‌ ಅವರಿಗೆ ಅಗತ್ಯವಾದದ್ದು, ನಮ್ಮ ಹುಡುಗರಿಗೇಕೆ? ಇದು ಸಿವಿಲ್‌ ನವರಿಗೆ ಬೇಕು, ನಮ್ಮ ಹುಡುಗರಿಗೇಕೆ? ಎನ್ನುತ್ತ ಆಕ್ಷೇಪಿಸುವ ಪ್ರವೃತ್ತಿ ಬಲವಾಗಿದೆ. ಯಾವ ಸದುದ್ದೇಶದಿಂದ ಮೊದಲನೆಯ ವರುಷ ಎಲ್ಲರಿಗೂ ಸಾಮಾನ್ಯ ಪಠ್ಯಕ್ರಮ ಇರಲಿ ಎಂದು ನಿರ್ಣಯಿಸಿದ್ದರೋ ಆ ಉದ್ದೇಶವನ್ನು ಈಗ ಪೂರಾ ಹಾಳುಗೆಡವಿದಂತಾಗಿದೆ. ಇಂದಿನ ಮೊದಲನೆಯ ವರುಷದ ಪಠ್ಯಕ್ರಮವನ್ನು ನೋಡಿದ ಹಳೆಯ ಕಾಲದ ನಿವೃತ್ತ ಪ್ರಾಧ್ಯಾಪಕರು ವಿಷಾದದಿಂದ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.

ಮೊದಲನೆಯ ವರುಷದವರಿಗೆ ಎಂಜಿನಿಯರಿಂಗ್‌ ಡ್ರಾಯಿಂಗ್‌ ಎಂಬದೊಂದು ವಿಷಯವಿತ್ತು. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಡ್ರಾಯಿಂಗ್‌ಗಳ ರೂಪದಲ್ಲಿಯೇ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವದು, ಶೇಖರಿಸಿಡುವದು, ನಡೆಯುತ್ತದೆ. ವಿಷಯ ಹೀಗಿರುವಾಗ ಮೊದಲನೆಯ ವರುಷದ ವಿದ್ಯಾರ್ಥಿಗಳಿಗೆ ಎಲ್ಲ ಬೇರೆ ಬೇರೆ ವಿಭಾಗಗಳ ಡ್ರಾಯಿಂಗ್‌ ವಿಧಾನಗಳ ಬಗೆಗೆ ಸ್ಥೂಲ ಪರಿಚಯ ಮಾಡಿಕೊಡುವದು ಅಪೇಕ್ಷಣೀಯ.

ವಿದೇಶೀಯ ಲೇಖಕರ ಪುಸ್ತಕಗಳಲ್ಲಿ ಆ ಕೆಲಸವನ್ನು ಎಷ್ಟೊಂದು ಅಚ್ಚುಕಟ್ಟಾಗಿ ಮಾಡಿದ್ದಾರೆನ್ನುವದನ್ನು ನೋಡಬಹುದು. ಆದರೆ ನಮ್ಮ ಪಠ್ಯಕ್ರಮದಲ್ಲಿ 1980ರ ಸುಮಾರಿಗೆ ಮೊದಲನೆಯ ಒಂದು ವರುಷ ಮಾತ್ರ ಸಾಮಾನ್ಯ ಪಠ್ಯಕ್ರಮ ಇರಲಿ ಎಂದು ತೀರ್ಮಾನಿಸಿದರು. ಹಾಗೆ ಅದನ್ನು ನಿರೂಪಿಸುವಾಗ ಒಂದು ಅಚಾತುರ್ಯ ನಡೆಯಿತು. ಅದರ ಪರಿಣಾಮವಾಗಿ ಎರಡು ಸೆಮಿಸ್ಟರ್‌ ಕಾಲ ಬರಿ Solid Geometry ವಿಷಯವಷ್ಟನ್ನೇ ಕಲಿಸುವ ಪಠ್ಯಕ್ರಮ ಜಾರಿಯಲ್ಲಿ ಬಂದಿತು.

ಆ ನಿರುಪಯೋಗಿ ವಿಷಯಗಳನ್ನು ಕಲಿಸುವದಕ್ಕಾಗಿಯೇ ಭಾರತೀಯ ಶಿಕ್ಷಕರು ಬರೆದ ಪುಸ್ತಕಗಳು ಮಾರುಕಟ್ಟೆಗೆ ಬರತೊಡಗಿದವು. ಮಕ್ಕಳಿಗೆ ಅದರಲ್ಲಿಯ ವಿಷಯ ಅರ್ಥವಾಗುವದು ಕಠಿಣವಾಯಿತು; ಆಗ ಟ್ಯೂಶನ್‌ ಹಾವಳಿ ಪ್ರಾರಂಭವಾಯಿತು. ಆದರೂ ಅನುತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದದ್ದರಿಂದ ಹಲವು ವಿಷಯಗಳನ್ನು ತೆಗೆದು ಹಾಕಿ ಪಠ್ಯಕ್ರಮವನ್ನೂ, ಪರೀಕ್ಷಾ ವಿಧಾನವನ್ನೂ ಸರಳೀಕರಣಗೊಳಿಸಲಾಯಿತು. ಹೀಗೆ, ನಮ್ಮ ಹುಡುಗರಿಗೆ ಅದು ಏಕೆ ಎನ್ನುವ ದಾಯಾದಿ ಧೋರಣೆಯ ಪ್ರಭಾವದಿಂದಾಗಿ ಇಂದಿನ ಆ ಡ್ರಾಯಿಂಗ್‌ನಲ್ಲಿ ಯಾವ ವಿಭಾಗದವರಿಗೂ, ಎಂದೆಂದೂ ಉಪಯೋಗ ಬೀಳದ ವಿಷಯಗಳನ್ನು ಕಲಿಸಲಾಗುತ್ತದೆ. ವಿದೇಶೀ ಪುಸ್ತಕದಲ್ಲಿರುವ ಮೂರು ಚಾಪ್ಟರುಗಳಲ್ಲಿ ಕೊಟ್ಟಿರುವದಕ್ಕಿಂತ ಕಡಿಮೆ ವಿಷಯವನ್ನು ನಾವು ಈಗ ಮೊದಲನೆಯ ವರುಷ ಕಲಿಸುತ್ತಿದ್ದೇವೆ.

ಸದ್ಯ ಪಠ್ಯಕ್ರಮವನ್ನು ನವೀಕರಿಸುವ ಅವಕಾಶ ಬಂದಿದೆ. ವಿಶ್ವವಿದ್ಯಾಲಯಕ್ಕೆ ಆ ತಪ್ಪನ್ನು ಸರಿಪಡಿಸುವ ಅವಕಾಶವಿದೆ. ಆದರೆ ಅದರ ಬದಲು ಅವರು ಏನು ಮಾಡುತ್ತಿದ್ದಾರೆ! ಈಗ ಮಾಡುತ್ತಿರುವ ಅದೇ ನಿರುಪಯುಕ್ತ ರೇಖಾ ವಿನ್ಯಾಸಗಳನ್ನು ಹಾಳೆ ಪೆನ್ಸಿಲ್ಲುಗಳ ಬದಲು ಕಂಪ್ಯೂಟರಿನಲ್ಲಿ ಮೂಡಿಸುವ ಕಲೆಯಲ್ಲಿ ತರಬೇತಿ ನೀಡುವ ಯೋಜನೆಯನ್ನು ರೂಪಿಸುತ್ತಿದ್ದಾರೆ. ಅಂದರೆ ಪರಮಶಿವಂ ಅವರ ಕೈಗಳಿಗೆ ಸ್ಟೇನ್‌ಲೆಸ್‌ಸ್ಟೀಲ್‌ ಭಿಕ್ಷಾಪಾತ್ರೆ ಮತ್ತು ಹೈ ಟೆಕ್‌ ಗ್ಯಾಜ್ಜೆಟ್‌ ಕೊಡಲ್ಪಡುತ್ತಿವೆ!!

ಭಾರತ ರತ್ನ, ಕನ್ನಡ ನಾಡಿನ ಪುತ್ರ, ವಿಶ್ವೇಶ್ವರಯ್ಯನವರಿಗೆ ಇದನ್ನೇನಾದರೂ ವೀಕ್ಷಿಸುವ ಅವಕಾಶ ಸಿಕ್ಕಿದರೆ ಜೋಗ ಜಲಪಾತವನ್ನು ನೋಡಿದಾಗ ಉದ್ಗರಿಸಿದಂತೆ, ಇಲ್ಲಿಯೂ what a colossal waste of energy ಎಂದು ಉದ್ಗರಿಸುತ್ತಿದ್ದರೇನೋ! ಅಷ್ಟೇ ಏಕೆ, ಅದಕ್ಕೆ ಇನ್ನೂ ಮೂರು ಶಬ್ದ ಸೇರಿಸಿ, what a colossal waste of energy+ time+ labour +material !! ಎಂದು ಉದ್ಗರಿಸುತ್ತಿದ್ದರು. ಮತ್ತು ತಮ್ಮದೇ ಆದ ಶೈಲಿಯಲ್ಲಿ rationalize curriculum or perish ಎಂದು ಉಪದೇಶವನ್ನೂ ನೀಡುತ್ತಿದ್ದರು. ಆ ವಿಷಯವನ್ನೇ ನಮ್ಮ ಡಾ. ನಾರಾಯಣ ಮೂರ್ತಿಯವರು ಮೆಕೆನ್ಸಿಯವರ ಶಬ್ದಗಳಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳ ವಿಷಯದಲ್ಲಿ ನಾಲ್ಕು ಮಾತುಗಳನ್ನು ಉಲ್ಲೇಖಿಸುವದು ಪ್ರಸ್ತುತವೆನಿಸುತ್ತದೆ. ಖಾಸಗಿ ಕಾಲೇಜುಗಳಲ್ಲಿ ಆಡಳಿತವರ್ಗ ಮತ್ತು ಶಿಕ್ಷಕ ವರ್ಗದವರ ದೃಷ್ಟಿಯಲ್ಲಿ ವಿದ್ಯಾರ್ಥಿಗಳೆಲ್ಲ ‘ಅಪ್ಪನ ದುಡ್ಡಿನಲ್ಲಿ ಮಜಾ ಮಾಡಲು’ ಬಂದವರು. ಅದೊಂದು ತಪ್ಪು ಕಲ್ಪನೆ.

ನಾನು ಕಂಡ ಪ್ರಕಾರ ಅವರಲ್ಲಿ ಎಷ್ಟೋ ಜನರು ಒಳ್ಳೆಯ ನವಕರಿ(ನೌಕರಿ) ದೊರಕಿಸಬೇಕೆಂಬ ಆಕಾಂಕ್ಷೆ ಹೊಂದಿದವರಿರುತ್ತಾರೆ. ಉದ್ಯಮಪತಿಗಳು ನಡೆಸುವ ಸಂದರ್ಶನದಲ್ಲಿ ತಮ್ಮ ವಿಭಾಗವಲ್ಲದೆ ಅನ್ಯ ವಿಭಾಗಕ್ಕೆ ಸಂಬಂಧಪಟ್ಟ ಸಾಮಾನ್ಯಜ್ಞಾನದ ಪ್ರಶ್ನೆಗಳಿಗೂ ಉತ್ತರವನ್ನು ನಿರೀಕ್ಷಿಸುತ್ತಾರೆ ಎಂಬುದು ಅವರಿಗೆ ಗೊತ್ತು. ಅದಕ್ಕಾಗಿ ಲೈಬ್ರರಿ ಪುಸ್ತಕಗಳು, ಗೂಗಲ್‌ ಡಾಟ್‌ ಕಾಂ ಮುಂತಾದವುಗಳ ಮೊರೆ ಹೋಗುತ್ತಾರೆ. ಅರ್ಥಾತ್‌ ಅನ್ಯವಿಭಾಗಗಳ ಬಗೆಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಿದ್ದಾರೆ. ಪಠ್ಯಕ್ರಮದಲ್ಲಿಯೇ ಸಾಧ್ಯವಿದ್ದಷ್ಟುಮಟ್ಟಿಗೆ ಅದನ್ನು ಅಳವಡಿಸಬಹುದಿತ್ತು. ಆದರೆ ಈ ‘ಪೂಜಾರಿ’ಗಳು ಅದಕ್ಕೆ ತಡೆ ಒಡ್ಡುತ್ತಿದ್ದಾರೆ!

Rationalize curriculum or perish ಎಂದು ವಿಶ್ವೇಶ್ವರಯ್ಯನವರು ಬಂದು ಬರೆದ ಬಳಿಕವೇ ಸರಿಯಾದ ಕ್ರಮವನ್ನು ಕೈಕೊಳ್ಳೋಣ ಎಂದು ಕಾಯುತ್ತಿದ್ದಾರೆಯೇ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X